ಭಾನುವಾರ, ಜುಲೈ 3, 2022
26 °C
ಗಲೀಜು ವಾತಾವರಣಕ್ಕೆ ಅನಿವಾರ್ಯವಾಗಿ ಒಗ್ಗಿಕೊಂಡು ಜೀವನ ನಿರ್ವಹಣೆ

ರಸ್ತೆಯಲ್ಲೇ ಶೌಚ; ಚರಂಡಿಯಲ್ಲೇ ತ್ಯಾಜ್ಯ

ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

Prajavani

ಗದಗ: ನಗರದ ಹೃದಯಭಾಗದಲ್ಲಿರುವ ಜವಳಿ ಗಲ್ಲಿ ಶುಚಿತ್ವದ ಕೊರತೆಯಿಂದ ನರಳುತ್ತಿದೆ. ಇಲ್ಲಿನ ಸಣ್ಣ ಸಣ್ಣ ಓಣಿಯ ರಸ್ತೆ ಬದಿಯಲ್ಲಿ ಮಕ್ಕಳು ಈಗಲೂ ಮಲ, ಮೂತ್ರ ವಿಸರ್ಜಿಸುತ್ತಾರೆ. ಆದರೂ, ಪೋಷಕರು ಆ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಂಡಿಲ್ಲ. ಕಟ್ಟಿಕೊಂಡಿರುವ ಚರಂಡಿಗಳು ದುರ್ನಾತ ಹೊರ ಹೊಮ್ಮಿಸುತ್ತವೆ. 

ಒಂದೂವರೆ ವರ್ಷ ಕಳೆದರೂ ನಗರಸಭೆಗೆ ಚುನಾವಣೆ ನಡೆಯದ ಕಾರಣ ಈ ಬಡಾವಣೆಯಲ್ಲಿ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಜನಪ್ರತಿನಿಧಿ ಇದ್ದಾಗಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿ ಇರಲಿಲ್ಲ ಎಂದು ಕೆಲವರು ಆರೋಪ ಮಾಡುತ್ತಾರೆ.

ಜವಳಿ ಗಲ್ಲಿ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಜೀವನ ನಿರ್ವಹಣೆಗೆ ವ್ಯಾಪಾರವನ್ನೇ ನೆಚ್ಚಿಕೊಂಡಿದ್ದಾರೆ. ಉಸಿರಾಡಲೂ ಜಾಗವಿಲ್ಲದಂತೆ ಒತ್ತೊತ್ತಾಗಿರುವ ಇಲ್ಲಿನ ಮನೆಗಳಲ್ಲಿ ವಾಸಿಸುವ ಜನ ನಾನಾ ಬಗೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

‘ಐದು ವರ್ಷಗಳ ಹಿಂದೆ ಇಲ್ಲಿನ ಚಿತ್ರಣ ಬೇರೆಯದೇ ರೀತಿಯಲ್ಲಿ ಇತ್ತು. ‘ಸ್ವಚ್ಛ ಭಾರತ್‌’ ಯೋಜನೆ ಪರಿಚಯ ಆದ ನಂತರ ಜವಳಿ ಗಲ್ಲಿಯ ಸ್ಥಿತಿ ಶೇ 90ರಷ್ಟು ಸುಧಾರಿಸಿದೆ’ ಎನ್ನುತ್ತಾರೆ ಕಿರಾಣಿ ವ್ಯಾಪಾರಿ ರಾಕೇಶ್‌.

‘ಎರಡು ವರ್ಷಗಳಿಂದ ಈಚೆಗೆ ನಗರಸಭೆಯವರು ಕಸ ಸಂಗ್ರಹಣೆಗೆ ಗಾಡಿ ಕಳುಹಿಸುತ್ತಿದ್ದಾರೆ. ಅದಕ್ಕೂ ಮುನ್ನ ಇಲ್ಲಿನ ಜನ ಮನೆಯ ಕಸವನ್ನೆಲ್ಲ ಯಾವುದಾದರೂ ಒಂದು ಸ್ಥಳಕ್ಕೆ ಸುರಿದು ಹೋಗಿ ಬಿಡುತ್ತಿದ್ದರು. ಆ ಚಾಳಿ ಬಿಡಿಸುವ ಸಲುವಾಗಿ ಕಸ ತಂದು ಹಾಕುವ ಜಾಗವನ್ನು ಗೂಡಿಸಿ, ರಂಗೋಲಿ ಹಾಕುವ ಅಭಿಯಾನ ಶುರುಮಾಡಿದೆವು. ಆನಂತರವಷ್ಟೇ ಜನ ಅಲ್ಲಿಗೆ ಕಸ ತಂದು ಸುರಿಯುವುದನ್ನು ನಿಲ್ಲಿಸಿದರು’ ಎಂದು ಹೇಳಿದರು.

ಜವಳಿ ಗಲ್ಲಿ ಪ್ರದೇಶಕ್ಕೆ 24X7 ನೀರಿನ ಸೌಕರ್ಯ ಇದೆ. ಆದರೆ, ಈಗ ನಾಲ್ಕೈದು ದಿನಕ್ಕೊಮ್ಮೆ ನೀರು ಬರುತ್ತಿದೆ. ನಿರಂತರ ನೀರು ಪೂರೈಕೆ ಯೋಜನೆ ಆರಂಭಕ್ಕೂ ಮುನ್ನ ನಗರಸಭೆಯವರು ನೀರು ಸಂಗ್ರಹ ಟ್ಯಾಂಕ್‌ಗಳನ್ನು ಮುಚ್ಚಿಸಿದ್ದರು. ಆರಂಭದಲ್ಲಿ ನೀರು ಪೂರೈಕೆಯೂ ಚೆನ್ನಾಗಿತ್ತು. ಆದರೆ, ಈಗ ವಾರಕ್ಕೊಮ್ಮೆ ನೀರು ಬಿಡುತ್ತಿರುವುದರಿಂದ ನೀರು ಸಂಗ್ರಹಣೆಗೆ ಕಷ್ಟವಾಗುತ್ತಿದೆ ಎಂಬುದು ಸ್ಥಳೀಯರ ಅಳಲಾಗಿದೆ.

‘ಕೂಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು ಈ ಪ್ರದೇಶದಲ್ಲಿ ಹೆಚ್ಚು ಇದ್ದಾರೆ. ಕೆಲವರಿಗೆ ಸ್ವಂತ ಮನೆ ಇಲ್ಲ. ಆಶ್ರಯ ಯೋಜನೆ ಅಡಿ ಅರ್ಹರಿಗೆ ಮನೆ ಕಟ್ಟಿಸಿಕೊಡಬೇಕು’ ಎಂದು ಹೇಳಿದರು ಮನೆಗೆಲಸ ಮಾಡುವ ಸಬೀನಾ ಬೇಗಂ.

ಬಡಾವಣೆಯನ್ನು ಸ್ವಚ್ಛವಾಗಿಡಲು ಹಾಗೂ ನೀರು ಪೂರೈಕೆಯಲ್ಲಿ
ವ್ಯತ್ಯಯ ಉಂಟಾಗದಂತೆ ನಗರಸಭೆಯವರು ಗಮನ ಹರಿಸಬೇಕು. ನಮ್ಮ ಬಡಾವಣೆ ನಮ್ಮ ಮನೆ ಇದ್ದಂತೆ ಎಂಬ ಭಾವವನ್ನು ಸ್ಥಳೀಯರು ಬೆಳೆಸಿಕೊಳ್ಳುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಲೀಂ ಬೋದ್ಲೆಖಾನ್‌ ತಿಳಿಸಿದರು.

ಮನೆ ಮುಂದೆಲ್ಲ ಮಾಂಸದಂಗಡಿ

ಜವಳಿ ಗಲ್ಲಿ ಪ್ರದೇಶದಲ್ಲಿ ಕುರಿ, ಕೋಳಿ ಹಾಗೂ ಮೀನು ಮಾರಾಟ ನಡೆಯುತ್ತದೆ. ಆದರೆ, ಅದಕ್ಕೆ ವ್ಯವಸ್ಥಿತವಾದ ಮಾರುಕಟ್ಟೆ ಇಲ್ಲ. ವ್ಯಾಪಾರಿಗಳೆಲ್ಲರೂ ರಾಜಕಾಲುವೆ ಮೇಲೆಯೇ ಮಾಂಸ ಮಾರಾಟ ಮಾಡುತ್ತಾರೆ. ಬೀದಿ ನಾಯಿಗಳು ಮಾಂಸದ ಅಂಗಡಿ ಸುತ್ತ ಸುತ್ತುತ್ತವೆ. ಸೊಳ್ಳೆ, ನೊಣಗಳು ಕತ್ತರಿಸಿಟ್ಟ ಮಾಂಸದ ಮೇಲೆ ಹಾರಾಡುತ್ತವೆ. ಮಾಂಸದ ತ್ಯಾಜ್ಯವೆಲ್ಲವೂ ಚರಂಡಿ ಸೇರುತ್ತಿದೆ.

ಜತೆಗೆ ಈ ಪ್ರದೇಶದಲ್ಲಿ ಮನೆಗಳ ಮುಂದೆ‌ಲ್ಲ ಕೋಳಿ ಮಾಂಸ ಮಾರಾಟ ನಡೆಯುತ್ತದೆ. ಇದನ್ನು ತಪ್ಪಿಸಿ, ವ್ಯವಸ್ಥಿತ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು