ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಗುಂದ | ಬಿತ್ತಿದ ರೈತರಿಗಿಲ್ಲ ಬರ ಪರಿಹಾರ: ಆಕ್ರೋಶ

ಬರ ಪರಿಹಾರವೋ; ಬೆಳೆ ಹಾನಿ ಪರಿಹಾರವೋ: ರೈತರ ಪ್ರಶ್ನೆ
Published 28 ಮೇ 2024, 6:13 IST
Last Updated 28 ಮೇ 2024, 6:13 IST
ಅಕ್ಷರ ಗಾತ್ರ

ನರಗುಂದ: ಬಿತ್ತದೇ ಇರುವ ರೈತರಿಗೆ ಪರಿಹಾರ ಕೊಟ್ಟು, ಬಿತ್ತಿದ ರೈತರಿಗೆ ಪರಿಹಾರ ನೀಡದೇ ಇರುವುದು ಯಾವ ನ್ಯಾಯ? ಬರ ಪರಿಹಾರ ಕೊಟ್ಟರೆ ಎಲ್ಲರಿಗೂ ಕೊಡಬೇಕು. ಇಲ್ಲವಾದರೆ ಸರ್ಕಾರ ಅದರ ಪರಿಣಾಮ ಎದುರಿಸಲಿಕ್ಕೆ ಸಿದ್ದವಾಗಬೇಕು ಎಂಬ ತಾಲ್ಲೂಕಿನ ರೈತರ ಆಕ್ರೋಶದ ನುಡಿಗಳು ಬರ ಪರಿಹಾರ ವಿತರಣೆಯಲ್ಲಿನ ಅವ್ಯವಸ್ಥೆಯನ್ನು ಬಿಂಬಿಸುತ್ತವೆ.

2023-24ನೇ ಸಾಲಿನಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಮಳೆ ಸುರಿಯದೇ ಸಂಪೂರ್ಣ ಬರಗಾಲ ಆವರಿಸಿತು. ಸರ್ಕಾರ ನರಗುಂದ ತಾಲ್ಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿತು. ಆದರೆ, ಬರವೆಂದು ಯಾವುದೇ ರೀತಿಯ ಪರಿಹಾರವಾಗಲಿ, ಉದ್ಯೋಗವನ್ನಾಗಲಿ ಕೊಡಲಿಲ್ಲ.

ಮುಂಗಾರು ಆರಂಭದಲ್ಲಿ ಅಲ್ಪ ಮಳೆಯಾದ ಪರಿಣಾಮ ಹೆಸರು ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಲಾಗಿತ್ತು. ಆಗ ಹುಟ್ಟಿದ ಬೆಳೆ ಸಂಪೂರ್ಣ ಹಾನಿಯಾಗಿತ್ತು. ಇದರಿಂದ ರೈತರು ಬೆಳೆ ಹಾನಿ ಪರಿಹಾರಕ್ಕೆ ಸರ್ಕಾರದ ಮೊರೆ ಹೋಗಿದ್ದರು. ಬೆಳೆ ಹಾನಿ ಸಮೀಕ್ಷೆಗೆ ಒತ್ತಡ ಹೇರಿದ್ದವು. ಕೊನೆಗೂ ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಸಮೀಕ್ಷೆ ನಡೆಸಿದ್ದವು. ಸರ್ಕಾರಕ್ಕೆ ವರದಿ ನೀಡಿದ್ದವು. ಆದರೆ 10 ತಿಂಗಳು ಗತಿಸಿದರೂ ಪರಿಹಾರದ ಪ್ರಸ್ತಾಪ ಇಲ್ಲ ಎಂದು ಹರಿಹಾಯ್ದಿದ್ದಾರೆ.

ಆದರೆ, ಕಳೆದ ಎರಡು ವಾರಗಳಿಂದ ಬರ ಪರಿಹಾರವೆಂದು ರೈತರ ಖಾತೆಗೆ ಸರ್ಕಾರದ ಹಣವನ್ನು ತಾಲ್ಲೂಕು ಆಡಳಿತ ಪರಿಹಾರ ರೂಪದಲ್ಲಿ ಜಮಾ ಮಾಡುತ್ತಿದೆ. ಈ ಪರಿಹಾರ ಹಂಚಿಕೆ ಬೆಳೆ ಹಾನಿಗೊಂಡವರಿಗೆ ಮಾತ್ರ ಎಂದು ಕಂದಾಯ ಇಲಾಖೆ, ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಹಾಗಾದರೆ ಬರ ಪರಿಹಾರ ಎಂದರೇನು? ಎಂಬ ಪ್ರಶ್ನೆ ತಾಲ್ಲೂಕಿನ ರೈತರನ್ನು ನಿರಂತರ ಕಾಡುತ್ತಿದೆ.

ಸರ್ಕಾರ ಬರ ಪರಿಹಾರ ಎನ್ನುತ್ತದೆ. ಅಧಿಕಾರಿಗಳು ಬರ ಬೆಳೆ ಹಾನಿ ಪರಿಹಾರ ಎನ್ನುತ್ತಾರೆ. ಇದರಲ್ಲಿ ಯಾವುದು ಸತ್ಯ, ಯಾವುದು ಮಿಥ್ಯ ಎಂಬುದು ತಿಳಿಯದಾಗಿದೆ. ಬರ ಪರಿಹಾರ ಎಂದರೆ ಎಲ್ಲ ರೈತರ ಖಾತೆಗಳಿಗೆ ಹಣ ಜಮಾ ಆಗಬೇಕು ಎನ್ನುವುದು ರೈತರ ಆಗ್ರಹ.

ಬೆಳೆ ಇಲ್ಲದ ಮೇಲೆ ಜಿಪಿಎಸ್: ಪ್ರತಿ ವರ್ಷ ಮುಂಗಾರು, ಪೂರ್ವ ಮುಂಗಾರು, ಹಿಂಗಾರು ಬೆಳೆಯ ಜಿಪಿಎಸ್ ಅನ್ನು ಕೃಷಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಮಾಡುತ್ತಾರೆ. ಮುಖ್ಯವಾಗಿ ನರಗುಂದ ತಾಲ್ಲೂಕಿನಲ್ಲಿ ಕೃಷಿ ಇಲಾಖೆ ಪ್ರಕಾರ ಪೂರ್ವ ಮುಂಗಾರು ಬೆಳೆ ಹೆಸರು ಬೆಳೆಯಾಗಿದ್ದು, ಅದು ಸಂಪೂರ್ಣ ಹಾನಿಯಾಗಿ ಹರಗಿದ ಮೇಲೆ ಭೂಮಿಯನ್ನು ಜಿಪಿಎಸ್ ಮಾಡಿದ ಕೃಷಿ ಇಲಾಖೆ ಶೇ 40ರಷ್ಟು ಭೂಮಿಯಲ್ಲಿ ಮಾತ್ರ ಬೆಳೆ ಇದೆ ಎಂದು ಸಮೀಕ್ಷೆ ಮಾಡಿದೆ. ಇದರಲ್ಲಿ 25,570 ಹೆಕ್ಟೆರ್ ಬೆಳೆ ಹಾನಿ ಎಂದು ತೋರಿಸಲಾಗಿದೆ. ಇದರ ಆಧಾರದ ಮೇಲೆ ಬೆಳೆ ಹಾನಿ ಪರಿಹಾರ ವಿತರಿಸಲಾಗುತ್ತಿದೆ ಎಂದು ಕಂದಾಯ ಇಲಾಖೆ ಸಿಬ್ಬಂದಿ ಹೇಳುತ್ತಾರೆ.

ತಾಲ್ಲೂಕಿನಲ್ಲಿ 35,000 ಎಫ್ಐಡಿ ಖಾತೆಗಳಿವೆ. ಆದರೆ 12,693 ಎಫ್ಐಡಿ ಖಾತೆಗಳಿಗೆ ಮಾತ್ರ ಹಣ ಬಂದಿದೆ. ಆದರೆ ಕೆಲವು ರೈತರಿಗೆ ಬಿತ್ತದೇ ಇದ್ದರೂ ಪರಿಹಾರ ಬಂದಿದೆ. ಇದರಿಂದ ಜಿಪಿಎಸ್ ಆಧಾರದ ಮೇಲೆ ಪರಿಹಾರ ಜಮಾ ಆಗಿದ್ದು ನಿಜವೇ? ಎಂಬ ಪ್ರಶ್ನೆ ಎದುರಾಗಿದೆ. ಆದ್ದರಿಂದ ರೈತರು ತಹಶೀಲ್ದಾರ್ ಕಚೇರಿಗೆ ಅಲೆದು ಸಹಾಯವಾಣಿಯನ್ನು ಸಂಪರ್ಕಿಸಿ ಸುಸ್ತಾಗಿ ಹೋಗಿದ್ದಾರೆ. ಆದ್ದರಿಂದ ಈ ವರ್ಷವಂತೂ ಸಂಪೂರ್ಣ ಬರಗಾಲ ಆಗಿದ್ದರಿಂದ ಎಲ್ಲರಿಗೂ ಪರಿಹಾರ ವಿತರಿಸಬೇಕು ಎಂದು ರೈತ ಮುಖಂಡರು ಆಗ್ರಹಿಸುತ್ತಾರೆ.

ಬರ ಪರಿಹಾರ ಎಂದರೆ ಎಲ್ಲ ರೈತರಿಗೂ ಬರಬೇಕು. ಕೆಲವರಿಗೆ ಈ ತನಕವೂ ಪರಿಹಾರ ಜಮಾ ಮಾಡಿಲ್ಲ. ಶೀಘ್ರ ಕ್ರಮವಹಿಸದಿದ್ದರೆ ಹೋರಾಟ ನಿಶ್ಚಿತ
ಅಣ್ಣಪ್ಪಗೌಡ ಪಾಟೀಲ ರೈತ ಮೂಗನೂರ
‘ಸಮಸ್ಯೆ ಶೀಘ್ರ ಬಗೆಹರಿಯಲಿದೆ’
‘ಮುಂಗಾರು ಸಂದರ್ಭದಲ್ಲಿ ಜಿಪಿಎಸ್ ಮಾಡಿದ ಸಮಯದಲ್ಲಿ ಹೊಲದಲ್ಲಿ ಇದ್ದ ಬೆಳೆಗೆ ಅನುಗುಣವಾಗಿ ಸರ್ಕಾರಕ್ಕೆ ಆನ್‌ಲೈನ್ ಮೂಲಕ ಹಾನಿಯ ಮಾಹಿತಿ ತಲುಪಿದೆ. ಇದರ ಅನ್ವಯ ಬರ ಬೆಳೆಹಾನಿ ಪರಿಹಾರವನ್ನು ಸರ್ಕಾರವೇ ಡಿಬಿಟಿ ಮೂಲಕ ಹಾಕಿದೆ. ಕೆಲವು ರೈತರಿಗೆ ತಾಂತ್ರಿಕ ಸಮಸ್ಯೆಗಳಿಂದ ಜಮಾ ಆಗಿಲ್ಲ. ಆ ಸಮಸ್ಯೆ ಶೀಘ್ರ ಪರಿಹಾರ ಆಗಲಿದೆ’ ಎಂದು ನರಗುಂದ ತಹಶೀಲ್ದಾರ್‌ ಶ್ರೀಶೈಲ ತಳವಾರ ತಿಳಿಸಿದ್ದಾರೆ. 
‘ಕೆಲವು ರೈತರಿಗೆ ಹಣ ಬಂದಿಲ್ಲ’
‘28580 ಹೆಕ್ಟೆರ್ ಹೆಸರು ಬೆಳೆ ಹಾನಿಯಾಗಿತ್ತು. ತಾಲ್ಲೂಕಿನಲ್ಲಿ ಎಫ್ಐಡಿ ಸಂಖ್ಯೆ ಹೊಂದಿರುವ 35 ಸಾವಿರ ರೈತರಿದ್ದಾರೆ. ಅವರಲ್ಲಿ ಬೆಳೆ ಹಾನಿಯಾದ 12693 ಎಫ್ಐಡಿಗೆ ಹಣ ಜಮಾ ಆಗಿದೆ. ಕೆಲವು ರೈತರಿಗೆ ಹಣ ಬಂದಿಲ್ಲ. ಅದು ಸರ್ಕಾರದ ಮಟ್ಟದಲ್ಲಿ ಚರ್ಚೆಯಲ್ಲಿದ್ದು ಹಣ ಬರುವ ವಿಶ್ವಾಸ ಇದೆ’ ಎಂದು ನರಗುಂದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗುರುನಾಥ್ ಬಿ.ಎಂ. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT