ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಜೇಂದ್ರಗಡ | ಆವಕ ಕುಸಿತ: ವರ್ತಕರಿಗೆ ನಷ್ಟ

ಗಜೇಂದ್ರಗಡ ಎಪಿಎಂಸಿ: ಜೀವನ ನಿರ್ವಹಣೆಗೆ ಹಮಾಲರ ಪರದಾಟ
Published 11 ಅಕ್ಟೋಬರ್ 2023, 4:47 IST
Last Updated 11 ಅಕ್ಟೋಬರ್ 2023, 4:47 IST
ಅಕ್ಷರ ಗಾತ್ರ

ಗಜೇಂದ್ರಗಡ: ಮಳೆ ಕೊರತೆಯಿಂದ ಉಂಟಾದ ಬರ ರೈತರನ್ನು ಸಂಕಷ್ಟಕ್ಕೀಡು ಮಾಡಿದ್ದು, ರೈತರ ಫಸಲು ಬಾರದೆ ಎಪಿಎಂಸಿ ವರ್ತಕರಿಗೂ ಅದರ ಬಿಸಿ ತಟ್ಟಿದೆ.

ಇಲ್ಲಿನ ಎಪಿಎಂಸಿಯಲ್ಲಿ ಪ್ರತಿ ವರ್ಷ ಈ ಸಮಯಕ್ಕೆ ನಿತ್ಯ 10-15 ಸಾವಿರ ಚೀಲ ಗೋವಿನಜೋಳ, 2-3 ಸಾವಿರ ಚೀಲ ಸಜ್ಜೆ ವ್ಯಾಪಕವಾಗಿ ಆವಕವಾಗುತ್ತಿತ್ತು. ಐದಾರು ಲಾರಿಗಳ ಮೂಲಕ ಗೋವಿನಜೋಳ, ಸಜ್ಜೆಯನ್ನು ಬೇರೆಡೆ ಕಳಿಸಲಾಗುತ್ತಿತ್ತು. ಆದರೆ, ಈ ಬಾರಿ ನಿತ್ಯ 1-2 ಸಾವಿರ ಚೀಲ ಗೋವಿನಜೋಳ, 50-100 ಚೀಲ ಸಜ್ಜೆ ಮಾತ್ರ ಆವಕವಾಗುತ್ತಿದ್ದು, ಎಪಿಎಂಸಿ ವರ್ತಕರು ವ್ಯಾಪಾರವಿಲ್ಲದೆ ನಷ್ಟ ಅನುಭವಿಸುವಂತಾಗಿದೆ.

ಸದ್ಯ ಗೋವಿನಜೋಳ ದರ ಪ್ರತಿ ಕ್ವಿಂಟಲ್‌ಗೆ ₹1800-₹2100, ಸಜ್ಜೆ ₹2000-₹2120  ಇದೆ. ಆದರೆ ಮಾರುಕಟ್ಟೆಗೆ ಫಸಲು ಮಾತ್ರ ಆವಕವಾಗುತ್ತಿಲ್ಲ. 

‘ಈ ವರ್ಷ ಸಮರ್ಪಕ ಮಳೆಯಾಗದೆ ಬೆಳೆಗಳು ಹಾಳಾಗಿವೆ. ಇದರಿಂದ ಮಾರುಕಟ್ಟೆಗೆ ಫಸಲಿನ ಆವಕ ತೀವ್ರ ಪ್ರಮಾಣದಲ್ಲಿ ಕುಸಿತ ಕಂಡಿದೆ. ರೈತರು ಬೆಳೆ ಬೆಳೆದರೆ ಮಾತ್ರ ವರ್ತಕರು, ಹಮಾಲರು ಬದುಕುತ್ತಾರೆ’ ಎನ್ನುತ್ತಾರೆ ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಅಮರೇಶ ಬಳಿಗೇರ.

‘ಎಪಿಎಂಸಿಯಲ್ಲಿ 150ಕ್ಕೂ ಹೆಚ್ಚು ಹಮಾಲರು ಕೆಲಸ ಮಾಡುತ್ತಿದ್ದಾರೆ. ಪ್ರತಿ ವರ್ಷ ಸುಗ್ಗಿಯಲ್ಲಿ ಹೆಚ್ಚು ಕೆಲಸಗಳು ಸಿಗುತ್ತಿದ್ದವು. ಕೆಲವೊಮ್ಮೆ ರಾತ್ರಿಯೂ ಕೆಲಸ ಮಾಡುತ್ತಿದ್ದೆವು. ಈ ಬಾರಿ ಕೆಲಸವಿಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ’ ಎಂದು ಎಪಿಎಂಸಿ ಹಮಾಲರಾದ ಯಶವಂತ ಪವಾರ, ಪರಶುರಾಮ ಕಲಾಲ.

ಕಾರ್ಮಿಕ ಕಾರ್ಡ್‌ ನೀಡದ ಇಲಾಖೆ

‘ಅಸಂಘಟಿತ ವಲಯಕ್ಕೆ ಸೇರುವ ಹಮಾಲರಿಗೆ ಕಾರ್ಮಿಕ ಕಾರ್ಡ್‌ ನೀಡುವಂತೆ ಹಲವು ಬಾರಿ ಕಾರ್ಮಿಕ ಇಲಾಖೆಗೆ ಮನವಿ ಸಲ್ಲಿದರೂ ಪ್ರಯೋಜನವಾಗಿಲ್ಲ. ಈ ವರ್ಷ ಮಳೆ ಕೊರತೆಯಿಂದ ಎಪಿಎಂಸಿಯಲ್ಲಿ ಕೆಲಸವಿಲ್ಲದೆ ಮಕ್ಕಳ ವಿದ್ಯಾಭ್ಯಾಸ ಮನೆ ಬಾಡಿಗೆ ಮನೆ ಖರ್ಚು ನಿಭಾಯಿಸುವುದು ಕಷ್ಟವಾಗಿದೆʼ ಎಂದು ಜೈ ಮಾರುತೇಶ್ವರ ಹಮಾಲರ ಸಂಘದ ಕಾರ್ಯದರ್ಶಿ ಬಸವರಾಜ ಸುರಕೋಡ ತಿಳಿಸಿದರು.

‘ಬದುಕು ದುಸ್ಥರ’

‘ಮುಂಗಾರು ಪ್ರಾರಂಭದಲ್ಲಿ ಸಾಲ ಮಾಡಿ ಗೋವಿನಜೋಳ ಬಿತ್ತನೆ ಮಾಡಿದ್ದೆವು. ಮಳೆ ಕೈಕೊಟ್ಟಿದ್ದರಿಂದ ಬೆಳೆ ಹಾಳಾಗಿದೆ. ದಲಾಲಿ ಅಂಗಡಿಗಳಲ್ಲಿ ಮಾಡಿದ ಕೈಸಾಲ ತೀರಿಸಲೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬದುಕು ದುಸ್ಥರವಾಗಿದೆ’ ಎಂದು ರೈತರಾದ ಪರಸಪ್ಪ ರಾಠೋಡ ಯಲ್ಲಪ್ಪ ಕಟ್ಟಿಮನಿ ಅಲವತ್ತುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT