ಬುಧವಾರ, ಸೆಪ್ಟೆಂಬರ್ 29, 2021
19 °C
ವಿಶ್ವ ಸ್ತನ್ಯಪಾನ ಸಪ್ತಾಹ: ಮಹಿಳಾ ಜಾಗೃತಿ ಕಾರ್ಯಕ್ರಮ

ತಾಯಿಯ ಎದೆಹಾಲು ಶ್ರೇಷ್ಠ: ಡಾ. ಶಿಲ್ಪಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಮಗುವಿಗೆ ತಾಯಿಯ ಎದೆ ಹಾಲಿಗಿಂತ ಅತ್ಯುತ್ತಮ ಆಹಾರ ಮತ್ತೊಂದಿಲ್ಲ’ ಎಂದು ಗದುಗಿನ ಸ್ತ್ರೀ ರೋಗ ತಜ್ಞೆ ಡಾ.ಶಿಲ್ಪಾ ಪವಾಡಶೆಟ್ಟರ ಹೇಳಿದರು.

ನಗರದ ಡಾ.ಉದಯ ಕುಲಕರ್ಣಿ ಹೆರಿಗೆ ಆಸ್ಪತ್ರೆಯಲ್ಲಿ ಗದಗ ಐಎಂಎ, ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರ ಸಂಘ ಹಾಗೂ ಇನ್ನರ್‌ ವ್ಹೀಲ್ ಕ್ಲಬ್ ಆಫ್ ಗದಗ ಮಿಡ್ ಟೌನ್ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹದಲ್ಲಿ ಅವರು ಮಾತನಾಡಿದರು. 

‘ಹೆರಿಗೆಯಾದ ಒಂದು ಗಂಟೆಯೊಳಗಿನ ಅವಧಿಯನ್ನು ವೈದ್ಯಕೀಯ ಕ್ಷೇತ್ರದಲ್ಲಿ ಸುವರ್ಣ ಘಳಿಗೆ ಎಂದು ಬಣ್ಣಿಸಲಾಗುತ್ತದೆ. ತಾಯಿಯ ಹಾಲು ಅಮೃತಕ್ಕೆ ಸಮಾನ. ಎದೆ ಹಾಲು ಕುಡಿದ ಮಗು ಯಾವುದೇ ತೊಂದರೆ ಇಲ್ಲದೆ ಸರ್ವಾಂಗೀಣ ಅಭಿವೃದ್ಧಿ ಹೊಂದಿಬಲ್ಲದು. ಆದ್ದರಿಂದ ಮಗು ಜನಿಸಿದ ತಕ್ಷಣ ತಾಯಂದಿರು ಯಾವುದೇ ಗೊಂದಲಕ್ಕೆ ಬೀಳದೆ ಹಾಲುಣಿಸಬೇಕು. ಇದು ರೋಗನಿರೋಧಕವಾಗಿದ್ದು ಮಗುವಿನ ಬೆಳವಣಿಗೆಗೆ ಶಕ್ತಿದಾಯಕ ಮತ್ತು ಹೆಚ್ಚು ಪರಿಣಾಮಕಾರಿ’ ಎಂದು ತಿಳಿಸಿದರು.

ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ಡಾ.ಶಶಿಧರ ರೇಶ್ಮೆ ಮಾತನಾಡಿ, ‘ಮಗುವಿಗೆ ಹಾಲುಣಿಸಿದರೆ ಸೌಂದರ್ಯ ಕುಂದುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಇದು ತಪ್ಪು ಕಲ್ಪನೆ. ಮಗುವಿಗೆ ಹಾಲುಣಿಸಿದರೆ ಸಹಜವಾಗಿಯೇ ಮಹಿಳೆಯರ ಸೌಂದರ್ಯ ಇನ್ನಷ್ಟು ವೃದ್ಧಿಸುತ್ತದೆ’ ಎಂದು ಹೇಳಿದರು.

ಇನ್ನರ್‌ ವ್ಹೀಲ್‌ ಕ್ಲಬ್ ಆಫ್ ಗದಗ ಮಿಡ್ ಟೌನ್ ಅಧ್ಯಕ್ಷೆ ಆರತಿ ಜೀರಂಕಳಿ, ಗದಗ ಐಎಂಎ ಮಾಜಿ ಅಧ್ಯಕ್ಷೆ ಡಾ.ರಾಧಿಕಾ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಾ.ಉದಯ ಕುಲಕರ್ಣಿ, ಕ್ಲಬ್ ಕಾರ್ಯದರ್ಶಿ ಲತಾ ಮುತ್ತಿನಪೆಂಡಿಮಠ, ಖಜಾಂಚಿ ವಿಜಯಲಕ್ಷ್ಮೀ ಬಿರಾದಾರ, ಪ್ರೀತಿ ಶಿವಪ್ಪನಮಠ, ರಶ್ಮಿ ಕುರಗೋಡ, ರಾಣಿ ಚಂದಾವರಿ ಇದ್ದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಾಣಂತಿಯರು, ಮಹಿಳೆಯರಿಗೆ ಪ್ರೊಟೀನ್‌ ಪ್ಯಾಕೇಟ್‍ಗಳನ್ನು ವಿತರಿಸಲಾಯಿತು.

 ಬಾಣಂತಿಯರು ಕರಿದ ಪದಾರ್ಥಗಳನ್ನು ತ್ಯಜಿಸಿ, ಪೌಷ್ಟಿಕ ಆಹಾರ ಸೇವಿಸಬೇಕು. ಮಾನಸಿಕವಾಗಿ ದೈಹಿಕವಾಗಿ ಸದೃಢರಾಗಲು ಪ್ರೊಟೀನ್‍ಯುಕ್ತ ಆಹಾರ ಸೇವನೆ ಅತಿ ಅವಶ್ಯಕ
ಡಾ.ಶಿಲ್ಪಾ ಪವಾಡಶೆಟ್ಟರ, ಸ್ತ್ರೀರೋಗ ತಜ್ಞೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.