ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ | ಬೆವರು ಸುರಿಸಿದವರಿಗೆ ಭೂತಾಯಿ ಪ್ರತಿಫಲ

ಗದಗ ಉತ್ಸವ: ಉದ್ಯಮಶೀಲತೆ ಸಂವಾದ ಕಾರ್ಯಕ್ರಮದಲ್ಲಿ ಕವಿತಾ ಮಿಶ್ರಾ
Published 13 ಸೆಪ್ಟೆಂಬರ್ 2023, 5:59 IST
Last Updated 13 ಸೆಪ್ಟೆಂಬರ್ 2023, 5:59 IST
ಅಕ್ಷರ ಗಾತ್ರ

ಗದಗ: ‘ಭೂಮಿತಾಯಿ ನಂಬಿದವರನ್ನು ಎಂದಿಗೂ ಕೈ ಬಿಡುವುದಿಲ್ಲ. ಮಣ್ಣು ಕೇವಲ ಮಣ್ಣಲ್ಲ. ಅದು ಅನ್ನ; ಅಪ್ಪಟ ಚಿನ್ನ. ಬೆವರು ಸುರಿಸಿ, ಮೈಮುರಿದು ಕೆಲಸ ಮಾಡಿದಲ್ಲಿ ಭೂಮಿತಾಯಿ ಪ್ರತಿಫಲ ನೀಡುವಳು. ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ... ಎಂಬ ಮಾತು ಸತ್ಯ. ಆದಕಾರಣ, ನಾವಿಂದು ಕೃಷಿಗೆ ಹೆಚ್ಚಿನ ಒತ್ತು ನೀಡಬೇಕಿದೆ’ ಎಂದು ರೈತ ಸಾಧಕ ಮಹಿಳೆ ಕವಿತಾ ಉಮಾಶಂಕರ ಮಿಶ್ರಾ ಹೇಳಿದರು.

ನಗರದ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಗ್ರಾಮೀಣ ಮತ್ತು ಸಣ್ಣ ಉದ್ಯಮ ವಿಭಾಗ ಹಾಗೂ ಗದಗ ಜಿಲ್ಲಾ ಪಂಚಾಯ್ತಿ ಆಶ್ರಯದಲ್ಲಿ ನಡೆದಿರುವ ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟದ ‘ಗದಗ ಉತ್ಸವ’ದಲ್ಲಿ ಮಹಿಳಾ ಘಟಕದ ವತಿಯಿಂದ ಏರ್ಪಡಿಸಿದ್ದ ಉದ್ಯಮಶೀಲತೆಯ ಕುರಿತು ಸಂವಾದ ಕಾರ್ಯಕ್ರಮ ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

‘ಹೆಣ್ಣು ಮಕ್ಕಳು ಸಾಧಿಸಬೇಕೆಂಬ ಛಲದ ಕಿಡಿ ಹೊತ್ತಿಸಿ ಕೊಂಡಿದ್ದೇ ಆದಲ್ಲಿ ಅವರು ಗುರಿ ತಲುಪುವವರೆಗೂ ಬಿಡಲಾರರು. ಇದನ್ನು ಇತಿಹಾಸದ ಪುಟಗಳಲ್ಲೂ ಕಾಣಬಹುದು. ಆಧುನಿಕ ದಿನಗಳಲ್ಲಿ ಮಹಿಳೆಯರು ಎಷ್ಟೇ ಶಿಕ್ಷಣ ಪಡೆದರೂ ಮದುವೆಯ ನಂತರ ಗೃಹಣಿಯಾಗಿ ಕುಟುಂಬಕ್ಕೆ ಸೀಮಿತಗೊಳ್ಳುತ್ತಿದ್ದಾಳೆ. ಇಲ್ಲವೇ ಯಾವುದಾದರೂ ಒಂದು ಉದ್ಯೋಗದಲ್ಲಿ ಅಲ್ಪ ಸಂಬಳಕ್ಕೆ ದುಡಿಯುತ್ತಾಳೆ. ಕೋವಿಡ್‌–19 ಸಂದರ್ಭದಲ್ಲಿ ಜನಜೀವನ ತೀವ್ರ ಸಂಕಷ್ಟಕ್ಕೆ ಒಳಗಾಯಿತು. ಆದರೂ ರೈತ ಹೊಲ, ಗದ್ದೆ, ತೋಟಗಳಲ್ಲಿ ಹಗಲಿರುಳು ದುಡಿದು ಜಗತ್ತಿಗೆ ಅನ್ನ ಹಾಕಿದ’ ಎಂದು ತಿಳಿಸಿದರು.

‘ಯುವಜನರು ಅದರಲ್ಲೂ ವಿಶೇಷವಾಗಿ ಕೃಷಿ ಅಧ್ಯಯನ ಮಾಡಿದವರು, ಉನ್ನತ ಪದವಿ ಹೊಂದಿದವರು ಕೃಷಿಯ ಬಗ್ಗೆ ಆಸಕ್ತಿ ಹೊಂದಬೇಕು. ಈ ನಿಟ್ಟಿನಲ್ಲಿ ನಾನು ಕೃಷಿಯಲ್ಲಿ ಆಸಕ್ತಿ ತೋರಿಸಿದಾಗ ಗಂಡನ ಮನೆಯಿಂದ ಸಹಕಾರ ದೊರೆಯಿತಾದರೂ ಸಾಧನೆಯ ಹಂತದಲ್ಲಿರುವಾಗ ವಿಫಲತೆ ಅನುಭವಿಸಿದೆ. ಕೊಳವೆಬಾವಿ ಹಾಕುತ್ತ ಬಂದರೂ ಪ್ರತಿ ಸಲವೂ ಜಲ ಕೈಕೊಟ್ಟಿತು. ಕೈಯಲ್ಲಿರುವ ಹಣ, ಮೈಮೇಲಿರುವ ಚಿನ್ನಾಭರಣವೂ ಖಾಲಿಯಾಯಿತು. ಕೊನೆಗೆ ಮಣ್ಣನ್ನು ಗಟ್ಟಿಯಾಗಿ ಹಿಡಿದುಕೊಂಡು ಕಳೆದುಕೊಂಡಿದ್ದೇ ಹೆಚ್ಚು; ಉಳಿದದ್ದು ಏನಿಲ್ಲ. ನೀರು ಬಿದ್ದರೆ ನನ್ನ ಗೆಲವು, ಸೋತರೆ ನಿನ್ನ ಸೋಲು ಎಂದು ಪ್ರಾರ್ಥಿಸಿದೆ. ಗಂಗಾಮಾತೆ ಒಲಿದಳು, ಭೂಮಿತಾಯಿ ಕೈಹಿಡಿದಳು’ ಎಂದು ಹೇಳಿದರು.

‘ಇಂದು 8 ಎಕರೆ 10 ಗುಂಟೆ ಜಮೀನು ಮೈದುಂಬಿಕೊಂಡು ನಿಂತಿದೆ. ಕುರಿ, ಕೋಳಿ ಸಾಕಾಣೆ ಪ್ರಗತಿಯಲ್ಲಿದೆ. ವಿವಿಧ ರಾಜ್ಯಗಳು, ದೇಶಗಳಿಗೂ ರಫ್ತು ವಹಿವಾಟು ನಡೆಸುತ್ತಿರುವೆ. ಹೀಯಾಳಿಸಿ, ಅವಮಾನ ಮಾಡಿದವರು ನನ್ನನ್ನು ಕರೆಯಿಸಿ ಸನ್ಮಾನ ಮಾಡುತ್ತಿದ್ದಾರೆ. ಹತ್ತು ಹಲವು ಪ್ರಶಸ್ತಿಗಳು ಬಂದಿವೆ. ಇದೆಲ್ಲವೂ ರೈತ ಮಹಿಳೆಯರಿಗೆ ಸಲ್ಲಬೇಕು’ ಎಂದು ತಿಳಿಸಿದರು.

ಸಾಧಕ ಮಹಿಳೆ ಕವಿತಾ ಮಿಶ್ರಾ ಅವರು ಲಕ್ಷಾಂತರ ಮಹಿಳೆಯರಿಗೆ ಆದರ್ಶ ಮತ್ತು ಸ್ಪೂರ್ತಿಯಾಗಿದ್ದಾರೆ. ಪ್ರತಿ ರೈತ ಮಹಿಳೆಯೂ ಅವರ ರೀತಿಯಲ್ಲಿ ಸಾಧನೆ ಮಾಡಬೇಕು.
ಜಯಶ್ರೀ ತಾತನಗೌಡ ಪಾಟೀಲ, ಮಹಿಳಾ ಘಟಕದ ಅಧ್ಯಕ್ಷೆ

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಗದಗ ಪ್ರಾದೇಶಿಕ ಕಚೇರಿಯ ಪ್ರಬಂಧಕ ಪ್ರಕಾಶ ಎ., ಹುಲಕೋಟಿಯ ಗ್ರಾಮೀಣ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಪಂಚಾಕ್ಷರಿ ಹೊಸಮನಿ, ಧಾರವಾಡ ಸಿಡಾಕ್ ಜಂಟಿ ನಿರ್ದೇಶಕ ಸಿ.ಎಚ್.ಅಂಗಡಿ, ಗದಗ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಪುತ್ರಪ್ಪ ಹರಿಜನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಮದುಸೂಧನ ಪುಣೇಕರ, ಗದಗ ಉತ್ಸವ ಚೇರಮನ್ ಚಂದ್ರು ಬಾಳಿಹಳ್ಳಿಮಠ ಮಾತನಾಡಿದರು.

ಉಪಾಧ್ಯಕ್ಷೆ ಶೋಭಾ ಸಂಶಿಮಠ, ನೀಲಾಂಬಿಕಾ ತೋಟದ, ವೀಣಾ ಪೊತ್ನೀಸ್, ಗೌರವ ಕಾರ್ಯದರ್ಶಿ ಸುವರ್ಣಾ ಮದರಿಮಠ, ಪ್ರಭಾ ಗದಗ, ಸುರೇಖಾ ಮಲ್ಲಾಡದ, ಕೋಶಾಧ್ಯಕ್ಷೆ ಜ್ಯೋತಿ ದಾನಪ್ಪಗೌಡ್ರ, ರಾಜಣ್ಣ ಗುಡಿಮನಿ, ಸದಾಶಿವಯ್ಯ ಮದರಿಮಠ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕ್ಷಿತಿ ಸುಲಾಖೆ ಪ್ರಾರ್ಥಿಸಿದರು. ನಂದಾ ಬಾಳಿಹಳ್ಳಿಮಠ ನಿರೂಪಿಸಿದರು. ಸುವರ್ಣಾ ಮದರಿಮಠ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT