ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬದ ಖರೀದಿಗೆ ಬಂದವರಿಗೆ ಲಾಠಿ ರುಚಿ

ಸಾರ್ವಜನಿಕರಿಗೆ ತಟ್ಟಿದ ಲಾಕ್ ಡೌನ್ ಬಿಸಿ; ಪೊಲೀಸರಿಂದ ಕ್ರಮ
Last Updated 24 ಮಾರ್ಚ್ 2020, 16:26 IST
ಅಕ್ಷರ ಗಾತ್ರ

ಗದಗ: ಲಾಕ್ ಡೌನ್ ಘೋಷಣೆ ಇದ್ದರೂ, ಇದನ್ನು ನಿರ್ಲಕ್ಷಿಸಿ, ಯುಗಾದಿ ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿಗೆ ಮಂಗಳವಾರ ಬೆಳಿಗ್ಗೆ ಇಲ್ಲಿನ ಮಾರುಕಟ್ಟೆಗೆ ಧಾವಿಸಿದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.

ಬೆಳಿಗ್ಗೆ ಎಂದಿನಂತೆ 6 ಗಂಟೆಗೆ ಇಲ್ಲಿನ ತರಕಾರಿ ಮಾರುಕಟ್ಟೆ ಆರಂಭವಾಯಿತು. ಹೂವು, ಹಣ್ಣು, ತರಕಾರಿ ಖರೀದಿಗೆ ಜನರು ಮುಗಿಬಿದ್ದರು. ಕರ್ಪ್ಯೂ ಮುಂದುವರಿದಿರುವುದರಿಂದ ಅಂಗಡಿಗಳು ಮತ್ತೆ ತೆರೆಯುವುದಿಲ್ಲ. ಹೀಗಾಗಿ, ಬೇಕಾದದ್ದೆಲ್ಲವನ್ನೂ ಇಂದೇ ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳಬೇಕು ಎಂಬ ಆತಂಕವು ಸಾರ್ವಜನಿಕರಲ್ಲಿ ಮನೆ ಮಾಡಿತ್ತು. ಹೀಗಾಗಿ ಕೆಲವರು ಅಗತ್ಯಕ್ಕಿಂತ ಹೆಚ್ಚಿಗೆ ವಸ್ತುಗಳನ್ನು ಖರೀದಿಸುತ್ತಿರುವ ದೃಶ್ಯ ಕಂಡುಬಂತು.

ಬೆಳಿಗ್ಗೆ 8 ಗಂಟೆಯವರೆಗೆ ಹಾಲು, ಹಣ್ಣು, ತರಕಾರಿ, ದಿನಸಿ ಖರೀದಿಗೆ ಪೊಲೀಸರು ಅವಕಾಶ ನೀಡಿದರು. ಆದರೆ, ನಂತರ ಧ್ವನಿವರ್ಧಕದ ಮೂಲಕ ಕೊರೊನಾ ಹಿನ್ನೆಲೆಯಲ್ಲಿ ಮನೆಗೆ ವಾಪಸ್‌ ಹೋಗಿ, ಗುಂಪುಗೂಡಬೇಡಿ, ರಸ್ತೆಗಿಳಿಯಬೇಡಿ ಎಂದು ಸೂಚನೆ ನೀಡಿದರು. ಆದರೆ ಇದನ್ನು ಕಿವಿಗೆ ಹಾಕಿಕೊಳ್ಳಲು ಸಿದ್ಧರಿರದ ಜನತೆ, ಮಾರುಕಟ್ಟೆಗೆ ಧಾವಿಸುತ್ತಲೇ ಇದ್ದರು. ಕೆಲವರು ಅನಗತ್ಯವಾಗಿ ದ್ವಿಚಕ್ರ ವಾಹನಗಳಲ್ಲಿ ತಿರುಗಾಡುತ್ತಿದ್ದರು. ಸೂಚನೆಗಳಿಗೆ ಜನರು ಕಿವಿಗೊಡದಿದ್ದಾಗ ಪೊಲೀಸರು ಲಾಠಿ ಬೀಸಿ ಗುಂಪು ಚದುರಿಸಿದರು.

8 ಗಂಟೆಯ ನಂತರ ತರಕಾರಿ ಮಾರುಕಟ್ಟೆ, ದಿನಸಿ ಅಂಗಡಿಗಳನ್ನು ಪೊಲೀಸರು ಬಂದ್ ಮಾಡಿಸಿದರು. ಅಲ್ಲಲ್ಲಿ ರಸ್ತೆಗೆ ಅಡ್ಡವಾಗಿ ಬ್ಯಾರಿಕೇಡ್‌ಗಳನ್ನು ಇಟ್ಟು ಸಂಚಾರ ಸ್ಥಗಿತಗೊಳಿಸಿದರು. ಖಾಸಗಿ ವಾಹನಗಳೊಂದಿಗೆ ಬಂದವರನ್ನು ಸಂಪೂರ್ಣ ವಿಚಾರಣೆಗೆ ಒಳಪಡಿಸಿ, ನಂತರ ನಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದರು. ಮಧ್ಯಾಹ್ನದ ವೇಳೆಗೆ ನಗರದಲ್ಲಿ ದ್ವಿಚಕ್ರ ವಾಹನ, ಆಟೊ, ಖಾಸಗಿ ವಾಹನಗಳ ಓಡಾಟ ಸಂಪೂರ್ಣ ಸ್ಥಗಿತಗೊಂಡಿತ್ತು. ಹೋಟೆಲ್‌, ಖಾನಾವಳಿಗಳು ಬಂದ್‌ ಇದ್ದವು.

ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ನಗರದ ತರಕಾರಿ ಮಾರುಕಟ್ಟೆ, ಹೊಸ ಬಸ್ ನಿಲ್ದಾಣ, ಜನತಾ ಬಜಾರ್, ರೈಲು ನಿಲ್ದಾಣಗಳಲ್ಲಿ ಜನರ ಸುಳಿವೇ ಇರಲಿಲ್ಲ. ಮಹಾತ್ಮಾ ಗಾಂಧಿ ವೃತ್ತ, ಪಾಲಾ ಬಾದಾಮಿ ರಸ್ತೆ, ಸ್ಟೇಶನ್ ರಸ್ತೆಗಳು ವಾಹನ ಸಂಚಾರವಿಲ್ಲದೇ ಬಿಕೋ ಎನ್ನುತ್ತಿದ್ದವು. ಹೋಟೆಲ್ ಸೇರಿ ಎಲ್ಲ ಅಂಗಡಿ-ಮುಂಗಟ್ಟು ಬಂದ್ ಆಗಿತ್ತು. ಸಣ್ಣ ರಸ್ತೆ ಮತ್ತು ಓಣಿಗಳ ಒಳಗಿನ ಕಿರು ರಸ್ತೆಗಳಲ್ಲೂ ಕೂಡ ಜನ ಸಂಚಾರ ಸಂಪೂರ್ಣ ನಿಂತು ಹೋಗಿತ್ತು. ಆಸ್ಪತ್ರೆ, ಹಾಲು, ಔಷಧ ಅಂಗಡಿ, ಪತ್ರಿಕೆ ಪೂರೈಕೆ ಎಂದಿನಂತೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT