ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಜೇಂದ್ರಗಡ | ಗ್ರಾಮಗಳಲ್ಲಿ ಕುಡಿಯುವ ನೀರಿನದ್ದೇ ಸಮಸ್ಯೆ

Published : 16 ಸೆಪ್ಟೆಂಬರ್ 2024, 3:26 IST
Last Updated : 16 ಸೆಪ್ಟೆಂಬರ್ 2024, 3:26 IST
ಫಾಲೋ ಮಾಡಿ
Comments

ಗಜೇಂದ್ರಗಡ: ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವುದಕ್ಕಾಗಿ ಈ ಹಿಂದೆ ರಾಜ್ಯ ಸರ್ಕಾರ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ (ಡಿಬಿಒಟಿ) ಮೂಲಕ ತಾಲ್ಲೂಕಿನ 33 ಹಳ್ಳಿಗಳಿಗೆ ನವಿಲು ತೀರ್ಥದ ಮಲಪ್ರಭಾ ನದಿ ನೀರು ಪೂರೈಕೆಗೆ ಕ್ರಮ ಕೈಗೊಂಡಿತ್ತು. ಆದರೆ ಸಮರ್ಪಕ ನಿರ್ವಹಣೆಯ ಕೊರತೆಯಿಂದ ಇಂದಿಗೂ ಸಹ ಕೆಲವು ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ.

ಸಮೀಪದ ಗೋಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾಟರಂಗಿ ಗ್ರಾಮದಲ್ಲಿ ಎರಡು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ಗ್ರಾಮ 1,500ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ‘ಪ್ರತಿ ದಿನ ನೀರು ಪೂರೈಕೆಯಾಗುತ್ತಿದ್ದರೂ ಒಂದು ನಲ್ಲಿಯಲ್ಲಿ ನಾಲ್ಕು ಕೊಡಗಳಿಗಿಂತ ಹೆಚ್ಚು ನೀರು ಬರುವುದಿಲ್ಲ. ನೀರಿನ ಸಮಸ್ಯೆ ಕುರಿತು ಹಲವು ಬಾರಿ ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಈ ಹಿಂದೆ ಗ್ರಾಮದ ಖಾಸಗಿ ಕೊಳವೆ ಬಾವಿ ಬಾಡಿಗೆ ಪಡೆದು ಗ್ರಾಮಕ್ಕೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಕೊಳವೆ ಬಾವಿ ಮಾಲೀಕರಿಗೂ ಸರಿಯಾಗಿ ಬಾಡಿಗೆ ನೀಡದ ಕಾರಣ ಅವರೂ ಕೊಳವೆ ಬಾವಿ ಬಾಡಿಗೆ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

‘ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದು ನಿಜ. ಗ್ರಾಮ ಪಂಚಾಯ್ತಿಯ ಒಂದು ಕೊಳವೆ ಬಾವಿಯಿಂದ ಸಿಗುವ ನೀರು ಹಾಗೂ ಡಿಬಿಒಟಿ ನೀರು ಸೇರಿಸಿ ಗ್ರಾಮಕ್ಕೆ ಪೂರೈಸಲಾಗುತ್ತಿದೆ. ಪಿಡಿಒ ಅವರೊಂದಿಗೆ ಚರ್ಚಿಸಿ ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇವೆʼ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಶಂಕ್ರಪ್ಪ ಗುರಿಕಾರ ಹೇಳಿದರು.

ಮಾಟರಂಗಿ ಗ್ರಾಮದ ನೀರಿನ ಸಮಸ್ಯೆ ಕುರಿತು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶರಣಪ್ಪ ನರೇಗಲ್‌ ಅವರನ್ನು ಹಲವು ದಿನಗಳಿಂದ ಸಂಪರ್ಕಿಸಿದರೂ ಕರೆಯನ್ನು ಸ್ವೀಕರಿಸಲಿಲ್ಲ.

ಗ್ರಾಮದಲ್ಲಿ ಎರಡು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆಯಿದೆ. ಪ್ರತಿದಿನ ನಲ್ಲಿಯಿಂದ 4ರಿಂದ 5 ಕೊಡ ನೀರು ಮಾತ್ರ ಸಿಗುತ್ತಿದೆ. ದನ, ಕರುಗಳು ಇರುವವರು ಸಮಸ್ಯೆ ಎದುರಿಸುವಂತಾಗಿದೆ
ಚನ್ನಬಸವ ಕರಡಿ, ಗ್ರಾಮಸ್ಥ, ಮಾಟರಂಗಿ
ಮಾಟರಂಗಿ ಗ್ರಾಮದಲ್ಲಿನ ನೀರಿನ ಸಮಸ್ಯೆ ಕುರಿತು ಗಮನಕ್ಕೆ ಬಂದಿದ್ದು, ಶೀಘ್ರದಲ್ಲಿಯೇ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು
ವಿಜಯಲಕ್ಷ್ಮೀ ಲ್ಯಾವಕ್ಕಿ ಅಧ್ಯಕ್ಷೆ, ಗ್ರಾಮ ಪಂಚಾಯಿತಿ, ಗೋಗೇರಿ

‘ಶೀಘ್ರದಲ್ಲಿಯೇ ಕ್ರಮ’

‘ಮಾಟರಂಗಿ ಕೊನೆಯ ಗ್ರಾಮ ಆಗಿರುವುದರಿಂದ ತಾಂತ್ರಿಕ ತೊಂದರೆಯಾದಾಗ ಸರಿಪಡಿಸಲು ಅನುಕೂಲವಾಗುವಂತೆ ನಾಗರಸಕೊಪ್ಪ ತಾಂಡಾದಲ್ಲಿ ವಾಲ್ವ್‌ ಅಳವಡಿಸಲಾಗಿದೆ. ಅಲ್ಲಿ ಕೆಲವರು ವಾಲ್ವ್‌ ನಿಯಂತ್ರಣ ಮಾಡುತ್ತಿರುವುದರಿಂದ ಸಮಸ್ಯೆಯಾಗಿದೆ. ಸಮಸ್ಯೆಗೆ ಶೀಘ್ರ ಪರಿಹಾರ ನೀಡಲಾಗುವುದು’ ರೋಣದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಉಪ ವಿಭಾಗದ ಎಇಇ ಚಂದ್ರಕಾಂತ ನೆರ್ಲೇಕರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT