ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಇಂಗ್ಲಿಷ್‌ ಬೋಧನೆಗೆ ಡಿಜಿಟಲ್‌ ವೇದಿಕೆ

ಶಿಕ್ಷಕ ವಿವೇಕಾನಂದಗೌಡ ಪಾಟೀಲ ಅವರಿಂದ ವಿಭಿನ್ನ ಪ್ರಯತ್ನ
Published 5 ಸೆಪ್ಟೆಂಬರ್ 2023, 4:54 IST
Last Updated 5 ಸೆಪ್ಟೆಂಬರ್ 2023, 4:54 IST
ಅಕ್ಷರ ಗಾತ್ರ

ಗದಗ: ಇಂಗ್ಲಿಷ್‌ ಕಬ್ಬಿಣದ ಕಡಲೆಯಲ್ಲ. ಸರಿಯಾದ ಕ್ರಮದಲ್ಲಿ ಹೇಳಿಕೊಟ್ಟರೆ ಗ್ರಾಮೀಣ ಮಕ್ಕಳು ಕೂಡ ಇಂಗ್ಲಿಷ್‌ ಅನ್ನು ಜೋಳದ ರೊಟ್ಟಿಯಂತೆ ಸುಲಭವಾಗಿ ಹುರಿದು ಮುಕ್ಕುತ್ತಾರೆ ಎಂಬುದು ಶಿಕ್ಷಕ ವಿವೇಕಾನಂದಗೌಡ ಪಾಟೀಲ ಅವರ ಮಾತು.

ಶಾಲೆಯಲ್ಲಿ‘ಚಾಕ್‌ ಆ್ಯಂಡ್‌ ಟಾಕ್‌’ ವಿಧಾನಕ್ಕಿಂತ ದೃಶ್ಯ ಮತ್ತು ಶ್ರವಣ ಮಾಧ್ಯಮ ಬಳಸಿದರೆ ಬೋಧನೆ ಪರಿಣಾಮಕಾರಿ ಆಗುತ್ತದೆ. ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಶಿಕ್ಷಕರು ತಮ್ಮ ಬೋಧನೆಯಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡರೆ ಕಲಿಸುವಿಕೆ ಇನ್ನಷ್ಟು ಪರಿಣಾಮಕಾರಿ ಆಗುತ್ತದೆ ಎಂಬುದು ಅವರ ಅನುಭವದ ಮಾತು.

ಹಾಗಾಗಿ, ಗ್ರಾಮೀಣ ಮಕ್ಕಳ ಇಂಗ್ಲಿಷ್‌ ಭಾಷಾ ಕೌಶಲವನ್ನು ಹೆಚ್ಚಿಸಲು ಎರಡು ವರ್ಷಗಳ ಹಿಂದೆ ಯೂಟ್ಯೂಬ್‌ ಚಾನೆಲ್‌ ಆರಂಭಿಸಿದ ಇವರು 8, 9 ಮತ್ತು 10ನೇ ತರಗತಿಯ ಇಂಗ್ಲಿಷ್‌ ಪಠ್ಯ, ವ್ಯಾಕರಣ ಹಾಗೂ ಕಥೆಗಳನ್ನು ವಿಡಿಯೊ ಮಾಡಿ ಅಪ್‌ಲೋಡ್‌ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ₹1 ಲಕ್ಷ ಹಣ ಖರ್ಚು ಮಾಡಿ ಕ್ಯಾಮೆರಾ ಹಾಗೂ ಇನ್ನಿತರ ಸಲಕರಣೆಗಳನ್ನು ಖರೀದಿಸಿದ್ದಾರೆ.

‘ತರಗತಿಯೊಳಗೆ ಶಿಕ್ಷಕರು ಒಂದು ವಿಷಯವನ್ನು ಒಮ್ಮೆ ಮಾತ್ರ ಬೋಧಿಸುತ್ತಾರೆ. ಅರ್ಥವಾಗಿಲ್ಲ ಅಂತ ಯಾರಾದರೂ ವಿದ್ಯಾರ್ಥಿಗಳು ಕೇಳಿದರೆ ಇನ್ನೊಮ್ಮೆ ಹೇಳುತ್ತಾರೆ. ಈ ರೀತಿ ಎಲ್ಲ ವಿದ್ಯಾರ್ಥಿಗಳು ಕೇಳಿದರೆ ಅವರಿಗೆ ಪದೇಪದೇ ಹೇಳಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ತಂತ್ರಜ್ಞಾನ ನೆರವಿಗೆ ಬರಲಿದ್ದು, ವಿದ್ಯಾರ್ಥಿಗಳು ಶಾಲೆಯ ಹೊರಗೂ ಕಲಿಕಾ ಪ್ರಕ್ರಿಯೆಯನ್ನು ಮುಂದುವರಿಸಬಹುದು. ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ವಿಡಿಯೊಗಳನ್ನು ಸಾವಧಾನದಿಂದ ನೋಡಿ, ಮನನ ಮಾಡಿಕೊಳ್ಳಬಹುದು’ ಎನ್ನುತ್ತಾರೆ ಅವರು.

‘ಕಲಿಕೆಯಲ್ಲಿ ಪಂಚೇಂದ್ರೀಯಗಳ ಪಾತ್ರ ಪ್ರಮುಖವಾಗಿದೆ. ಪ್ರಸ್ತುತ ಕೇಳಿ ಕಲಿಯುವ ವಿಧಾನದಲ್ಲಿ ಕಿವಿ ಅತ್ಯಂತ ದುರ್ಬಲ ಎನಿಸಿದೆ. ಅರ್ಧಗಂಟೆ ಮಾಡಿದ ಪಾಠವನ್ನು ಕೇಳಿಸಿಕೊಂಡ ಒಬ್ಬ ವಿದ್ಯಾರ್ಥಿ, ಅದರಲ್ಲಿ ಶೇ 15ರಷ್ಟು ಮಾತ್ರ ಅರ್ಥೈಸಿಕೊಂಡು ಹೇಳಬಲ್ಲ. ಆದರೆ, ದೃಶ್ಯ ಮತ್ತು ಶ್ರವಣ ಎರಡೂ ಇರುವ ವಿಡಿಯೊ ವೀಕ್ಷಣೆಯಿಂದ ವಿದ್ಯಾರ್ಥಿಗಳ ಕಲಿಕೆಯ ಮಟ್ಟ ಶೇ 80ಕ್ಕೂ ಅಧಿಕವಾಗುತ್ತದೆ. ಇದೇಕಾರಣಕ್ಕೆ ಸಿನಿಮಾಗಳು ಹೆಚ್ಚು ಜನರನ್ನು ಆಕರ್ಷಿಸುತ್ತವೆ’ ಎನ್ನುತ್ತಾರೆ ಅವರು.

‘ವಿಡಿಯೊ ಪಾಠಗಳಿಗೆ ಜಿಲ್ಲೆಯಿಂದಷ್ಟೇ ಅಲ್ಲದೇ ರಾಜ್ಯದ ಎಲ್ಲೆಡೆಯಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ. ವಿಡಿಯೊ ನೋಡಿ ಕಲಿಯುವುದರಿಂದ ಮಕ್ಕಳ ಕಲಿಕಾ ಮಟ್ಟ ವೃದ್ಧಿಸಿದೆ ಎಂದು ವಿವಿಧ ಜಿಲ್ಲೆಗಳ ಪೋಷಕರು ಕರೆ ಮಾಡಿ ತಿಳಿಸಿದಾಗ ನಮ್ಮ ಪ್ರಯತ್ನ ಸಾರ್ಥವೆನಿಸುತ್ತದೆ’ ಎಂದು ಖುಷಿಯಿಂದ ಹೇಳುತ್ತಾರೆ ಅವರು.

ವಿಭಕ್ತ ಕುಟುಂಬಗಳಿಂದಾಗಿ ಕತೆ ಕೇಳಿಸಿಕೊಳ್ಳುವ ಅವಕಾಶದಿಂದ ಇಂದಿನ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ. ಮಕ್ಕಳು ಕತೆ ಕೇಳುವ ಸುಖದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಅವರು ಪಠ್ಯದ ಜತೆಗೆ ಕತೆ ವಿಡಿಯೊಗಳನ್ನೂ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡುತ್ತಿದ್ದಾರೆ.

ಇವರ ವಿಡಿಯೊ ಪಾಠಗಳು ಶಾಲಾ ಗ್ರೂಪ್‌ಗಳಲ್ಲಿ, ಶಿಕ್ಷಕರ ವಾಟ್ಸ್‌ಆ್ಯಪ್‌ ಗುಂಪುಗಳಲ್ಲಿ ಹೆಚ್ಚೆಚ್ಚು ಹಂಚಿಕೆಯಾಗುತ್ತಿವೆ.
ವಿವೇಕಾನಂದಗೌಡ ಪಾಟೀಲ ಅವರ ಚಾನೆಲ್‌ಗೆ ಈವರೆಗೆ ನಾಲ್ಕು ಸಾವಿರ ಮಂದಿ ಸಬ್‌ಸ್ಕ್ರೈಬ್‌ ಆಗಿದ್ದು, ವಿಡಿಯೊಗಳನ್ನು ಎರಡು ಲಕ್ಷಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ವೀಕ್ಷಣೆ ಮಾಡಿದ್ದಾರೆ.

ಪ್ರೌಢಶಾಲೆಯ ಇಂಗ್ಲಿಷ್‌ ಭಾಷೆಯ ವಿಡಿಯೊ ಪಾಠಗಳ ವೀಕ್ಷಣೆಗೆ ಈ ಕೊಂಡಿ ಬಳಸಿ: https://www.youtube.com/@vivekanandgoudapatil4797

ಕಾಲಕ್ಕೆ ತಕ್ಕಂತೆ ಶಿಕ್ಷಕ ಬದಲಾಗಬೇಕು. ಶಿಕ್ಷಕರು ಬೋಧನೆ ಸಂದರ್ಭದಲ್ಲಿ ಡಿಜಿಟಲ್‌ ವೇದಿಕೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು

–ವಿವೇಕಾನಂದಗೌಡ ಪಾಟೀಲ ಎಸ್‌.ಎಂ.ಕೃಷ್ಣ ನಗರ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಗದಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT