ಗುರುವಾರ , ಆಗಸ್ಟ್ 5, 2021
22 °C

ತೀವ್ರವಾಗುತ್ತಿದೆ ದೆಹಲಿ ರೈತರ ಪ್ರತಿಭಟನೆ ಕಾವು: ದೀಪಕ್‌ ಲಾಂಬ

ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

Prajavani

ಗದಗ: ‘ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದ ತೀವ್ರತೆ ಕಡಿಮೆ ಆಗುತ್ತಿದೆ ಎಂದು ಮಾಧ್ಯಮಗಳು ಹೇಳುತ್ತಿವೆ. ಆದರೆ, ಅದು ನಿಜವಲ್ಲ. ಸುಗ್ಗಿ ಕಾಲದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳಲಿಲ್ಲ ಅಷ್ಟೇ’ ಎಂದು ನವದೆಹಲಿಯ ಜೈ ಕಿಸಾನ್‌ ಸಂಘಟನೆಯ ಯುವ ಮುಖಂಡ ದೀಪಕ್‌ ಲಾಂಬ ಹೇಳಿದರು.

ಗದಗ ಜಿಲ್ಲೆ ನರಗುಂದದಲ್ಲಿ ಬುಧವಾರ ನಡೆದ ರೈತ ಹುತಾತ್ಮ ದಿನಾಚರಣೆ ವೇಳೆ ‘ಪ್ರಜಾವಾಣಿ’ ಜತೆಗೆ ಮಾತನಾಡಿದ ಅವರು, ‘ಕೋವಿಡ್‌ ಇದ್ದರೂ ನಾವು ಸ್ಥಳ ಬಿಟ್ಟು ಕದಲಲಿಲ್ಲ. ಪ್ರತಿಭಟನೆಯ ತೀವ್ರತೆಯನ್ನು ಜನಸಂಖ್ಯೆ ಆಧಾರದಲ್ಲಿ ಅಳೆಯಬಾರದು. ಈಗ ಕೇಂದ್ರ ಸರ್ಕಾರ ನಮ್ಮ ಜತೆಗೆ ಮಾತುಕತೆಗೆ ಕೂರಲು ಹಿಂಜರಿಯುತ್ತಿದೆ. ಇದು ನಮ್ಮ ಹೋರಾಟದ ತೀವ್ರತೆ ಜೋರಾಗಿರುವುದನ್ನು ಸೂಚಿಸುತ್ತದೆ. ರೈತ ಹೋರಾಟದಿಂದ ಕೇಂದ್ರ ಸರ್ಕಾರಕ್ಕೆ ಅಂಜಿಕೆ, ಹಿಂಬಡ್ತಿ ಆಗಿದೆ’ ಎಂದು ಅವರು ಹೇಳಿದರು.

‘ದೆಹಲಿ ರೈತ ಚಳವಳಿಯನ್ನು ದಕ್ಷಿಣಕ್ಕೂ ವಿಸ್ತರಿಸುವ ಉದ್ದೇಶದಿಂದ ನಾವು ನರಗುಂದಕ್ಕೆ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಒಡಿಶಾ ರಾಜ್ಯಗಳ ರೈತ ಸಂಘಟನೆಗಳು ನಮ್ಮ ಜತೆಗೂಡಿದರೆ ಪ್ರತಿಭಟನೆಯ ತೀವ್ರತೆ ಮತ್ತಷ್ಟು ಹೆಚ್ಚಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

‘ದೆಹಲಿಯಲ್ಲಿ ನಡೆಯುವ ಸಂಸತ್ ಅಧಿವೇಶನದಲ್ಲಿ ಬಿಜೆಪಿ ಹಾಗೂ ಬಿಜೆಪಿಯೇತರ ಸಂಸದರು ರೈತರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಹಾಗೂ ಬಿಜೆಪಿಯೇತರ ಎಲ್ಲ ಸಂಸದರಿಗೂ ವಿಪ್‌ ರವಾನಿಸಲಾಗಿದೆ. ಅಧಿವೇಶನ ನಡೆಯುವ ಅಷ್ಟೂ ದಿನಗಳು ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು. ಚರ್ಚಿಸದಿದ್ದರೆ ಪ್ರಶ್ನೆ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಸಂಯುಕ್ತ ಕಿಸಾನ್‌ ಮೋರ್ಚಾ ಎಂದೂ ರಾಜಕೀಯಕ್ಕೆ ಇಳಿಯುವುದಿಲ್ಲ. ರಾಜಕಾರಣ ಮಾಡುವುದಿಲ್ಲ. ಆದರೆ, ನಾವು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋಲಿಸಿ ಅಂತ ಹೋದೆವು. ಅದರಲ್ಲಿ ಯಶಸ್ವಿಯಾದೆವು. ‌ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡ್‌ ಚುನಾವಣೆ ನಡೆಯಲಿದ್ದು, ಅಲ್ಲೂ ಕೂಡ ಇದೇ ತಂತ್ರ ಅನುಸರಿಸಲಿದ್ದೇವೆ. ಎರಡು ರಾಜ್ಯಗಳಲ್ಲಿನ 50 ಪ್ರಮುಖ ಜಿಲ್ಲೆಗಳನ್ನು ಗುರಿಯಾಗಿಸಿಕೊಂಡು ರಣತಂತ್ರ ರೂಪಿಸಲಿದ್ದೇವೆ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು