ಶನಿವಾರ, ಡಿಸೆಂಬರ್ 3, 2022
20 °C
ರಾಹುಲ್‌ ಕಾಲಿಟ್ಟಲ್ಲಿ ಕಾಂಗ್ರೆಸ್‌ ನೆಲಕಚ್ಚುತ್ತದೆ

ಕರ್ನಾಟಕದಲ್ಲಿ ಕಾಂಗ್ರೆಸ್ ಹುಲ್ಲು ಹುಟ್ಟುವುದಿಲ್ಲ: ಮುಖ್ಯಮಂತ್ರಿ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ‘ರಾಹುಲ್‌ ಗಾಂಧಿ ಒಬ್ಬ ವಿಫಲ ನಾಯಕ. ಅವರು ಯಾವ ರಾಜ್ಯಕ್ಕೆ ಹೋಗುತ್ತಾರೋ, ಅಲ್ಲಿ ಕಾಂಗ್ರೆಸ್ ನೆಲಕಚ್ಚುತ್ತದೆ. ಕರ್ನಾಟಕದಲ್ಲಿ ಪಾದಯಾತ್ರೆ ಮಾಡಿ ಹೋಗಿದ್ದಾರೆ. ಹೀಗಾಗಿ ಇಲ್ಲಿ ಕಾಂಗ್ರೆಸ್‌ ಹುಲ್ಲು ಹುಟ್ಟುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು. 

ಬ್ಯಾಡಗಿ ಪಟ್ಟಣದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಬಿಜೆಪಿ ಜನಸಂಕಲ್ಪ ಯಾತ್ರೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ರಾಹುಲ್‌ ಅವರೇ ಮೊದಲು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರನ್ನು ಜೋಡಿಸಿ. ಆನಂತರ ಭಾರತ್‌ ಜೋಡೊ ಮಾಡುವಿರಂತೆ. ಕಾಂಗ್ರೆಸ್‌ ಐದು ವರ್ಷ ದುರಾಡಳಿತ ನಡೆಸಿ, ರಾಜ್ಯವನ್ನು ಅಧೋಗತಿಗೆ ತಂದಿತ್ತು. ಹೀಗಾಗಿ ಜನರು ಅವರನ್ನು ಕಿತ್ತೊಗೆದು ಮನೆಗೆ ಕಳುಹಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು. 

ಭಾರತ ಒಡೆಯುವ ಸಂಚಿನ ಮನಸ್ಥಿತಿ

ಸತೀಶ ಜಾರಕಿಹೊಳಿ ಅವರ ಹೇಳಿಕೆಯು ಭಾರತ ಒಡೆಯುವ ಸಂಚಿನ ಮನಸ್ಥಿತಿ. ಕಾಂಗ್ರೆಸ್‌ನವರ ಆಡಳಿತ ಮತ್ತು ನೀತಿಯಿಂದಲೇ ದೇಶಕ್ಕೆ ಆಂತರಿಕ ಧಕ್ಕೆ ಬಂದಿದೆ. ಅರಾಜಕತೆ ಹುಟ್ಟಿಸಿ ಅಧಿಕಾರಕ್ಕೆ ಬರುವ ಮನಸ್ಥಿತಿ ಇವರದ್ದು ಎಂದು ಕಿಡಿಕಾರಿದರು. 

ಜಾರಕಿಹೊಳಿ ಅವರೇ ನಿಮ್ಮ ಜಾತಿ ಪ್ರಮಾಣಪತ್ರದಲ್ಲಿ ಹಿಂದೂ ಎಂಬ ಶಬ್ದವಿಲ್ಲವೇ? ಹಿಂದೂ ಆಗಿ ಹುಟ್ಟಿ, ವಿದ್ಯೆ ಕಲಿತು, ಶಾಸಕರಾಗಿ, ಸಚಿವರಾಗಿರುವ ನೀವು ಕೇವಲ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಮತ್ತು ಮತ ಗಳಿಕೆಗಾಗಿ ಇಂಥ ಹೇಳಿಕೆ ನೀಡಿ ಕ್ಷುಲ್ಲಕ ರಾಜಕಾರಣ ಮಾಡುತ್ತೀದ್ದೀರಿ ಎಂದು ತಿರುಗೇಟು ನೀಡಿದರು. 

ಕುರಿಗಾಹಿಗಳಿಗೆ ಸಿಹಿಸುದ್ದಿ

ರಾಜ್ಯದ ಪ್ರತಿ ಕುರಿಗಾಹಿಗೆ 20 ಕುರಿಗಳು ಮತ್ತು ಒಂದು ಮೇಕೆಯನ್ನು ನೀಡಲು ನಮ್ಮ ಸರ್ಕಾರ ತೀರ್ಮಾನಿಸಿದೆ. ಈ ಯೋಜನೆಗಾಗಿ ₹354 ಕೋಟಿ ಮೀಸಲಿಟ್ಟಿದ್ದೇವೆ. ಆದರೆ ಸಿದ್ದರಾಮಯ್ಯ ಅವರು ಈ ಯೋಜನೆ ಜಾರಿಗೊಳಿಸುವುದು ಅಸಾಧ್ಯ  ಎನ್ನುತ್ತಿದ್ದಾರೆ. ಭಾಷಣದಿಂದ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರೇ ನಿಮ್ಮ ಆಡಳಿತ ಅವಧಿಯಲ್ಲಿ ಈ ಯೋಜನೆ ಜಾರಿಗೊಳಿಸಲು ಏಕೆ ಸಾಧ್ಯವಾಗಲಿಲ್ಲ? ಎಂದು ಜರಿದರು. 

‘ಕಾಂಗ್ರೆಸ್‌ ಜಂಘಾಬಲ ಉಡುಗಿ ಹೋಗಿದೆ’

‘ಬಿಜೆಪಿಯ ಜನಸಂಕಲ್ಪ ಯಾತ್ರೆಗೆ ಸೇರುವ ಜನಸ್ತೋಮವನ್ನು ನೋಡಿ ಕಾಂಗ್ರೆಸ್‌ನ ಜಂಘಾಬಲ ಉಡುಗಿ ಹೋಗಿದೆ. ಹಣ, ಹೆಂಡ, ತೋಳ್ಬಲ ಪ್ರದರ್ಶಿಸಿದ ಮತ್ತು ಜಾತಿಯ ವಿಷಬೀಜ ಬಿತ್ತಿದ ಕಾಂಗ್ರೆಸ್‌ ಅನ್ನು ಜನರು ಸಂಪೂರ್ಣ ತಿರಸ್ಕರಿಸಿದ್ದಾರೆ. ಮತ್ತೆ ಸಿಎಂ ಆಗುತ್ತೇನೆ ಎಂಬ ಭ್ರಮೆಯಲ್ಲಿರುವ ಸಿದ್ದರಾಮಯ್ಯನವರ ಕನಸು ಎಂದಿಗೂ ನನಸಾಗುವುದಿಲ್ಲ’ ಎಂದು ಬಿ.ಎಸ್‌. ಯಡಿಯೂರಪ್ಪ ಟೀಕಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು