ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪತಗುಡ್ಡಕ್ಕೆ ಜೀವ ಕಳೆ: ಚಿಗುರಿದ ಗಿಡ ಮರಗಳು

ಇಳೆಯನ್ನು ತಂಪಾಗಿಸಿದ ವರುಣ;
Last Updated 5 ಜೂನ್ 2021, 5:45 IST
ಅಕ್ಷರ ಗಾತ್ರ

ಮುಂಡರಗಿ: ಜಿಲ್ಲೆಯ ಗದಗ, ಶಿರಹಟ್ಟಿ ಹಾಗೂ ಮುಂಡರಗಿ ತಾಲ್ಲೂಕುಗಳಲ್ಲಿ ವಿಶಾಲವಾಗಿ ಹಬ್ಬಿರುವ ಕಪ್ಪತಗುಡ್ಡದ ಅರಣ್ಯ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಉತ್ತಮವಾಗಿ ಮಳೆ ಸುರಿಯುತ್ತಿದ್ದು, ಕಪ್ಪತಗುಡ್ಡವವು ಈಗ ಹರಿಸಿನಿಂದ ಕಂಗೊಳಿಸುತ್ತಿದೆ. ತನ್ನ ಸಹಜ ಸೌಂದರ್ಯದಿಂದ ಪರಿಸರ ಪ್ರೇಮಿಗಳನ್ನು ಮತ್ತು ಯಾತ್ರಾರ್ಥಿಗಳನ್ನು ಕೈಬೀಸಿ ಕರೆಯುತ್ತಿದೆ.

ಇತ್ತೀಚಿಗೆ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ಗುಡ್ಡದಲ್ಲಿದ್ದ ಗಿಡ ಮರಗಳಿಗೆ ಜೀವ ಕಳೆ ಬಂದಿದೆ. ಹುಲ್ಲಿನ ಮೆದೆಗಳು ಮತ್ತು ಕುರುಚಲು ಗಿಡಗಳಲ್ಲಿ ಹೊಸ ಚಿಗುರು ಮೂಡತೊಡಗಿದೆ.

ಅರಣ್ಯ ಪ್ರದೇಶವನ್ನು ಹೆಚ್ಚಿಸಬೇಕು ಮತ್ತು ಅದನ್ನು ಅಭಿವೃದ್ಧಿಪಡಿಸಬೇಕು ಎನ್ನುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಅರಣ್ಯಾಭಿವೃದ್ಧಿಯಲ್ಲಿ ಇಲಾಖೆಯು ಕೈಗೊಂಡಿರುವ ಕೆಲಸ ಕಾರ್ಯಗಳಿಗೆ ಸಾರ್ವಜನಿಕರು ಮತ್ತು ಕಪ್ಪತಗುಡ್ಡದ ಅಂಚಿನಲ್ಲಿರುವ ಕೆಲವು ಗ್ರಾಮಸ್ಥರು ಸಹಕರಿಸುತ್ತಿರುವುದು ಅರಣ್ಯ ಇಲಾಖೆಯ ಸಿಬ್ಬಂದಿಯಲ್ಲಿ ಹರ್ಷ ಮೂಡಿಸಿದೆ.

ಮುಂಡರಗಿ ಹಾಗೂ ಶಿರಹಟ್ಟಿ ತಾಲ್ಲೂಕುಗಳ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಂಘ ಸಂಸ್ಥೆಗಳ ಕಾರ್ಯಕರ್ತರು ಮಳೆಗಾಲದಲ್ಲಿ ಕಪ್ಪತಗುಡ್ಡಕ್ಕೆ ತೆರಳಿ ಅಲ್ಲಿ ವಿವಿಧ ಪ್ರಕಾರದ ಬೀಜದುಂಡೆಗಳನ್ನು ಹಾಕುತ್ತಿದ್ದಾರೆ. ಇದರಿಂದಾಗಿ ಕಪ್ಪತಗುಡ್ಡದ ಅರಣ್ಯ ಪ್ರದೇಶ ಅಭಿವೃದ್ಧಿ ಹೊಂದುತ್ತಲಿದೆ ಎಂದು ಹೇಳಲಾಗುತ್ತಿದೆ.

ಕಪ್ಪತಗುಡ್ಡ ವಲಯ ಅರಣ್ಯ ಇಲಾಖೆಯು ಕಪ್ಪತಗುಡ್ಡದ ಅರಣ್ಯ ಪ್ರದೇಶದಲ್ಲಿ ಪ್ರತಿವರ್ಷ ಬಿಲ್ವ, ಬೇವು, ಹುಣಸೆ, ಬಿದಿರು, ಆಲ, ಅರಳೆ, ಸಿಬಬೂಲ್ ಮೊದಲಾದ ಸಸಿಗಳನ್ನು ನೆಡುತ್ತಲಿದೆ. ಜೊತೆಗೆ ಬೇಸಿಗೆಯಲ್ಲಿ ಗುಡ್ಡಕ್ಕೆ ಬೆಂಕಿ ಬೀಳದಂತೆ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಇತ್ತೀಚೆಗೆ ಸರ್ಕಾರ ಕಪ್ಪತಗುಡ್ಡವನ್ನು ವನ್ಯಜೀವ ಸಂರಕ್ಷಣಾ ಪ್ರದೇಶ ಎಂದು ಘೋಷಿಸಿದೆ. ಜೊತೆಗೆ ಇತ್ತೀಚಿನ ವರ್ಷಗಳಲ್ಲಿ ಎಲ್ಲರಲ್ಲಿ ಪರಿಸರ ಜಾಗೃತಿ ಮೂಡಿದ್ದು, ಅರಣ್ಯ ನಾಶ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ.

ಸಂಪನ್ಮೂಲಗಳ ಆಗರ
ಕಪ್ಪತಗುಡ್ಡವು ಜಿಲ್ಲೆಯ ದಕ್ಷಿಣೋತ್ತರವಾಗಿ ಸುಮಾರು 33 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಬ್ಬಿದ್ದು, ಉತ್ತರ ಕರ್ನಾಟಕದ ಸಹ್ಯಾದ್ರಿ ಎಂಬ ಹಿರಿಮೆಗೆ ಪಾತ್ರವಾಗಿದೆ.

ಇಲ್ಲಿ ಅಶ್ವಗಂಧ, ಮದುಗುಣಕಿ, ನೆಲವಾಳ, ನೆಲಬೇವು, ಮಯೂರಶಿಖಿ, ಬೆಲ್ಲಗಡಗ, ದೇವಗಣಗಲೆ, ದೇವರಾಳಿ, ಅಮೃತಬಳ್ಳಿ ಮೊದಲಾದ ಅಪರೂಪದ ಔಷಧೀಯ ಸಸ್ಯಗಳು ಬೆಳೆಯುತ್ತಿವೆ. ಚಿರತೆ, ಜಿಂಕೆ, ಕಾಡುಹಂದಿ, ಮುಳ್ಳುಹಂದಿ ಮೊದಲಾದ ವಿವಿಧ ಪ್ರಾಣಿ ಪಕ್ಷಿಗಳ ವಾಸಸ್ಥಾನವಾಗಿದೆ. ಚಿನ್ನ, ಬೆಳ್ಳಿ, ಕಬ್ಬಿಣ ಮೊದಲಾದ ಖನಿಜ ಸಂಪತ್ತನ್ನು ತನ್ನ ಒಡಲಿನಲ್ಲಿ ಅಡಗಿಸಿಕೊಂಡಿದೆ.

*
ಪರಿಸರ ಸಂರಕ್ಷಿರುವ ಕಾಳಜಿ ಎಲ್ಲರಲ್ಲಿ ಮೂಡಿದಾಗ ಮಾತ್ರ ಕಪ್ಪತಗುಡ್ಡ ಅಭಿವೃದ್ಧಿ ಹೊಂದುತ್ತದೆ. ಅರಣ್ಯ ರಕ್ಷಣೆಗೆ ಅರಣ್ಯ ಇಲಾಖೆ ಕೈಗೊಂಡಿರುವ ಕಾರ್ಯ ಶ್ಲಾಘನೀಯ
-ಡಾ.ಅನ್ನದಾನೀಶ್ವರ ಸ್ವಾಮೀಜಿ ಮುಂಡರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT