ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣೆದುರೇ ಬಾಂಬ್‌ ಸಿಡಿದು ದೇಹ ನುಚ್ಚುನೂರು ಆಗುತ್ತಿತ್ತು..!

ಸೇನೆಯ ಬಾಂಬ್‌ ನಿಷ್ಕ್ರಿಯ ದಳದಲ್ಲಿ ಕಾರ್ಯನಿರ್ವಹಿದ್ದ ಈರಪ್ಪ ಚಿನ್ನೂರ
ಅಕ್ಷರ ಗಾತ್ರ

ನರೇಗಲ್: ‘ಈ ದೇಹ ದೇಶ ಸೇವೆಗೆ ಮೀಸಲು. ದೇಶಕ್ಕಾಗಿಯೇ ಮಣ್ಣಾಗಬೇಕು. ಈಗಲೂ ಸೇನೆಯಿಂದ ಕರೆ ಬಂದರೆ, ಮರುಕ್ಷಣವೇ ಗಡಿಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಸಿದ್ಧ.’

ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲಿ ಭಾರತೀಯ ಸೇನೆಯ ಭಾಗವಾಗಿದ್ದ, ಈಗ ನಿವೃತ್ತರಾಗಿರುವ ರೋಣ ತಾಲ್ಲೂಕಿನ ಜಕ್ಕಲಿ ಗ್ರಾಮದ ಯೋಧ ಈರಪ್ಪ ಸಂಗಪ್ಪ ಚಿನ್ನೂರ, ದೃಢಚಿತ್ತದಿಂದ ಈ ಮಾತುಗಳನ್ನು ಹೇಳಿದರು. ಅವರ ಮಾತಿನಲ್ಲಿ, ನಿರ್ಧಾರದಲ್ಲಿ ದೇಶಾಭಿಮಾನ ತುಂಬಿ ತುಳುಕುತ್ತಿತ್ತು.

ಕಾರ್ಗಿಲ್‌ ಯುದ್ಧ ನಡೆಯುವಾಗ, ಈರಪ್ಪ ಚಿನ್ನೂರ ಅವರು, ಸೇನೆಯ ಬಾಂಬ್‌ ನಿಷ್ಕ್ರಿಯ ದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಗಡಿಯಲ್ಲಿ ಎದುರಾಳಿ ಸೈನಿಕರು, ಮಣ್ಣಿನಡಿಯಲ್ಲಿ ಅಡಗಿಸಿ ಇಡುತ್ತಿದ್ದ ನೆಲಬಾಂಬ್‌ಗಳನ್ನು ಪತ್ತೆ ಹಚ್ಚಿ ಅವುಗಳನ್ನು ನಿಷ್ಕ್ರಿಯಗೊಳಿಸುವುದು ಅವರ ಕೆಲಸವಾಗಿತ್ತು. ‘ಇದೊಂದು ರೀತಿಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಮಾಡುವ ಕೆಲಸ. ಯಾವ ಕ್ಷಣದಲ್ಲಿ ಬೇಕಾದರೂ ಬಾಂಬ್‌ ಸ್ಫೋಟಗೊಂಡು ದೇಹ ನುಚ್ಚುನೂರು ಆಗಬಹುದಿತ್ತು. ಆದರೆ, ಈ ದೇಹ, ದೇಶಕ್ಕಾಗಿಯೇ ಮೀಸಲಾಗಿದೆ ಎಂಬ ಅಚಲ ಮನೋಬಲದೊಂದಿಗೆ, ಈ ಕೆಲಸವನ್ನು ಅತ್ಯಂತ ಎಚ್ಚರಿಕೆಯಿಂದ ಮಾಡುತ್ತಿದ್ದೆವು’ ಎಂದು ಈರಪ್ಪ ಸ್ಮರಿಸಿದರು.

ಸೇನೆಯಲ್ಲಿ 18 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ. 2002ರಲ್ಲಿ ನಿವೃತ್ತನಾದೆ. ನಿವೃತ್ತಿ ನಂತರ ಗುಳಗುಳಿ ಗ್ರಾಮದಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ. ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲಿ ಗಡಿಯಲ್ಲಿ 202 ಎಂಜನಿಯರಿಂಗ್‌ ದಳದಲ್ಲಿ ಇದ್ದೆ. ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸುವುದು ಮಾತ್ರವಲ್ಲ, ಶತ್ರುಗಳಿಗೆ ಗೊತ್ತಾಗದಂತೆ ಅವರ ನೆಲದಲ್ಲಿ ಬಾಂಬ್‌ ಇಡುವ ಕೆಲಸವನ್ನು ಮಾಡಬೇಕಾಗಿತ್ತು.

‘ಅದರಲ್ಲೂ ಪಾಕ್‌ ಗಡಿಯಲ್ಲಿ ರಾತ್ರಿ, ಕತ್ತಲಲ್ಲಿ ಬಾಂಬ್‌ ಇಡುವುದು, ಗ್ರೆನೇಡ್‌ ಎಸೆಯುವ ಸ್ಥಳವನ್ನು ನಿಖರವಾಗಿ ಗುರುತುಸಿವುದು ಸವಾಲಿನ ಕೆಲಸವಾಗಿತ್ತು. ಕೆಲವೊಮ್ಮೆ ಜೀವಂತ ಬಾಂಬ್‌ಗಳನ್ನು ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸುವಾಗ, ಸ್ಫೋಟಗೊಂಡು ಸ್ನೇಹಿತರ ದೇಹಗಳು ಕಣ್ಣೆದುರೇ ಛಿದ್ರಗೊಳ್ಳುವುದನ್ನು ನೋಡಬೇಕಾದ ಸ್ಥಿತಿ ಬರುತ್ತಿತ್ತು. ಕೆಲವರು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಬೇಕಾಗಿ ಬಂದ ಭಯಾನಕ ದೃಶ್ಯಗಳೂ ಇಂದಿಗೂ ಕಣ್ಣ ಮುಂದೆಯೇ ಇವೆ’ ಎಂದು ಈರಪ್ಪ ಎರಡು ದಶಕಗಳ ಹಿಂದಿನ ಘಟನೆಗಳನ್ನು ಸ್ಮರಿಸಿಕೊಂಡರು.

ಶತ್ರುಗಳು ಪರ್ವತಶ್ರೇಣಿಯ ಎತ್ತರದಲ್ಲಿ ಇದ್ದು, ಅಲ್ಲಿಂದ ಸ್ಫೋಟಕಗಳನ್ನು ಎಸೆಯುತ್ತಿದ್ದರು. ಕೆಲವೊಮ್ಮೆ ಕೆಲವೊಮ್ಮೆ ಗ್ರೆನೇಡ್‌ಗಳು ಬಂಡೆಗೆ ಅಪ್ಪಳಿಸಿ, ಕಲ್ಲು ಸ್ಫೋಟಗೊಂಡು, ಆ ಕಲ್ಲುಗಳು ಉರುಳಿ ಬಿದ್ದು ನಮ್ಮ ಯೋಧರು ಮೃತಪಡುತ್ತಿದ್ದರು. ಆದರೆ, ಎಷ್ಟೇ ಸವಾಲು ಎದುರಾದರೂ ನಾವು ಅಂಜದೇ ಮುನ್ನುಗ್ಗುತ್ತಿದ್ದೆವು. ಶತ್ರುಗಳಿಗೆ ಗಡಿಯಲ್ಲಿ ಹೆಜ್ಜೆಯನ್ನಿಡಲು ಸಹ ಅವಕಾಶ ಕೊಡದೇ ಅಲ್ಲಿಯೇ ಮಟ್ಟಹಾಕುತ್ತಿದ್ದೆವು. ನಾನು ಹಲವು ಬಾರಿ ಕೂದಲೆಳೆಯ ಅಂತರಿಂದ ಅಪಾಯದಿಂದ ಪಾರಾಗಿದ್ದೇನೆ ಎಂದು ಈರಪ್ಪ ಹೇಳಿದರು.

ಸೇನೆ ಸೇರಿದ ಆರಂಭದ ದಿನಗಳಲ್ಲಿ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಯೋಧರ ಮೃತದೇಹವನ್ನು ಅವರ ಸ್ವಗ್ರಾಮಕ್ಕೆ ತಲುಪಿಸುವ ಹಾಗೂ ಗಾಯಾಳುಗಳನ್ನು ಆರೈಕೆ ಮಾಡುವ ಸೇನೆಯ ತಂಡದಲ್ಲಿ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದೆ. ನಂತರ ರಾಜಸ್ತಾನ, ಪಂಜಾಬ್‌ನಲ್ಲಿ ಕೆಲಸ ಮಾಡಿದೆ. ಆ ಬಳಿಕ ಗಡಿಯಲ್ಲಿ ಕಾರ್ಯಾಚರಣೆಗೆ ನೇಮಕಗೊಂಡೆ’ ಎಂದು ಈರಪ್ಪ ತಮ್ಮ ಸೇನಾ ಜೀವನವನ್ನು ಸ್ಮರಿಸಿಕೊಂಡರು.

‘ಸೇನೆಯಿಂದ ನಿವೃತ್ತನಾಗಿ ಈಗ 17 ವರ್ಷಗಳು ಕಳೆದಿವೆ. ಆದರೆ, ಈಗಲೂ ನಾನೊಬ್ಬ ಸೈನಿಕ ಎನ್ನುವುದು ಅತ್ಯಂತ ಹೆಮ್ಮೆಯ ವಿಷಯ. ಎರಡು ದಶಕಗಳ ಹಿಂದೆ ಸ್ಫೋಟಕ ಪತ್ತೆ ತಂತ್ರಜ್ಞಾನ ಇಷ್ಟೊಂದು ಬೆಳೆದಿರಲಿಲ್ಲ. ಚಳಿಯಿರಲಿ, ಮಳೆಯಿರಲಿ, ಕಗ್ಗತ್ತಲೇ ಇರಲಿ, ದೇಶದೇವೆಗೆ ಸದಾ ಸಿದ್ಧರಿದ್ದೆವು. ಯಾವುದೇ ಆಧುನಿಕ ತಂತ್ರಜ್ಞಾನ, ರಕ್ಷಣಾ ಪರಿಕರಕಗಳನ್ನು ಬಳದೇ ಬಾಂಬ್‌ ನಿಷ್ಕ್ರಿಯಗೊಳಿಸುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ದೇಶಕ್ಕಾಗಿ ಇದನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದೇನೆ ಎಂಬ ಹೆಮ್ಮೆ ನನಗಿದೆ’ ಎಂದು ಈರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT