ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ | ನೆರವಿಗಾಗಿ ‘ಕ್ರೌಡ್‌ ಫಂಡಿಂಗ್’

ಕೂಲಿ ಕಾರ್ಮಿಕರ ಕುಟುಂಬಗಳಿಗೆ ಅಗತ್ಯ ವಸ್ತುಗಳ ಪೂರೈಕೆ
Last Updated 22 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಗದಗ: ಲಾಕ್‌ಡೌನ್‌ ಸೃಷ್ಟಿಸಿದ ನಿರುದ್ಯೋಗದಿಂದ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಗದಗ ಮತ್ತು ಧಾರವಾಡ ಜಿಲ್ಲೆಗಳ 80 ಬಡ ಕೂಲಿಕಾರ್ಮಿಕರ ಕುಟುಂಬಗಳಿಗೆ, ‘ಕ್ರೌಡ್‌ ಫಂಡಿಂಗ್‌’ ಮೂಲಕ ಬೆಂಗಳೂರು ಮೂಲದ ಸರ್ಕಾರೇತರ ಸಂಸ್ಥೆಯೊಂದು ನೆರವಿನ ಹಸ್ತ ಚಾಚಿದೆ.

ಬೆಂಗಳೂರಿನ ಉದ್ಯಮ್‌ ಲರ್ನಿಂಗ್‌ ಫೌಂಡೇಷನ್‌ ಸಂಸ್ಥೆಯು ‘ಗಿವ್‌ ಇಂಡಿಯಾ’ ಜಾಲತಾಣದ ಮೂಲಕ ದೇಣಿಗೆ ಸಂಗ್ರಹಕ್ಕೆ ಮುಂದಾಗಿದೆ. ಪ್ರತಿ ಕುಟುಂಬಕ್ಕೆ ₹5 ಸಾವಿರದಂತೆ, ಒಟ್ಟು ₹4 ಲಕ್ಷ ದೇಣಿಗೆ ಸಂಗ್ರಹಿಸಿ, ಅದನ್ನು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ರಾಮಗಿರಿ ಮತ್ತು ಧಾರವಾಡ ಜಿಲ್ಲೆಯ ಹಿರೇಗುಂಜಾಳ ಗ್ರಾಮಗಳ 80 ಬಡ ಕುಟುಂಬಗಳಿಗೆ ಅಗತ್ಯ ವಸ್ತುಗಳ ರೂಪದಲ್ಲಿ ವಿತರಿಸುವ ಯೋಜನೆ ಹಾಕಿಕೊಂಡಿದೆ.

ಸಂಸ್ಥೆಯು ಈಗಾಗಲೇ ಈ ಜಿಲ್ಲೆಗಳಲ್ಲಿ ಸ್ವಂತ ಜಮೀನು, ಸೂರು ಇಲ್ಲದ, ಜೀವನ ನಿರ್ವಹಣೆಗೆ ಕೂಲಿಯನ್ನೇ ನಂಬಿಕೊಂಡಿರುವ ಕುಟುಂಬಗಳನ್ನು ಸಮೀಕ್ಷೆ ಮೂಲಕ ಗುರುತಿಸಿದೆ.

‘ಏಪ್ರಿಲ್‌ 22ರ ಸಂಜೆಯವರೆಗೆ ₹1.89 ಲಕ್ಷ ದೇಣಿಗೆ ಸಂಗ್ರಹ ಆಗಿದೆ. ಒಟ್ಟು ಸಂಗ್ರಹಗೊಳ್ಳುವ ಮೊತ್ತದಲ್ಲಿ, ಈ ಕುಟುಂಬಗಳಿಗೆ ಅಕ್ಕಿ, ಬೇಳೆ, ಗೋದಿ ಹಿಟ್ಟು, ರವೆ, ಅಡುಗೆ ಎಣ್ಣೆ ಸೇರಿದಂತೆ 12 ಅಗತ್ಯ ವಸ್ತುಗಳನ್ನು ಒಳಗೊಂಡ ಕಿಟ್‌ ವಿತರಿಸಲಾಗುವುದು’ ಎಂದು ಸಂಸ್ಥೆಯ ಉದ್ಯೋಗಿ ನವನೀತ್‌ ಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿಗದಿಯಂತೆ ಏ.23ರಂದು ಆನ್‌ಲೈನ್‌ ದೇಣಿಗೆ ಸಂಗ್ರಹ ನಿಲ್ಲಿಸುವ ಯೋಜನೆ ಹೊಂದಿದ್ದೆವು. ಆದರೆ, ಇದುವರೆಗೆ ಶೇ 50ರಷ್ಟು ಮಾತ್ರ ಹಣ ಸಂಗ್ರಹ ಆಗಿದೆ. ಹೀಗಾಗಿ ಇದನ್ನು ಇನ್ನೆರಡು ದಿನ ವಿಸ್ತರಿಸುವ ಯೋಜನೆ ಹೊಂದಿದ್ದೇವೆ’ ಎಂದು ಅವರು ತಿಳಿಸಿದರು.

ಮಂಜುನಾಥ್‌ ಡೊಗ್ಗಳ್ಳಿ ಎಂಬುವರು ಗದಗ ಜಿಲ್ಲೆಯಲ್ಲಿ ಈ ಸಂಸ್ಥೆಯ ಉದ್ಯೋಗಿಯಾಗಿದ್ದಾರೆ. ಇವರು ಲಾಕ್‌ಡೌನ್‌ನಿಂದಾಗಿ ಕೂಲಿಕಾರ್ಮಿಕರು ಎದುರಿಸುತ್ತಿರುವ ಸಂಕಷ್ಟವನ್ನು ಸಂಸ್ಥೆಯ ಗಮನಕ್ಕೆ ತಂದರು. ಮೊದಲ ಹಂತದಲ್ಲಿ ಸಂಸ್ಥೆಯು, ಖಾಸಗಿಯಾಗಿ ಒಂದಿಷ್ಟು ದೇಣಿಗೆ ಸಂಗ್ರಹಿಸಿ 50 ಕುಟುಂಬಗಳಿಗೆ ಸಾಲುವಷ್ಟು ಅಗತ್ಯ ವಸ್ತುಗಳನ್ನು ಪೂರೈಸಿದೆ. ಇದೀಗ ಎರಡನೆಯ ಹಂತದಲ್ಲಿ ಕ್ರೌಡ್‌ ಫಂಡಿಂಗ್‌ ಮೂಲಕ ಇದನ್ನು ಇನ್ನಷ್ಟು ಕುಟುಂಬಗಳಿಗೆ ವಿಸ್ತರಿಸಲು ಯೋಜನೆ ರೂಪಿಸಿದೆ. ಈ ಸಂಸ್ಥೆಯ ಮೂಲಕ ಬಡ ಕುಟುಂಬಗಳಿಗೆ ನೆರವು ನೀಡಲು https://bit.ly/2VuqWvP ಲಿಂಕ್ ಬಳಸಬಹುದು.

*
ದೇಣಿಗೆ ಸಂಗ್ರಹವನ್ನು ಸಂಪೂರ್ಣ ಪಾರದರ್ಶಕವಾಗಿ ನಿರ್ವಹಿಸುತ್ತಿದ್ದೇವೆ. ದಾನಿಗಳು ಮುಂದೆ ಬಂದರೆ, ಇನ್ನಷ್ಟು ಬಡ ಕುಟುಂಬಗಳಿಗೆ ಅನುಕೂಲವಾಗುತ್ತದೆ
-ನವನೀತ್‌, ಉದ್ಯಮ್‌ ಲರ್ನಿಂಗ್‌ ಸಂಸ್ಥೆಯ ಉದ್ಯೋಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT