ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ ಜಿಲ್ಲೆಯಲ್ಲಿ ಚೇತರಿಕೆ ಕಾಣದ ಗಣೇಶ ವಿಗ್ರಹ ಉದ್ಯಮ

ಕೊನೆ ಕ್ಷಣದಲ್ಲಿ ಸಾರ್ಗಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ
Last Updated 8 ಸೆಪ್ಟೆಂಬರ್ 2021, 20:00 IST
ಅಕ್ಷರ ಗಾತ್ರ

ಗದಗ: ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸರ್ಕಾರ ಐದು ದಿನಗಳ ಕಾಲ ಅನುಮತಿ ನೀಡಿದೆ. ಆದರೆ, ಇದರಿಂದ ಮೂರ್ತಿ ತಯಾರಕರಿಗೇನೂ ದೊಡ್ಡಮಟ್ಟದ ಲಾಭ ಆಗಿಲ್ಲ. ವ್ಯಾಪಾರ ಕೂಡ ಅಷ್ಟಕ್ಕಷ್ಟೇ ಎಂದು ಗಣೇಶ ವಿಗ್ರಹ ತಯಾರಕರು ಅಲವತ್ತುಕೊಂಡಿದ್ದಾರೆ.

ಸರ್ಕಾರ ಕೊನೆ ಕ್ಷಣದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಆಚರಣೆ ನೀಡಿದೆ. 11 ದಿನ ಮುಂಚಿತವಾಗಿ ಈ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದ್ದರೆ, ವಿಗ್ರಹ ವಹಿವಾಟು ದ್ವಿಗುಣಗೊಳ್ಳುತ್ತಿತ್ತು ಎಂ ಕಲಾವಿದರು ಅಭಿಪ್ರಾಯಪಟ್ಟಿದ್ದಾರೆ.

‘ಈ ಬಾರಿಯ ಗಣೇಶ ಚತುರ್ಥಿ ಗೊಂದಲದೊಳಗೇ ಬಂತು ಅಂತ ಅನಿಸುತ್ತದೆ. ಮೂರ್ತಿ ತಯಾರಕರು ಆರು ತಿಂಗಳು ಮುಂಚಿನಿಂದಲೇ ಕೆಲಸ ಪ್ರಾರಂಭಿಸಿರುತ್ತಾರೆ. ಆದರೆ, ಸರ್ಕಾರ ಕೊನೆ ಕ್ಷಣದಲ್ಲಿ ಗಣೇಶೋತ್ಸವಕ್ಕೆ ಸಂಬಂಧಪಟ್ಟ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ದೊಡ್ಡ ಗಣೇಶನನ್ನು ಕೂಡಿಸಿ ವಿಜೃಂಭಣೆಯಿಂದ ಹಬ್ಬ ಆಚರಿಸಬೇಕೆಂದಿದ್ದವರೂ ಪುಟ್ಟ ಗಣೇಶನನ್ನು ಕೂರಿಸಿ, ಸಂಪ್ರದಾಯ ಮುಂದುವರಿಸುವ ನಿರ್ಧಾರ ಮಾಡಿರುವುದು ವಹಿವಾಟಿನ ಮೇಲೆ ದೊಡ್ಡ ಹೊಡೆತ ನೀಡಿದೆ’ ಎಂಬ ವಿಶ್ಲೇಷಣೆ ಮುಂದಿಡುತ್ತಾರೆ ಕರ್ನಾಟಕ ರಾಜ್ಯ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುತ್ತಣ್ಣ ಭರಡಿ.

ಗದಗ ಜಿಲ್ಲೆಯಲ್ಲಿ 350 ಮಂದಿ ಗಣೇಶ ವಿಗ್ರಹ ತಯಾರಕರಿದ್ದು, ಎರಡು ವರ್ಷಗಳಿಂದ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಪ್ರಕಟಿಸಿರುವ ಕೋವಿಡ್‌ ಮಾರ್ಗಸೂಚಿಗಳನ್ನು ಕಲಾವಿದರು ಒ‍ಪ್ಪಿಕೊಂಡಿದ್ದಾರೆ. ಅದೇರೀತಿ, ಸರ್ಕಾರ ಕೂಡ ಕಲಾವಿದರ ಕಷ್ಟಕ್ಕೆ ಮಿಡಿಯಬೇಕು ಎಂಬುದು ಕಲಾವಿದರ ಆಗ್ರಹವಾಗಿದೆ.

‘ಆಂಧ್ರಪ್ರದೇಶದಲ್ಲಿ ಗಣೇಶ ತಯಾರಕರಿಗೆ ಸರ್ಕಾರ ಪ್ಯಾಕೇಜ್‌ ಪ್ರಕಟಿಸಿದೆ. ಅದೇರೀತಿ, ರಾಜ್ಯ ಸರ್ಕಾರವೂ ಪ್ರತಿ ಕಲಾವಿದನಿಗೆ ₹10 ಸಾವಿರ ಹಣ ನೀಡಬೇಕು. ಈ ಹಣ ಕಷ್ಟದಲ್ಲಿರುವ ಕಲಾವಿದರ ಮೂರು ತಿಂಗಳ ರೇಷನ್‌ಗಾದರೂ ಬರುತ್ತದೆ’ ಎನ್ನುತ್ತಾರೆ ಮುತ್ತಣ್ಣ ಭರಡಿ.

ಈ ಬಾರಿ ಮಳೆಯಿಂದಾಗಿಯೂ ಗಣೇಶ ವಿಗ್ರಹ ವಹಿವಾಟು ಕುಸಿದಿದೆ. ಬಿಟ್ಟು ಬಿಟ್ಟು ಸುರಿಯುವ ಮಳೆಯ ಕಾರಣದಿಂದಾಗಿ ಹಳ್ಳಿಯ ಜನರು ನಗರ ಪ್ರದೇಶಗಳಿಗೆ ಬರಲು ಸಾಧ್ಯವಾಗುತ್ತಿಲ್ಲ.

‘ದೊಡ್ಡ ಗಣೇಶನ ವಿಗ್ರಹಗಳಿಗೆ ಜಿಲ್ಲೆಯ ವಿವಿಧೆಡೆ ಇರುವ ಗಣೇಶ ಸಂಘಗಳು ಹಾಗೂ ಮಂಡಳಿಗಳೇ ಪ್ರಮುಖ ಗ್ರಾಹಕರು. ಹಳ್ಳಿಯಿಂದ ಜನರು ಬಂದರೇ ವಿಗ್ರಹ ಖರೀದಿಸಿಯೇ ಮುನ್ನಡೆಯುತ್ತಾರೆ. ಈಚೆಗೆ ಮಳೆ ಜಾಸ್ತಿ ಆಗಿರುವುದರಿಂದ ಜನರು ಬರುತ್ತಿಲ್ಲ. ವ್ಯಾಪಾರವೂ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ’ ಎಂದು ಮುತ್ತಣ್ಣ ಭರಡಿ ಹೇಳಿದರು.

ಅರಿಷಿಣ ಗಣಪನಿಗೆ ವಿರೋಧ

ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಈ ಬಾರಿ 10 ಲಕ್ಷ ಅರಿಷಿಣ ಗಣಪತಿ ನಿರ್ಮಿಸುವ ವಿಶ್ವ ದಾಖಲೆಯ ಅಭಿಯಾನ ಆರಂಭಿಸಿರುವುದು ಬಡ ಕಲಾವಿದರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಎಂದು ಮುತ್ತಣ್ಣ ಭರಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರಿಷಿಣ ಗಣಪ ಶಾಸ್ತ್ರೋಕ್ತವಾದುದಲ್ಲ; ಮಣ್ಣಿನಿಂದ ರೂಪಿಸಿದ ಮೂರ್ತಿಯೇ ಶ್ರೇಷ್ಠ. ಇದಕ್ಕೆ ಪುರಾಣದಲ್ಲಿ ದಾಖಲೆಗಳಿವೆ. ದಾಖಲೆ ನಿರ್ಮಾಣದ ಉದ್ದೇಶದಿಂದ ಸಿನಿಮಾ ತಾರೆಯರಿಗೆ ಲಕ್ಷಾಂತರ ರೂಪಾಯಿ ಹಣ ನೀಡಿ ಪ್ರಚಾರ ಮಾಡುವ ಬದಲು; ಅದೇ ಹಣವನ್ನು ಕಷ್ಟದಲ್ಲಿರುವ ಗಣೇಶ ವಿಗ್ರಹ ತಯಾರಿಕರಿಗೆ ನೀಡಬಹುದಿತ್ತು ಎಂದು ಹೇಳಿದ್ದಾರೆ.

ನ್ಯಾಯಾಲಯ ಆದೇಶ ನೀಡಿದ್ದರೂ ಸರ್ಕಾರಕ್ಕೆ ಈವರೆಗೆ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ಗಣೇಶನನ್ನು ನಿಷೇಧಗೊಳಿಸಲು ಸಾಧ್ಯವಾಗಿಲ್ಲ. ಈಗ ಅರಿಷಿಣ ಗಣಪತಿ ಮಾಡಿ ಎಂದು ಹೇಳುವ ಮೂಲಕ ಬಡಕಲಾವಿದರ ಬದುಕು ಕಸಿಯುವುದಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿದ್ದಾರೆ.

ಒಂದೇ ಸೂರಿನಡಿ ವಿಗ್ರಹ ಮಾರಾಟಕ್ಕೆ ಅವಕಾಶ

ಗದಗ ನಗರದ ಎಪಿಎಂಸಿ ಆವರಣದಲ್ಲಿರುವ ವಿವೇಕಾನಂದ ಸಭಾಂಗಣದಲ್ಲಿ ಚಿಕ್ಕ ಗಣೇಶ ವಿಗ್ರಹಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಣ್ಣ ವಿಗ್ರಹಗಳನ್ನು ಖರೀದಿ ಮಾಡುವ ಗ್ರಾಹಕರಿಗೆ ಒಂದೇ ಸೂರಿನಡಿ ಹಲವು ಗಣೇಶ ಮೂರ್ತಿಗಳನ್ನು ನೋಡುವ, ಕೊಳ್ಳುವ ಅವಕಾಶ ಲಭ್ಯವಾಗಿದೆ.

ದೊಡ್ಡ ಗಣೇಶನ ಮೂರ್ತಿಗಳು ನಗರದ ಟ್ಯಾಗೋರ್‌ ರಸ್ತೆ, ಗಂಜಿ ಬಸವೇಶ್ವರ ಸರ್ಕಲ್‌, ಬೆಟಗೇರಿ ಹಾಗೂ ಕುಂಬಾರ ಓಣಿ ಲಭ್ಯ ಇವೆ.

----

ಗಣೇಶೋತ್ಸವಕ್ಕೆ ಸರ್ಕಾರ ವಿಧಿಸಿರುವ ಮಾರ್ಗಸೂಚಿಗಳಿಂದ ಕಲಾವಿದ ಬದುಕು ಕಷ್ಟದಲ್ಲಿದೆ. ಸರ್ಕಾರ ನಮಗೆ ಆರ್ಥಿಕ ನೆರವು ನೀಡುವುದರ ಜತೆಗೆ ವಿಗ್ರಹ ಮಾರಾಟ ಉದ್ಯಮ ಬೆಳೆಸಲು ನೆರವಾಗಬೇಕು
ಮುತ್ತಣ್ಣ ಭರಡಿ, ಕಲಾವಿದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT