ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಟೋಲ್ ನಾಕಾ ಸ್ಥಗಿತಗೊಳಿಸಲು ಆಗ್ರಹ

Published 5 ಸೆಪ್ಟೆಂಬರ್ 2024, 13:41 IST
Last Updated 5 ಸೆಪ್ಟೆಂಬರ್ 2024, 13:41 IST
ಅಕ್ಷರ ಗಾತ್ರ

ಮುಂಡರಗಿ: ‘ಸರ್ಕಾರವು ಕಾನೂನು ಬಾಹಿರವಾಗಿ ಗದಗ ತಾಲ್ಲೂಕಿನ ಪಾಪನಾಶಿ ಗ್ರಾಮದ ಬಳಿ ಟೋಲ್ ನಾಕಾ ಸ್ಥಾಪಿಸಿದ್ದು, ಇದರಿಂದ ಸಾರ್ವಜನಿಕರು ಅನವಶ್ಯಕವಾಗಿ ಹಣ ತೆರಬೇಕಾಗಿದೆ. ಸರ್ಕಾರ ಅದನ್ನು ತಕ್ಷಣ ತೆರವುಗೊಳಿಸಬೇಕು’ ಎಂದು ತಾಲ್ಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್.ಗೌಡರ ಒತ್ತಾಯಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘15 ದಿನಗಳೊಳಗೆ ಟೋಲ್‌ನಾಕಾ ಸ್ಥಗಿತಗೊಳಿಸದಿದ್ದರೆ, ಸಾರ್ವಜನಿಕರೆಲ್ಲರೂ ಒಂದಾಗಿ ಅದನ್ನು ತೆರವುಗೊಳಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘60 ಕಿ.ಮೀ. ಅಂತರದಲ್ಲಿ ಎರಡು ಟೋಲ್‌ನಾಕಾ ಸ್ಥಾಪಿಸಬಾರದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದರೆ ಅರಬಾವಿ- ಚಳ್ಳಕೇರಿ ರಸ್ತೆಯ ಕೊರ್ಲಹಳ್ಳಿ ಗ್ರಾಮದ ಬಳಿ ಈಗಾಗಲೇ ಒಂದು ಟೋಲ್‌ನಾಕಾ ಕಾರ್ಯನಿರ್ವಹಿಸುತ್ತಿದೆ. ಕೊರ್ಲಹಳ್ಳಿ ಹಾಗೂ ಪಾಪನಾಶಿ ಗ್ರಾಮಗಳ ನಡುವೆ ಕೇವಲ 37 ಕಿ.ಮೀ. ಅಂತರವಿದ್ದು, ಅವೈಜ್ಞಾನಿಕವಾಗಿ ಪಾಪನಾಶಿ ಬಳಿ ಟೋಲ್‌ನಾಕಾ ನಿರ್ಮಿಸಲಾಗಿದೆ’ ಎಂದು ಆರೋಪಿಸಿದರು.

‘ಪಾಪಾನಾಶಿ ಗ್ರಾಮದ ಬಳಿ ಹೆಚ್ಚುವರಿ ಹಾಗೂ ಕಾನೂನು ಬಾಹಿರವಾಗಿ ಟೋಲ್‌ನಾಕಾ ನಿರ್ಮಿಸುವ ಮೂಲಕ ಜನಪ್ರತಿನಿಧಿಗಳು, ಗುತ್ತಿಗೆದಾರರು ಹಗಲು ದರೋಡೆಗೆ ಮುಂದಾಗಿದ್ದಾರೆ. ಅಧಿಕಾರಿಗಳು ಗುತ್ತಿಗೆದಾರರ ಅಡಿಯಾಳುಗಳಾಗಿದ್ದು, ಕಣ್ಣೆದುರಿಗೆ ನಡೆಯುವ ಅನ್ಯಾಯಕ್ಕೆ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದ್ದಾರೆ’ ಎಂದು ದೂರಿದರು.

‘ಖಾಸಗಿ ವಾಹನಗಳು ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ನಿತ್ಯ ಇಲ್ಲಿ ಹಣ ಪಾವತಿಸಬೇಕಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳ ಟೋಲ್ ಹಣವನ್ನು ಪರೋಕ್ಷವಾಗಿ ಪ್ರಯಾಣಿಕರೇರೆ ಭರಿಸಬೇಕಾಗಿದೆ. ರೈತರು, ಸಣ್ಣ, ಪುಟ್ಟ ವಾಹನಗಳನ್ನು ಹೊಂದಿರುವ ವ್ಯಾಪಾರಿಗಳು ಇದರಿಂದ ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಮುಂಡರಗಿ ತಾಲ್ಲೂಕನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು, ಇದರಿಂದ ಮುಂಡರಗಿ ಹಿಂದುಳಿಯುವಂತಾಗಿದೆ’ ಎಂದು ಆರೋಪಿಸಿದರು.

ಎ.ಪಿ.ಜೆ. ಅಬ್ದುಲ್ ಕಲಾಂ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಹಸನಸಾಬ್ ದೊಡ್ಡಮನಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT