ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೇಶ್ವರ | ಬರ: ಮುಂಗಾರು, ಹಿಂಗಾರು ಬೆಳೆ ಹಾಳು

Published 25 ನವೆಂಬರ್ 2023, 4:41 IST
Last Updated 25 ನವೆಂಬರ್ 2023, 4:41 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಈ ಬಾರಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದು, ಈಗಾಗಲೇ ಬಿತ್ತನೆಯಾಗಿದ್ದ ಮುಂಗಾರು ಬೆಳೆಗಳು ಸಂಪೂರ್ಣ ಒಣಗಿದ್ದು, ಸಾಲಸೋಲ ಮಾಡಿ ಬಿತ್ತನೆ ಮಾಡಿದ್ದ ರೈತರು ಆರ್ಥಿಕ ಸಂಷಕ್ಟಕ್ಕೆ ಸಿಲುಕಿದ್ದಾರೆ.

ವಿಶೇಷವಾಗಿ ತಾಲ್ಲೂಕಿನಲ್ಲಿ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಹತ್ತಾರು ಬೆಳೆಗಳನ್ನು ಬೆಳೆಯುವ ಪದ್ಧತಿ ರೂಢಿಯಲ್ಲಿದೆ. ಪ್ರಸ್ತುತ ವರ್ಷ ನೀರಾವರಿ ಆಶ್ರಿತ 3,800 ಹೆಕ್ಟೇರ್‌ನಲ್ಲಿ ಏಕದಳ ಧಾನ್ಯವಾದ ಗೋವಿನಜೋಳ ಬೆಳೆಯುವ ಗುರಿ ಇತ್ತು. ಅದರಲ್ಲಿ 1,890 ಹೆಕ್ಟೇರ್ ಬಿತ್ತನೆಯಾಗಿದೆ. 

ಇನ್ನು ದ್ವಿದಳ ಧಾನ್ಯಗಳನ್ನು ಪ್ರಮುಖವಾಗಿ 190 ಹೆಕ್ಟೇರ್‌ನಲ್ಲಿ ತೊಗರಿ, 25 ಹೆಕ್ಟೇರ್ ಉದ್ದು, 4,800 ಹೆಕ್ಟೇರ್ ಹೆಸರು, 15 ಹೆಕ್ಟೇರ್ ಅಲಸಂದಿ, 5 ಹೆಕ್ಟೇರ್ ಅವರೆ ಸೇರಿ 1,445 ಹೆಕ್ಟೇರ್‌ನಲ್ಲಿ ದ್ವಿದಳ ಧಾನ್ಯಗಳ ಬಿತ್ತನೆಯಾಗಿದ್ದು, ಏಕದಳ ಮತ್ತು ದ್ವಿದಳ ಧಾನ್ಯ ಎರಡೂ ಸೇರಿ ಒಟ್ಟು 24,645 ಹೆಕ್ಟೇರ್‌ನಲ್ಲಿ ಆಹಾರ ಧಾನ್ಯಗಳನ್ನು ಬಿತ್ತನೆ ಮಾಡಲಾಗಿದೆ.

ಎಣ್ಣೆಕಾಳು ಬೆಳೆಗಳಲ್ಲಿ ಪ್ರಮುಖವಾದ ಶೇಂಗಾವನ್ನು 8,200 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡುವ ಗುರಿ ಇತ್ತು. ಆದರೆ ಅದರಲ್ಲಿ ಕೇವಲ 3,620 ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ. ಉಳಿದಂತೆ 35 ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ, 125 ಹೆಕ್ಟೇರ್ ಗುರೆಳ್ಳು, 62 ಹೆಕ್ಟೇರ್ ಸೋಯಾಬಿನ್ ಸೇರಿ ಒಟ್ಟು 3,807 ಹೆಕ್ಟೇರ್‌ನಲ್ಲಿ ಎಣ್ಣೆಕಾಳು ಬೀಜ ಬಿತ್ತನೆ ಆಗಿದೆ.

ವಾಣಿಜ್ಯ ಬೆಳೆಯಾದ ಕಬ್ಬು, ಹತ್ತಿ ಸೇರಿ 8,755 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡುವ ಗುರಿ ಹಾಕಿಕೊಳ್ಳಲಾಗಿತ್ತು. ಅದರಲ್ಲಿ ನೀರಾವರಿ ಮತ್ತು ಖುಷ್ಕಿ ಸೇರಿ 8,200 ಹೆಕ್ಟೇರ್‌ನಲ್ಲಿ ಹತ್ತಿ ಬೆಳೆಯುವ ಗುರಿ ಇತ್ತು. ಆದರೆ ಕೇವಲ 1,665 ಹೆಕ್ಟೇರ್ ಬಿತ್ತನೆಯಾಗಿದೆ. ಇನ್ನು 555 ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯುವ ಗುರಿ ಇತ್ತು. ಆದರೆ ಎರಡೂ ಸೇರಿ 1,790 ಹೆಕ್ಟೇರ್‌ನಲ್ಲಿ ಮಾತ್ರ ಆಗಿದೆ. ಆದರೆ ಮಳೆರಾಯನ ಅವಕೃಪೆಯಿಂದಾಗಿ ಶೇ 80ರಷ್ಟು ಮುಂಗಾರು ಹಾನಿ ಆಗಿದೆ.

ಈಚಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ತೋಟಗಾರಿಕೆ ಬೆಳೆ ಕ್ಷೇತ್ರ ವಿಸ್ತೀರ್ಣವಾಗುತ್ತಿದೆ. ಸದ್ಯ 4 ಸಾವಿರ ಹೆಕ್ಟೇರ್‌ನಲ್ಲಿ ತೋಟಗಾರಿಕೆ ಬೆಳೆಗಳಾದ ಹಣ್ಣು ತರಕಾರಿ, ಮೆಣಸಿನಕಾಯಿ, ಈರುಳ್ಳಿ, ತೆಂಗು, ವೀಳ್ಯದೆಲೆಯನ್ನು ರೈತರು ಬೆಳೆಯುತ್ತಿದ್ದಾರೆ. ಮಳೆ ಮತ್ತು ತೇವಾಂಶದ ಕೊರತೆಯಿಂದಾಗಿ ನಾಲ್ಕು ಸಾವಿರ ಹೆಕ್ಟೇರ್‌ನಲ್ಲಿ 2,500 ಹೆಕ್ಟೇರ್ ಬೆಳೆ ನಾಶವಾಗಿದ್ದು ತೋಟಪಟ್ಟಿ ರೈತರೂ ಕೂಡ ನಲುಗುತ್ತಿದ್ದಾರೆ.

ಪ್ರಮುಖವಾಗಿ ಕೆಂಪು ಬಂಗಾರ ಎಂದೇ ಕರೆಯಲಾಗುವ ಮೆಣಸಿನಕಾಯಿ ಹಿಂಗಾರಿನ ಮುಖ್ಯ ಬೆಳೆ. ಈ ಬಾರಿ 2,500 ಹೆಕ್ಟೇರ್‌ನಲ್ಲಿ ಇದನ್ನು ಬೆಳೆಯಲಾಗಿದೆ. ಆದರೆ ಮಳೆಯ ಹಿನ್ನಡೆಯಿಂದಾಗಿ ತೇವಾಂಶದ ಕೊರತೆ ಉಂಟಾಗಿ ಶೇ 80ಕ್ಕೂ ಹೆಚ್ಚು ಬೆಳೆ ನಾಶವಾಗಿದೆ. ಆರಂಭದಲ್ಲಿ ಉತ್ತಮ ತೇವಾಂಶದಿಂದಾಗಿ ಗಿಡಗಳು ಚೆನ್ನಾಗಿ ಬೆಳೆದಿದ್ದವು. ಆದರೆ ಹೂ ಬಿಟ್ಟು ಕಾಯಿ ಕಟ್ಟುವ ವೇಳೆ ಮಳೆಯೇ ಆಗಲಿಲ್ಲ. ಹೀಗಾಗಿ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತರಿಗೆ ಮೆಣಸಿನಕಾಯಿ ಭಾರಿ ಹೊಡೆತ ನೀಡಿದೆ. ಹೇಗಾದರೂ ಬೆಳೆಯನ್ನು ಉಳಿಸಿಕೊಳ್ಳಬೇಕು ಎಂಬ ಉದ್ಧೇಶದಿಂದ ತಾಲ್ಲೂಕಿನ ಬಹುತೇಕ ರೈತರು ಕೃಷಿಹೊಂಡ, ಊರ ಮುಂದಿನ ಕೆರೆ ನೀರನ್ನು ಟ್ಯಾಂಕರ್‌ನಿಂದ ಕೊಟ್ಟಿದ್ದರು. ಮೆಣಸಿನಕಾಯಿ ಬೆಳೆಯಲು ರೈತರು ಎಕರೆಗೆ ಸಾವಿರಾರು ಖರ್ಚು ಮಾಡಿದ್ದಾರೆ. 

ಮುಂಗಾರು ಕೈಕೊಟ್ಟರೂ ಹಿಂಗಾರು ಮಳೆ ಆಗುತ್ತದೆ ಎಂಬ ನಂಬಿಕೆ ರೈತರಲ್ಲಿತ್ತು. ಆದರೆ ಅದೂ ಹುಸಿಯಾಗಿದೆ. ವಿಶೇಷವಾಗಿ ಹಿಂಗಾರಿನಲ್ಲಿ ಗೋಧಿ, ಬಿಳಿಜೋಳ, ಕುಸುಬಿ, ಕಡಲೆ ಬೆಳೆಯುವುದು ಸಾಂಪ್ರದಾಯವಾಗಿ ನಡೆದು ಬಂದಿದೆ. ಸದ್ಯ ಹಿಂಗಾರು ಬಿತ್ತನೆಗೆ ಸಕಾಲವಾಗಿದ್ದರೂ ಕೂಡ ಈವರೆಗಾದರೂ ಉತ್ತಮ ಮಳೆಯಾಗಿಲ್ಲ. ಹೀಗಾಗಿ ನಿರೀಕ್ಷಿಸಿದ ಪ್ರಮಾಣದಲ್ಲಿ ಹಿಂಗಾರು ಬಿತ್ತನೆ ನಡೆದಿಲ್ಲ. ಈಗಲೂ ಚೆನ್ನಾಗಿ ಮಳೆಯಾದರೆ ರೈತರು ಹಿಂಗಾರು ಬಿತ್ತಲು ತುದಿಗಾಲಲ್ಲಿದ್ದಾರೆ.

ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಈ ವರ್ಷ 32348 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಮುಂಗಾರು ಬೆಳೆ ನಾಶವಾಗಿದೆ. ಅಲ್ಲದೆ ಮಳೆ ಇಲ್ಲದ ಕಾರಣ ಹಿಂಗಾರು ಸರಿಯಾಗಿ ಬಿತ್ತನೆಯಾಗಿಲ್ಲ.
ರೇವಣೆಪ್ಪ ಮನಗೂಳಿ, ಸಹಾಯಕ ಕೃಷಿ ನಿರ್ದೇಶಕ
ಪ್ರಸ್ತುತ ಸಾಲಿನಲ್ಲಿ ಮಳೆ ಕೊರತೆಯಿಂದಾಗಿ ಶೇ 80ರಷ್ಟು ತೊಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಮುಂದಿನ ದಿನಗಳಲ್ಲಿ ಅಂತರ್ಜಲ ಕುಸಿಯುವ ಭೀತಿ ಇದ್ದು ಇನ್ನೂ ತೋಟಗಾರಿಕೆಗೆ ಹೊಡೆತ ಬೀಳುವ ನಿರೀಕ್ಷೆ ಇದೆ.
ಸುರೇಶ ಕುಂಬಾರ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ
ಈ ವರ್ಷ ಮುಂಗಾರು ಮತ್ತು ಹಿಂಗಾರು ಬೆಳೆಗಳು ಹಾಳಾಗಿದ್ದು ಸಾಲಸೋಲ ಮಾಡಿ ಬಿತ್ತಿದ್ದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಅವರಿಗೆ ಸೂಕ್ತ ಪರಿಹಾರ ನೀಡಬೇಕು
ಮಹೇಶ ಹೊಗೆಸೊಪ್ಪಿನ, ಅಧ್ಯಕ್ಷ, ತಾಲ್ಲೂಕು ಪಕ್ಷಾತೀತ ರೈತಪರ ಹೋರಾಟಗಾರರು ಲಕ್ಷ್ಮೇಶ್ವರ
ಈ ವರ್ಷ ಮಳೆ ಆಗದೆ ಎಲ್ಲ ಬೆಳೆಗಳೂ ಹಾಳಾಗಿ ಹೋಗಿವೆ. ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ. ತಕ್ಷಣವರಿಗೆ ಬೆಳೆ ಹಾನಿ ಪರಿಹಾರ ಬೆಳೆ ವಿಮೆ ಪರಿಹಾರ ನೀಡಬೇಕು
ಚನ್ನಪ್ಪ ಷಣ್ಮುಖಿ, ಅಧ್ಯಕ್ಷ, ತಾಲ್ಲೂಕು ಕೃಷಿ ಸಮಾಜ ಗೊಜನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT