ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೈತ ಮಕ್ಕಳನ್ನು ಮದುವೆಯಾಗುವವರಿಗೆ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ನೀಡಿ:ನಾಗೇಂದ್ರ

Published 25 ಡಿಸೆಂಬರ್ 2023, 14:09 IST
Last Updated 25 ಡಿಸೆಂಬರ್ 2023, 14:09 IST
ಅಕ್ಷರ ಗಾತ್ರ

ಮುಂಡರಗಿ: 'ಇತ್ತೀಚೆಗೆ ರೈತರ ಗಂಡು ಮಕ್ಕಳಿಗೆ ಹೆಣ್ಣುಗಳು ಸಿಗದೇ ಇರುವುದರಿಂದ ರೈತರ ಮಕ್ಕಳೆಲ್ಲ ಸಕಾಲದಲ್ಲಿ ಮದುವೆಯಾಗದೆ ಪರದಾಡುವಂತಾಗಿದೆ. ಆದ್ದರಿಂದ ಸರ್ಕಾರ ರೈತರ ಮಕ್ಕಳನ್ನು ಮದುವೆಯಾಗುವವರಿಗೆ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ನೀಡಬೇಕು' ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.

ತಾಲ್ಲೂಕು ರೈತ ಸಂಘವು ಸೋಮವಾರ ಪಟ್ಟಣದ ಪುರಸಭೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ರೈತ ನಾಯಕ ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರ 75ನೇ ಜನ್ಮದಿನೋತ್ಸವ, ತಾಲ್ಲೂಕು ಅನ್ನದಾತರ ಸಮಾವೇಶ ಹಾಗೂ ಅನುಭವಿ ರೈತರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಲವು ದಶಕಗಳಿಂದ ರಾಜ್ಯ ಹಾಗೂ ಕೇಂದ್ರದಲ್ಲಿ ಆಡಳಿತ ನಡೆಸಿದ ರಾಜಕೀಯ ಪಕ್ಷಗಳು ಮಾತ್ರ ಬದಲಾಗಿದ್ದು, ರೈತರ ಸಮಸ್ಯೆಗಳು ಅಂದಿನಿಂದಲೂ ಜೀವಂತವಾಗಿವೆ. ರೈತರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಎಲ್ಲ ಸರ್ಕಾರಗಳು ವಿಫಲವಾಗಿವೆ. ಈ ಕಾರಣದಿಂದಾಗಿ ದೇಶದ ಬಹುತೇಕ ರೈತರು ಬಡತನ ರೇಖೆಗಿಂತ ಕೆಳಗಿದ್ದಾರೆ. ಸರ್ಕಾರ ರೈತರ ಸಮಸ್ಯೆಗಳ ನಿವಾರಣೆಗೆ ಶಾಶ್ವತ ಪರಿಹಾರಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯುತ್ತಿಲ್ಲ. ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ. ಹೀಗಾಗಿ ಕೃಷಿ ಕಾಯಕಕ್ಕೆ ಯುವಕರು ಹಿಂದೇಟು ಹಾಕುತ್ತಿದ್ದಾರೆ.
ಅನ್ನದಾನೀಶ್ವರ ಸ್ವಾಮೀಜಿ, ಅನ್ನದಾನೀಶ್ವರ ಮಠ, ಮುಂಡರಗಿ

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಡಾ.ಅನ್ನದಾನೀಶ್ವರ ಸ್ವಾಮಿಜಿ ಮಾತನಾಡಿ, ದುಡಿಯದೇ ಯಾರಿಗೂ ಏನೂ ದೊರೆಯಲಾರದು. ಸರ್ಕಾರ ಎಲ್ಲವನ್ನೂ ಉಚಿತವಾಗಿ ಕೊಡುತ್ತಿರುವುದರಿಂದ ಕೃಷಿ ಕಾಯಕಕ್ಕೆ ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ ಸರ್ಕಾರ ಉಚಿತವಾಗಿ ಎಲ್ಲರಿಗೂ ಎಲ್ಲವನ್ನು ಕೊಡುವ ಬದಲಾಗಿ ರೈತರ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವಂತಹ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರೈತರ ಬದುಕು ಸದಾ ಅತಂತ್ರ ಸ್ಥಿತಿಯಲ್ಲಿದ್ದು, ಅವರು ನಿತ್ಯ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಿತ್ಯ ಜಗತ್ತಿಗೆ ಅನ್ನ ಹಾಕುವ ರೈತ ಸಮುದಾಯ ಬರಗಾಲದಿಂದ ತತ್ತರಿಸಿದೆ ಎಂದು ತಿಳಿಸಿದರು.

ತಹಶೀಲ್ದಾರ್ ಧನಂಜಯ್ ಮಾಲಗತ್ತಿ ಮಾತನಾಡಿ, ಕೃಷಿ, ಕಂದಾಯ ಹಾಗೂ ತೋಟಗಾರಿಕೆ ಇಲಾಖೆಗಳು ಈಗಾಗಲೇ ಬರ ಸಮೀಕ್ಷೆಯನ್ನು ಪೂರ್ಣಗೊಳಿಸಿವೆ. ತಾಲ್ಲೂಕಿನಲ್ಲಿ ಈಗಾಗಲೆ ಶೇ 85ರಷ್ಟು ರೈತರು ಎಫ್.ಐ.ಡಿ. ನೋಂದಣಿ ಮಾಡಿಕೊಂಡಿದ್ದಾರೆ. ಇನ್ನುಳಿದ ಎಲ್ಲ ರೈತರು ಎಫ್.ಐ.ಡಿ. ನೋಂದಣಿಯನ್ನು ಮಾಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಶರಣಪ್ಪ ಕಂಬಳಿ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಜಿ.ಎಚ್.ತಾರಾಮಣಿ ಹಾಗೂ ಮತ್ತಿತರರು ಮಾತನಾಡಿದರು.

ತಾಲ್ಲೂಕಿನ ವಿವಿಧ ಗ್ರಾಮಗಳ ಸುಮಾರು 250ಕ್ಕೂ ಹೆಚ್ಚು ರೈತರು ಹಾಗೂ ರೈತ ಮಹಿಳೆಯರನ್ನು ಸನ್ಮಾನಿಸಲಾಯಿತು. ಗವಿಸಿದ್ದಯ್ಯ ಹಳ್ಳಿಕೇರಿಮಠ ರೈತಗೀತೆ ಹಾಡಿದರು. ವಂದನಾ ಬೇಲಿಗೌಡ್ರ ಸ್ವಾಗತಿಸಿದರು. ರಾಜ್ಯ ರೈತ ಸಂಘದ ಕಾರ್ಯದರ್ಶಿ ಶಿವಾನಂದ ಇಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶ್ವಿನಿ ಗೌಡರ ನಿರೂಪಿಸಿದರು.

ರೈತ ಸಂಘದ ಜಿಲ್ಲಾ ಅಧ್ಯಕ್ಷ ಮುತ್ತನಗೌಡ ಚೌಡರಡ್ಡಿ, ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಪ್ರಮೋದ ತುಂಬಳ, ರೈತ ಮುಖಂಡರಾದ ರಾಮಚಂದ್ರ ಇಲ್ಲೂರ, ಚಂದ್ರಕಾಂತ ಉಳ್ಳಾಗಡ್ಡಿ, ಶರಣಪ್ಪ ಚನ್ನಳ್ಳಿ, ಹನುಮಂತಪ್ಪ ಗಡ್ಡದ, ಅಂದಮ್ಮ ಹಿರೇಮಠ, ತಿಪ್ಪಣ್ಣ ಉಪ್ಪಾರ, ರವಿ ಚಾಕಲಬ್ಬಿ, ಮುತ್ತಣ್ಣ ಗೌಡ್ರ, ನಾಗಲಿಂಗಯ್ಯ ಮುತ್ತಾಳಮಠ, ಹುಚ್ಚಪ್ಪ ಹಂದ್ರಾಳ, ರಾಘು ಕುರಿ, ಅಶೋಕ ಬನ್ನಿಕೊಪ್ಪ, ಭೀಮೇಶ ಬಂಡಿವಡ್ಡರ ಇದ್ದರು.

ಮುಂಡರಗಿ ತಾಲ್ಲೂಕು ರೈತ ಸಂಘವು ಪಟ್ಟಣದ ಪುರಸಭೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಅನ್ನದಾತರ ಸಮಾವೇಶದಲ್ಲಿ ಶತಾಯುಷಿ ಅಂದಮ್ಮ ಹಿರೇಮಠ ಅವರನ್ನು ಶ್ರೀಗಳು ಸನ್ಮಾನಿಸಿದರು
ಮುಂಡರಗಿ ತಾಲ್ಲೂಕು ರೈತ ಸಂಘವು ಪಟ್ಟಣದ ಪುರಸಭೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಅನ್ನದಾತರ ಸಮಾವೇಶದಲ್ಲಿ ಶತಾಯುಷಿ ಅಂದಮ್ಮ ಹಿರೇಮಠ ಅವರನ್ನು ಶ್ರೀಗಳು ಸನ್ಮಾನಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT