ಗುರುವಾರ , ಅಕ್ಟೋಬರ್ 22, 2020
22 °C
ಗದಗ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ರಾಜಶೇಖರ ಪಾಟೀಲ

ಹುಟ್ಟಿನಿಂದ ಮರಣದವರೆಗೂ ಕಾನೂನು ಅನ್ವಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಮಗು ಭ್ರೂಣದಲ್ಲಿ ಇರುವಾಗ ಜಾರಿಯಾಗುವ ಕಾನೂನು ಅದು ಬಾಳಿ, ಬದುಕಿ ಮರಣ ಹೊಂದುವವರೆಗೆ ಅನ್ವಯವಾಗುತ್ತದೆ’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ರಾಜಶೇಖರ ಪಾಟೀಲ ಹೇಳಿದರು.

ಗದಗ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ವಕೀಲರ ಸಂಘ ಹಾಗೂ ರೋಟರಿ ಗದಗ ಸೆಂಟ್ರಲ್ ಸಹಯೋದಲ್ಲಿ ಮಂಗಳವಾರ ನಡೆದ ಅರೆಕಾಲಿಕ ಸ್ವಯಂ ಸೇವಕರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕಾನೂನು ಎಲ್ಲರಿಗೂ ಸಮನಾಗಿದ್ದು ಇದರಲ್ಲಿ ಗಂಡು ಹೆಣ್ಣು ಎಂಬ ವ್ಯತ್ಯಾಸ ಇರುವುದಿಲ್ಲ. ಅರೆಕಾಲಿಕ ಸ್ವಯಂ ಸೇವಕರಾಗಿ ಆಯ್ಕೆಯಾದ ಪ್ರಶಿಕ್ಷಣಾರ್ಥಿಗಳು ವಿವಿಧ ಕಾನೂನುಗಳ ಕುರಿತು ಮಾಹಿತಿ ಪಡೆದು, ಆರ್ಥಿಕವಾಗಿ ದುರ್ಬಲ ಹಾಗೂ ಶೋಷಿತರಿಗೆ ಅರಿವು ಮೂಡಿಸಬೇಕು. ಜತೆಗೆ ಉಚಿತವಾಗಿ ಕಾನೂನು ಸೇವೆಗಳನ್ನು ಒದಗಿಸಲು ಮುಂದಾಗಬೇಕು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ‘ಸಾರ್ವಜನಿಕರಲ್ಲಿ ಕಾನೂನಿನ ನೆರವು ಅರಿವು ಕುರಿತು ಜಾಗೃತಿ ಮೂಡಿಸಲು ಕಾನೂನು ಸೇವೆಗಳ ಪ್ರಾಧಿಕಾರವು ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾನೂನು ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಅರೆಕಾಲಿಕ ಸ್ವಯಂ ಸೇವಕರನ್ನು ನೇಮಿಸಲಾಗಿದೆ’ ಎಂದು ತಿಳಿಸಿದರು. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ನರಶಿಂಸಾ ಎಂ.ವಿ., ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಆನಂದ ಕೆ., ಎಸ್‌ಪಿ ಯತೀಶ್ ಎನ್., ರೋಟರಿ ಗದಗ ಸೆಂಟ್ರಲ್ ಅದ್ಯಕ್ಷ ರಾಜು ಕಂಟಿಗೊಣ್ಣವರ, ವಕೀಲರು, ಸ್ವಯಂ ಸೇವಕರು ಉಪಸ್ಥಿತರಿದ್ದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ.ಸಲಗರೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲರಾದ ಜೆ.ಸಿ.ರಶ್ಮಿ, ಸಾವಿತ್ರಿ ಕಬಾಡಿ ಉಪನ್ಯಾಸ ನೀಡಿದರು. ಉಷಾ ನಾಲ್ವಾಡ ಪ್ರಾರ್ಥಿಸಿದರು. ಪ್ರಭಾವತಿ ಬೆಟಗೇರಿ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.