ಶನಿವಾರ, ಅಕ್ಟೋಬರ್ 16, 2021
22 °C
ನರಸಾಪುರ ಇಂಡಸ್ಟ್ರಿಯಲ್ ಅಸೋಶಿಯೇಶನ್ ವಾರ್ಷಿಕ ಸಭೆಯಲ್ಲಿ ಆನಂದ ಪೊತ್ನೀಸ್‌

ಸವಾಲು ಮೆಟ್ಟಿ ನಿಲ್ಲುವವನೇ ಯಶಸ್ವಿ ಉದ್ಯಮಿ: ಆನಂದ ಪೊತ್ನೀಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಉದ್ಯಮ ನಡೆಸುವಾಗ ಹತ್ತಾರು ಸಮಸ್ಯೆಗಳು ಎದುರಾಗುವುದು ಸಹಜ. ಅವುಗಳನ್ನು ಧೈರ್ಯದಿಂದ ಎದುರಿಸಿ ಪರಿಹಾರ ಮಾರ್ಗಗಳನ್ನು ಕಂಡುಕೊಂಡಾಗ ಮಾತ್ರ ಯಶಸ್ವಿ ಉದ್ಯಮಿಯಾಗಲು ಸಾಧ್ಯ’ ಎಂದು ಗದಗ ಜಿಲ್ಲಾ ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ಆನಂದ ಪೊತ್ನೀಸ್ ಹೇಳಿದರು.

ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ನಡೆದ ನರಸಾಪುರ ಇಂಡಸ್ಟ್ರಿಯಲ್ ಅಸೋಸಿಯೇಷನ್ ವಾರ್ಷಿಕ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.

‘ಸರ್ಕಾರದ ಮಾರ್ಗಸೂಚಿಗಳು, ಕಾಯ್ದೆ ಕಾನೂನುಗಳಲ್ಲಿ ಬದಲಾವಣೆ, ಲೆಕ್ಕಪತ್ರಗಳ ದಾಖಲಿಸುವಿಕೆಯಲ್ಲಿ ಸುಧಾರಣೆ, ಅನವಶ್ಯಕ ಕಿರುಕುಳ, ಕಾರ್ಮಿಕರು ಮತ್ತು ಸಿಬ್ಬಂದಿಯ ಸಮಸ್ಯೆ, ಮಾರುಕಟ್ಟೆ, ಸಾರಿಗೆ ಹೀಗೆ ಹಲವಾರು ಸಮಸ್ಯೆಗಳನ್ನು ಸರಿಪಡಿಸಿಕೊಂಡು ತಾಳ್ಮೆ ಸಹನೆಯಿಂದ ಉದ್ಯಮ ಮುನ್ನಡೆಸಿಕೊಂಡು ಹೋಗುವುದು ಬಹುಕಷ್ಟದ ಕೆಲಸ. ಇದನ್ನು ಸರಳೀಕರಣ ಮಾಡಿಕೊಂಡು ಪರಿಹಾರದ ಮಾರ್ಗಗಳನ್ನು ಕಂಡುಕೊಳ್ಳುವುದೇ ಜಾಣ ಹಾಗೂ ಯಶಸ್ವಿ ಉದ್ದಿಮೆದಾರನ ಲಕ್ಷಣ’ ಎಂದು ಹೇಳಿದರು.

ಮುಖ್ಯ ಅತಿಥಿ ವಿಜಯಕುಮಾರ ಗಡ್ಡಿ ಮಾತನಾಡಿ, ‘ಪದೇ ಪದೇ ವಿದ್ಯುತ್ ಕಡಿತವಾಗುತ್ತಿರುವುದು ಕೈಗಾರಿಕೆಗಳ ಉತ್ಪಾದಕತೆಯ ಹಿನ್ನಡೆಗೆ ಕಾರಣವಾಗಿದೆ. ಬರಲಿರುವ ದಿನಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಉದ್ಯಮವನ್ನು ಮುಂಚೂಣಿಯಲ್ಲಿ ನಡೆಸಬೇಕು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನರಸಾಪೂರ ಇಂಡಸ್ಟ್ರಿಯಲ್ ಅಸೋಸಿಯೇಶನ್ ಅಧ್ಯಕ್ಷ ಶಿವಕುಮಾರ ಪಾಟೀಲ ಮಾತನಾಡಿ, ‘ನರಸಾಪೂರ ಇಂಡಸ್ಟ್ರಿಯಲ್ ಎಸ್ಟೇಟ್‍ನಲ್ಲಿ ಹಲವಾರು ಸಮಸ್ಯೆಗಳಿದ್ದು ಇವುಗಳಿಗೆ ಪರಿಹಾರ ಕಂಡುಕೊಳ್ಳಲು ಸಂಘಟನೆ ಅವಶ್ಯ. ಅಸೋಶಿಯೇಷನ್ ಈಗಾಗಲೇ ಇಲ್ಲಿನ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾಡಳಿತ ಹಾಗೂ ಸಂಬಂಧಿಸಿ ಇಲಾಖೆಯ ಅಧಿಕಾರಿಗಳ ಗಮನ ಸೆಳೆದಿದೆ’ ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಉತ್ತರ ಕರ್ನಾಟಕದ ಒಟ್ಟು 16 ಜಿಲ್ಲಾ ವಾಣಿಜ್ಯೋದ್ಯಮಿಗಳ ಪರಿವರ್ತನ ಸಮ್ಮೇಳನವನ್ನು
ಯಶಸ್ವಿಗೊಳಿಸಿದ ಆನಂದ ಪೊತ್ನೀಸ್ ಸೇರಿದಂತೆ ಬಸವರಾಜ ಅಂಗಡಿ ಹಾಗೂ ವೀರಣ್ಣ ಗೊಡಚಿ, ವಿನೋದ ಪಟೇಲ್ ಅವರನ್ನು ಅಸೋಶಿಯೇಷನ್‍ ವತಿಯಿಂದ ಸನ್ಮಾನಿಸಲಾಯಿತು.

ಹರಿಲಾಲ್ ಪಟೇಲ್, ಅರ್ಜುನ ಭಾಸ್ಕರ್ ವೇದಿಕೆ ಮೇಲೆ ಇದ್ದರು. ನವೀನ ಮೇಟಿ ಪ್ರಾರ್ಥಿಸಿದರು. ಖಜಾಂಚಿ ಎಸ್.ಎಸ್.ಮೇಟಿ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ದಶರಥ ಕೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ವಂದಿಸಿದರು.

ಗದುಗಿನಲ್ಲಿ ಈಚೆಗೆ ನಡೆಸಿದ ಉತ್ತರ ಕರ್ನಾಟಕದ ಉದ್ಯಮಿದಾರರ ಸಮ್ಮೇಳನದಲ್ಲಿ ಯಶಸ್ವಿ ಉದ್ಯಮಿದಾರರು ತಮ್ಮ ಯಶೋಗಾಥೆಯನ್ನು ತೆರೆದಿಡುವ ಮೂಲಕ ಹೊಸದಾಗಿ ಉದ್ಯಮ ಸ್ಥಾಪಿಸುವವರಿಗೆ ಸ್ಫೂರ್ತಿಯಾಗಿದ್ದಾರೆ

ಆನಂದ ಪೊತ್ನೀಸ್‌, ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು