ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಮ್ಮಿಗಿ | ಮಳೆ ಕೊರತೆ: ಡೆಡ್ ಸ್ಟೋರೇಜ್ ನೀರು ಖಾಲಿ- ಆತಂಕ

ಮಳೆ ಕೊರತೆ: ತುಂಗಾ, ಭದ್ರಾ ಜಲಾಶಯಗಳಲ್ಲಿ ನೀರಿನ ಹರಿವು ಕಡಿಮೆ: ಗದಗ–ಬೆಟಗೇರಿಗೆ ನೀರಿನ ತೊಂದರೆ
ಕಾಶೀನಾಥ ಬಿಳಿಮಗ್ಗದ
Published 18 ಮೇ 2024, 6:38 IST
Last Updated 18 ಮೇ 2024, 6:38 IST
ಅಕ್ಷರ ಗಾತ್ರ

ಮುಂಡರಗಿ: ತಾಲ್ಲೂಕು ಹಾಗೂ ಜಿಲ್ಲೆಯ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸುವ ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿರುವ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜು ಸಂಪೂರ್ಣವಾಗಿ ಖಾಲಿಯಾಗುವ ಹಂತ ತಲುಪಿದ್ದು, ತಕ್ಷಣ ಮಲೆನಾಡು ಹಾಗೂ ಶಿವಮೊಗ್ಗ ಭಾಗದಲ್ಲಿ ಮಳೆಯಾಗದಿದ್ದರೆ ಜಿಲ್ಲೆಯ ಜನತೆ ನೀರಿಗಾಗಿ ಪರದಾಡುವ ಆತಂಕ ಸೃಷ್ಟಿಯಾಗಿದೆ.

ಶಿಂಗಟಾಲೂರ ಏತ ನೀರಾವರಿಯ ಬ್ಯಾರೇಜಿನಿಂದ ಮುಂಡರಗಿ ಪಟ್ಟಣವು ಸೇರಿದಂತೆ ಹೂವಿನಹಡಗಲಿ ಹಾಗೂ ಗದಗ ಜಿಲ್ಲೆಯ ವಿವಿಧ ಪಟ್ಟಣದ ಹಾಗೂ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತದೆ.

ಗದಗ-ಬೆಟಗೇರಿ ನಿರಂತರ ಕುಡಿಯುವ ನೀರು ಯೋಜನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಎಲ್&ಟಿ ಮೊದಲಾದವುಗಳು ಹಮ್ಮಿಗಿ ಗ್ರಾಮದಲ್ಲಿರುವ ಬ್ಯಾರೇಜ್‌ ಅನ್ನು ಸಂಪೂರ್ಣ ಅವಲಂಬಿಸಿವೆ.

ಬ್ಯಾರೇಜಿನಲ್ಲಿ ಬಳಸಿಕೊಳ್ಳಲು ಸಾಧ್ಯವಿದ್ದ ನೀರೆಲ್ಲ ಈಗ ಖಾಲಿಯಾಗಿದ್ದು, ಜಿಲ್ಲಾ ಹಾಗೂ ತಾಲ್ಲೂಕು ಆಡಳಿತಗಳು ಅನ್ಯದಾರಿ ಕಾಣದೆ ಸಧ್ಯ ಬ್ಯಾರೇಜಿನ ಡೆಡ್ ಸ್ಟೋರೇಜ್ ನೀರನ್ನು ಬಳಕೆ ಮಾಡಿಕೊಳ್ಳತೊಡಗಿವೆ.

ನಾಲ್ಕೈದು ದಿನಗಳಲ್ಲಿ ಈಗಿರುವ ನೀರು ಖಾಲಿಯಾಗುವ ಸಾಧ್ಯತೆ ಇದ್ದು, ಮುಂದೇನು ಎನ್ನುವ ಪ್ರಶ್ನೆ ಅಧಿಕಾರಿಗಳನ್ನು ಕಾಡುತ್ತಲಿದೆ.

ಪ್ರಸ್ತುತ ಬೇಸಿಗೆಯಲ್ಲಿ ಎರಡು ಬಾರಿ ಬ್ಯಾರೇಜು ಖಾಲಿಯಾಗಿತ್ತು. ಅದು ಖಾಲಿಯಾದ ಸಂದರ್ಭದಲ್ಲಿ ಸಂಬಂಧಪಟ್ಟ ಗದಗ ಜಿಲ್ಲೆಯ ಅಧಿಕಾರಿಗಳು ಭದ್ರಾ ಜಲಾಶಯದಿಂದ 2ಟಿಎಂಸಿಯಂತೆ ಎರಡು ಬಾರಿ ತುಂಗಭದ್ರಾ ನದಿಗೆ ನೀರನ್ನು ಬಿಡಿಸಿಕೊಂಡಿದ್ದರು.

ಭದ್ರಾ ಜಲಾಶಯದಿಂದ ಬಂದ ನೀರೆಲ್ಲ ಈಗ ಖಾಲಿಗಾಗಿದ್ದು, ತುಂಗಭದ್ರಾ ನದಿಗೆ ನೀರು ಹರಿಸಲು ಭದ್ರಾ ಜಲಾಶಯದಲ್ಲಿಯೂ ಈಗ ಸಾಕಷ್ಟು ನೀರಿಲ್ಲ ಎಂದು ಹೇಳಲಾಗುತ್ತದೆ.

ನೀರಿನ ತೊಂದರೆ ನಿವಾರಿಸುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ತಾಲ್ಲೂಕು ಆಡಳಿತವು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಪಟ್ಟಣಕ್ಕೆ ನೀರು ಪೂರೈಸುವ ಸಲುವಾಗಿ 7-8 ಕೊಳವೆ ಬಾವಿಗಳನ್ನು ಬಾಡಿಗೆ ಪಡೆದುಕೊಳ್ಳಲಾಗಿದೆ. ಜೊತೆಗೆ ಪಟ್ಟಣವು ಸೇರಿದಂತೆ ಬಹುತೇಕ ಗ್ರಾಮೀಣ ಭಾಗಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಲಿವೆ.

'ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜು ಭಾಗಶಃ ಖಾಲಿಯಾಗುವ ಹಂತಕ್ಕೆ ಬಂದಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಬ್ಯಾರೇಜಿಗೆ ಭೇಟಿ ನೀಡಿ ಎಲ್ಲವನ್ನೂ ಪರಿಶೀಲಿಸಿದ್ದಾರೆ. ಇಲಾಖೆಯ ಅಧಿಕಾರಿಗಳು ನಿತ್ಯ ಜಿಲ್ಲೆಯ ಜನತೆಗೆ ಶತಾಯ, ಗತಾಯ ನೀರು ಪೂರೈಸಲು ಪ್ರಯತ್ನಿಸುತ್ತಿದ್ದಾರೆ. ಮಲೆನಾಡು ಭಾಗದಲ್ಲಿ ಮಳೆಯಾದರೆ ನೀರಿನ ಕೊರತೆ ನಿವಾರಣೆಯಾಗಲಿದೆ' ಎಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಯೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.

ಬ್ಯಾರೇಜಿನ ಡೆಡ್ ಸ್ಟೋರೇಜ್ ಖಾಲಿಯಾಗುವ ಹಂತ ತಲುಪಿದ್ದು, ಅಧಿಕಾರಿಗಳು ಹರಸಾಹಸ ಪಟ್ಟು ಬ್ಯಾರೇಜಿನ ಹತ್ತಿರದ ಜಾಕ್‌ವೆಲ್‍ಗಳಿಗೆ ನೀರು ಹರಿಸುತ್ತಿದ್ದಾರೆ. ಹಮ್ಮಿಗಿ ಗ್ರಾಮದ ಬಳಿ ಗದಗ-ಬೆಟಗೇರಿಗೆ ನೀರು ಪೂರೈಸುವ ಜಾಕ್‍ವೆಲ್ ಬಳಿಯ ಕಾಲುವೆಯು ಸಂಪೂರ್ಣವಾಗಿ ಹೂತು ಹೋಗಿದೆ.

ಕಳೆದ 5 ದಿನಗಳಿಂದ ತಲಾ 10 ಅಶ್ವಶಕ್ತಿಯ 13 ಮೋಟಾರ್‌ (ಪಂಪ್‌ಸೆಟ್‌)ಗಳ ನೆರವಿನಿಂದ ಬ್ಯಾರೇಜ್‍ನಲ್ಲಿರುವ ಡೆಡ್ ಸ್ಟೋರೇಜ್ ನೀರನ್ನು ಕಾಲುವೆಗೆ ಹರಿಸಲಾಗುತ್ತದೆ. ಕಾಲುವೆ ಮೂಲಕ ನೀರು ಜಾಕ್‍ವೆಲ್ ತಲುಪುತ್ತಲಿದೆ.

ಜಾಕ್‍ವೆಲ್‍ಗೆ ಸಂಪರ್ಕ ಕಲ್ಪಿಸುವ ಕಾಲುವೆಯು ಸಂಪೂರ್ಣವಾಗಿ ಹೂತು ಹೋಗಿದ್ದು, ಕಳೆದ 5 ದಿನಗಳಿಂದ ಬೃಹತ್ ಜೆಸಿಬಿ ಹಾಗೂ ಮತ್ತಿತರ ಯಂತ್ರಗಳ ನೆರವಿನಿಂದ ಕಾಲುವೆಯ ಹೂಳನ್ನು ತೆರವುಗೊಳಿಸಲಾಗುತ್ತಿದೆ.

ಬ್ಯಾರೇಜ್ ಬಳಿಯ ಜಾಕ್‍ವೆಲ್‍ನಲ್ಲಿರುವ ಮೋಟರ್‌ಗಳಿಗೆ ನೀರು ಸಾಲದೇ ಇರುವುದರಿಂದ ಪಕ್ಕದ ಗುಮ್ಮಗೋಳ ಗ್ರಾಮದ ಬಳಿ ಇರುವ ಹಳ್ಳಕ್ಕೆ ತಾತ್ಕಾಲಿಕವಾಗಿ ಕಿರು ಕಾಲುವೆ ನಿರ್ಮಿಸಿ ಹಳ್ಳದ ನೀರನ್ನು ಜಾಕ್ವೆಲ್‍ಗೆ ಹರಿಸಲಾಗುತ್ತದೆ.

ಪಟ್ಟಣದ ಹಾಗೂ ತಾಲ್ಲೂಕಿನ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಕುರಿತಂತೆ ಈಗಾಗಲೇ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ
ಧನಂಜಯ್ ಮಾಲಗತ್ತಿ, ತಹಶೀಲ್ದಾರ್ ಮುಂಡರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT