ಬುಧವಾರ, ಮೇ 18, 2022
25 °C
ಅಸೂಟಿ ಗ್ರಾಮದ ಆಶ್ರಯ ಮನೆಗಳಿಗೆ ಮೂಲಸೌಲಭ್ಯಗಳ ಕೊರತೆ

ಮನೆಗಳ ಹಕ್ಕುಪತ್ರ ವಿತರಣೆಗೆ ಆಗ್ರಹ

ಉಮೇಶ ಬಸನಗೌಡರ Updated:

ಅಕ್ಷರ ಗಾತ್ರ : | |

Prajavani

ಹೊಳೆಆಲೂರ: ಸಮೀಪದ ಅಸೂಟಿ ಗ್ರಾಮದಲ್ಲಿ ಆಶ್ರಯ ಮನೆಗಳನ್ನು ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದಿಂದ 2002– 03ರಲ್ಲಿ ನಿರ್ಮಿಸಲಾಗಿದ್ದು, ಇದುವರೆಗೂ ಮೂಲಸೌಲಭ್ಯ ಕಲ್ಪಿಸಿಲ್ಲ.

ಆಶ್ರಯ ಕಾಲೊನಿಯಲ್ಲಿ 50 ಮನೆಗಳನ್ನು ನಿರ್ಮಿಸಿದ್ದು ಇದುವರೆಗೂ ಚರಂಡಿಯನ್ನಾಗಲಿ ರಸ್ತೆಯನ್ನಾಗಲಿ ನಿರ್ಮಿಸಿಲ್ಲ. ಸಮಸ್ಯೆ ಕುರಿತು ವಠಾರದ ನಿವಾಸಿಗಳು ಗ್ರಾಮ ಪಂಚಾಯ್ತಿಗೆ ತೆರಳಿದಾಗೊಮ್ಮೆ ಮೊಹರಮ್ (ಕೆಂಪು ಮಣ್ಣು) ಹೇರಿಸಿ ಕೈ ತೊಳೆದುಕೊಳ್ಳುವ ಗ್ರಾಮ ಪಂಚಾಯ್ತಿ ಆಡಳಿತ ಶಾಶ್ವತ ಸಿಸಿ ರಸ್ತೆಗಳನ್ನು ನಿರ್ಮಿಸದೇ ಕಾಲಹರಣ ಮತ್ತು ವ್ಯರ್ಥ ಹಣ ಖರ್ಚು ಮಾಡುತ್ತಿರುವುದು ವಠಾರದ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

2002–03ರಲ್ಲಿಯೇ ಆಶ್ರಯ ಮನೆಗಳ ನಿರ್ಮಾಣಕ್ಕಾಗಿ ಜಾಗ ಗುರುತಿಸಿದ ಅಧಿಕಾರಿಗಳು ಸಂಬಂಧಪಟ್ಟ ಜಮೀನು ಮಾಲೀಕರಿಂದ ಒಪ್ಪಿಗೆ ಪತ್ರ ಮಾತ್ರ ಪಡೆದಿದ್ದಾರೆ. ಆದರೆ, ಇದುವರೆಗೂ ಜಮೀನು ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳದಿರುವುದರಿಂದ ನಿವಾಸಿಗಳಿಗೆ ಜಾಗ ಖಾಲಿ ಮಾಡಿಸುವ ಭಯ ಶುರುವಾಗಿದೆ. ವಠಾರದ ನಿವಾಸಿಗಳು ಸ್ವತಃ ಹಣ ಖರ್ಚು ಮಾಡಿ ಈಗಾಗಲೇ ಎಲ್ಲಾ ದಾಖಲಾತಿಗಳನ್ನು ಸಿದ್ದಪಡಿಸಿ ರೋಣ ತಹಶಿಲ್ದಾರ್‌ ಹಾಗೂ ಉಪವಿಭಾಗಾಧಿಕಾರಿಗೆ ಮನವಿ ಮಾಡಿದ್ದರೂ ಎಚ್ಚೆತ್ತುಕೊಳ್ಳದ ಆಡಳಿತ ವ್ಯವಸ್ಥೆ, ಇದುವರೆಗೂ ವಠಾರದ ನಿವಾಸಿಗಳಿಗೆ ಜಮೀನು ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಿ ಹಕ್ಕುಪತ್ರ ವಿತರಣೆ ಮಾಡಿಲ್ಲ.

ಇನ್ನು ವಠಾರಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತಿರುವ ಗ್ರಾಮ ಪಂಚಾಯ್ತಿ ಆಡಳಿತ ವ್ಯವಸ್ಥೆ ವಠಾರಕ್ಕಾಗಿ ವಿದ್ಯುತ್‌ ಸರಬರಾಜು ಕಂಪನಿ ಇರಿಸಿದ ಟಿಸಿಗೆ ಮೀಟರ್ ಅಳವಡಿಸಲು ಸಹಕರಿಸುತ್ತಿಲ್ಲ. ಇದರಿಂದಾಗಿ, ಆಗಾಗ ಬರುವ ಕೆಇಬಿ‌ ಅಧಿಕಾರಿಗಳು ಬೀದಿ ದೀಪಗಳಿಗೆ ನೀಡಿರುವ ವಿದ್ಯುತ್‌ ಸಂಪರ್ಕವನ್ನು‌ ಕಡಿತಗೊಳಿಸುವ ಎಚ್ಚರಿಕೆ ನೀಡುತ್ತಿದ್ದಾರೆ. ಆದರೂ, ಗ್ರಾಮ ಪಂಚಾಯ್ತಿ ಆಡಳಿತ ವ್ಯವಸ್ಥೆ ಮಾತ್ರ ಜಾಣಕುರುಡುತನ ಪ್ರದರ್ಶಿಸುತ್ತಿದೆ.

ಮನೆಗಳ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಿಸಲು ಮತ್ತು ಹಕ್ಕುಪತ್ರ ಪಡೆಯಲು ಸ್ಥಳೀಯರೇ ಎಲ್ಲ ದಾಖಲೆಗಳನ್ನು ಕ್ರೋಡೀಕರಿಸಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಸ್ಥಳ ಪರಿಶೀಲನೆಗೆ ರೋಣ ತಹಶೀಲ್ದಾರ್‌ ನೆಪ ಮಾತ್ರಕ್ಕೆ ಭೇಟಿ ಮಾಡಿದ್ದು, ಯಾವುದೇ ಪ್ರಗತಿ ಕಾರ್ಯ ನೆಡೆದಿಲ್ಲ‌ ಎಂದು ಆಶ್ರಯ ಕಾಲೊನಿ ನಿವಾಸಿ ಯಲ್ಲಪ್ಪ ಮಮ್ಮಟಗೇರಿ ತಿಳಿಸಿದ್ದಾರೆ.

ಸಮಸ್ಯೆ ಬಗ್ಗೆಯಾಗಲಿ ರೋಣ ತಹಶೀಲ್ದಾರ್‌ ಸ್ಥಳ ಪರಿಶೀಲನೆಗೆ ತೆರಳಿದ್ದಾಗಲಿ ಈ ಬಗ್ಗೆ ನನಗೆ ಮಾಹಿತಿಯಿಲ್ಲ. ಅಲ್ಲದೇ, ಈ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ
ಕಿರಣ್‌ ಬೆಟಗೇರಿ, ಉಪ ತಹಶೀಲ್ದಾರ್‌, ಹೊಳೆಆಲೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು