ಮಂಗಳವಾರ, ಮೇ 17, 2022
26 °C

ಆಕಸ್ಮಿಕ ಬೆಂಕಿ; ಸುಟ್ಟು ಕರಕಲಾದ ಕಡಲೆ ಗೂಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ನರೇಗಲ್: ಕಡಲೆ ಗೂಡಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸುಮಾರು ಒಂದು ಲಕ್ಷ ರೂಪಾಯಿಯಷ್ಟು ಮೌಲ್ಯದ ಕಡಲೆ ಬೆಳೆ ಸುಟ್ಟು ಕರಕಲಾದ ಘಟನೆ ಹೋಬಳಿಯ ತೋಟಗಂಟಿ ಗ್ರಾಮದ ಕೆರೆಯ ಪಕ್ಕದ ಹೊಲದಲ್ಲಿ ಗುರುವಾರ ರಾತ್ರಿ ನಡೆದಿದೆ.

ತೋಟಗಂಟಿ ಗ್ರಾಮದ ಕಳಕನಗೌಡ ಸಣ್ಣಮಲ್ಲನಗೌಡ್ರ ಎಂಬ ರೈತನಿಗೆ ಸೇರಿದ ನಾಲ್ಕು ಎಕರೆ ಜಮಿನಿನಲ್ಲಿ ಹುಲುಸಾಗಿ ಬೆಳೆದಿದ್ದ ಹಿಂಗಾರು ಬೆಳೆ ಕಡಲೆಯನ್ನು ಎರಡು ದಿನ ಹತ್ತಾರು ಆಳುಗಳ ಸಹಾಯದಿಂದ ಕಿತ್ತು ಒಂದೆಡೆ ಗೂಡು ಹಾಕಿದ್ದರು. ಸಂಜೆ ವೇಳೆ ಬುತ್ತಿ ತೆಗೆದುಕೊಂಡು ಬರಲು ರೈತ ಮನೆಗೆ ಹೋಗಿದ್ದನು. ನಂತರ ಮನೆಗೆ ಬಂದ ಗ್ರಾಮಸ್ಥರು ಹೊಲದಲ್ಲಿ ಕಡಲೆ ಗೂಡಿಗೆ ಬೆಂಕಿ ಬಿದ್ದಿರುವ ವಿಷಯ ರೈತನಿಗೆ ತಿಳಿಸಿದ್ದಾರೆ. ತಡಮಾಡದೇ ಜಮೀನಿಗೆ ಹೋಗಿ ನೋಡುವಷ್ಟರಲ್ಲಿ ಕಡಲೆ ಬೆಳೆ ಸುಟ್ಟು ಕರಕಲಾಗಿತ್ತು. ಸಾಲ ಮಾಡಿ ಕಷ್ಟಪಟ್ಟು ಬೆಳೆಯಲಾಗಿದ್ದ ಸುಮಾರು 30 ಚೀಲದಷ್ಟು ಕಡಲೆಗೆ ಹೇಗೆ ಬೆಂಕಿ ಬಿದ್ದಿದೆ ಎಂದು ತಿಳಿಯದಂತಾಗಿದೆ ಎಂದು ರೈತ ಕಳಕನಗೌಡ ಪ್ರಜಾವಾಣಿಗೆ ತಿಳಿಸಿದರು.

ಕೋವಿಡ್, ಮುಂಗಾರು ಅತಿವೃಷ್ಟಿ, ಹಿಂಗಾರು ಅನಾವೃಷ್ಟಿ ಸಂಕಷ್ಟದಲ್ಲಿರುವ ರೈತನ ಕಡಲೆ ಗೂಡಿಗೆ ಬೆಂಕಿ ತಗುಲಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ. ನೋವಿನಲ್ಲಿರುವ ರೈತನಿಗೆ ಸಂಬಂಧಿಸಿದ ಇಲಾಖೆಯವರು ಸೂಕ್ತ ಪರಿಹಾರ ನೀಡಬೇಕು ಎಂದು ಹೊಳೆಆಲೂರು ಎಪಿಎಂಸಿ ಮಾಜಿ ಉಪಾಧ್ಯಕ್ಷ ನಿಂಗನಗೌಡ ಲಕ್ಕನಗೌಡ್ರ ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಅಬ್ಬಿಗೇರಿ ಗ್ರಾಮಲೆಕ್ಕಾಧಿಕಾರಿ ಜಿ. ಎ. ಜಂತ್ಲಿ, ಪಿಎಸ್ ಐ ರಾಘವೇಂದ್ರ ಭೇಟಿ ನೀಡಿದರು. ಈ ಕುರಿತು ನರೇಗಲ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು