ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶೋತ್ಸವಕ್ಕೆ ಷರತ್ತುಬದ್ಧ ಅನುಮತಿ: ಕಿಡಿ

Last Updated 7 ಸೆಪ್ಟೆಂಬರ್ 2021, 3:28 IST
ಅಕ್ಷರ ಗಾತ್ರ

ಗದಗ: ‘ರಾಜ್ಯ ಬಿಜೆಪಿ ಸರ್ಕಾರ ಷರತ್ತು ವಿಧಿಸಿ ಗಣೇಶೋತ್ಸವಕ್ಕೆ ಅನುಮತಿಸಿದ್ದು ಸರಿಯಾದ ಕ್ರಮವಲ್ಲ. ಅವಳಿ ನಗರದಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಒಂಬತ್ತು ದಿನಗಳ ಕಾಲ ಪೂಜಿಸಿ, ಬಳಿಕ ವಿಸರ್ಜಿಸಲಾಗುವುದು’ ಎಂದು ಗದಗ-ಬೆಟಗೇರಿ ಗಜಾನನ ಮಹಾಮಂಡಳಿ ಅಧ್ಯಕ್ಷ ಕಿಶನ್ ಮೇರವಾಡೆ ಹೇಳಿದರು.

ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಸರ್ಕಾರ ಕೊನೆ ಘಳಿಗೆಯಲ್ಲಿ ಐದು ದಿನಗಳನ್ನು ನಿಗದಿಪಡಿಸಿದ್ದು ಖಂಡನೀಯ’ ಎಂದು ಹೇಳಿದರು.

ಶ್ರೀರಾಮ ಸೇನೆ ಧಾರವಾಡ ವಿಭಾಗ ಸಂಚಾಲಕ ರಾಜು ಖಾನಪ್ಪನವರ ಮಾತನಾಡಿ, ‘ರಾಜ್ಯ ಸರ್ಕಾರ ಕೋವಿಡ್‌–19 ಮಾರ್ಗಸೂಚಿಗಳನ್ನು ಮುಂದಿಟ್ಟುಕೊಂಡು ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅಡ್ಡಿಪಡಿಸುತ್ತಿದೆ. ಆದರೆ, ರಾಜಕೀಯ ರ‍್ಯಾಲಿಗಳು, ಚುನಾವಣೆಗಳು, ಮಂತ್ರಿ ಮಹೋದಯರ ಮದುವೆ ಸಮಾರಂಭಗಳಲ್ಲಿ ಕೋವಿಡ್‌ ನಿಯಮಗಳು ಉಲ್ಲಂಘನೆ ಆಗುತ್ತಿದ್ದರೂ ಅದರ ಬಗ್ಗೆ ಕ್ರಮ ವಹಿಸಿಲ್ಲ. ಇಂತಹವುಗಳ ಬಗ್ಗೆ ಜಾಣಕುರುಡು ಪ್ರದರ್ಶಿಸುತ್ತಿರುವ ಸರ್ಕಾರ ಹಾಗೂ ತಜ್ಞರು ಗಣೇಶೋತ್ಸವದ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ’ ಎಂದು ದೂರಿದರು.

‘ಕೋವಿಡ್ ನೆಪದಲ್ಲಿ ಹಿಂದುತ್ವವನ್ನು ಹತ್ತಿಕ್ಕುವ ಹುನ್ನಾರ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ನಾವು 9 ದಿನಗಳ ಗಣೇಶೋತ್ಸವ ಆಚರಣೆ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಸರ್ಕಾರ ಅವಕಾಶ ನೀಡದೇ ಹಠ ಹಿಡಿದರೆ ನಾವು ಪ್ರತಿಷ್ಠಾಪಿಸಿ, ವಿಸರ್ಜನೆ ಮಾಡುವ ಅವಕಾಶವನ್ನು ಸರ್ಕಾರಕ್ಕೇ ಬಿಡಬೇಕಾಗುತ್ತದೆ’ ಎಂದು ಹೇಳಿದರು.

ಸರ್ಕಾರ ಈ ಬಾರಿ ಶಾಲಾ-ಕಾಲೇಜುಗಳಲ್ಲಿ ಗಣೇಶ ಪ್ರತಿಷ್ಠಾಪನೆಗೂ ನಿಷೇಧಿಸಿದೆ. ಕೋವಿಡ್ ಕಾಲದಲ್ಲೂ ಹಲವು ನಾಯಕರ ಜಯಂತ್ಯುತ್ಸವಕ್ಕೆ ಇಲ್ಲದ ನಿಷೇಧ ಗಣೇಶನಿಗೇಕೆ ಎಂದು ಕಿಡಿಕಾರಿದ ಅವರು, ಈ ವಿಷಯದಲ್ಲಿ ಆರ್‌ಎಸ್‍ಎಸ್ ಮಧ್ಯಪ್ರವೇಶ ಮಾಡಿ, ಎಲ್ಲೆಡೆ ಮುಕ್ತವಾಗಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕೊಡಿಸಬೇಕು. ಇಲ್ಲವಾದರೆ ಆರೆಸ್ಸೆಸ್ ಪ್ರಮುಖರ ಮನೆ ಮುಂದೆಯೇ ಧರಣಿ ಕೂಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗದಗ-ಬೆಟಗೇರಿ ಗಜಾನನ ಮಹಾಮಂಡಳಿ ಕಾರ್ಯಾಧ್ಯಕ್ಷ ರಾಜಣ್ಣ ಮಲ್ಲಾಡದ, ಮಹಾಂತೇಶ ಪಾಟೀಲ, ವಿಶ್ವನಾಥ ಶೀರಿ, ವೀರೇಶ ನಾಲ್ವಾಡ, ಈಶ್ವರ ಕಾಟವಾ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT