ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿಗೆ ಬಂಡಾಯದ ಬಿಸಿ: ‘ಕೈ’ ವಶವಾದ ಗಜೇಂದ್ರಗಡ ಪುರಸಭೆ

ಅಧ್ಯಕ್ಷರಾಗಿ ಬಿಜೆಪಿ ಬಂಡಾಯ ಸದಸ್ಯ ಸುಭಾಸ ಮ್ಯಾಗೇರಿ, ಉಪಾಧ್ಯಕ್ಷೆಯಾಗಿ ಸವಿತಾ ಬಿದರಳ್ಳಿ ಆಯ್ಕೆ
Published : 3 ಸೆಪ್ಟೆಂಬರ್ 2024, 16:28 IST
Last Updated : 3 ಸೆಪ್ಟೆಂಬರ್ 2024, 16:28 IST
ಫಾಲೋ ಮಾಡಿ
Comments

ಗಜೇಂದ್ರಗಡ: ಪಟ್ಟಣದ ಪುರಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿದ್ದರೂ ಬಂಡಾಯದ ಬಿಸಿಯಿಂದ ಅಧಿಕಾರ ‘ಕೈ’ ಪಾಲಾಗಿದೆ. 2ನೇ ಅವಧಿಗೆ ಮಂಗಳವಾರ ಪಟ್ಟಣದ ಪುರಸಭೆ ಸಭಾ ಭವನದಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷ  ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಸುಭಾಸ ಮ್ಯಾಗೇರಿ ಅಧ್ಯಕ್ಷರಾಗಿ, ಕಾಂಗ್ರೆಸ್‌ನ ಸವಿತಾ ಬಿದರಳ್ಳಿ ಉಪಾ‍ಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ 19ನೇ ವಾರ್ಡ್‌ನ ಬಿಜೆಪಿ ಬಂಡಾಯ ಸದಸ್ಯ ಸುಭಾಸ ಮ್ಯಾಗೇರಿ ಹಾಗೂ 2ನೇ ವಾರ್ಡ್‌ ಬಿಜೆಪಿ ಸದಸ್ಯ ಯಮನಪ್ಪ ತಿರಕೋಜಿ, ಉಪಾಧ್ಯಕ್ಷ ಸ್ಥಾನಕ್ಕೆ 15ನೇ ವಾರ್ಡ್‌ ಕಾಂಗ್ರೆಸ್‌ ಸದಸ್ಯೆ ಸವಿತಾ ಬಿದರಳ್ಳಿ, 4ನೇ ವಾರ್ಡ್‌ ಬಿಜೆಪಿ ಸದಸ್ಯೆ ಸುಜಾತಾಬಾಯಿ ಶಿಂಗ್ರಿ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿತ್ತು.

ಮಧ್ಯಾಹ್ನ 2.30ಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಸುಭಾಸ ಮ್ಯಾಗೇರಿ ಹಾಗೂ ಕಾಂಗ್ರೆಸ್‌ನ ಸವಿತಾ ಬಿದರಳ್ಳಿ 13 ಮತಗಳನ್ನು ಗಳಿಸುವ ಮೂಲಕ 11 ಮತಗಳನ್ನು ಪಡೆದ ಬಿಜೆಪಿ ಅಭ್ಯರ್ಥಿ ಯಮನಪ್ಪ ತಿರಕೋಜಿ ಹಾಗೂ ಬಿಜೆಪಿಯ ಸುಜಾತಾಬಾಯಿ ಶಿಂಗ್ರಿ ಅವರನ್ನು ಪರಾಭವಗೊಳಿಸಿದರು. ಬಿಜೆಪಿ ಸದಸ್ಯರ ಬಂಡಾಯದಿಂದಾಗಿ ಪುರಸಭೆ ಅಧಿಕಾರ ಕಾಂಗ್ರೆಸ್‌ ಪಾಲಾಗಿದ್ದು, ಬಿಜೆಪಿ ಮುಖಭಂಗಕ್ಕೆ ಒಳಗಾಯಿತು.

ಪುರಸಭೆಯಲ್ಲಿ ಒಟ್ಟು 23 ಸದಸ್ಯರ ಪೈಕಿ 18 ಬಿಜೆಪಿ ಹಾಗೂ 5 ಕಾಂಗ್ರೆಸ್‌ ಸದಸ್ಯರಿದ್ದು, ಬಿಜೆಪಿ ಸಹಜವಾಗಿ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿತ್ತು. ಆದರೆ ಕ್ಷೀಪ್ರ ರಾಜಕೀಯ ಬೆಳವಣಿಗೆ ಮಾಹಿತಿ ಕಲೆ ಹಾಕುವಲ್ಲಿ ಸಂಪೂರ್ಣ ವಿಫಲವಾಯಿತು. ಹೀಗಾಗಿ ಬಿಜೆಪಿ ಸದಸ್ಯರಿಗೆ ಸಭೆ ಮಾಡಿ ವಿಪ್ ಜಾರಿ ಮಾಡಿ ಮಂಗಳವಾರ ಬೆಳಿಗ್ಗೆ 9.30ಕ್ಕೆ ಬಿಜೆಪಿ ಕಾರ್ಯಾಲಯಕ್ಕೆ ಬರುವಂತೆ ಸೂಚಿಸಲಾಗಿತ್ತು. ಆದರೆ ಬಿಜೆಪಿ ಹೈಕಮಾಂಡ್ ಕರೆದಿದ್ದ 18 ಸದಸ್ಯರ ಪೈಕಿ 7 ಸದಸ್ಯರು ಬೆಳಿಗ್ಗೆ 10.30ರ ವರೆಗೂ ಸಭೆಗೆ ಬಾರದಿದ್ದಾಗ ಬಿಜೆಪಿ ಮುಖಂಡರು, ಬಂಡಾಯವೆದ್ದಿದ್ದ ಸದಸ್ಯರನ್ನು ಸಂಪರ್ಕಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ.

ಬಂಡಾಯ ಅಭ್ಯರ್ಥಿಗಳ ವಿಶ್ವಾಸ ಗಳಿಸುವಲ್ಲಿ ಮಾಜಿ ಸಚಿವ ಕಳಕಪ್ಪ ಬಂಡಿ ಅವರ ಸಹೋದರ ಕಾಂಗ್ರೆಸ್‌ ಮುಖಂಡ ಸಿದ್ದಪ್ಪ ಬಂಡಿ ಹಾಗೂ ಪುರಸಭೆ ವಿಪಕ್ಷ ನಾಯಕ ಮುರ್ತುಜಾ ಡಾಲಾಯತ ಯಶಸ್ವಿಯಾದರು ಎನ್ನಲಾಗಿದೆ. ಈ ಚುನಾವಣೆಯಲ್ಲಿ ಸಿದ್ದಪ್ಪ ಬಂಡಿ ತಂತ್ರಗಾರಿಕೆ ಹಾಗೂ ಮುರ್ತುಜಾ ಡಾಲಾಯತ ತಂಡದ ಸಮಯ ಪ್ರಜ್ಞೆಯಿಂದ ಪುರಸಭೆ ಆಡಳಿತ ಕಾಂಗ್ರೆಸ್ ಪಾಲಾಗಿದೆ ಎನ್ನಲಾಗಿದೆ.

ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ಕಾಂಗ್ರೆಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ, ಬಣ್ಣ ಎರಚಿ ಸಂಭ್ರಮಿಸಿದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಹೂಮಾಲೆ ಹಾಕಿ, ಸಹಿ ಹಂಚಿ ಸಂಭ್ರಮಿಸಿದರು. ಚುನಾವಣಾ ಅಧಿಕಾರಿಯಾಗಿ ತಹಶೀಲ್ದಾರ್‌ ಕಿರಣಕುಮಾರ ಕುಲಕರ್ಣಿ ಕಾರ್ಯನಿರ್ವಹಿಸಿದರು.

ʼಬಿಜೆಪಿ ವರಿಷ್ಠರಲ್ಲಿನ ಸಮನ್ವಯತೆ ಕೊರತೆ, ತಾರತಮ್ಯ ಹಾಗೂ ಕೆಲವೇ ಸದಸ್ಯರಿಗೆ ಮಹತ್ವ ನೀಡಿ ಬೇರೆ ಸದಸ್ಯರಿಗೆ ಮಹತ್ವ ನೀಡದೆ, ವಾರ್ಡ್‌ಗಳಿಗೆ ಬಂದ ಅಭಿವೃದ್ಧಿ ಕಾಮಗಾರಿಗಳನ್ನು ನೀಡಿಲ್ಲ ಎಂಬ ಆಕ್ರೋಶ ವ್ಯಕ್ತಪಡಿಸುವುದರ ಜೊತೆಗೆ ವಾರ್ಡ್‌ಗಳಲ್ಲಿ ಕೆಲಸದ ಜೊತೆಗೆ ಜನರ ಸೇವೆ ಮಾಡಬೇಕೆಂದು ಇಲ್ಲಿನ ಮುಖಂಡರೊಂದಿಗೆ ಸಂಪರ್ಕ ಮಾಡಿ, ಕಾಂಗ್ರೆಸ್ ಸದಸ್ಯರು ಸಹಕಾರ ನೀಡಿದರೆ ಗುಂಪಿನೊಂದಿಗೆ ಬರುವುದಾಗಿ ತಿಳಿಸಿದ್ದರು. ಹೀಗಾಗಿ ಅಭಿವೃದ್ಧಿ ಹಾಗೂ  ಪಕ್ಷದ ಕಾರ್ಯಕ್ರಮಗಳನ್ನು ಪುರಸಭೆಗೆ ನೀಡುವ ದೃಷ್ಟಿಯಿಂದ ಅವರಿಗೆ ಬೆಂಬಲ ಕೊಟ್ಟಿದ್ದೇವೆʼ ಎಂದು ಶಾಸಕ ಜಿ.ಎಸ್.ಪಾಟೀಲ ಪ್ರತಿಕ್ರಿಯೆ ನೀಡಿದರು.

ಗಜೇಂದ್ರಗಡದ ಅಭಿವೃದ್ಧಿಗಾಗಿ ಕಾಂಗ್ರೆಸ್ ಸದಸ್ಯರ ಸಹಕಾರ ಪಡೆದು ಪುರಸಭೆ ಅಧ್ಯಕ್ಷನಾಗಿ ಆಯ್ಕೆ ಆಗಿದ್ದೇನೆ.
-ಸುಭಾಸ ಮ್ಯಾಗೇರಿ, ಪುರಸಭೆ ನೂತನ ಅಧ್ಯಕ್ಷ ಗಜೇಂದ್ರಗಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT