ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ್ಪಕ ನೀರು ಸರಬರಾಜು: 10 ದಿನಗಳ ಗಡುವು

ನೀರು ನಿರ್ವಹಣೆ ಮಾಡುವಂತೆ ನಗರಸಭೆಗೆ ಕೆಯುಐಡಿಎಫ್‌ಸಿ ಪತ್ರ; ತುರ್ತು ಸಾಮಾನ್ಯ ಸಭೆ
Last Updated 6 ಮೇ 2022, 4:54 IST
ಅಕ್ಷರ ಗಾತ್ರ

ಗದಗ: ಅವಳಿ ನಗರದಲ್ಲಿ ತಾಂಡವವಾಡುತ್ತಿರುವ ನೀರಿನ ಸಮಸ್ಯೆ ಬಗೆಹರಿಸಲು ತತ್‌ ಕ್ಷಣವೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗದಗ ಬೆಟಗೇರಿ ನಗರಸಭೆಯ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರುಒಕ್ಕೊರಲಿನಿಂದ ಆಗ್ರಹಿಸಿದರು.

ಗದಗ ಬೆಟಗೇರಿ ನಗರದಲ್ಲಿ ಕುಡಿಯುವ ನೀರು ಸರಬರಾಜಿನಲ್ಲಿ ಆಗಿರುವ ಅವ್ಯವಸ್ಥೆ ಸರಿಪಡಿಸುವ ಸಂಬಂಧ ಕರ್ನಾಟಕ ನಗರ ಮೂಲಸೌಕರ್ಯಅಭಿವೃದ್ಧಿ ಮತ್ತು ಹಣಕಾಸು ನಿಗಮವು (ಕೆಯುಐಡಿಎಫ್‌ಸಿ) ಗದಗ ನಗರಸಭೆಗೆ ಪತ್ರ ಬರೆದಿದೆ. 24/7 ನೀರು ಸರಬರಾಜು ಯೋಜನೆ ಅಡಿ ಈಗ ಕಾರ್ಯಾಚರಣೆ ಮಾಡುತ್ತಿರುವ ಎಸ್‌ಪಿಎಂಎಲ್‌ ಕಂಪನಿಯಿಂದ ಹಿಂಪಡೆದು ಇನ್ನು ಮುಂದೆ ನಗರಸಭೆಯೇ ನೀರು ಸರಬರಾಜು ನಿರ್ವಹಣೆಯನ್ನು ಮಾಡುವಂತೆ ಸೂಚಿಸಿದೆ.

ಈಹಿನ್ನೆಲೆಯಲ್ಲಿ ಗುರುವಾರ ನಗರಸಭೆಯಲ್ಲಿ ನಡೆದ ತುರ್ತು ಸಾಮಾನ್ಯ ಸಭೆಯಲ್ಲಿ ಎಲ್ಲರೂ ಪಕ್ಷಭೇದ ಮರೆತು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದರು. ಯೋಜನೆ ಅನುಷ್ಠಾನದಲ್ಲಿ ಅಕ್ರಮ ನಡೆದಿರುವ ಶಂಕೆ ಇದ್ದು, ಪ್ರಕರಣವನ್ನು ಸಿಒಡಿ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ನಗರಸಭೆ ವಿರೋಧ ಪಕ್ಷದ ನಾಯಕ ಎಲ್‌.ಡಿ.ಚಂದಾವರಿ ಮಾತನಾಡಿ, ‘24/7 ಕುಡಿಯುವ ನೀರು ಸರಬರಾಜಿಗಾಗಿ ಮೀಸಲಿರಿಸಿದ್ದ ₹186 ಕೋಟಿ ಹಣ ಪೂರ್ಣವಾಗಿ ಖರ್ಚಾಗಿದೆ. ಆದರೆ, ಈವರೆಗೂ ಅವಳಿ ನಗರದ ಜನರಿಗೆ ನಿರಂತರ ನೀರು ಸಿಗುತ್ತಿಲ್ಲ. ಯೋಜನೆ ಅನುಷ್ಠಾನದ ಗುತ್ತಿಗೆ ಪಡೆದಿರುವ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ, ಅವರ ವಿರುದ್ಧ ‍ಪ್ರಕರಣ ದಾಖಲಿಸಬೇಕು. ಕಂಪನಿ ಸಿಬ್ಬಂದಿಯನ್ನು ಜೈಲಿಗಟ್ಟಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘24/7 ಯೋಜನೆಯ 14 ವಲಯಗಳಲ್ಲಿಯಾವ ವಲಯದ ಕಾಮಗಾರಿಯೂ ಪೂರ್ಣಗೊಂಡಿಲ್ಲ. ಏಳು ವಲಯಗಳಲ್ಲಿ ಶೇ 70ರಷ್ಟು ಕೆಲಸವಾಗಿದೆ. ಇನ್ನುಳಿದ ಏಳು ವಲಯಗಳಲ್ಲಿ ಶೇ 80ರಷ್ಟು ಕಾಮಗಾರಿ ನಡೆದಿದೆ. ಆದರೆ, ಹಣ ಮಾತ್ರ ಪೂರ್ತಿ ಖರ್ಚಾಗಿದೆ. ಉಳಿಕೆ ಕೆಲಸವನ್ನು ಪೂರ್ಣಗೊಳಿಸಲು ಇನ್ನೂ ₹30 ಕೋಟಿಯಷ್ಟು ಹಣ ಬೇಕಿದೆ. ಅದನ್ನು ಯಾರು ಕೊಡುತ್ತಾರೆ. ಗುತ್ತಿಗೆದಾರರ ಕಳ್ಳಾಟದಿಂದಾಗಿ ನಗರದ ಜನರು ನೀರಿಲ್ಲದೇ ನರಳುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

‘ಕೆಯುಐಡಿಎಫ್‌ಸಿ ಪತ್ರ ಬರೆದಿರುವಂತೆ ಸಂಪೂರ್ಣ ನೀರು ನಿರ್ವಹಣೆ ಹೊರೆಯನ್ನು ನಗರಸಭೆ ಹೊರಬಾರದು. ಬದಲಾಗಿ ‘ಎ’ ಪಾಯಿಂಟ್‌ನ ಅಂದರೆ ನಗರದೊಳಗಿನ ನಿರು ಸರಬರಾಜು ಹೊಣೆಯನ್ನು ಮಾತ್ರ ನಿರ್ವಹಿಸಲು ಒಪ್ಪಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ನಗರಸಭೆ ಮಹಿಳಾ ಸದಸ್ಯೆಯರು ಮಾತನಾಡಿ, ‘24/7 ಯೋಜನೆಯನ್ನು 24 ದಿನಗಳಿಗೊಮ್ಮೆ 7 ಗಂಟೆ ನೀರು ಎಂದು ವ್ಯಾಖ್ಯಾನಿಸಬಹುದು. ಕೆಲವೊಂದು ವಾರ್ಡ್‌ಗಳಿಗೆ ನಡುರಾತ್ರಿ ನೀರು ಬಿಡುತ್ತಾರೆ. ನೀರಿಗಾಗಿ ಕೆಲಸ ಕಾರ್ಯ ಬಿಟ್ಟು ಕಾಯಬೇಕಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭಾ ಸದಸ್ಯರಾದ ಚಂದ್ರು ತಡಸದ, ಮಾಧುಸಾ ಮೇರವಾಡೆ, ಕೃಷ್ಣ ಪರಾಪುರ, ಶ್ವೇತಾ ದಂಡಿನ, ಬರ್ಕತ್‌ ಅಲಿ, ಮುತ್ತು ಮುಶಿಗೇರಿ, ಅನಿಲ್‌ ಅಬ್ಬಿಗೇರಿ ಮಾತನಾಡಿ, ‘ನಗರದ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ಎಸ್‌ಪಿಎಂಎಲ್‌ ಕಂಪನಿ ಸಂಪೂರ್ಣ ವಿಫಲವಾಗಿದೆ. ಕೋಲ್ಕತ್ತದಲ್ಲಿ ಕುಳಿತಿರುವ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್‌ ನೀಡಿ ಕರೆಯಿಸಬೇಕು. ಅವರ ನೇತೃತ್ವದಲ್ಲಿ ಸರ್ವ ಸದಸ್ಯರ ಸಭೆ ನಡೆಸಬೇಕು. ನೀರು ನಿರ್ವಹಣೆ ಸರಿಯಾಗಿ ಆಗದಿದ್ದರೆ ಕಂಪನಿ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು’ ಎಂದು ಒತ್ತಾಯಿಸಿದರು.

‘ಚುನಾವಣೆ ಸಂದರ್ಭದಲ್ಲಿ ಸ್ವರ್ಗ ತಂದು ಓಣಿಗೆ ಇಳಿಸುವುದಾಗಿ ಭರವಸೆ ನೀಡಿದ್ದ ನಾವೆಲ್ಲರೂ, ಕನಿಷ್ಠ ಕುಡಿಯುವ ನೀರು ಒದಗಿಸಲು ಆಗುತ್ತಿಲ್ಲ. ಇದರಿಂದಾಗಿ ಓಣಿಯಲ್ಲಿ ಜನರಿಗೆ ಮುಖ ತೋರಿಸಲು ಆಗುತ್ತಿಲ್ಲ’ ಎಂದು ಅಲವತ್ತುಕೊಂಡರು.

ಇನ್ನು ಒಂದು ವಾರದ ಒಳಗಾಗಿ ಏಳು ವಲಯಗಳ ಕಾಮಗಾರಿ ಪೂರ್ಣಗೊಳಿಸಿ ನಿರಂತರ ನೀರು ಪೂರೈಸದಿದ್ದಲ್ಲಿ ಕಂಪನಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಎಲ್ಲ ಸದಸ್ಯರು ಆಗ್ರಹಿಸಿದರು.

ಬಾಕಿ ಕಾಮಗಾರಿ ಶೀಘ್ರ ಪೂರ್ಣ

‘ಮೇ 15ರ ಒಳಗಾಗಿ 24/7 ನೀರು ಯೋಜನೆಯ ಏಳು ವಲಯಗಳ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು’ ಎಂದು ಎಸ್‌ಪಿಎಂಎಲ್‌ ಉಪಾಧ್ಯಕ್ಷ ವಿಶ್ವೇಶ್ವರ ಸಭೆಗೆ ತಿಳಿಸಿದರು.

ಮೇ 16ರಿಂದ ಪೌರಾಯುಕ್ತರು, ಕಂಪನಿಯ ಪ್ರತಿನಿಧಿ ಹಾಗೂ ನಗರಸಭಾ ಸದಸ್ಯರು ಏಳು ವಲಯಗಳಲ್ಲಿನ ಕುಡಿಯುವ ನೀರು ಪೂರೈಕೆಯನ್ನು ಖುದ್ದು ಪರಿಶೀಲಿಸಿ, ಸಮಸ್ಯೆಗಳಿದ್ದಲ್ಲಿ ತಿಳಿಸಬಹುದು. ಪ್ರತಿದಿನ ಒಂದೊಂದು ವಲಯವನ್ನು ವೀಕ್ಷಿಸಿ, ಸಲಹೆ ಸೂಚನೆ ನೀಡಬಹುದು ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆಯ ಮೌನಾಚರಣೆ; ಗೊಂದಲದ ಗೂಡಾದ ಸಭೆ

ಗುರುವಾರ ನಡೆದ ತುರ್ತು ಸಭೆ ಗೊಂದಲದ ಗೂಡಾಗಿತ್ತು. ಪೌರಾಯುಕ್ತರು ಸಭೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಪ್ರತಿಪಕ್ಷದ ಸದಸ್ಯರು ಆರೋಪ ಮಾಡಿ, ಏರುಧ್ವನಿಯಲ್ಲಿ ಮಾತನಾಡಿದರು. ಅಲ್ಲದೇ, ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ರಸ್ತೆ ದುರಸ್ತಿಗೆ ಅಗ್ರಹಿಸಿ ಆಟೊ ಚಾಲಕರೆಲ್ಲರೂ ಸಭಾಂಗಣಕ್ಕೆ ನುಗ್ಗಿ ತಮ್ಮ ಸಮಸ್ಯೆಯನ್ನು ಗಟ್ಟಿಧ್ವನಿಯಲ್ಲಿ ಹೇಳಿಕೊಂಡರು. ನೀರಿನ ಸಮಸ್ಯೆ ಹಿನ್ನಲೆಗೆ ಸರಿದು, ರಸ್ತೆ ಸಮಸ್ಯೆ ಮುನ್ನಲೆಗೆ ಬಂತು. ಅವರನ್ನು ಸಮಾಧಾನ ಪಡಿಸಿ, ಸಭೆ ಮುಂದುವರಿಯಿತು.

ಇಷ್ಟೆಲ್ಲಾ ಗದ್ದಲದ ನಡುವೆಯೂ ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಪ್ರತಿಕ್ರಿಯಿಸಲಿಲ್ಲ. ಸಮಸ್ಯೆಗಳ ಬಗ್ಗೆ ಚರ್ಚೆಯಲ್ಲಿ ಭಾಗವಹಿಸಲಿಲ್ಲ. ಪರಿಹಾರ ಕ್ರಮವನ್ನೂ ಸೂಚಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT