ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ | ಜಿಲ್ಲೆಯಲ್ಲಿ ಒಂದೇ ದಿನ 15 ಮಂದಿಗೆ ಕೋವಿಡ್‌

7 ಮತ್ತು 8 ವರ್ಷದ ಇಬ್ಬರು ಬಾಲಕಿಯರಿಗೆ ಸೋಂಕು; ಹೆಚ್ಚಿದ ಆತಂಕ
Last Updated 23 ಮೇ 2020, 12:08 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ 15 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಎದುರಾಗಿದೆ. ಇವರಲ್ಲಿ 9 ಮಂದಿ ಸ್ಥಳೀಯರಾಗಿದ್ದರೆ ಇನ್ನುಳಿದ 6 ಮಂದಿ ಹೊರ ರಾಜ್ಯಗಳಿಂದ ಬಂದವರಾಗಿದ್ದಾರೆ.

15 ಸೋಂಕಿತರಲ್ಲಿ 7 ಮತ್ತು 8 ವರ್ಷದ ಇಬ್ಬರು ಬಾಲಕಿಯರೂ ಸೇರಿದ್ದಾರೆ. ಮಹಾರಾಷ್ಟ್ರದಿಂದ ಬಂದ 7 ವರ್ಷದ ಹೆಣ್ಣುಮಗುವಿಗೆ (ಪಿ–1746) ಮತ್ತು ಸ್ಥಳೀಯವಾಗಿ ಸೋಂಕಿತರೊಬ್ಬರ (ಪಿ–913) ಸಂಪರ್ಕಕ್ಕೆ ಬಂದ 8 ವರ್ಷದ ಹೆಣ್ಣುಮಗುವಿಗೆ (ಪಿ–1937) ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 35 ಮಂದಿಗೆ ಸೋಂಕು ತಗುಲಿದಂತಾಗಿದೆ.

ಗುಜರಾತ್‌ನಿಂದ ಬಂದ 25 ಮತ್ತು 17 ವರ್ಷದ ಇಬ್ಬರು ಯುವಕರಲ್ಲಿ (ಪಿ–1744 ಮತ್ತು ಪಿ–1745), ರಾಜಸ್ತಾನದಿಂದ ಬಂದ 17 ವರ್ಷದ ಯುವತಿಯಲ್ಲಿ (ಪಿ–1763) ಮಹಾರಾಷ್ಟ್ರದಿಂದ ಬಂದ 7 ವರ್ಷದ ಬಾಲಕಿ (ಪಿ–1746), 50 ವರ್ಷದ ಮಹಿಳೆ (1748) ಮತ್ತು 20 ವರ್ಷದ ಯುವಕನಲ್ಲಿ (ಪಿ–1747) ಸೋಂಕು ದೃಢಪಟ್ಟಿದೆ.

ಮೇ 18ರಂದು ಗುಜರಾತ್‌ನ ಅಹಮದಾಬಾದ್‌ನಿಂದ ಎರಡು ವಾಹನಗಳ ಮೂಲಕ ಒಟ್ಟು 17ಜನರು ಜಿಲ್ಲೆಗೆ ಬಂದಿದ್ದರು. ಇವರಲ್ಲಿ ಇಬ್ಬರಿಗೆ ಸೋಂಕು ಧೃಡಪಟ್ಟಿದ್ದು, ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದ 15 ಜನರನ್ನು ನಿಗಾದಲ್ಲಿರಿಸಲಾಗಿದೆ. ಮಹಾರಾಷ್ಟ್ರದಿಂದ ನಿಪ್ಪಾಣಿವರೆಗೆ ಬಾಡಿಗೆ ವಾಹನದ ಮೂಲಕ ಬಂದು, ಬಳಿಕ ನಿಪ್ಪಾಣಿಯಿಂದ ಗದಗವರೆಗೆ ಲಾರಿ ಮೂಲಕ ಜಿಲ್ಲೆಗೆ ಬಂದಿದ್ದ 4 ಜನರಲ್ಲಿ ಮೂವರಿಗೆ ಸೋಂಕು ದೃಢಪಟ್ಟಿದೆ. ಮತ್ತೊಬ್ಬ ವ್ಯಕ್ತಿಯನ್ನು ನಿಗಾದಲ್ಲಿರಿಸಲಾಗಿದೆ.

ಮೇ 18ರಂದು ರಾಜಸ್ತಾನದ ಅಜ್ಮೀರ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡಿ ಮರಳಿದ ಲಕ್ಷ್ಮೇಶ್ವರ ತಾಲ್ಲೂಕಿನ 4 ಕುಟುಂಬದ ಒಟ್ಟು 17 ಸದಸ್ಯರಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದ್ದು ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದ 16 ಮಂದಿ ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದ 5 ಜನರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಮತ್ತೊಬ್ಬರಿಗೆ ಸೋಂಕು ಹರಡುತ್ತಿರುವುದು ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ. ಇದುವರೆಗೆ ಜಿಲ್ಲೆಯಲ್ಲಿ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಸೇರಿ ಹೊರ ರಾಜ್ಯಗಳಿಂದ ಬಂದವರಿಂದ ಕೊರೊನಾ ಆತಂಕ ಇತ್ತು. ಆದರೆ, ಈಗ ಸ್ಥಳೀಯವಾಗಿಯೇ ಸೋಂಕು ಹೆಚ್ಚುತ್ತಿದೆ. ಎಲ್ಲ ಸ್ಥಳೀಯ ಪ್ರಕರಣಗಳು ಜಿಲ್ಲಾಕೇಂದ್ರವಾದ ಗದುಗಿನ ಗಂಜಿಬಸವೇಶ್ವರ ಓಣಿ ಮತ್ತು ರಂಗನವಾಡ ಪ್ರದೇಶದಲ್ಲಿ ವರದಿಯಾಗಿವೆ. ರಂಗನವಾಡ ಪ್ರದೇಶವನ್ನು ಈಗಾಗಲೇ ಕಂಟೈನ್‌ಮೆಂಟ್‌ ವಲಯದಿಂದ ಮುಕ್ತಗೊಳಿಸಲಾಗಿದೆ. ಆದರೆ, ಗಂಜಿ ಬಸವೇಶ್ವರ ಓಣಿಯಲ್ಲಿ ಹೊಸ ಪ್ರಕರಣಗಳು ವರದಿಯಾಗುತ್ತಲೇ ಇವೆ.

ಸದ್ಯ ಜಿಲ್ಲೆಯಲ್ಲಿ 29 ಸಕ್ರಿಯ ಪ್ರಕರಣಗಳಿವೆ. ಐವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT