ಗದಗ: ಇಲ್ಲಿನ ಜಿಲ್ಲಾಡಳಿತ ಭವನದ ಆವರಣದಲ್ಲಿ ಬುಧವಾರ ನಡೆದ ಜನತಾ ದರ್ಶನ ಕಾರ್ಯಕ್ರಮ ಜಿಲ್ಲೆಯಲ್ಲಿ ದಶಕಗಳಿಂದ ನನೆಗುದಿಗೆ ಬಿದ್ದಿರುವ ಸಮಸ್ಯೆಗಳಿಗೆ ಕನ್ನಡಿ ಹಿಡಿಯಿತು. ಕನಿಷ್ಠ ಸೌಕರ್ಯಕ್ಕಾಗಿ ಸಾರ್ವಜನಿಕರು ವರ್ಷಾನುಗಟ್ಟಲೇ ಅಡ್ಡಾಡಿದರೂ ಪ್ರತಿಫಲ ಸಿಗದೇ ಹತಾಶಗೊಂಡಿರುವ ಸ್ಥಿತಿ ತೆರೆದಿಟ್ಟಿತು.
ಜನತಾ ದರ್ಶನದ ಮೂಲಕ ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡಲಾಗುವುದು ಎಂಬ ಸರ್ಕಾರದ ‘ಧ್ವನಿ’ ಕೇಳಲು ಹಿತವಾಗಿದೆ. ಆದರೆ, ಅದರಂತೆ ಅಧಿಕಾರಿಗಳು ನಡೆದುಕೊಳ್ಳದಿರುವ ಕಾರಣ ಶಪಿಸಿಕೊಂಡೇ ಅಡ್ಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಧ್ವನಿ ಅಲ್ಲಿ ಸೇರಿದ್ದ ಜನರ ಗುಂಪಿನಿಂದ ಕೇಳಿಬಂತು.
33ನೇ ವಾರ್ಡ್‌ನ ವಿ.ಎ.ಹಿರೇಮಠ ಎಂಬುವರು, ‘ನಮ್ಮ ಏರಿಯಾಕ್ಕೆ ಬೀದಿದೀಪ ವ್ಯವಸ್ಥೆ ಮಾಡಿಕೊಡಿ’ ಎಂದು ಕಳೆದ ಐದು ವರ್ಷಗಳಿಂದ ಅಧಿಕಾರಿಗಳನ್ನು ಅಂಗಲಾಚಿದ್ದಾರೆ. ಆದರೆ, ಅವರು ಕೇಳುವ ಐದಾರು ಬೀದಿದೀಪಗಳನ್ನು ಅಳವಡಿಸಲು ನಗರಸಭೆಗೆ ಸಾಧ್ಯವಾಗಿಲ್ಲ’ ಎಂದರು.
ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುವಂತೆ ಸಚಿವ ಎಚ್.ಕೆ.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು. ಆದರೆ ಅವರು, ‘ಬೀದಿದೀಪ ಅಳವಡಿಸಲು ಟೆಂಡರ್ ಕರೆಯಬೇಕು’ ಅಂತ ಉತ್ತರಿಸಿದರು. ಈ ಸಮಸ್ಯೆ ಬಗೆಹರಿಸುವ ಕುರಿತಾಗಿ ಅವರು ಸ್ಪಷ್ಟ ನಿರ್ಧಾರ ಪ್ರಕಟಿಸಲಿಲ್ಲ.
ಅದೇ ರೀತಿ, 33ನೇ ವಾರ್ಡ್‌ನ ಕೆಲವೆಡೆ ಹಂಪ್ಸ್ ನಿರ್ಮಾಣಕ್ಕೆ ಸಾರ್ವಜನಿಕರು ಆಗ್ರಹಿಸಿದರು.
ಅವಳಿ ನಗರದ ವೆಲ್‌ಫೇರ್ ಟೌನ್‌ಶಿಪ್‌ನ ನಿವೃತ್ತ ಎಎಸ್ಐ ನದಾಫ್, ರಸ್ತೆ ನಿರ್ಮಿಸಿಕೊಡಿ ಅಂತ ಕೇಳಲು ಶುರುಮಾಡಿ ಸಾಕಷ್ಟು ವರ್ಷಗಳಾಗಿವೆ. ಯಾವುದೇ ಸ್ಪಂದನೆ ಸಿಕ್ಕಿಲ್ಲ. ವನಮಹೋತ್ಸವದ ಅಂಗವಾಗಿ ನಮ್ಮ ಏರಿಯಾದಲ್ಲಿ ಉಚಿತವಾಗಿ ಸಸಿಗಳನ್ನು ನೆಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದರು. ಆದರೆ, ಈವರೆಗೂ ಹಚ್ಚಿಕೊಟ್ಟಿಲ್ಲ ಎಂದು ದೂರಿದರು.
‘ಅಡ್ಡಾಡಲು ರಸ್ತೆ ಇಲ್ಲ ಎಂಬುದು ಸರಿ. ಆದರೆ, ದೇಶದಲ್ಲಿ ಎಲ್ಲೂ ಇಲ್ಲದಂತಹ ಉತ್ತಮ ವಾತಾವರಣ ನಿಮ್ಮ ಪ್ರದೇಶದಲ್ಲಿದೆ. ಅದಕ್ಕೆ ಖುಷಿ ಪಡಿ. ರಸ್ತೆಯನ್ನು ಡಿಸೆಂಬರ್ ವೇಳೆಗೆ ಮಾಡಿಕೊಡಲಾಗುವುದು’ ಎಂದು ಸಚಿವರು ಹೇಳಿದರು.
ಸಸಿ ನೆಡುವುದರ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ವಿಚಾರಿಸಲಾಗಿ, ‘ಸಾರ್ವಜನಿಕರಿಗೆ ಸಸಿಗಳನ್ನು ಉಚಿತವಾಗಿ ಕೊಡುವ ಯಾವುದೇ ಯೋಜನೆ ಇಲ್ಲ. ಗಿಡಗಳು ಬೇಕಿದ್ದರೆ ₹3, ₹6 ಕೊಟ್ಟು ಖರೀದಿಸಬೇಕು’ ಎಂದು ಡಿಸಿಎಫ್ ಲೇಖರಾಜ್ ಮೀನಾ ಸ್ಪಷ್ಟಪಡಿಸಿದರು.
ಆಗ, ಸಚಿವರು, ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ವರ್ಣೇಕರ್ ಅವರನ್ನು ಕರೆದು, ಅವರಿಗೆ ಉಚಿತವಾಗಿ ಸಸಿ ನೀಡಿ, ಅವುಗಳನ್ನು ನೆಟ್ಟುಕೊಡುವಂತೆ ಸೂಚಿಸಿದರು.
ನಗರದ 22ನೇ ವಾರ್ಡ್ ನಿವಾಸಿ ಮಹಾಂತಪ್ಪ ಅವರು ಕಳೆದ 20 ವರ್ಷಗಳಿಂದ ನಮ್ಮ ಪ್ರದೇಶಕ್ಕೆ ಮೂಲಸೌಕರ್ಯಗಳನ್ನು ಒದಗಿಸಿಲ್ಲ. ನಾವೇನು ಮಾಡಬೇಕು? ರಸ್ತೆ, ಚರಂಡಿ, ಬೀದಿದೀಪದ ವ್ಯವಸ್ಥೆ, ಕುಡಿಯುವ ನೀರಿಗಾಗಿ ಇನ್ನೆಷ್ಟು ದಿನ ಅಧಿಕಾರಿಗಳ ಬಳಿಗೆ ಅಲೆದಾಡಬೇಕು? ಇದಕ್ಕೊಂದು ತಾರ್ಕಿಕ ಅಂತ್ಯ ನೀಡಿ ಎಂದು ಆಗ್ರಹಿಸಿದರು.
ರಾಮನಗೌಡ ಲೇಔಟ್ ನಿವಾಸಿಗಳದ್ದೂ ಅದೇ ಗೋಳು. ರಸ್ತೆ ಇಲ್ಲ, ಕುಡಿಯುವ ನೀರು ಬರುತ್ತಿಲ್ಲ ಎಂದು ಅಲವತ್ತುಕೊಂಡರು. ಹಂತ ಹಂತವಾಗಿ ಸಮಸ್ಯೆ ಬಗೆಹರಿಸುವ ಭರವಸೆಯನ್ನು ಸಚಿವರು ನೀಡಿದರು.
ಜನತಾ ದರ್ಶನದಲ್ಲಿ ಕೇಳಿಬಂದ ಕನಿಷ್ಠ ಮೂಲ ಸೌಕರ್ಯಗಳನ್ನು ಜನರಿಗೆ ತ್ವರಿತವಾಗಿ ಒದಗಿಸಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸಚಿವ ಎಚ್.ಕೆ.ಪಾಟೀಲ ಸೂಚಿಸಿದರು. ಅದಕ್ಕೆ ಗಡುವನ್ನೂ ನಿಗದಿಪಡಿಸಿದರು.
817 ಅಹವಾಲುಗಳ ಸ್ವೀಕಾರ
ಜಿಲ್ಲಾಡಳಿತದಿಂದ ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನದಲ್ಲಿ ಬುಧವಾರ ಸಂಜೆ 6.15ರ ವೇಳೆಗೆ ಗದಗ ತಾಲ್ಲೂಕಿನಿಂದ 530 ಗಜೇಂದ್ರಗಡ ತಾಲ್ಲೂಕಿನಿಂದ 29 ಲಕ್ಷ್ಮೇಶ್ವರ ತಾಲ್ಲೂಕಿನಿಂದ 55 ಮುಂಡರಗಿ ತಾಲ್ಲೂಕಿನಿಂದ 81 ನರಗುಂದ ತಾಲ್ಲೂಕಿನಿಂದ 26 ರೋಣ ತಾಲ್ಲೂಕಿನಿಂದ 59 ಶಿರಹಟ್ಟಿ ತಾಲ್ಲೂಕಿನಿಂದ 37 ಸೇರಿದಂತೆ ಒಟ್ಟು 817 ಅಹವಾಲುಗಳು ಸ್ವೀಕೃತಗೊಂಡವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.