ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲೆಹೊಸೂರ ಶ್ರೀಗಳ ವಿರುದ್ಧ ಗದುಗಿನ ಭಕ್ತರ ಆಕ್ರೋಶ

Last Updated 28 ಡಿಸೆಂಬರ್ 2020, 2:06 IST
ಅಕ್ಷರ ಗಾತ್ರ

ಗದಗ: ‘ಲಿಂಗೈಕ್ಯ ತೋಂಟದ ಸಿದ್ಧಲಿಂಗ ಶ್ರೀಗಳದ್ದು ಸಾವಿರದ ಸಾಧನೆ. ಬದುಕಿನುದ್ದಕ್ಕೂ ಶರಣರ ವಚನಗಳು ನುಡಿಗಣವನ್ನೇ ಇಟ್ಟುಕೊಂಡು ಮುನ್ನೆಡೆದು ನಮ್ಮ ನಡುವಿನಿಂದ ಎದ್ದುಹೋದ ಮಹಾಶರಣರು. ಅಂತವರು ಲಿಂಗೈಕ್ಯರಾದ ನಂತರ ಅವರ ವಿರುದ್ಧ ಮಾತಾಡುತ್ತಿರುವುದು ಬಾಲೆಹೊಸೂರು ಶ್ರೀಗಳು ಪಡೆದ ಕೆಟ್ಟ ಸಂಸ್ಕಾರಕ್ಕೆ ಸಾಕ್ಷಿಯಾಗಿದೆ’ ಎಂದು ಗದುಗಿನ ತೋಂಟದಾರ್ಯ ಮಠದ ಭಕ್ತರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಲೆಹೊಸೂರು ಶ್ರೀಗಳು ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ಲಿಂ.ತೋಂಟದ ಶ್ರೀಗಳನ್ನು ನಿಂದಿಸಿರುವುದನ್ನು ಖಂಡಿಸಿರುವ ಭಕ್ತರು ತಮ್ಮ ಆಕ್ರೋಶ ಹೊರಹಾಕಿದ್ದು, ‘ಬಾಲೆಹೊಸೂರು ಶ್ರೀಗಳು ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಅವರು ಮಾಡಿರುವ ಅವ್ಯವಹಾರಗಳಿಗೆ ಮಿತಿ ಇಲ್ಲ. ಬಸವ ಅನುಯಾಯಿಗಳು ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಬೇಕೆಂದು ಹೋರಾಡುತ್ತಿರುವಾಗ ಬಸವ ವಿರೋಧಿಗಳೊಂದಿಗೆ ಕೈಜೋಡಿಸಿ ಅವರ ವಿರುದ್ಧ ಗದುಗಿನಲ್ಲಿ ಸಮಾವೇಶ ಮಾಡಿದ್ದನ್ನು ಇತಿಹಾಸ ಎಂದೂ ಕ್ಷಮಿಸುವುದಿಲ್ಲ’ ಎಂದು ಕಿಡಿಕಾರಿದ್ದಾರೆ.

‘ಹುಬ್ಬಳ್ಳಿಯ ಮೂರುಸಾವಿರ ಮಠಕ್ಕೆ ಉನ್ನತ ಅಧಿಕಾರ ಸಮಿತಿ ಮಾಡಿರುವುದು ಸರಿಯಾದ ಕ್ರಮ. ಅದರಿಂದ ತೊಂದರೆಯಾಗಿದ್ದರೆ ಅದನ್ನು ಹೇಳಬೇಕಾದವರು ಆ ಪೀಠದ ಶ್ರೀಗಳೇ ವಿನಹ ಇವರು ಅಲ್ಲ. ಉತ್ತರ ಕರ್ನಾಟಕದ ಪ್ರಮುಖ ನಗರವಾದ ಹುಬ್ಬಳ್ಳಿಯಲ್ಲಿ ಕೆ.ಎಲ್.ಇ. ಸೊಸೈಟಿಯು ಮೂರುಸಾವಿರಮಠ ಮಾಡಲು ಸಾಧ್ಯವಿಲ್ಲದ 1000 ಹಾಸಿಗೆ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ಮಾಡುತ್ತಿರುವುದಕ್ಕೆ ಎಲ್ಲರೂ ಹೆಮ್ಮೆ ಪಡಬೇಕು. ಆದರೆ, ಆ ಆಸ್ತಿಯ ಮೇಲೆ ಕಣ್ಣು ಹಾಕಿರುವ ಬಾಲೆಹೊಸೂರು ಸ್ವಾಮಿಗಳು ಅದನ್ನು ಕಬಳಿಸಬೇಕೆಂದು ಸಂಚು ರೂಪಿಸಿದ್ದಾರೆ’ ಎಂದು ದೂರಿದ್ದಾರೆ.

‘ಈ ಸ್ವಾಮಿಗಳು ಕನ್ನಡದ ಕುಲಗುರುಗಳಾದ ಲಿಂ.ತೋಂಟದ ಶ್ರೀಗಳ ವಿರುದ್ಧ ಹೇಳಿಕೆ ನೀಡಿರುವುದನ್ನು ಹಿಂದಕ್ಕೆ ಪಡೆದು ಕ್ಷಮೆ ಕೋರಬೇಕು. ಇಲ್ಲವಾದರೆ ಇವರ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಶ್ರೀಗಳ ಭಕ್ತರಾದ ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಎಂ.ಸಿ.ಐಲಿ, ಜಾತ್ರಾ ಸಮಿತಿ ಅಧ್ಯಕ್ಷ ಅಮರೇಶ ಅಂಗಡಿ, ಜಾತ್ರಾ ಸಮಿತಿ ಸಂಘಟನಾ ಕಾರ್ಯದರ್ಶಿ ಚಂದ್ರು ಚವ್ಹಾಣ, ಎಸ್.ಎಸ್.ಕಳಸಾಪೂರಶೆಟ್ಟರ, ಎಂ.ಬಿ.ಬಡ್ನಿ, ಬಾಲಚಂದ್ರ ಭರಮಗೌಡರ, ಶಿವಬಸವಪ್ಪ ಯಂಡಿಗೇರಿ, ಅಶೋಕ ಹಂಜಗಿ, ಡಾ. ಜಿ.ಬಿ.ಪಾಟೀಲ, ಗಂಗಾಧರ ಹಿರೇಮಠ, ಪ್ರಕಾಶ ಕರಿಸೋಮನಗೌಡರ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT