ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೋಣ: 224 ವಿದ್ಯಾರ್ಥಿಗಳಿಗೆ ಎರಡೇ ಕೊಠಡಿ

ಶಿಥಿಲವಾದ ಕಟ್ಟಡ, ಉಪನ್ಯಾಸಕರ ಕೊರತೆಯ ಮಧ್ಯೆಯೂ ಅಧಿಕ ಪ್ರವೇಶಾತಿ
ಉಮೇಶ ಬಸನಗೌಡರ
Published 26 ಮೇ 2024, 4:28 IST
Last Updated 26 ಮೇ 2024, 4:28 IST
ಅಕ್ಷರ ಗಾತ್ರ

ರೋಣ: ತಾಲ್ಲೂಕಿನಲ್ಲಿರುವ ಮೂರು ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪರಿಸ್ಥಿತಿ ಒಂದಕ್ಕಿಂತ ಒಂದು ಭಿನ್ನವಾಗಿದ್ದು, ರೋಣ ಪಟ್ಟಣದಲ್ಲಿರುವ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ.

ಸದ್ಯ 224 ವಿದ್ಯಾರ್ಥಿಗಳಿಗೆ ಕೇವಲ ಎರಡು ಕೊಠಡಿಗಳು ಮಾತ್ರ ಲಭ್ಯ ಇವೆ.

ಮೂಲಸೌಕರ್ಯಗಳ ಕೊರತೆ ಇದ್ದರೂ ಕಾಲೇಜಿಗೆ ಪ್ರವೇಶಾತಿ ಮಾತ್ರ ಪ್ರತಿ ವರ್ಷ ಹೆಚ್ಚುತ್ತಲಿದೆ. ಹಳೆಯ ಕಟ್ಟಡ ತೆರವಿಗೆ ಈಗಾಗಲೇ ಆದೇಶವಾಗಿದ್ದು, ವಿವೇಕ ಯೋಜನೆಯಡಿ ಕಾಲೇಜಿಗೆ ಮಂಜೂರಾಗಿದ್ದ 10 ಕೊಠಡಿಗಳ ಪೈಕಿ 4 ಕೊಠಡಿಗಳನ್ನು ಚಿಂಚಲಿ ಗ್ರಾಮದ ಪಿಯು ಕಾಲೇಜಿಗೆ ವರ್ಗಾಯಿಸುವ ಮೂಲಕ ರೋಣ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಸ್ವತಃ ಶಿಕ್ಷಣ ಇಲಾಖೆಯೇ ಅನ್ಯಾಯ ಮಾಡುತ್ತಲಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಸದ್ಯ ಎರಡು ನೂತನ ಕೊಠಡಿಗಳು ಮತ್ತು ಉಳಿದ ಶಿಥಿಲಾವಸ್ಥೆ ತಲುಪಿದ ಹಳೆಯ ಕೊಠಡಿಗಳಲ್ಲಿಯೇ ತರಗತಿಗಳು ನಡೆಯುತ್ತಿದ್ದು, ಪ್ರಾಚಾರ್ಯರ ಕೊಠಡಿ, ಸಿಬ್ಬಂದಿ ಕೊಠಡಿ ಮತ್ತು ಕಾರ್ಯಾಲಯಗಳು ಸಹಿತ ಹಳೆಯ ಕೊಠಡಿಯಲ್ಲಿಯೇ ಕಾರ್ಯ ಮುಂದುವರೆಸಿವೆ. ಇದರಿಂದಾಗಿ ಕಾಲೇಜು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಜೀವ ಭಯದಿಂದಲೇ ದಿನಗಳೆಯುವಂತಾಗಿದೆ.

ರೋಣ ಕಾಲೇಜಿಗೆ ಪ್ರಾಚಾರ್ಯರು ಸೇರಿದಂತೆ ಒಟ್ಟು 16 ಹುದ್ದೆಗಳ ಮಂಜೂರಾತಿ ಇದೆ. ಆದರೆ, ಇಲ್ಲೀಗ ಪ್ರಾಚಾರ್ಯರ ಹುದ್ದೆ ಸೇರಿದಂತೆ ಒಟ್ಟು 11 ಹುದ್ದೆಗಳು ಖಾಲಿ ಇವೆ. ಉಪನ್ಯಾಸಕರ ನೇಮಕಾತಿ ಮತ್ತು ನಿಯುಕ್ತಿಯಾಗದ ಕಾರಣ ವಿಜ್ಞಾನ ವಿಭಾಗಕ್ಕೆ ಪ್ರವೇಶಾತಿ ಸಹ ಸದ್ಯ ನೀಡುತ್ತಿಲ್ಲ.

ತಾಲ್ಲೂಕಿನ ಉಳಿದೆರಡು ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಹಿರೇಹಾಳ ಮತ್ತು ಹುಲ್ಲೂರ ಗ್ರಾಮದಲ್ಲಿದ್ದು ಈ ಎರಡೂ ಕಾಲೇಜುಗಳು ಸೂಕ್ತ ಕಟ್ಟಡ ಹೊಂದಿದ್ದರೂ ಇಲ್ಲೂ ಕೂಡ ಸಿಬ್ಬಂದಿ ಕೊರತೆ ಇದೆ.

ಹಿರೇಹಾಳ ಕಾಲೇಜಿಗೆ ಒಟ್ಟು ಒಂಬತ್ತು ಮಂಜೂರಾದ ಹುದ್ದೆಗಳ ಪೈಕಿ ಕೇವಲ ಇಬ್ಬರು ಕಾಯಂ ಉಪನ್ಯಾಸಕರಿದ್ದು, ಅವರಲ್ಲಿಯೇ ಒಬ್ಬರು ಪ್ರಭಾರಿ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದಂತೆ ನಿಯೋಜನೆ ಮೇಲೆ ಒಬ್ಬರು ಮತ್ತು ಮೂವರು ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, ಸದ್ಯ ಮೂವತ್ತು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.

ಇಲ್ಲಿ ಕಲಾ ವಿಭಾಗ ಮಾತ್ರ ಪ್ರವೇಶಾತಿ ಹೊಂದಿದ್ದು ವಾಣಿಜ್ಯ ವಿಭಾಗಕ್ಕೆ ಅನುಮತಿ ಇದ್ದರೂ ಸಿಬ್ಬಂದಿ ನಿಯೋಜಿಸದ ಕಾರಣ ಪ್ರವೇಶಾತಿ ಪಡೆಯಲು ವಿದ್ಯಾರ್ಥಿಗಳು ಹಿಂಜರಿಯುತ್ತಿದ್ದಾರೆ.

ಹುಲ್ಲೂರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಮಂಜೂರಾದ ಆರು ಹುದ್ದೆಗಳ ಪೈಕಿ ಇಬ್ಬರು ಮಾತ್ರ ಕಾಯಂ ಉಪನ್ಯಾಸಕರಿದ್ದು, 4 ಮಂದಿ ಅತಿಥಿ ಉಪನ್ಯಾಸಕರು ಇದ್ದಾರೆ.

ಸಿಬ್ಬಂದಿ, ಸೌಲಭ್ಯಗಳ ಕೊರತೆ ಇದ್ದರೂ ಕಲಾ ವಿಭಾಗದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿಸುತ್ತಿದ್ದಾರೆ. ಆದಷ್ಟು ಬೇಗ ತಾಲ್ಲೂಕಿನಲ್ಲಿರುವ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಿಗೆ ಉಪನ್ಯಾಸಕರನ್ನು ನೇಮಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯರು ಶಿಕ್ಷಣ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಶಿಥಿಲಾವಸ್ಥೆ ತಲುಪಿರುವ ರೋಣ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಕಟ್ಟಡ
ಶಿಥಿಲಾವಸ್ಥೆ ತಲುಪಿರುವ ರೋಣ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಕಟ್ಟಡ
ಶಿಥಿಲಾವಸ್ಥೆ ತಲುಪಿರುವ ರೋಣ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಕಟ್ಟಡ
ಶಿಥಿಲಾವಸ್ಥೆ ತಲುಪಿರುವ ರೋಣ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಕಟ್ಟಡ

ರೋಣದಲ್ಲಿರುವ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಸಿಬ್ಬಂದಿ ಕೊರತೆ ಕಟ್ಟಡದ ಸಮಸ್ಯೆ ಇದ್ದರೂ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಪ್ರತಿ ವರ್ಷ ಶೇ 75ಕ್ಕಿಂತ ಹೆಚ್ಚು ಫಲಿತಾಂಶ ದಾಖಲಿಸುತ್ತಿದ್ದೇವೆ

- ಬಿ.ಎಸ್.ಮಾನೇದ ಪ್ರಭಾರ ಪ್ರಾಚಾರ್ಯ

ಹಿರೇಹಾಳ ಕಾಲೇಜಿನಲ್ಲಿ ಸದ್ಯ ಇಬ್ಬರು ಕಾಯಂ ಉಪನ್ಯಾಸಕರಿದ್ದಾರೆ. ಉಪನ್ಯಾಸಕರ ಕೊರತೆಯ ಕಾರಣ ವಾಣಿಜ್ಯ ವಿಭಾಗಕ್ಕೆ ಅನುಮತಿ ಇದ್ದರೂ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಲು ಹಿಂಜರಿಯುತ್ತಿದ್ದಾರೆ

-ಎಸ್.ಬಿ.ಗಡಗಿ ಪ್ರಭಾರ ಪ್ರಾಚಾರ್ಯ ಸರ್ಕಾರಿ ಪಿಯು ಕಾಲೇಜು ಹಿರೇಹಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT