ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶ್ವರಪ್ಪ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದು ಸರಿಯಲ್ಲ: ಸಿ.ಸಿ.ಪಾಟೀಲ ಕಿಡಿ

Last Updated 1 ಏಪ್ರಿಲ್ 2021, 14:18 IST
ಅಕ್ಷರ ಗಾತ್ರ

ಗದಗ: ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ವಿರುದ್ಧ ರಾಜ್ಯಪಾಲರು ಮತ್ತು ಪಕ್ಷದ ವರಿಷ್ಠರಿಗೆ ದೂರು ನೀಡಿದ ಸಚಿವ ಕೆ.ಎಸ್‌.ಈಶ್ವರಪ್ಪ ಅವರ ನಡೆ ಖಂಡನೀಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.‌‌

ಗುರುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಉಪ ಚುನಾವಣೆಗಳಿಗೆ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದೆ. ಸ್ವಲ್ಪ ದಿನಗಳಲ್ಲೇ ನಾವು ಜನರ ಬಳಿ ಮತ ಕೇಳಲು ಹೋಗುವವರಿದ್ದೇವೆ. ಇಂತಹ ಸಂದರ್ಭದಲ್ಲಿ ಅವರು ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದು ಸರಿಯಲ್ಲ’ ಎಂದು ಹೇಳಿದರು.

‘ಇಬ್ಬರು ಹಿರಿಯ ನಾಯಕರೂ ಒಂದೇ ಜಿಲ್ಲೆಯವರು. ಅಭಿಪ್ರಾಯ ಭೇದಗಳು ಇದ್ದರೆ ಒಟ್ಟಿಗೆ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳಬೇಕಿತ್ತು. ಬದಲಾಗಿ ರಾಜ್ಯಪಾಲರಿಗೆ ದೂರು ನೀಡುವುದರಿಂದ ಏನೂ ಪ್ರಯೋಜನ ಆಗುವುದಿಲ್ಲ’ ಎಂದು ಹೇಳಿದರು.

‘ಮುಖ್ಯಮಂತ್ರಿಗೆ ಪರಮಾಧಿಕಾರ ಇರುತ್ತದೆ. ಎಲ್ಲ ‍‍ಪಕ್ಷಗಳ ಶಾಸಕರ ಬೇಡಿಕೆಗಳಿಗೆ ಸ್ಪಂದಿಸ ಬೇಕಿರುವ ಗುರುತರ ಜವಾಬ್ದಾರಿ ಕೂಡ ಇರುತ್ತದೆ. ಕೋವಿಡ್‌–19 ಕಾರಣದಿಂದಾಗಿ ಅನುದಾನ ಬಿಡುಗಡೆಯಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರಾಗಿದೆ. ಶಾಸಕರ ಒತ್ತಡ ಮತ್ತು ಬೇಡಿಕೆಗೆ ಸ್ಪಂದಿಸಿ ಸಿಎಂ ಅನುದಾನ ಬಿಡುಗಡೆ ಮಾಡಿದ್ದಾರೆ. ‍ಪಕ್ಷದ ಹಿರಿಯರಾದ ಕೆ.ಎಸ್‌.ಈಶ್ವರಪ್ಪ ಅವರು ಈ ವಿಷಯವನ್ನೇ ಇಷ್ಟು ದೊಡ್ಡದು ಮಾಡಬಾರದಿತ್ತು’ ಎಂದು ಹೇಳಿದರು.

‘ಗದಗ ಶಾಸಕ ಎಚ್‌.ಕೆ.ಪಾಟೀಲ ಅವರು ಹಿರಿಯ ನಾಯಕರು. ಕೋವಿಡ್‌–19 ಎರಡನೇ ಅಲೆ ಪ್ರಾರಂಭವಾಗಿದೆ. ಇಂತಹ ಸಂದರ್ಭದಲ್ಲಿ ಅವರು ನಾಲ್ಕು ಸಂಘಟನೆಗಳವರನ್ನು ಮೆಚ್ಚಿಸುವ ಸಲುವಾಗಿ ಹೋಳಿ ಆಚರಣೆಗೆ ಅವಕಾಶ ಮಾಡಿಕೊಡಬೇಕು ಎಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದು ಸರಿಯಲ್ಲ’ ಎಂದು ಕಿಡಿಕಾರಿದರು.

‘ಹಿರಿಯ ಶಾಸಕರಾಗಿದ್ದುಕೊಂಡು ದೊಡ್ಡ ಘನಂದಾರಿ ಕೆಲಸ ಮಾಡಿದ್ದೇನೆ ಎಂದು ನಾಲ್ಕು ಮಂದಿಗೆ ತೋರಿಸುವುದು ಹಾಗೂ ಈ ರೀತಿಯ ಕೆಳಮಟ್ಟದ ಪತ್ರ ವ್ಯವಹಾರ ಮಾಡುವುದು ಅವರ ಘನತೆಗೆ ಶೋಭೆ ತರುವಂತಹದ್ದಲ್ಲ’ ಎಂದು ಲೇವಡಿ ಮಾಡಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT