ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆದ್ದು ಬಂದವರು | ಬದಲಾಗಬೇಕಿರುವುದು ಜನರ ಮನಸ್ಥಿತಿ..!

ಕೋವಿಡ್‌ ಗೆದ್ದು ಬಂದ ಒಂದೇ ಕುಟುಂಬದ ಐವರ ಮನದಾಳದ ಮಾತು
Last Updated 18 ಜುಲೈ 2020, 15:58 IST
ಅಕ್ಷರ ಗಾತ್ರ

ಗದಗ/ಮುಂಡರಗಿ: ‘ಟಿವಿಯಲ್ಲಿ ತೋರಿಸುವ ಹಾಗೆ ಭಯಾನಕ ವಾತಾವರಣವೇನೂ ಕೋವಿಡ್‌ ಆಸ್ಪತ್ರೆಯಲ್ಲಿ ಇರುವುದಿಲ್ಲ. ವಾಸ್ತವದಲ್ಲಿ ಅಲ್ಲಿ ಉತ್ತಮ ಸೌಲಭ್ಯ ಇರುತ್ತದೆ. ಸಮಯಕ್ಕೆ ಸರಿಯಾಗಿ ಊಟ, ಕಷಾಯ, ಹಣ್ಣು, ಮೊಟ್ಟೆ ಹೀಗೆ ಪೌಷ್ಠಿಕ ಆಹಾರ ಕೊಡುತ್ತಾರೆ. ವೈದ್ಯರೂ ಅಷ್ಟೇ ಕಾಳಜಿ ವಹಿಸುತ್ತಾರೆ. ಹರಟೆ ಹೊಡೆಯುತ್ತಾ, ಮಾನಸಿಕ ಒತ್ತಡದಿಂದ ಮುಕ್ತರಾಗಿ ನಮ್ಮ ಸ್ವಂತ ಮನೆಯಲ್ಲಿ ಇರುವುದಕ್ಕಿಂತಲೂ ಆರಾಮವಾಗಿ ಅಲ್ಲಿರಬಹುದು. ಆತಂಕ ಪಟ್ಟುಕೊಳ್ಳುವ ಅಗತ್ಯವೇ ಇಲ್ಲ’.

ಇದು ಕೊರೊನಾ ಗೆದ್ದುಬಂದಿರುವ ಮುಂಡರಗಿ ತಾಲ್ಲೂಕಿನ ಮೇವುಂಡಿ ಗ್ರಾಮದ ಒಂದೇ ಕುಟುಂಬದ ಐವರ ಅನಿಸಿಕೆಗಳು. ಈ ಗ್ರಾಮದ 38 ವರ್ಷದ ಪುರುಷ ಅವರ ಪತ್ನಿ ಮತ್ತು ಮೂವರು ಮಕ್ಕಳಿಗೆ ಇತ್ತೀಚೆಗೆ ಕೋವಿಡ್‌ ದೃಢಪಟ್ಟಿತ್ತು.

‘ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದೆವು. ಲಾಕ್‌ಡೌನ್‌ ಬೆನ್ನಲ್ಲೇ, ಅಲ್ಲಿಂದ ನಮ್ಮ ಸ್ವಂತ ಊರಾದ ಮೇವುಂಡಿ ಗ್ರಾಮಕ್ಕೆ ಮರಳಿದೆವು. ಮಹಾರಾಷ್ಟ್ರದಿಂದ ಬಂದ ಹಿನ್ನೆಲೆಯಲ್ಲಿ ನಮ್ಮನ್ನು ಕ್ವಾರಂಟೈನ್‌ ಮಾಡಿ, ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್‌ ಇರುವುದು ತಿಳಿಯಿತು. ಐವರಿಗೂ ಕೊರೊನಾ ಬಂದಿದೆ ಎಂದು ತಿಳಿದಾಗ ನಮಗೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದ ಹಾಗಾಯಿತು. ನಮ್ಮನ್ನು ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಜಿಮ್ಸ್‌) ಸ್ಥಳಾಂತರಿಸಲಾಯಿತು. ಆದರೆ, ಆಸ್ಪತ್ರೆಗೆ ಬಂದ ಎರಡು ದಿನದಲ್ಲೇ ನಮ್ಮ ಆತಂಕವೆಲ್ಲ ದೂರವಾಯಿತು’. ಕಟುಂಬ ಸದಸ್ಯರು ವಿವರಣೆ ಮುಂದುವರಿಸಿದರು.

‘ಜಿಮ್ಸ್‌’ನಲ್ಲಿ ವೈದ್ಯರು ಸೋಂಕಿತರನ್ನು ಮುತುವರ್ಜಿಯಿಂದ ನೋಡಿಕೊಳ್ಳುತ್ತಾರೆ. ನಾವು ಆಸ್ಪತ್ರೆಗೆ ಬಂದಾಗ, ಅಲ್ಲಿ ಆಗಲೇ ನಮ್ಮಂತೆ ಸಾಕಷ್ಟು ಜನರಿದ್ದರು. ನಮ್ಮನ್ನೂ ಸೇರಿದಂತೆ ಶೇ 90ರಷ್ಟು ಜನರಿಗೆ ಸೋಂಕಿನ ಬಹಿರಂಗ ಲಕ್ಷಣಗಳು ಯಾವುದೂ ಇರಲಿಲ್ಲ. ಹೀಗಾಗಿ ನಮಗೊಂದು ಕಾಯಿಲೆ ಬಂದಿದೆ ಎಂದು ನಮಗೆ ಅನಿಸುತ್ತಲೇ ಇರಲಿಲ್ಲ. ಮೊದಲ ದಿನ ಸ್ವಲ್ಪ ಆತಂಕ ಇತ್ತು. ಇದನ್ನು ನೋಡಿ ಆಸ್ಪತ್ರೆಯಲ್ಲಿದ್ದ, ಸೋಂಕು ದೃಢಪಟ್ಟಿದ್ದ 80 ವರ್ಷದ ವೃದ್ಧರೊಬ್ಬರು ಹತ್ತಿರ ಬಂದು ಧೈರ್ಯ ಹೇಳಿದರು. ಯಾಕೆ ಸುಮ್ಮನೆ ಹೆದರುತ್ತೀರಾ, ಆರಾಮವಾಗಿ ಇರಿ ಎಂದರು. ಮರುದಿನದಿಂದ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡೆವು.

‘ಆಸ್ಪತ್ರೆಯಲ್ಲಿ ಹರಟೆ ಹೊಡೆಯುತ್ತಾ, ಮೊಬೈಲ್‌ನಲ್ಲಿ ಮಾತನಾಡುತ್ತಾ ಕಾಲ ಕಳೆದೆವು. ನಮ್ಮ ಮೂರು ಮಕ್ಕಳು ನಮ್ಮೊಂದಿಗೆ ಇದ್ದರು. ಒಂದು ವಾರ ಹೇಗೆ ಕಳೆಯಿತು ಎಂದು ತಿಳಿಯಲಿಲ್ಲ. ಅಷ್ಟರಲ್ಲಿ ಮತ್ತೆ ಪರೀಕ್ಷೆಗೆ ನಡೆಸಿದಾಗ ನೆಗಟಿವ್‌ ಎಂದು ವರದಿ ಬಂತು. ವಾಪಸ್‌ ಮನೆಗೆ ಕಳುಹಿಸಿದರು. ಮನೆಗೆ ಬಂದು ಈಗ ಹೋಂ ಕ್ವಾರಂಟೈನ್‌ ಅವಧಿಯನ್ನೂ ಪೂರ್ಣಗೊಳಿಸಿದ್ದೇವೆ.

‘ಕೊರೊನಾ ಪಾಸಿಟಿವ್‌ ಎಂದ ಕೂಡಲೇ ಜನರು ವಿಪರೀತ ಭಯಪಡುತ್ತಿದ್ದಾರೆ. ಸೋಂಕು ದೃಢಪಟ್ಟವರನ್ನು ಅನುಮಾನದಲ್ಲಿ ನೋಡುತ್ತಾರೆ. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮನೆಬಾಗಿಲಿಗೆ ಅಂಬುಲೆನ್ಸ್ ಬಂದರೆ ಅವರು ಸತ್ತೇ ಹೋದರು ಅಂತ ಭಾವಿಸುತ್ತಾರೆ. ಗುಣಮುಖರಾದ ನಂತರವೂ ಅವರ ಮನೆಯ ಹತ್ತಿರ ಸುಳಿಯಲು ಹಿಂದೇಟು ಹಾಕುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಬರುವ ಆಧಾರ ರಹಿತ ಸುದ್ದಿ ಚಿತ್ರ, ವಿಡಿಯೊಗಳನ್ನು ಶೇರ್‌ ಮಾಡುತ್ತಾರೆ. ಯಾವುದೋ ಊರಿನಲ್ಲಿ ನಡೆದ ಘಟನೆಯನ್ನು ನಮ್ಮ ಜಿಲ್ಲೆಯಲ್ಲಿ ನಡೆದಿದೆ ಎನ್ನುವಂತೆ ಬಿಂಬಿಸುತ್ತಾರೆ. ಕೊರೊನಾ ಸೋಂಕಿಗಿಂತಲೂ ಇದು ಅಪಾಯಕಾರಿ, ಬದಲಾಗಬೇಕಿರುವುದು ಜನರ ಈ ಮನಸ್ಥಿತಿ’ ಎನ್ನುವುದು ಈ ಕುಟುಂಬ ಸದಸ್ಯರ ಮನದ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT