ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಹಟ್ಟಿ: ಫ್ಲೋರೈಡ್‌ಯುಕ್ತ ನೀರೇ ಗ್ರಾಮಗಳಿಗೆ ಆಧಾರ

ನಿಂಗಪ್ಪ ಹಮ್ಮಿಗಿ
Published 4 ಮಾರ್ಚ್ 2024, 5:03 IST
Last Updated 4 ಮಾರ್ಚ್ 2024, 5:03 IST
ಅಕ್ಷರ ಗಾತ್ರ

ಶಿರಹಟ್ಟಿ: ರಾಜ್ಯದ ಪ್ರತಿಯೊಂದು ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ವ್ಯಕ್ತಿಯೂ ಶುದ್ಧ ನೀರನ್ನು ಕುಡಿದು ಆರೋಗ್ಯಯುತ ಜೀವನ ನಡೆಸಲು ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡಿದೆ. ತಾಲ್ಲೂಕಿನ ವಿವಿಧೆಡೆ ಪ್ರಾರಂಭಿಸಲಾದ ಘಟಕಗಳ ಪೈಕಿ ಸದ್ಯ ಬೆರಳೆಣಿಕೆಯಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿರುವುದು ಇಲಾಖೆಯ ನಿಷ್ಕಾಳಜಿಗೆ ಕೈಗನ್ನಡಿ ಹಿಡಿದಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಮಾಜದ ಕಟ್ಟಕಡೆಯ ವ್ಯಕ್ತಿಯು ಶುದ್ಧ ನೀರಿನ ಸೇವನೆ ಮಾಡಬೇಕೆಂಬ ಉದ್ದೇಶದಿಂದ ಪ್ರಾರಂಭವಾದ ಈ ಯೋಜನೆಗೆ ಸರ್ಕಾರ ಲಕ್ಷಗಟ್ಟಲೆ ಅನುದಾನ ಒದಗಿಸುತ್ತಿದೆ. ಆದರೆ, ತಾಲ್ಲೂಕಿನ ಬಹುತೇಕ ಗ್ರಾಮಗಳ ಶುದ್ಧ ನೀರಿನ ಘಟಕಗಳು ದುರಸ್ತಿಯಲ್ಲಿದ್ದು, ಶುದ್ಧ ನೀರಿಗಾಗಿ ಜನರು ಪರಿತಪಿಸುವಂತಾಗಿದೆ. ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ಹಿತದೃಷ್ಟಿಯಿಂದ ಸಾಕಷ್ಟು ಅನುದಾನವನ್ನು ವಿನಿಯೋಗಿಸಿ ಘಟಕ ಸ್ಥಾಪನೆ ಮಾಡುವುದು ಸ್ವಾಗತಾರ್ಹ. ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕಾದ ಇಲಾಖೆ ಬೇಜವಾಬ್ದಾರಿತನ ತೋರುತ್ತಿರುವುದು ತರವಲ್ಲ ಎಂದು ಗ್ರಾಮೀಣ ಪ್ರದೇಶದ ಜನರು ಕಿಡಿಕಾರಿದ್ದಾರೆ.

ಕಾರ್ಯನಿರ್ವಹಿಸದ ಘಟಕಗಳು: ತಾಲ್ಲೂಕಿನಲ್ಲಿ ಪ್ರಾರಂಭವಾದ 56 ಶುದ್ಧ ಕುಡಿಯುವ ನೀರಿನ ಘಟಕಗಳು ಹೆಸರಿಗೆ ಮಾತ್ರ‌ ಎಂಬಂತಿವೆ. ಇಲಾಖೆಯ ಮಾಹಿತಿ ಪ್ರಕಾರ ತಾಲ್ಲೂಕಿನ ಸುಗನಹಳ್ಳಿ, ಸೇವಾನಗರ, ಕೊಂಚಿಗೇರಿ, ಹಡಗಲಿ, ಬೆಳಗಟ್ಟಿ, ನವೇ ಭಾವನೂರು, ಶಿವಾಜಿನಗರ, ಎಂ. ಹೊಸಳ್ಳಿ, ಹೆಬ್ಬಾಳ ಸೇರಿದಂತೆ ಒಟ್ಟು 10 ಗ್ರಾಮದಲ್ಲಿ ನೀರಿನ ಘಟಕಗಳು ಸಂಪೂರ್ಣ ಸ್ಥಗಿತಗೊಂಡಿವೆ. ಇದನ್ನು ಹೊರತುಪಡಿಸಿ ಏಜೆನ್ಸಿಗಳ ತಾಂತ್ರಿಕ ತೊಂದರೆಯಿಂದಾಗಿ ಬಹುತೇಕ ಘಟಕಗಳು ಬಂದ್ ಆಗಿದ್ದು, ಇದರಿಂದ ಗ್ರಾಮೀಣರಿಗೆ ಶುದ್ಧ ನೀರು ಮರೀಚಿಕೆಯಾಗಿದೆ.

ಹಸ್ತಾಂತರಗೊಳ್ಳದ ಘಟಕಗಳು: ಶುದ್ಧ ನೀರಿನ ಘಟಕಗಳ ಸ್ಥಾಪನೆ ಹಾಗೂ ನಿರ್ವಹಣೆ ಪಡೆದ ಏಜೆನ್ಸಿ ಅವಧಿ ಮುಗಿದರೂ ಇದುವರೆಗೂ ಘಟಕಗಳನ್ನು ಹಸ್ತಾಂತರಿಸಿಲ್ಲ. ತಾಲ್ಲೂಕಿನಲ್ಲಿ ಶುದ್ಧ ನೀರಿನ ಘಟಕಗಳನ್ನು ಕೆ.ಎಸ್. ಮಣಿ, ಕರ್ನಾಟಕ ವಾಟರ್ ಟೆಕ್ನಾಲಜಿ, ಎ.ಬಿ. ಕಟಗಿ, ಎನ್.ಎ. ತಿರ್ಲಾಪುರ, ಸಿ.ಎನ್. ಪೂಜಾರ ಎಂಬ 5 ಏಜೆನ್ಸಿಗಳು ನಿರ್ವಹಣೆ ಮಾಡುತ್ತಿವೆ. ಇದರಲ್ಲಿ ಕೆ.ಎಸ್. ಮಣಿ ಏಜೆನ್ಸಿಯು ಸುಮಾರು 22 ಘಟಕಗಳ ನಿರ್ವಹಣೆ ಟೆಂಡರ್ ಪಡೆದಿತ್ತು. ಅವಧಿ ಮುಗಿದರೂ ಘಟಕಗಳ ಹಸ್ತಾಂತರ ಮಾಡದ ಏಜೆನ್ಸಿ ಅವುಗಳನ್ನು ಪ್ರಾರಂಭಿಸುವ ಗೋಜಿಗೂ ಸಹ ಹೋಗಿಲ್ಲ. ಉಳಿದ ಏಜೆನ್ಸಿಗಳು ಸಹ ನಿಷ್ಕಾಳಜಿ ತೋರುತ್ತಿರುವುದರಿಂದ ಶುದ್ಧ ನೀರು ದೂರವಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಶುದ್ಧವಾಗದ ಶುದ್ಧ ನೀರಿನ ಘಟಕಗಳು: ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಆರಂಭವಾದ ಶುದ್ಧ ನೀರಿನ ಘಟಕಗಳು ಕೆಲವೇ ದಿನಗಳಲ್ಲಿ ದುರಸ್ತಿಯ ಹಂತ ತಲುಪಿವೆ. ಸಂಬಂಧಪಟ್ಟ ಗ್ರಾಮೀಣ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಯು ಏಜೆನ್ಸಿಗಳಿಗೆ ಅದರ ನಿರ್ವಹಣೆ ಕೊಟ್ಟು ಕೈಚೆಲ್ಲಿ ಕುಳಿತಿವೆ. ಕೇವಲ ನಿರ್ವಹಣೆ ವೆಚ್ಚ ತೋರಿಸಿ ಬಿಲ್ ಪಾವತಿಸಿಕೊಳ್ಳುತ್ತಿರುವ ಏಜೆನ್ಸಿಗಳು ಅವುಗಳ ದುರಸ್ತಿ ಮಾಡುವ ಗೋಜಿಗೆ ಇಂದಿನವರೆಗೂ ಹೋಗಿಲ್ಲ. ಸ್ಥಾಪನೆಯಾದಾಗಿನಿಂದ ಕಾರ್ಯನಿರ್ವಹಿಸದ ಯಂತ್ರಗಳು ಇಂದು ತುಕ್ಕು ಹಿಡಿಯುತ್ತಿದ್ದರೂ ಅದನ್ನು ರಿಪೇರಿ ಮಾಡಿಲ್ಲ.

ಫ್ಲೋರೈಡ್ ನೀರೇ ಆಧಾರ: ಗ್ರಾಮಗಳಲ್ಲಿಯ ಶುದ್ಧ ನೀರಿನ ಘಟಕಗಳು ಸ್ಥಗಿತವಾಗಿರುವುದರಿಂದ ಬಹುತೇಕ ಗ್ರಾಮಸ್ಥರು ಫ್ಲೋರೈಡ್‌ಯುಕ್ತ ನೀರನ್ನೇ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದ್ದು ಮಂಡಿನೋವು, ಎಲುಬು-ಕೀಲು ನೋವು, ಹಲ್ಲು ನೋವು ಕಾಡುತ್ತಿದೆ. ಅಲ್ಲದೇ ಫ್ಲೋರೈಡ್‌ ನೀರನ್ನು ಚಿಕ್ಕಮಕ್ಕಳು ಸೇವನೆ ಮಾಡುವುದರಿಂದ ಬೆಳವಣಿಗೆ ಕುಂಠಿತ ಹಾಗೂ ಹಲ್ಲುಗಳು ಮೇಲೆ ಶಾಶ್ವತ ಕಲೆ ಉಂಟಾಗುತ್ತಿವೆ. ಇದರಿಂದ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗಬಹುದೆಂಬ ಆತಂಕದಲ್ಲಿ ಪೋಷಕರಿದ್ದಾರೆ.

ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಟ್ಟು 6 ಶುದ್ಧ ನೀರಿನ ಘಟಕಗಳಿವೆ. ಅದರಲ್ಲಿ 4 ಚಾಲ್ತಿಯಲ್ಲಿವೆ. ಒಂದು ಶೀಘ್ರ ಪ್ರಾರಂಭಿಸುವ ಹಂತದಲ್ಲಿದೆ. 18 ವಾರ್ಡ್‌ಗಳನ್ನು ಒಳಗೊಂಡ ಪಂಚಾಯ್ತಿಗೆ ಕೇವಲ 5 ಘಟಕಗಳಾದರೂ ಸಮರ್ಪಕವಾಗಿ ನೀರು ಪೂರೈಕೆ ಆಗುವುದಿಲ್ಲ. ಕೇವಲ ಮುಖ್ಯ ರಸ್ತೆಗಳಿಗೆ ಘಟಕಗಳನ್ನು ಸ್ಥಾಪಿಸಲಾಗಿದ್ದು, ವಾರ್ಡ್‌ನ ನಿವಾಸಿಗಳಿಗೆ ಅದು ದೂರವಾಗಿದೆ. ಇವುಗಳ ನಿರ್ವಹಣೆಯನ್ನು ಅಕ್ಷಯ ಫೌಂಡೇಶನ್ ಎಂಬ ಏಜೆನ್ಸಿಗೆ ನೀಡಲಾಗಿದೆ. ಘಟಕ ಸ್ಥಾಪನೆಗೆ ಪಂಚಾಯ್ತಿ ವತಿಯಿಂದ ಜಾಗ ಹಾಗೂ ನೀರು ಕೊಟ್ಟರೆ ಏಜೆನ್ಸಿಯವರು ಜನರಿಗೆ ನೀರು ಕೊಡುತ್ತಾರೆ ಎಂಬ ಷರತ್ತಿನೊಂದಿಗೆ ನೂತನ 3 ಘಟಕ ಪ್ರಾರಂಭಿಸಲಾಗುತ್ತಿದೆ. ಇವುಗಳನ್ನು ಸೇರಿ ಒಟ್ಟು 5 ಘಟಕಗಳು ಪ್ರಾರಂಭವಾಗುತ್ತಿದ್ದು, ಇದರಿಂದ ಪಂಚಾಯ್ತಿ ಆದಾಯಕ್ಕೆ ಕತ್ತರಿ ಬೀಳಬಹುದಾಗಿದೆ. ಅಲ್ಲದೇ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಜನಸಂಖ್ಯೆಗೆ ಅನುಗುಣವಾಗಿ 2 ವಾರ್ಡ್‌ಗಳು ಸೇರಿ ಒಂದು ಶುದ್ಧ ನೀರಿನ ಘಟಕ ಸ್ಥಾಪನೆ ಮಾಡಿದಾಗ ಮಾತ್ರ‌ ಶುದ್ಧ ನೀರಿನ ಬವಣೆ ನೀಡಬಹುದು ಎಂಬುದು ಪಟ್ಟಣದ ಜನರ ಆಗ್ರಹವಾಗಿದೆ.

ಯಾರು ಏನಂದರು?

ಏಜೆನ್ಸಿ ಮುಗಿದ ಘಟಕಗಳ ಮಾಲೀಕರಿಗೆ ಗ್ರಾಮ ಪಂಚಾಯ್ತಿಗೆ ಹಸ್ತಾಂತರಿಸಲು ಈಗಾಗಲೇ ಸೂಚನೆ ನೀಡಿದ್ದು ಶೀಘ್ರದಲ್ಲೇ ಸ್ಥಗಿತವಾಗಿರುವ ನೀರಿನ ಘಟಕಗಳನ್ನು ಆರಂಭಿಸಲಾಗುವುದು – ಮಾರುತಿ ರಾಠೋಡ್ ಪ್ರಭಾರ ಎಇಇ ಆರ್‌ಡಬ್ಲ್ಯುಎಸ್

ಸ್ಥಗಿತಗೊಂಡ ನೀರಿನ ಘಟಕಗಳನ್ನು ಕೂಡಲೇ ಆರಂಭಿಸಬೇಕು. ನಿರ್ವಹಣೆಯಲ್ಲಿ ನಿಷ್ಕಾಳಜಿ ವಹಿಸಿಸುವ ಏಜೆನ್ಸಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಬರಗಾಲ ಇರುವುದರಿಂದ ಸಮರ್ಪಕವಾಗಿ ನೀರು ಪೂರೈಸಬೇಕು – ಸಂತೋಷ ಕುರಿ ಎಐಸಿಸಿ ಮಾನವ ಹಕ್ಕುಗಳ ಜಿಲ್ಲಾ ಘಟಕ ಗದಗ

ಶುದ್ಧ ನೀರಿನ ಘಟಕ ಬಂದ್ ಆಗಿ 3 ವರ್ಷಗಳೇ ಗತಿಸಿವೆ. ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದು ವಿಪರ್ಯಾಸದ ಸಂಗತಿ – ಆನಂದ ಮಾಳೆಕೊಪ್ಪ ಮಾಚೇನಹಳ್ಳಿ ಗ್ರಾಮಸ್ಥ

ಬಾಳ ಮಂಡಿನೋವು ಆಗಾಕತ್ತಾವು. ನಮ್ಮ ಊರಿನ ಬೋರಿಂದ ಸವಳ ನೀರು ಕುಡಿದ ಮುದುಕರಿಗೆ ಹರೆದವರಿಗೆ ಮಂಡಿನೋವು ಬರಾಕತೈತ್ರೀ. ಆ ನೀರಿನ ಮ್ಯಾಲೆ ಬರೋ ಬಿಳೆ ಪೌಡರ್ ತೆಗಿದು ಸಾಕಾಗತೈತಿ. ಜೀವನ ನಡ್ಸಾಕ ಅವ್ನ ಕುಡಿಯೊದು ಅನಿವಾರ್ಯ ಅಗೈತಿ – ಬಸಪ್ಪಜ್ಜ ಕನಕವಾಡ ಗ್ರಾಮಸ್ಥ

ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಅಗಿರುವುದು.
ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಅಗಿರುವುದು.
ಶಿರಹಟ್ಟಿ ತಾಲ್ಲೂಕಿನ ಮಾಚೇನಹಳ್ಳಿ ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆ ಇಲ್ಲದೆ ತುಕ್ಕು ಹಿಡಿಯುತ್ತಿರುವುದು.
ಶಿರಹಟ್ಟಿ ತಾಲ್ಲೂಕಿನ ಮಾಚೇನಹಳ್ಳಿ ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆ ಇಲ್ಲದೆ ತುಕ್ಕು ಹಿಡಿಯುತ್ತಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT