ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಹಟ್ಟಿ | ಕೆರೆ ತುಂಬಿಸುವ ಯೋಜನೆಗಳು ನನೆಗುದಿಗೆ

ಶಿರಹಟ್ಟಿ ಮೀಸಲು ಕ್ಷೇತ್ರದ ಕೃಷಿಕರಿಗೆ ನೀರಾವರಿ ಮರೀಚಿಕೆ
ನಿಂಗಪ್ಪ ಹಮ್ಮಿಗಿ
Published 8 ಜನವರಿ 2024, 5:51 IST
Last Updated 8 ಜನವರಿ 2024, 5:51 IST
ಅಕ್ಷರ ಗಾತ್ರ

ಶಿರಹಟ್ಟಿ: ಬಯಲುಸೀಮೆ, ಬರಗಾಲದ ನಾಡು ಎಂಬ ಹಣೆಪಟ್ಟಿ ಹೊತ್ತ ಶಿರಹಟ್ಟಿ ಮತಕ್ಷೇತ್ರದ ಕೃಷಿಕರು ನೀರಾವರಿ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಕ್ಷೇತ್ರವನ್ನು ಸದಾ ಹಚ್ಚ ಹಸಿರಾಗಿಡಲು ಬಯಸಿ ಏತ ನೀರಾವರಿ, ಕೆರೆ ತುಂಬಿಸುವ ಯೋಜನೆಗಳಂತ ಹಲವಾರು ನೀರಾವರಿ ಯೋಜನೆಗಳನ್ನು ಕೈಗೊಂಡರೂ ಅವುಗಳನ್ನು ಸಾಕಾರಗೊಳಿಸುವಲ್ಲಿ ಸರ್ಕಾರ ನಿಷ್ಕಾಳಜಿ ತೋರುತ್ತಿದೆ ಎಂಬ ಕೊರಗು ತಾಲ್ಲೂಕಿನ ಜನರನ್ನು ಕಾಡುತ್ತಿದೆ.

ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಮತಕ್ಷೇತ್ರದ ರೈತರು ಇನ್ನೂ ಬರಗಾಲದ ಬವಣೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಬೇಸಿಗೆಯಲ್ಲಿ ನೆರವಾಗುವ ಉದ್ದೇಶದಿಂದ ತಾಲ್ಲೂಕಿನಲ್ಲಿ ಎರಡು ಕೆರೆ ತುಂಬಿಸುವ ಯೋಜನೆಗಳನ್ನು ರೂಪಿಸಲಾಗಿತ್ತು. ಮತಕ್ಷೇತ್ರದಲ್ಲಿ ಹರಿದು ಹೋಗುವ ತುಂಗಭದ್ರಾ ನದಿಯ ನೀರಿನ ಮಟ್ಟವನ್ನು ಆಧರಿಸಿ ಇಟಗಿ ಮತ್ತು ಜಾಲವಾಡಗಿ‌ ಏತ ನೀರಾವರಿ ಯೋಜನೆಗಳನ್ನು ರೂಪಿಸಲಾಗಿತ್ತು. ಈ ಮೂಲಕ ಕೆರೆ ಹಾಗೂ ಚೆಕ್ ಡ್ಯಾಂ ತುಂಬಿಸಿ ಜಾನುವಾರು, ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರು ಹಾಗೂ ನೀರಾವರಿ ಸಹ ಅಭಿವೃದ್ಧಿಪಡಿಸುವ ಯೋಜನೆ ಇದಾಗಿತ್ತು.

ರೈತರು ಮತ್ತು ಹೋರಾಟಗಾರರ ಒತ್ತಾಸೆಯ ಮೇರೆಗೆ ಶಿರಹಟ್ಟಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರು ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ಈ ಯೋಜನೆಗಳಿಗೆ ಮಂಜೂರಾತಿ ದೊರೆತಿತ್ತು. ಇವರಿಗೆ ಸಚಿವ ಎಚ್.ಕೆ. ಪಾಟೀಲ ಸಾಥ್ ನೀಡಿದ್ದರು. ಆದರೆ ಯೋಜನೆಗೆ ಜಲಸಂಪನ್ಮೂಲ ಇಲಾಖೆ ನಿರಾಸಕ್ತಿ ತೋರುತ್ತಿದ್ದು, ಈ ಮಹತ್ವಾಕಾಂಕ್ಷಿ ಯೋಜನೆಗಳು ರೈತರಿಗೆ ದೊರೆಯದೇ ನಿರಾಸೆ ಮೂಡಿಸುತ್ತಿದೆ.

ಇಟಗಿ ಏತ‌ ನೀರಾವರಿ ಯೋಜನೆ:

ತಾಲ್ಲೂಕಿನ ಕೆರೆಗಳನ್ನು ತುಂಬಿಸಲು ಇಟಗಿ ಏತ ನೀರಾವರಿ ಕೈಗೊಳ್ಳಲಾಗಿದ್ದು, ಯೋಜನೆಗೆ 2016-17ರಲ್ಲಿ ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆತು ₹ 110 ಕೋಟಿ ಬಿಡುಗಡೆಯಾಗಿ ಟೆಂಡರ್ ಸಹ ಆಗಿತ್ತು. 18 ತಿಂಗಳೊಳಗಾಗಿ ಮುಗಿಸಬೇಕೆಂಬ ಷರತ್ತಿನೊಂದಿಗೆ ಆರಂಭವಾದ ಕಾಮಗಾರಿ ಸದ್ಯ ಶೇ 70ರಷ್ಟು ಮುಗಿದಿದೆ. ಇನ್ನೂ ಶೇ 30ರಷ್ಟು ಕಾಮಗಾರಿ ಮಾತ್ರ ಬಾಕಿ ಉಳಿದಿದ್ದು, 7 ವರ್ಷ ಕಳೆದರೂ ಅದನ್ನು ಪೂರ್ಣಗೊಳಿಸುವ ಪ್ರಯತ್ನಕ್ಕೆ ಗುತ್ತಿಗೆದಾರರಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಹೋಗಿಲ್ಲ.

ಇಟಗಿ ಏತ ನೀರಾವರಿ ಕೆರೆ ತುಂಬಿಸುವ ಯೋಜನೆಯಲ್ಲಿ ಇನ್ನೂ 8ರಿಂದ 9 ಕಿ.ಮೀ ಪೈಪ್ ಲೈನ್ ಹಾಕುವ ಹಾಗೂ ಒಂದು ನೀರಿನ ಸಂಗ್ರಹ ತೊಟ್ಟಿ ಕಟ್ಟುವ ಕಾಮಗಾರಿ ಬಾಕಿ ಇದೆ. ಪೈಪ್‌ಲೈನ್ ಕಾಮಗಾರಿಯು ಅಲ್ಲಲ್ಲಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಮಾತ್ರ ಬಾಕಿ ಇದ್ದು, ಇದಕ್ಕೆ ಅರಣ್ಯ ಇಲಾಖೆಯು ಪರವಾನಗಿ ನೀಡಿಲ್ಲ. ಇದರಿಂದ ಕಾಮಗಾರಿ ಸ್ಥಗಿತಗೊಂಡಿದೆ ಎನ್ನಲಾಗುತ್ತಿದೆ.

ಇಟಗಿ ಏತ ನೀರಾವರಿ ಯೋಜನೆಯಿಂದ ತಾಲ್ಲೂಕಿನ ಮಜ್ಜೂರು ಕೆರೆ, ಲಕ್ಷ್ಮೇಶ್ವರ ತಾಲ್ಲೂಕಿನ ಕುಂದ್ರಳ್ಳಿ, ಶೆಟ್ಟಿಕೆರೆ, ಗುಲಗಂಜಿಕೊಪ್ಪ, ಶಿಗ್ಲಿ ಸೇರಿದಂತೆ ಅನೇಕ ಕೆರೆಗಳು ಹಾಗೂ ಚೆಕ್ ಡ್ಯಾಂ ತುಂಬಿಸುವ ಉದ್ದೇಶ ಹೊಂದಲಾಗಿತ್ತು. ಆದರೆ ಪ್ರಸ್ತುತವಾಗಿ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಕೆರೆ ಹಾಗೂ ಚೆಕ್ ಡ್ಯಾಂ ಒಣಗಿ ನದಿ ನೀರಿಗಾಗಿ ಹಾತೊರೆಯುತ್ತಿವೆ.


ಜಾಲವಾಡಗಿ ಏತ ನೀರಾವರಿ

2018ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ₹ 197 ಕೋಟಿ ವೆಚ್ಚದಲ್ಲಿ ಜಾಲವಾಡಗಿ ಏತ ನೀರಾವರಿ ಯೋಜನೆ ರೂಪಿಸಿ ಅನುದಾನ ಮಂಜೂರಾತಿ ಸಹ ಪ್ರಗತಿಯಲ್ಲಿತ್ತು. ಆದರೆ ಆ ಯೋಜನೆ ಕಾರ್ಯರೂಪಕ್ಕೆ ಬರುವಷ್ಟರಲ್ಲಿ ಚುನಾವಣೆ ಬಂದು ಸರ್ಕಾರ ಬದಲಾವಣೆ ಆಯಿತು.

ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಆದರೆ ಕಾಮಗಾರಿ ಮಾತ್ರ ಆರಂಭ ಆಗಲಿಲ್ಲ. ಈಗ ಮತ್ತೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದು, ಕಾಮಗಾರಿಯನ್ನು ಆರಂಭ ಮಾಡಬೇಕೆಂಬುದು ಕ್ಷೇತ್ರದ ರೈತರ ಆಗ್ರಹವಾಗಿದೆ.

ಜಾಲವಾಡಗಿ ಯೋಜನೆಯಿಂದ ಶಿರಹಟ್ಟಿ ತಾಲ್ಲೂಕಿನ ಕಡಕೋಳ, ಜಲ್ಲಿಗೇರಿ, ಹೊಸಳ್ಳಿ, ಮಾಗಡಿ, ಗದಗ ತಾಲ್ಲೂಕಿನ ಮಹಾಲಿಂಗಪೂರ, ಸಂಭಾಪುರ, ನಾಗಾವಿ, ಸೊರಟೂರ ಹಾಗೂ ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಕೆರೆ, ಮುರುಡಿ, ಕೆಲೂರ, ಚಿಕ್ಕವಡ್ಡಟ್ಟಿ ಕೆರೆಗಳು ಚೆಕ್ ಡ್ಯಾಂ ತುಂಬಿಸಲು ಸಾಧ್ಯವಾಗುತ್ತದೆ.

ಸದ್ಯ ಸಿಎಂ ನೇತೃತ್ವದಲ್ಲಿ ಕರ್ನಾಟಕ ನೀರಾವರಿ ನಿಗಮ ಮಂಡಳಿ ರಚನೆಯಾಗದ ಕಾರಣ ಕಾಮಗಾರಿ ಆರಂಭವಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ವಿಳಂಬ ಆಗದೇ ನಿರೀಕ್ಷೆ ಹುಸಿ ಆಗದಿದ್ದರೆ ಒಳ್ಳೆಯದು. ಇದು ಕೇವಲ ಒಂದು ಮತ ಕ್ಷೇತ್ರದ ಯೋಜನೆಯಲ್ಲ ಶಿರಹಟ್ಟಿ, ರೋಣ ಹಾಗೂ ಗದಗ ಮತ ಕ್ಷೇತ್ರದ ಯೋಜನೆಯಾಗಿದೆ.

ರಸ್ತೆ ಅಭಿವೃದ್ಧಿಯಲ್ಲಿ ಪೈಪ್ ಲೈನ್ ಅಗೆತ

ಗದಗ-ಹೊನ್ನಾಳಿ ನೂತನ ರಾಜ್ಯ ಹೆದ್ದಾರಿ ಶಿರಹಟ್ಟಿ ಮತಕ್ಷೇತ್ರದದಲ್ಲಿ ಹಾದು ಹೋಗಿದ್ದು, ಅದರ ಕಾಮಗಾರಿ ಪ್ರಗತಿಯಲ್ಲಿದೆ. ಈ ರಸ್ತೆ ಅಭಿವೃದ್ಧಿಯಲ್ಲಿ ಇಟಗಿ ಏತ ನೀರಾವರಿಯ ಕೆರೆ ತುಂಬಿಸುವ ಯೋಜನೆಯ ಕಾಮಗಾರಿಯಲ್ಲಿ ಅಳವಡಿಸಲಾಗಿದ್ದ ಪೈಪ್‌ಲೈನ್‌ ಅನ್ನು ಹೊರತೆಗೆದು ಪೈಪ್‌ಗಳನ್ನು ಹಾಗೆಯೇ ಬಿಡಲಾಗಿದೆ.

ಬೆಳ್ಳಟ್ಟಿ, ತಂಗೋಡ, ಹೊಸೂರು ಸೇರಿದಂತೆ ಅಲ್ಲಲ್ಲಿ ಪೈಪ್ ತೆಗೆಯಲಾಗಿದ್ದು, ಇದಕ್ಕೆ ಸಂಬಂಧಪಟ್ಟ ಗುತ್ತಿಗೆದಾರರಾಗಲಿ, ಅಧಿಕಾರಿಗಳಾಗಲಿ ಇತ್ತ ಕಡೆ ಸುಳಿದಿಲ್ಲ. ಹೀಗೆ ಈ ಯೋಜನೆಗೆ ಹಿಡಿದ ಗ್ರಹಣ ಬಿಡುತ್ತಿಲ್ಲ. ಬಹುದಿನಗಳ ರೈತರ ಕನಸು ಈಡೇರುತ್ತಿಲ್ಲ. 20 ಕೆರೆಗಳು, 150 ಚೆಕ್ ಡ್ಯಾಂ ತುಂಬಿಸುವ ಬೃಹತ್ ಮಹತ್ವಾಕಾಂಕ್ಷಿ ಯೋಜನೆ ಕೇವಲ ಅರ್ಧಂಬರ್ಧ ಆಗಿ ಉಳಿದು ಬಿಟ್ಟಿದೆ.

ಕಾಯುತ್ತಿರುವ ರೈತರು:

ಬರಗಾಲವನ್ನು ತೊರೆದು ಹಚ್ಚ ಹಸಿರು ಮಲೆನಾಡು ಮಾಡಬೇಕೆನ್ನುವ ರೈತರ ಹಂಬಲ ದಿನದಿಂದ ದಿನಕ್ಕೆ ಇಮ್ಮಡಿಯಾಗುತ್ತಿದೆ. ನದಿಯಲ್ಲಿ ನೀರು ಸಾಕಷ್ಟಿದ್ದು, ಕಾಮಗಾರಿಗಳು ಮಾತ್ರ ಸ್ಥಗಿತಗೊಂಡಿದ್ದರಿಂದ ಕೇವಲ ನಿರೀಕ್ಷೆಯಲ್ಲಿಯೇ ಒಣಬೇಸಾಯ ಮಾಡುತ್ತಿದ್ದಾರೆ. ಕೆರೆ ಹಾಗೂ ಚೆಕ್ ಡ್ಯಾಂ ತುಂಬಿ ಅಂತರ್ಜಲ ಮಟ್ಟ ಹೆಚ್ಚಾಗಿ, ಮತಕ್ಷೇತ್ರದಲ್ಲಿ ನೀರಾವರಿ ಅಭಿವೃದ್ಧಿಯಾಗುತ್ತದೆ ಎಂಬ ಕನಸು ಹೊತ್ತ ರೈತರ ಆಸೆಗೆ ತಣ್ಣೀರು ಎರಚದೇ ಶೀಘ್ರವಾಗಿ ಕಾಮಗಾರಿ ಆರಂಭಿಸಬೇಕೆಂಬುದು ಕ್ಷೇತ್ರದ ರೈತರ ಒತ್ತಾಯವಾಗಿದೆ.

ತುಂಗಭದ್ರಾ ನದಿ ನೀರನ್ನು ಎತ್ತುವ ಯಂತ್ರ
ತುಂಗಭದ್ರಾ ನದಿ ನೀರನ್ನು ಎತ್ತುವ ಯಂತ್ರ
ಇಟಗಿ ಏತ ನೀರಾವರಿಯ ಪಂಪ್ ಹೌಸ್ (ನೀರೆತ್ತುವ ಯಂತ್ರಗಾರ ಘಟಕ)
ಇಟಗಿ ಏತ ನೀರಾವರಿಯ ಪಂಪ್ ಹೌಸ್ (ನೀರೆತ್ತುವ ಯಂತ್ರಗಾರ ಘಟಕ)
ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಪೈಪ್‌ಲೈನ್‌ ಕಿತ್ತು ಪೈಪ್ ಹೊರಗೆ ಹಾಕಿರುವುದು
ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಪೈಪ್‌ಲೈನ್‌ ಕಿತ್ತು ಪೈಪ್ ಹೊರಗೆ ಹಾಕಿರುವುದು
ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಪೈಪ್‌ಲೈನ್ ಕಿತ್ತು ಪೈಪ್ ಹೊರಗೆ ಹಾಕಿರುವುದು
ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಪೈಪ್‌ಲೈನ್ ಕಿತ್ತು ಪೈಪ್ ಹೊರಗೆ ಹಾಕಿರುವುದು

ಪರವಾನಗಿ ಕೇಳಲಾಗಿದೆ ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ಇಟಗಿ ಏತ ನೀರಾವರಿಯ ಕಾಮಗಾರಿಯನ್ನು ಈ ಮೊದಲು ಪರವಾನಗಿ ತೆಗೆದುಕೊಳ್ಳದೇ ಆರಂಭಿಸಲಾಗಿತ್ತು. ಆದ್ದರಿಂದ ಕಾಮಗಾರಿ ಸ್ಥಗಿತಗೊಂಡಿದ್ದು ಸದ್ಯ ಸ್ಥಳ ಪರಿಶೀಲನೆ ಮಾಡಿ ಪರವಾನಗಿಗೆ ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ.–ರಾಮಪ್ಪ ಪೂಜಾರ ವಲಯ ಅರಣ್ಯಾಧಿಕಾರಿ ದಾಖಲಾತಿ ಸಲ್ಲಿಕೆ ಅರಣ್ಯ ಇಲಾಖೆ ಕೇಳಿರುವ ಎಲ್ಲ ದಾಖಲಾತಿಗಳನ್ನು ಸಲ್ಲಿಸಲಾಗಿದ್ದು ಶೀಘ್ರದಲ್ಲಿ ಪರವಾನಗಿ ದೊರೆಯಲಿದೆ. ಸದ್ಯದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಜಾಲವಾಡಗಿ ಏತ ನೀರಾವರಿ ಯೋಜನೆಗಿದ್ದ ತಾಂತ್ರಿಕ ತೊಂದರೆಗಳನ್ನು ಸರಿಪಡಿಸಲಾಗಿದ್ದು ಅದು ಕೂಡ ಶೀಘ್ರದಲ್ಲಿ ಪ್ರಾರಂಭವಾಗಲಿದೆ.–ಪ್ರಕಾಶ ಐಗೋಳ ಇಇ ಶಿಂಗಟಾಲೂರು ಏತ ನಿರಾವರಿ ಯೋಜನೆ ವಿಭಾಗ 1 ಮುಂಡರಗಿ ರೈತರಿಗೆ ಅನುಕೂಲ ಮಾಡಿ ಸ್ಥಳೀಯ ಶಾಸಕರ ಇಚ್ಛಾಶಕ್ತಿಯ ಕೊರತೆಯಿಂದ ಯೋಜನೆಗಳು ನನೆಗುದಿಗೆ ಬಿದ್ದಿದ್ದು ಕಾಮಗಾರಿಗೆ ಅಡೆತಡೆಯಾಗಿರುವ ತಾಂತ್ರಿಕ ದೋಷಗಳನ್ನು ಸರಿಪಡಿಸಿ ಕಾಮಗಾರಿ ಪೂರ್ಣಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು–ರಾಮಕೃಷ್ಣ ದೊಡ್ಡಮನಿ ಮಾಜಿ ಶಾಸಕ ಚಕ್ಕಡಿ ಚಳವಳಿ ನಡೆಸುತ್ತೇವೆ ಕೂಡಲೇ ಇಟಗಿ ಏತ ನೀರಾವರಿ ಕಾಮಗಾರಿ ಆರಂಭಿಸಿ ಶೀಘ್ರದಲ್ಲಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ರೈತರೊಂದಿಗೆ ಹೋರಾಟಕ್ಕಿಳಿದು ಚಕ್ಕಡಿ ಚಳವಳಿ ಮೂಲಕ ಎಚ್ಚರಿಕೆ ನೀಡಲಾಗುತ್ತದೆ–ಪ್ರಕಾಶ ಕಲ್ಯಾಣಿ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT