ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹ

ಜೈನ ಮುನಿ ಹತ್ಯೆ ಖಂಡಿಸಿ ಗದಗ ಜೈನ ಸಮಾಜದಿಂದ ಮೌನ ಮೆರವಣಿಗೆ
Published 13 ಜುಲೈ 2023, 6:55 IST
Last Updated 13 ಜುಲೈ 2023, 6:55 IST
ಅಕ್ಷರ ಗಾತ್ರ

ಗದಗ: ಆಚಾರ್ಯ ಕಾಮಕುಮಾರ ನಂದಿ ಮುನಿ ಅವರ ಹತ್ಯೆ ಖಂಡಿಸಿ ಗದಗ ಜಿಲ್ಲಾ ಜೈನ್‌ ಸಮಾಜದ ಸದಸ್ಯರು ಬುಧವಾರ ನಗರದಲ್ಲಿ ಬೃಹತ್ ಮೌನ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ನಗರದ ಜೈನ್ ಮಂದಿರದಲ್ಲಿ ಸಂಘಟಿಕರಾದ ಜಿಲ್ಲಾ ದಿಗಂಬರ ಜೈನ್ ಸಂಘ, ರಾಜಸ್ಥಾನ ಮೂರ್ತಿ ಪೂಜಕ ಸಮಾಜ, ಗುಜರಾತಿ ಜೈನ ಸಮಾಜ, ಸ್ಥಾನಕವಾಸಿ ಜೈನ ಸಮಾಜ ಹಾಗೂ ತೇರಾಪಂಥ್‌ ಜೈನ ಸಮಾಜದ ಪದಾಧಿಕಾರಿಗಳು, ಸಮಾಜಬಾಂಧವರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ನಗರದ ಪ್ರಮುಖ ಬೀದಿಗಳಲ್ಲಿ ಮೌನ ಮೆರವಣಿಗೆ ಕೈಗೊಂಡು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಬೆಳಗಾವಿ ಜಿಲ್ಲೆ, ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಆಚಾರ್ಯ ಕಾಮಕುಮಾರನಂದಿ ಮುನಿಗಳನ್ನು ಹತ್ಯೆ ಮಾಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿರುವ ಪ್ರಜ್ಞಾವಂತ ಮಾನವಕುಲವನ್ನು ದಿಗ್ಬ್ರಮೆಗೊಳಿಸಿದೆ. ಅಲ್ಲದೇ ನಾಡಿನ ಜೈನ ಸಮಾಜವು ತೀವ್ರ ಆಘಾತಕ್ಕೊಳಗಾಗಿದೆ. ಘಟನೆಯನ್ನು ಸಕಲ ಜೈನ ಮುನಿಗಳು, ಮಾತಾಜಿಗಳು, ಭಟ್ಟಾರಕರು, ಶ್ರಾವಕರು ಉಗ್ರವಾಗಿ ಖಂಡಿಸಿದ್ದಾರಲ್ಲದೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದರು.

ಬಿಇ ಪದವೀಧರರಾದ ಕಾಮಕುಮಾರನಂದಿ ಮುನಿಗಳು ಅಧ್ಯಾತ್ಮದತ್ತ ಒಲವು ತೋರಿ 25 ವರ್ಷಗಳ ಹಿಂದೆ ಮುನಿದೀಕ್ಷೆ ಸ್ವೀಕರಿಸಿ ಮಾನವಕುಲದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದರು. ದಾನಿಗಳ ಸಹಕಾರದೊಂದಿಗೆ 13 ವರ್ಷಗಳ ಹಿಂದೆ ಭೂಮಿಯನ್ನು ಖರೀದಿಸಿ ಅಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಿಕ- ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕೇಂದ್ರವಾಗಿಸಲು ಮುಂದಾಗಿದ್ದರು.
ಜೈನ ಸಮಾಜವು ವೈದಿಕ ಸಂಸ್ಕೃತಿಯ ಪೂರ್ವದಿಂದಲೂ ಅಹಿಂಸಾ ಪರಮೋಧರ್ಮ, ಬದುಕು ಮತ್ತು ಬದುಕಲು ಬಿಡು, ಜೀವಿ ಜೀವಿಗೆ ನೆರವು ಎಂಬ ಧ್ಯೇಯದೊಂದಿಗೆ ಮಾನವ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದ ಆಚಾರ್ಯರನ್ನು ಹೀಗೆ ಹಿಂಸೆಯೊಂದಿಗೆ ಕೊಲೆ ಮಾಡಿರುವ ಘಟನೆ ಜೈನ ಸಮಾಜದ ಚರಿತ್ರೆಯಲ್ಲಿ ಎಂದೂ ಮರೆಯಲಾಗದ ಘೋರ ದುಷ್ಕೃತ್ಯವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕೊಲೆ ಮಾಡಿದ ಆರೋಪಿಗಳನ್ನು ಗಲ್ಲು ಶಿಕ್ಷೆಗೆ ಒಳಪಡಿಸುವ ಮೂಲಕ ಇಂಥ ಅಮಾನವೀಯ ಕೃತ್ಯಗಳು ಯಾವ ಕಾಲಕ್ಕೂ ಮರುಕಳಿಸದಂತೆ ಸರ್ಕಾರ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌., ಹೆಚ್ಚುವರಿ ಜಿಲ್ಲಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ ಮನವಿ ಸ್ವೀಕರಿಸಿದರು. 

ದಿಗಂಬರ ಜೈನ ಸಂಘದ ಅಧ್ಯಕ್ಷ ಪಿ.ಎ.ಕುಲಕರ್ಣಿ, ಕಾರ್ಯದರ್ಶಿ ಪ್ರಕಾಶ ಮುತ್ತಿನ, ರಾಜಸ್ಥಾನ ಮೂರ್ತಿ ಪೂಜಕ ಸಮಾಜದ ಅಧ್ಯಕ್ಷ ಪಂಕಜ ಬಾಫಣಾ, ಗುಜರಾತಿ ಜೈನ ಸಮಾಜದ ಅಧ್ಯಕ್ಷ ವಿಜಯ ಲೂಥಿಯಾ, ಸ್ಥಾನಕವಾಸಿ ಜೈನ ಸಮಾಜದ ಅಧ್ಯಕ್ಷ ರೂಪಾಜಿ ಪಾಲರೇಚ ಹಾಗೂ ತೇರಾಪಂಥ ಜೈನ ಸಮಾಜದ ಅಧ್ಯಕ್ಷ ಸುರೇಶಬಾಯಿ ಕೊಠಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT