ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೇಶ್ವರ: ಶೆಟ್ಟಿಕೇರಿ ಕೆರೆಯಲ್ಲಿ ಮೀನು ಸಾಕಣೆ ಜೋರು

234 ಎಕರೆ ವಿಸ್ತೀರ್ಣದ ಕೆರೆ ಸದ್ಯ ಸಂಪೂರ್ಣ ಭರ್ತಿ; ಸಂಘಕ್ಕೆ ₹5ರಿಂದ ₹6 ಲಕ್ಷ ಲಾಭ
Last Updated 14 ಡಿಸೆಂಬರ್ 2021, 4:19 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ತಾಲ್ಲೂಕಿನಲ್ಲಿಯೇ ಅತ್ಯಂತ ವಿಶಾಲವಾಗಿರುವ ಸಮೀಪದ ಶೆಟ್ಟಿಕೇರಿ ಕೆರೆಯಲ್ಲಿ ಮೀನು ಸಾಕಣೆ ಜೋರಾಗಿದೆ. 234 ಎಕರೆ ವಿಸ್ತೀರ್ಣದ ಕೆರೆ ಸದ್ಯ ಸಂಪೂರ್ಣ ಭರ್ತಿಯಾಗಿದೆ. ಈ ಕೆರೆ ಮೀನು ಸಾಕಣೆಗೆ ಯೋಗ್ಯವಾಗಿದೆ.

ಮೂರು ವರ್ಷಗಳ ಹಿಂದೆ ಮಳೆ ಇಲ್ಲದೇ ಕೆರೆ ಸಂಪೂರ್ಣವಾಗಿ ಬತ್ತಿತ್ತು. ಆಗ ಮೀನು ಸಾಕಣೆಯೂ ಬಂದ್ ಆಗಿತ್ತು. ಆದರೆ ಸತತ ಮೂರು ವರ್ಷಗಳಿಂದ ಉತ್ತಮ ಮಳೆ ಆಗುತ್ತಿರುವುದರಿಂದ ಕೆರೆ ತುಂಬಿದೆ.

ಶೆಟ್ಟಿಕೇರಿ ಗ್ರಾಮದ ಗೋರಬಂಜಾರ ಮೀನುಗಾರರ ಸಹಕಾರಿ ಸಂಘದ ವತಿಯಿಂದ ಕೆರೆ ತುಂಬಿದಾಗ ಮೀನು ಸಾಕಣೆ ಮಾಡಲಾಗುತ್ತಿದೆ.

‘ಮೀನುಗಳ್ಳರು ಕೆರೆಗೆ ನುಗ್ಗಬಾರದು ಎಂಬ ಉದ್ದೇಶದಿಂದ ಪ್ರತಿದಿನ ಆರು ಕೂಲಿಯಾಳುಗಳು ಕೆರೆಯನ್ನು ಕಾಯುತ್ತಿದ್ದಾರೆ. ಹಗಲು ಇಬ್ಬರು ಮತ್ತು ರಾತ್ರಿ ವೇಳೆಯಲ್ಲಿ ನಾಲ್ಕು ಜನರು ಕೆರೆ ಕಾಯುತ್ತಾರೆ’ ಎಂದು ದೀಪಕ್‌ ಹೇಳಿದರಲ್ಲದೆ, ‘ಮೀನುಗಾರಿಕೆ ಇಲಾಖೆಗೆ ಸಂಘದ ವತಿಯಿಂದ ₹80 ಸಾವಿರ ರಾಜಸ್ವ ತುಂಬುತ್ತಿದ್ದೇವೆ. ಆದರೆ ಮೀನುಗಾರರಿಗೆ ನಷ್ಟ ಉಂಟಾದಾಗ ಇಲಾಖೆ ನಮ್ಮ ಸಹಾಯಕ್ಕೆ ಬರುವುದಿಲ್ಲ’ ಎಂದು ಅಳಲು ತೋಡಿಕೊಂಡರು.

ಕೆರೆಗೆ ಮೀನಿನ ಮರಿಗಳನ್ನು ಬಿಟ್ಟ ಎರಡು ತಿಂಗಳ ನಂತರ ಹರಿಗೋಲುಗಳಲ್ಲಿ ತೆರಳಿ ಮೀನಿನ ಮರಿಗಳಿಗೆ ಸಾಕಣೆದಾರರು ಆಹಾರ ನೀಡುತ್ತಾರೆ. ಹತ್ತು ತಿಂಗಳ ನಂತರ ಮೀನು ಮಾರಾಟಕ್ಕೆ ಸಿದ್ಧವಾಗುತ್ತವೆ. ನಂತರ ಹರಾಜಿನ ಮೂಲಕ ಮೀನು ಮಾರಾಟ ಶುರುವಾಗುತ್ತದೆ. ಮೀನು ಸಾಕಣೆಯಿಂದ ವರ್ಷವೊಂದರಲ್ಲಿ ಸಂಘಕ್ಕೆ ₹5ರಿಂದ ₹6 ಲಕ್ಷ ಲಾಭ ಬರುತ್ತದೆ. ಸಂಘದಲ್ಲಿ ಒಟ್ಟು 180 ಜನ ಸದಸ್ಯರು ಇದ್ದಾರೆ.

ಶೆಟ್ಟಿಕೇರಿ ಕೆರೆ ಮೀನಿಗೆ ಈ ಭಾಗದಲ್ಲಿ ಬಹು ಬೇಡಿಕೆ ಇದೆ. ಹೀಗಾಗಿ ಮೀನು ಮಾರಾಟದಿಂದಲೇ ಹತ್ತಾರು ಕುಟುಂಬಗಳ ಬದುಕಿನ ಬಂಡಿ ನಡೆಯುತ್ತಿದೆ.

13 ಲಕ್ಷ ಮೀನಿನ ಮರಿಗಳು
ಈ ವರ್ಷ ಶಿವಮೊಗ್ಗ ಹಾಗೂ ಆಂಧ್ರದ ವಿಜಯವಾಡಗಳಿಂದ ತರಿಸಿರುವ ₹15 ಲಕ್ಷ ಕಿಮ್ಮತ್ತಿನ ಅಂದಾಜು 13 ಲಕ್ಷ ಮೀನಿನ ಮರಿಗಳನ್ನು ಎರಡು ತಿಂಗಳ ಹಿಂದೆಯೇ ಸಾಕಣೆಗಾಗಿ ಕೆರೆಗೆ ಬಿಡಲಾಗಿದೆ ಎಂದು ಸಂಘದ ಅಧ್ಯಕ್ಷ ದೀಪಕ್‌ ಲಮಾಣಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT