ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಸಾಗುವುದೇ ಗದಗ–ವಾಡಿ ರೈಲು ಮಾರ್ಗ?

ಇಂದು ಕೇಂದ್ರ ಬಜೆಟ್‌; ಕೊಡುಗೆಗಳ ನಿರೀಕ್ಷೆಯಲ್ಲಿ ಜಿಲ್ಲೆಯ ಜನ
Last Updated 6 ಜುಲೈ 2019, 10:24 IST
ಅಕ್ಷರ ಗಾತ್ರ

ಗದಗ: ಕೇಂದ್ರ ಸರ್ಕಾರ ಜುಲೈ 5ರಂದು ಮಂಡಿಸಲಿರುವ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ ಮುದ್ರಣ ನಗರಿಯ ಜನ ಬಹು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಪ್ರಮುಖ ರೈಲ್ವೆ ಜಂಕ್ಷನ್‌ ಹೊಂದಿರುವ ಗದುಗಿಗೆ, ಈ ಬಾರಿ ಒಂದಿಷ್ಟು ಕೊಡುಗೆಗಳು ಲಭಿಸಬಹುದು ಎಂಬ ನಿರೀಕ್ಷೆಯಲ್ಲಿ ರೈಲ್ವೆ ಹೋರಾಟಗಾರರಿದ್ದಾರೆ. ಅದರಲ್ಲಿ ಪ್ರಮುಖವಾದದ್ದು ಗದಗ–ವಾಡಿ (ಹಳೆಯ ಮಾರ್ಗ) ರೈಲು ಯೋಜನೆ. 1910ರಲ್ಲೇ ಬ್ರಿಟೀಷರುಗದಗ– ಕೋಟುಮಚಗಿ, ನರೇಗಲ್– ಗಜೇಂದ್ರಗಡ–ಹನಮಸಾಗರ– ಇಳಕಲ್‌ ಮಾರ್ಗವಾಗಿ ವಾಡಿಗೆ ರೈಲು ಮಾರ್ಗಕ್ಕೆ ಯೋಜನೆ ರೂಪಿಸಿದ್ದರು. ಈ ಯೋಜನೆಯು ಹಲವು ಕಾರಣಗಳಿಂದ ಕೈತಪ್ಪಿದೆ. ಈ ಬಾರಿಯಾದರೂ ಕೇಂದ್ರವು ಈ ಹಳೆಯ ಮಾರ್ಗದ ಸಮೀಕ್ಷೆಗೆ ಹಸಿರು ನಿಶಾನೆ ತೋರಬಹುದು ಎಂಬ ನಿರೀಕ್ಷೆ ಜಿಲ್ಲೆಯ ಜನರಲ್ಲಿದೆ.

ಎರಡು ವರ್ಷಗಳ ಹಿಂದೆ ಮಂಡಿಸಲಾದ ಬಜೆಟ್‌ನಲ್ಲಿ ಸೊಲ್ಲಾಪೂರ–ಗದಗ ವಿದ್ಯುತ್ ಮಾರ್ಗ ಘೋಷಿಸಲಾಗಿತ್ತು. ಅದು ಇನ್ನೂ ಪೂರ್ಣಗೊಂಡಿಲ್ಲ. ಗದಗ–ಹೂಟಗಿ (284 ಕಿ.ಮೀ) ಜೋಡಿ ಮಾರ್ಗದ ಕಾಮಗಾರಿಯೂ ಮಂದಗತಿಯಲ್ಲಿ ನಡೆಯುತ್ತಿದೆ. ಕಳೆದ ಬಜೆಟ್‌ನಲ್ಲಿ ಗದಗ– ಹರಪನಹಳ್ಳಿ ಹೊಸ ರೈಲು ಮಾರ್ಗದ ಪ್ರಸ್ತಾಪವನ್ನು ಜಿಲ್ಲೆಯ ಜನರು ನಿರೀಕ್ಷಿಸಿದ್ದರು. ಅದೂ ಈಡೇರಿಲ್ಲ. ಗದಗ-ಯಲವಗಿ ರೈಲ್ವೆ ಮಾರ್ಗ ಪ್ರಾರಂಭಿಸಬೇಕು ಎನ್ನುವ ಜಿಲ್ಲೆಯ ಜನರ ದಶಕಗಳ ಬೇಡಿಕೆ ಇನ್ನೂ ಕನಸಾಗಿಯೇ ಉಳಿದಿದೆ. ಗದಗನಿಂದ ಸೊಲ್ಲಾಪುರಕ್ಕೆ ಹೆಚ್ಚುವರಿ ರೈಲುಗಳನ್ನು ಓಡಿಸಬೇಕು, ಹುಬ್ಬಳ್ಳಿ–ಗದಗ–ಬಳ್ಳಾರಿ ಮಾರ್ಗವಾಗಿ ಬೆಂಗಳೂರಿಗೆ ಹೊಸ ಇಂಟರ್‌ಸಿಟಿ ರೈಲು ಓಡಿಸಬೇಕು ಎನ್ನುವ ಬೇಡಿಕೆಗಳೂ ಪಟ್ಟಿಯಲ್ಲಿವೆ.

ರೈಲ್ವೆ ಬಜೆಟ್‌ ಮತ್ತು ಸಾಮಾನ್ಯ ಬಜೆಟ್‌ ವಿಲೀನಗೊಂಡಿರುವುದರಿಂದ ರೈಲ್ವೆ ಇಲಾಖೆಗೆ ನೀಡಿರುವ ಆದ್ಯತೆಗಳು ಸ್ಪಷ್ಟವಾಗಿ ತಿಳಿಯುವುದಿಲ್ಲ ಎನ್ನುವುದು ಈ ಭಾಗದ ರೈಲ್ವೆ ಹೋರಾಟಗಾರರ ದೂರು.

ಹೇಳಿಕೊಳ್ಳುವ ಕೊಡುಗೆಗಳು ಲಭಿಸಿಲ್ಲ: ಕಳೆದ ಬಜೆಟ್‌ನಲ್ಲಿ ಜಿಲ್ಲೆಗೆ ಹೇಳಿಕೊಳ್ಳುವ ಯಾವುದೇ ಕೊಡುಗೆಗಳು ಲಭಿಸಿಲ್ಲ. ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿಯಡಿ, 2 ಹೆಕ್ಟೇರ್‌ಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ, ಮೂರು ಕಂತುಗಳಲ್ಲಿ ವಾರ್ಷಿಕ ₹ 6 ಸಾವಿರ ಬ್ಯಾಂಕ್‌ ಖಾತೆಗೆ ಜಮಾ ಮಾಡುವುದಾಗಿ ಕೇಂದ್ರ ಘೋಷಿಸಿತ್ತು. ಅದಕ್ಕೆ ನೋಂದಣಿ ಪ್ರಕ್ರಿಯೆ ಈಗ ನಡೆಯುತ್ತಿದೆ. 1.79 ಲಕ್ಷ ರೈತರ ಪೈಕಿ ಇನ್ನೂ 50 ಸಾವಿರ ರೈತರ ನೋಂದಣಿ ಬಾಕಿ ಇದೆ.

ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮೆ ಕಂತು ತುಂಬಿದ ರೈತರಿಗೆ ಕಳೆದೆರಡು ವರ್ಷಗಳಿಂದ ಪರಿಹಾರ ಬಿಡುಗಡೆಯಾಗಿಲ್ಲ. ಬೆಳೆ ವಿಮೆ ಮತ್ತು ಬೆಳೆಹಾನಿ ಪರಿಹಾರಕ್ಕಾಗಿಯೇ ಪ್ರತ್ಯೇಕ ವ್ಯವಸ್ಥೆಯೊಂದನ್ನು ಬಜೆಟ್‌ನಲ್ಲಿ ಘೋಷಿಸಬೇಕು ಎನ್ನುವುದು ರೈತರ ಪ್ರಮುಖ ಬೇಡಿಕೆ. ಹೆಸರುಕಾಳು, ಕಡಲೆ, ಶೇಂಗಾ, ಹತ್ತಿ, ಮೆಣಸಿನಕಾಯಿ, ಈರುಳ್ಳಿ, ಬಿಳಿ ಜೋಳ ಜಿಲ್ಲೆಯ ಪ್ರಮುಖ ಬೆಳೆಗಳಾಗಿದ್ದು, ಈಗಾಗಲೇ ಈರುಳ್ಳಿ ಮತ್ತು ಹೆಸರುಕಾಳು ಸಂಸ್ಕರಣ ಘಟಕಗಳಿಗೆ ರಾಜ್ಯ ಬಜೆಟ್‌ನಲ್ಲಿ ಅನುದಾನ ಘೋಷಿಸಲಾಗಿದೆ. ಕೇಂದ್ರ ಬಜೆಟ್‌ನಲ್ಲಿ ಹತ್ತಿ ಸಂಸ್ಕರಣ ಘಟಕಕ್ಕೆ ಅನುದಾನ ಬಿಡುಗಡೆ ಮಾಡಿದರೆ ಜಿಲ್ಲೆಗೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ಉದ್ಯಮಿಗಳದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT