ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷಡ್ಯಂತ್ರಗಳ ವಿರುದ್ಧ ಸಿಡಿದೇಳಿ: ಚೈತ್ರಾ

‘ಮತಾಂತರ, ಮತಾಂತರಕ್ಕೆ ಒಳಗಾದ ಹೆಣ್ಣುಮಕ್ಕಳ ಕತೆ ವ್ಯಥೆ’- ಉಪನ್ಯಾಸ
Last Updated 17 ಸೆಪ್ಟೆಂಬರ್ 2022, 4:51 IST
ಅಕ್ಷರ ಗಾತ್ರ

ಗದಗ: ‘ಮತಾಂತರ ಎಂಬುದು ಧರ್ಮ ಧರ್ಮಗಳ ನಡುವೆ ಇರುವ ಸಮಸ್ಯೆ ಅಲ್ಲ. ಇದು ದೇಶಕ್ಕೆ ಅಂಟಿರುವ ಬಹಳ ದೊಡ್ಡ ಶಾಪ. ಹಾಗಾಗಿ, ಈ ಸಮಸ್ಯೆಯನ್ನು ನಾವು ಒಂದಾಗಿ ಬಗೆಹರಿಸುವ ಅವಶ್ಯಕತೆ ಇದೆ’ ಎಂದು ಚೈತ್ರಾ ಕುಂದಾಪುರ ಅಭಿಪ್ರಾಯಪಟ್ಟರು.

ನಗರದ ಖಾನತೋಟ ಗಜಾನನ ಯುವಕ ಮಂಡಳಿಯವರು ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಮತಾಂತರ, ಮತಾಂತರಕ್ಕೆ ಒಳಗಾದ ಹೆಣ್ಣುಮಕ್ಕಳ ಕತೆ ವ್ಯಥೆ’ ವಿಷಯ ಕುರಿತು ಅವರು ಮಾತನಾಡಿದರು.

‘ಒಬ್ಬ ಹಿಂದೂ ಹೆಣ್ಣುಮಗಳು ಮತಾಂತರ ಆಗಿ ಹೋದರೆ ಅದು ದೇಶಕ್ಕೆ ಆಗುವ ಬಹಳ ದೊಡ್ಡ ನಷ್ಟ. ಮುಂದೆ ಅದು ದೇಶಕ್ಕೆ ಬರುವ ಬಹಳ ದೊಡ್ಡ ಕಂಟಕ ಎಂಬುದನ್ನು ಅರ್ಥ ಮಾಡಿಸಬೇಕಿದೆ’ ಎಂದು ಹೇಳಿದರು.

‘ಹಿಂದೂ ಹೆಣ್ಣುಮಗಳು ಬೇರೆ ಧರ್ಮದವರನ್ನು ಮದುವೆಯಾದರೆ ಸಮಸ್ಯೆ ಇಲ್ಲ. ಆದರೆ, ಆಕೆ ಮತಾಂತರಗೊಂಡು ಐಸಿಸ್‌ ಸಂಘಟನೆಗಳಿಗೆ ಸೇರಿ ನಮ್ಮದೇ ದೇವಸ್ಥಾನ, ನಾಯಕರನ್ನು ಸಾಯಿಸಲು ಮಾನವಬಾಂಬ್‌ ಆಗಿ ಬಳಕೆ ಆಗುತ್ತಾಳೆ, ಅಲ್ಲಿರುವುದು ಸಮಸ್ಯೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಬಾಲಿವುಡ್‌ನ ಕೆಲವು ಸ್ಟಾರ್‌ಗಳು ಹಿಂದೂ ಹೆಣ್ಣುಮಕ್ಕಳನ್ನು ಮದುವೆ ಆಗುವ ಮೂಲಕ ಅಂತರಧರ್ಮೀಯ ವಿವಾಹಗಳನ್ನು ಟ್ರೆಂಡ್‌ ಮಾಡುವ ಪ್ರಯತ್ನದಲ್ಲಿದ್ದಾರೆ. ಇದು ದೊಡ್ಡ ಷಡ್ಯಂತ್ರ. ಇದನ್ನು ನಮ್ಮ ಮಕ್ಕಳಿಗೆ ಅರ್ಥ ಮಾಡಿಸಬೇಕು. ಇವುಗಳ ವಿರುದ್ಧ ನಾವು ಸಿಡಿದೇಳಬೇಕು. ನಮ್ಮ ಬದುಕಿನ ನಿಜವಾದ ಹೀರೋ ಸಲ್ಮಾನ್‌, ಆಮೀರ್‌ ಖಾನ್‌ ಅಲ್ಲ; ಪ್ರಭು ಶ್ರೀರಾಮ, ಶ್ರೀಕೃಷ್ಣ ಎಂಬುದನ್ನು ನಮ್ಮ ಮಕ್ಕಳಿಗೆ ಅರ್ಥಮಾಡಿಸಬೇಕಿದೆ’ ಎಂದರು.

‘ನಮ್ಮ ಹೆಣ್ಣುಮಕ್ಕಳನ್ನು ಟ್ರ್ಯಾಪ್‌ ಮಾಡುವಂತಹ ದೊಡ್ಡ ಜಾಲ ಸಕ್ರಿಯವಾಗಿದೆ. ನಾವು ಇನ್ನೊಬ್ಬರನ್ನು ದೂಷಿಸಬೇಕಿಲ್ಲ. ನಮ್ಮ ಮನೆಯ ಹೆಣ್ಣುಮಕ್ಕಳನ್ನು ಜಾಗೃತಿಗೊಳಿಸಬೇಕು. ಅದೇರೀತಿ, ಹಿಂದೂ ಹುಡುಗರು ಕೂಡ ಲವ್‌ ಜಿಹಾದ್‌ಗೆ ಬಲಿಯಾಗುತ್ತಿದ್ದಾರೆ. ಈ ಬಗ್ಗೆಯೂ ಎಚ್ಚರಿಕೆ ವಹಿಸಬೇಕಿದೆ’ ಎಂದು ಹೇಳಿದರು.

‘ಹಿಜಾಬ್‌ ಧರಿಸಲು ಅವಕಾಶ ಕೊಡದಿದ್ದರೆ ಓದಲು ಕಳಿಸುವುದಿಲ್ಲ ಎನ್ನುವ ತೀರಾ ಹಿಂದುಳಿದ ಧರ್ಮದವರು ಹಿಂದೂ ಧರ್ಮದ ಬಗ್ಗೆ ಮಾತನಾಡುವ ಯಾವ ನೈತಿಕತೆ ಉಳಿಸಿಕೊಂಡಿದ್ದಾರೆ. ಭಾರತಕ್ಕೆ ಜ್ಯಾತ್ಯತೀತತೆ ಎಂಬ ಕ್ಯಾನ್ಸರ್‌ ಅಂಟಿಕೊಂಡಿದೆ. ಅದನ್ನು ಗುಣಮಾಡುವುದು ಅಷ್ಟು ಸುಲಭ ಇಲ್ಲ. ದೇಶ ಸಂಸ್ಕೃತಿ, ಸಂಪ್ರದಾಯ ಉಳಿಯಬೇಕೆಂದರೆ ನಮ್ಮ ಮನೆಯ ಹೆಣ್ಣುಮಕ್ಕಳಿಗೆ ನಮ್ಮ ಧರ್ಮದ ಗರ್ವನ್ನು ಅರ್ಥ ಮಾಡಿಸಬೇಕು. ಆಗ ಮಾತ್ರ ಹಿಂದೂ ಸಮಾಜ, ಧರ್ಮ, ದೇಶ ಉಳಿಯುತ್ತದೆ’ ಎಂದು ಅಭಿಪ್ರಾಯಪಟ್ಟರು.

ಸರೋಜಾಬಾಯಿ ಟಿಕಾಂದಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಮಲಾಕ್ಷಿ ಗೊಂದಿ, ರುದ್ರವ್ವ ಕೆರಕಲಕಟ್ಟಿ, ಪಾರ್ವತಮ್ಮ ಪವಾರ್‌, ಸ್ನೇಹಲತಾ ಕುರ್ತಕೋಟಿ, ಮಂಗಳಾ ಬೇಲೇರಿ, ಗೀತಾ ಜಾಧವ್‌, ಜಯಶ್ರೀ ಮೇಹರವಾಡೆ, ನಿವೇದಿತಾ ಗಡ್ಡಿ, ಕವಿತಾ ಮಲ್ಲನಗೌಡರ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT