ಭಾನುವಾರ, ಮೇ 16, 2021
24 °C
ಇಲಾಖೆಯಲ್ಲಿ ಯಡಿಯೂರಪ್ಪ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದ ಈಶ್ವರಪ್ಪ * ಬಯಲಿಗೆ ಬಂದ ಶೀತಲ ಸಮರ

ಈಶ್ವರಪ್ಪ ಲೆಟರ್‌ ಬಾಂಬ್‌: ಯಡಿಯೂರಪ್ಪ ವಿರುದ್ಧ ರಾಜ್ಯಪಾಲ, ವರಿಷ್ಠರಿಗೆ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

KS Eshwarappa and BS Yediyurappa

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರ ಮಧ್ಯೆ ನಡೆದಿರುವ ಶೀತಲ ಸಮರ ಬಹಿರಂಗವಾಗಿದೆ.

‘ಮುಖ್ಯಮಂತ್ರಿಯವರು ನನ್ನ ಇಲಾಖೆಯಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ’ ಎಂದು ಆಕ್ಷೇಪಿಸಿ ಈಶ್ವರಪ್ಪ ಅವರು ರಾಜ್ಯಪಾಲ ವಜುಭಾಯಿ ವಾಲಾ ಮತ್ತು ಬಿಜೆಪಿ ವರಿಷ್ಠರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲೇನಿದೆ? ಇಲ್ಲಿದೆ ವಿವರ...

ಕಳೆದ ಒಂದು ವರ್ಷದ ಅವಧಿಯಲ್ಲಿ ನನ್ನ ಇಲಾಖೆಗೆ ಸಂಬಂಧಿಸಿದ ಎಲ್ಲ ನಿರ್ಧಾರಗಳನ್ನು ನನ್ನ ಗಮನಕ್ಕೆ ತರದೇ ಮುಖ್ಯಮಂತ್ರಿಯವರು ಕೈಗೊಂಡಿದ್ದಾರೆ. ಇದರಿಂದ ಅತ್ಯಂತ ಹಿರಿಯ ಸದಸ್ಯನಾದ ನನಗೆ ತೀವ್ರ ಮುಜುಗರ ಮತ್ತು ನೋವು ಉಂಟಾಗಿದೆ ಎಂದು ಪತ್ರದಲ್ಲಿ ಈಶ್ವರಪ್ಪ ಹೇಳಿದ್ದಾರೆ.

ಓದಿ: 

ಸಚಿವ ಸಂಪುಟ ಸಭೆಯಲ್ಲಿ ಸಚಿವರ ಅಭಿಪ್ರಾಯಗಳನ್ನು ನಿರ್ಲಕ್ಷಿಸಿ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ಅದಕ್ಕೆ ಸಾಕಷ್ಟು ನಿದರ್ಶನಗಳನ್ನು ನೀಡಬಲ್ಲೆ ಎಂದೂ ಅವರು ಹೇಳಿದ್ದಾರೆ.

2020–21ರ ಬಜೆಟ್‌ನಲ್ಲಿ ಪ್ಯಾರಾ 147ರಲ್ಲಿ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಅಭಿವೃದ್ಧಿಪಡಿಸುವ ‘ಗ್ರಾಮೀಣ ಸುಮಾರ್ಗ ಯೋಜನೆ’ಯನ್ನು ಪ್ರಕಟಿಸಲಾಗಿತ್ತು. ಈ ಯೋಜನೆಯಡಿ 5 ವರ್ಷಗಳಲ್ಲಿ 20 ಸಾವಿರ ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲು ₹780 ಕೋಟಿ ನಿಗದಿ ಮಾಡಲಾಗಿತ್ತು.  ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 30 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿತ್ತು. ಇದಕ್ಕಾಗಿ ನಮ್ಮ ಇಲಾಖೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರೂ, ನಿಗದಿ ಮಾಡಿದ ಹಣವನ್ನು ಹಣಕಾಸು ಇಲಾಖೆ ನೀಡಲೇ ಇಲ್ಲ. ಪದೇ ಪದೇ ಪತ್ರ ಬರೆದರೂ ಹಣ ಬಿಡುಗಡೆ ಮಾಡಲೇ ಇಲ್ಲ. ಇದಕ್ಕೆ ಕಾರಣವೇನೆಂದು ಗೊತ್ತಿಲ್ಲ ಎಂದು ಹೇಳಿದ್ದಾರೆ.

ಹಣಕಾಸು ಇಲಾಖೆ 2020–21ರ ಬಜೆಟ್‌ನಲ್ಲಿ ಪ್ರಕಟಿಸಿದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಗತ್ಯ ಅನುದಾನ ಬಿಡುಗಡೆ ಮಾಡಲಿಲ್ಲ. ಆದರೆ, ಕಳೆದ ಒಂದೂವರೆ ವರ್ಷದಲ್ಲಿ  ವಿಶೇಷ ಅನುದಾನದ ಹೆಸರಿನಲ್ಲಿ (ಬಜೆಟ್‌ ಹೊರತುಪಡಿಸಿ) ₹1439.25 ಕೋಟಿಗೆ ಅನುಮೋದನೆ (ಹಿಂದಿನ ಸರ್ಕಾರದ ಬಿಡುಗಡೆ ಮಾಡಿದ ₹973.80 ಕೋಟಿ ಬಿಟ್ಟು) ನೀಡಿದೆ. ಅಲ್ಲದೆ ಇತ್ತೀಚೆಗೆ (17.02.21 ರಂದು) ಹಣಕಾಸು ಇಲಾಖೆ 81 ವಿಧಾನಸಭಾ ಕ್ಷೇತ್ರಗಳಿಗೆ ₹775 ಕೋಟಿ ಅನುಮೋದನೆ ನೀಡಿದೆ. ಒಂದೊಂದು ವಿಧಾನಸಭಾ ಕ್ಷೇತ್ರಕ್ಕೆ ₹5 ಕೋಟಿಯಿಂದ ₹23 ಕೋಟಿವರೆಗೆ ಅನುದಾನ ಹಂಚಿಕೆ ಮಾಡಲಾಗಿದೆ. ಹಣಕಾಸು ಇಲಾಖೆಯ ದೊಡ್ಡ ಮೊತ್ತದ ಅನುಮೋದನೆ ಬೇಕಾಬಿಟ್ಟಿ ನೀಡುವುದರಿಂದ ಗ್ರಾಮೀಣ ಮೂಲಸೌಕರ್ಯ ಯೋಜನೆಗಳನ್ನು ಅಭಿವೃದ್ಧಿಪಡಿಸುವ ಇಲಾಖೆ ಯೋಜನೆಗಳ ಮೇಲೆ ದೀರ್ಘಾವಧಿಯಲ್ಲಿ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಓದಿ: 

ವಿಶೇಷ ಅನುದಾನ ಯೋಜನೆಯಡಿ ₹5 ಲಕ್ಷದೊಳಗೆ ರಸ್ತೆ ಕಾಮಗಾರಿಯನ್ನು ಕೈಗೊಳ್ಳುವ ಯೋಜನೆ ಜಾರಿ ಮಾಡಲಾಗಿದೆ. ಇದರಿಂದ ರಸ್ತೆ ಗುಣಮಟ್ಟದ ಮೇಲೆ ಪರಿಣಾಮ ಬೀರುವುದಲ್ಲದೆ, ಅಕ್ರಮದ ಆರೋಪಕ್ಕೂ ಒಳಗಾಗಬೇಕಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಬಾಳಿಕೆಯ ಸ್ವತ್ತು ನಿರ್ಮಾಣ ಮಾಡಬೇಕು. ಇದರಿಂದ ಗ್ರಾಮೀಣ ಆರ್ಥಿಕತೆಯೂ ಉತ್ತಮವಾಗಬೇಕು ಎಂಬ ನೈಜ ಉದ್ದೇಶವೇ ಸೋಲುತ್ತದೆ ಎಂದಿದ್ದಾರೆ.

ಒಂದು ವೇಳೆ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು ಎಂಬ ಬಯಕೆ ಹಣಕಾಸು ಇಲಾಖೆಗೆ ಇದ್ದರೆ, ನೇರವಾಗಿ ಸಂಬಂಧಪಟ್ಟ ಇಲಾಖೆಗೇ ಹಣ ಬಿಡುಗಡೆ ಮಾಡಿದರೆ, ಅಗತ್ಯ ಕ್ರಮವನ್ನು ಕೈಗೊಳ್ಳಲು ಸಾಧ್ಯ. ಇದರಿಂದ ಗುಣಮಟ್ಟದ ಮತ್ತು ಹೆಚ್ಚು ಬಾಳಿಕೆಯ ಸ್ವತ್ತನ್ನು ಸೃಷ್ಟಿಸಲು ಸಾಧ್ಯ ಎಂದು ಹೇಳಿದ್ದಾರೆ.

ಹಣಕಾಸು ಇಲಾಖೆಯ (17.2.21ರ) ಆದೇಶದಲ್ಲಿ ಬಿಜೆಪಿ ಮತ್ತು ಇತರ ಪಕ್ಷಗಳ ಶಾಸಕರಿಗೂ ದೊಡ್ಡ ಮೊತ್ತದ ಅನುದಾನ ಬಿಡುಗಡೆ ಮಾಡಿದ್ದಾರೆ. ಬಿಜೆಪಿ 32, ಜೆಡಿಎಸ್‌ 18, ಕಾಂಗ್ರೆಸ್‌ 30, ಬಿಎಸ್‌ಪಿ1 ಹೀಗೆ 81 ಶಾಸಕರಿಗೆ ಅನುದಾನ ನೀಡಲಾಗಿದೆ.

ಇಲ್ಲಿಯವರೆಗೆ ಗ್ರಾಮೀಣಾಭಿವೃದ್ಧಿ ಇಲಾಖೆಗೆ ₹3998.56 ಕೋಟಿ ಅನುಮೋದನೆ ನೀಡಿದ್ದು, ಅದರಲ್ಲಿ ₹1600.42 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿದೆ. ಬಿಡುಗಡೆ ಆಗದೇ ಇರುವ ಮೊತ್ತ ₹2398.18 ಕೋಟಿ. ಇದರ ಅರ್ಥ ಇಲಾಖೆಯ ಜಾರಿಯಲ್ಲಿ ಯೋಜನೆಗಳನ್ನು ಕಡೆಗಣಿಸಲಾಗುತ್ತಿದೆ. ಈಗಿನ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಸಾರ್ವಜನಿಕರ ಹಣ ದುರುಪಯೋಗ ಎಂದೇ ಕರೆಯಬೇಕಾಗುತ್ತದೆ.

ಓದಿ: 

ಹಣಕಾಸು ಇಲಾಖೆಯ ಈ ವರ್ತನೆಯಿಂದ ನಮ್ಮ ಶಾಸಕರು ಮತ್ತು ಪಕ್ಷದ ಕಾರ್ಯಕರ್ತರ ಮುಂದೆ ಮುಜುಗರಕ್ಕೆ ಒಳಗಾಗಿದ್ದೇನೆ. ಪಕ್ಷ ಅಧಿಕಾರದಲ್ಲಿದ್ದು, ನಮ್ಮ ಪಕ್ಷದ ಶಾಸಕರ ಕ್ಷೇತ್ರಗಳನ್ನು ಕಡೆಗಣಿಸಿ, ವಿರೋಧ ಪಕ್ಷಗಳ ಶಾಸಕರಿಗೆ ಅತಿ ಹೆಚ್ಚಿನ ವಿಶೇಷ ಅನುದಾನ ನೀಡಲಾಗಿದೆ. ರಾಜ್ಯ ಮತ್ತು ಪಕ್ಷದ ಹಿತ ದೃಷ್ಟಿಯಿಂದ ಈಗಿನ ಆಡಳಿತ ಶೈಲಿಯನ್ನು ಬದಲಿಸಲೇಬೇಕು ಎಂದು ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು