ಗುರುವಾರ , ಜನವರಿ 27, 2022
27 °C
ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸೋಂಕು ಪ್ರಕರಣಗಳ ಸಂಖ್ಯೆ

ಗದಗ: 30 ಮಕ್ಕಳಿಗೆ ಸೋಂಕು ದೃಢ

ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

ಗದಗ: ಜಿಲ್ಲೆಯಲ್ಲಿ ಕೋವಿಡ್‌–19 ಸೋಂಕು ಪ್ರಕರಣಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದು, ಜ.1ರಿಂದ 13ರ ನಡುವಿನ ಅವಧಿಯಲ್ಲಿ 30 ಮಕ್ಕಳಿಗೆ ಸೋಂಕು ದೃಢ‍ಪಟ್ಟಿದೆ. ಈ ಪೈಕಿ 8 ಮಂದಿ ವಿದ್ಯಾರ್ಥಿಗಳು ಗುಣಮುಖರಾಗಿದ್ದು, 22 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಗದಗ ತಾಲ್ಲೂಕಿನಲ್ಲೇ ಅತಿಹೆಚ್ಚು ಅಂದರೆ 16 ಪ್ರಕರಣಗಳು ದಾಖಲಾಗಿದ್ದು, ಗುರುವಾರ ಹುಲಕೋಟಿಯಲ್ಲಿರುವ ರಾಜರಾಜೇಶ್ವರಿ ಶಾಲೆಯ ಇಬ್ಬರು ಮಕ್ಕಳು ಮತ್ತು ಮೂವರು ಶಿಕ್ಷಕರಿಗೆ ಸೋಂಕು ದೃಢಪಟ್ಟಿದೆ. ವೈದ್ಯರು ಹಾಗೂ ಜಿಲ್ಲಾಡಳಿತದ ಸಲಹೆ ಮೇರೆಗೆ ಡಿಡಿಪಿಐ ಬಸವಲಿಂಗಪ್ಪ ಜಿ.ಎಂ. ಅವರು ಶಾಲೆಯನ್ನು ಜ.19ರವರೆಗೆ ಬಂದ್‌ ಮಾಡುವಂತೆ ಸೂಚಿಸಿದ್ದಾರೆ.

‘ಗದುಗಿನ ಎಸ್‌.ಎಂ.ಕೃಷ್ಣ ನಗರದಲ್ಲಿರುವ ಸರ್ಕಾರಿ ಶಾಲೆಯ ಒಬ್ಬರು ಅಡುಗೆ ಸಿಬ್ಬಂದಿ, ಇಬ್ಬರು ಶಿಕ್ಷಕರಿಗೆ ಸೋಂಕು ದೃಢಪಟ್ಟಿದೆ. ಅದೇರೀತಿ, ಮುಂಡರಗಿ ತಾಲ್ಲೂಕಿನ ನಾಗರಹಳ್ಳಿ ಸರ್ಕಾರಿ ಪ್ರೌಢಶಾಲೆಯ ಇಬ್ಬರು ಮಕ್ಕಳು, ಡಂಬಳ ಗ್ರಾಮದ ಕೆಜಿಜಿವಿ ಹಾಸ್ಟೆಲ್‌ನ ಒಬ್ಬ ವಿದ್ಯಾರ್ಥಿಗೆ ಸೋಂಕು ದೃಢಪಟ್ಟಿದೆ’ ಎಂದು ಡಿಡಿಪಿಐ ಬಸವಲಿಂಗಪ್ಪ ಜಿ.ಎಂ. ತಿಳಿಸಿದ್ದಾರೆ.

‘ಜಿಲ್ಲೆಯಲ್ಲಿನ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಲು ಭೀತಿ ವ್ಯಕ್ತಪಡಿಸಿಲ್ಲ. ಒಂದು ಶಾಲೆಯಲ್ಲಿ ಸೋಂಕು ಹರಡುವಿಕೆಯ ಪ್ರಮಾಣವನ್ನು ಗಮನದಲ್ಲಿರಿಸಿಕೊಂಡು ಆ ಶಾಲೆಯನ್ನು ಬಂದ್‌ ಮಾಡಬೇಕೇ ಬೇಡವೇ ಎಂಬುದನ್ನು ಜಿಲ್ಲಾಧಿಕಾರಿ ನಿರ್ಧರಿಸುತ್ತಾರೆ. ಸೋಂಕು ಹರಡುವಿಕೆಯ ಪ್ರಮಾಣ ಹೆಚ್ಚಿದ್ದಲ್ಲಿ ಆ ಶಾಲೆಗೆ ರಜೆ ಘೋಷಿಸಿ, ಆನ್‌ಲೈನ್‌ ಪಾಠ ಆರಂಭಿಸುವ ನಿರ್ಧಾರವನ್ನೂ ಅವರೇ ಪ್ರಕಟಿಸುತ್ತಾರೆ’ ಎಂದು ಅವರು ತಿಳಿಸಿದರು.

‘ಜಿಲ್ಲೆಯಲ್ಲಿರುವ 15ರಿಂದ 18 ವರ್ಷದೊಳಗಿನ 55 ಸಾವಿರ ಮಕ್ಕಳ ಪೈಕಿ 26 ಸಾವಿರ ಮಕ್ಕಳಿಗೆ ಈವರೆಗೆ ಲಸಿಕೆ ಹಾಕಲಾಗಿದೆ. ನಿಗದಿತ ಗುರಿ ಸಾಧನೆಗೆ ಕ್ರಮವಹಿಸಲಾಗಿದೆ’ ಎಂದು ಆರ್‌ಸಿಎಚ್‌ ಅಧಿಕಾರಿ ಡಾ.ಬಿ.ಎಲ್. ಗೋಜನೂರ ತಿಳಿಸಿದ್ದಾರೆ.

ಕೋವಿಡ್‌–19 ಎರಡನೇ ಅಲೆ ಮುಗಿದು ಶಾಲೆ ಆರಂಭಗೊಂಡ ನಂತರ ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗುವುದು ಕಡ್ಡಾಯವಲ್ಲ ಎಂದು ತಿಳಿಸಲಾಗಿತ್ತು. ಆದರೆ, ಎಲ್ಲ ವಿದ್ಯಾರ್ಥಿಗಳು ಶಾಲೆಗೆ ಹೋಗುತ್ತಿದ್ದರಿಂದ ಆನ್‌ಲೈನ್‌ ಪಾಠಗಳನ್ನು ನಿಲ್ಲಿಸಲಾಗಿದೆ. ಕೋವಿಡ್‌–19 ಮೂರನೇ ಅಲೆಯಲ್ಲಿ ಸೋಂಕು ಉಲ್ಬಣಗೊಳ್ಳುತ್ತಿರುವುದರಿಂದ ಶಾಲೆಗಳಿಗೆ ರಜೆ ಘೋಷಿಸಿ, ಆನ್‌ಲೈನ್‌ ಪಾಠ ಆರಂಭಿಸಬೇಕು ಎಂದು ಕೆಲವು ಪೋಷಕರು ಒತ್ತಾಯಿಸಿದ್ದಾರೆ.

* ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಶಾಲಾ ಮಕ್ಕಳಿಗೆ ಸೋಂಕು ತಗಲುವಿಕೆ ಪ್ರಮಾಣ, ತಜ್ಞರ ಅಭಿಪ್ರಾಯ ಆಧರಿಸಿ ಶಾಲೆಗಳಿಗೆ ರಜೆ ನೀಡಲಾಗುವುದು.

-ಎಂ.ಸುಂದರೇಶ್‌ಬಾಬು, ಜಿಲ್ಲಾಧಿಕಾರಿ

* ಎರಡನೇ ಅಲೆಯಲ್ಲಿ ಕಂಡು ಬಂದ ಡೆಲ್ಟಾ ಸೋಂಕಿನ ತೀವ್ರತೆ ಹೆಚ್ಚಿತ್ತು. ಮೂರನೇ ಅಲೆಯಲ್ಲಿ (ಜ.01ರಿಂದ 13) ಗದಗನಲ್ಲಿ ಈವರೆಗೆ ಓಮೈಕ್ರಾನ್‌ ಸೋಂಕು ಪತ್ತೆ ಆಗಿಲ್ಲ.

-ಡಾ. ಜಗದೀಶ ನುಚ್ಚಿನ್, ಡಿಎಚ್‌ಒ

00–18 ವರ್ಷದೊಳಗಿನ ಸೋಂಕಿತರ ಅಂಕಿ ಅಂಶ (ಜ.1ರಿಂದ 13ರವರೆಗೆ)

ಕ್ರ.ಸಂ.;ತಾಲ್ಲೂಕು;ಸೋಂಕಿತರು;ಬಿಡುಗಡೆ;ಸಕ್ರಿಯ ಪ್ರಕರಣ;ಸಾವು
1;ಗದಗ;16;04;12;00
2;ಮುಂಡರಗಿ;09;03;06;00
3;ರೋಣ;01;00;01;00
4;ಶಿರಹಟ್ಟಿ;04;01;03;00

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು