ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2023ರ ವಿಧಾನಸಭೆ ಚುನಾವಣೆ; ಕಾಂಗ್ರೆಸ್‌ನಿಂದ ಸ್ಪರ್ಧಿಸಲು 1,350 ಅರ್ಜಿ

ಗದಗ 4 ಕ್ಷೇತ್ರಗಳಲ್ಲಿ ಗೆಲುವು ನಿಶ್ಚಿತ: ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್‌ ವಿಶ್ವಾಸ
Last Updated 29 ನವೆಂಬರ್ 2022, 5:47 IST
ಅಕ್ಷರ ಗಾತ್ರ

ಗದಗ: ‘ಕಾಂಗ್ರೆಸ್‌ನ ಆಂತರಿಕ ಸಮೀಕ್ಷೆಯಂತೆ 2023ರ ಚುನಾವಣೆಯಲ್ಲಿ 130 ಸ್ಥಾನಗಳಲ್ಲಿ ಪಕ್ಷ ಗೆಲುವು ಸಾಧಿಸಲಿದೆ. ಆದರೆ, 150 ಸ್ಥಾನಗಳನ್ನು ಗೆಲ್ಲುವುದು ನಮ್ಮ ಸಂಕಲ್ಪವಾಗಿದೆ. ಗದಗ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಗೆಲುವು ನಿಶ್ಚಿತವಾಗಿದ್ದು, ನಾಲ್ಕು ಕ್ಷೇತ್ರಗಳನ್ನೂ ಜಯಿಸುವ ಗುರಿ ಹೊಂದಲಾಗಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಸಲೀಂ ಅಹ್ಮದ್‌ ಹೇಳಿದರು.

ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘2023ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು 1,350 ಅರ್ಜಿಗಳು ಬಂದಿವೆ. ಗದಗ ಜಿಲ್ಲೆಯಿಂದ 23 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಎಲ್ಲ ಅರ್ಜಿಗಳನ್ನು ಹಲವು ಹಂತಗಳಲ್ಲಿ ಪರಿಷ್ಕರಿಸಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್‌ ನೀಡಲಾಗುವುದು. ಪಕ್ಷದ ಹೈ ಕಮಾಂಡ್‌ ತೀರ್ಮಾನದಂತೆ ಡಿಸೆಂಬರ್‌ ಅಂತ್ಯದ ವೇಳೆಗೆ 140 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು. ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ 224 ಕ್ಷೇತ್ರಗಳಲ್ಲೂ ಪ್ರವಾಸ ಕೈಗೊಳ್ಳಲಾಗುವುದು. ಈ ವೇಳೆ ಬಿಜೆಪಿಯ ದುರಾಡಳಿತವನ್ನು ಜನರಿಗೆ ವಿವರಿಸಲಾಗುವುದು’ ಎಂದು ತಿಳಿಸಿದರು.

‘ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿರುವುದರಿಂದ ಆನೆಬಲ ಬಂದಿದೆ. ಅವರನ್ನು ಎಂಟು ಸಾವಿರ ಚುನಾಯಿತ ಪ್ರತಿನಿಧಿಗಳು ಆಯ್ಕೆ ಮಾಡಿದ್ದಾರೆ. ತಾಯಿ, ಮಕ್ಕಳ ಪಕ್ಷ ಎಂದು ಜರಿಯುತ್ತಿದ್ದ ಬಿಜೆಪಿಯವರು, ಅವರ ಪಕ್ಷದ ಅಧ್ಯಕ್ಷರಾದ ನಡ್ಡಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಆಯ್ಕೆ ಮಾಡಿದ್ದಾರೆ’ ಎಂದು ಲೇವಡಿ ಮಾಡಿದ ಅವರು, ‘ಖರ್ಗೆ ಅವರ ಆಯ್ಕೆ ಪ್ರಜಾಪ್ರಭುತ್ವದ ತತ್ವದ ಮೇಲೆ ನಡೆದಿದೆ’ ಎಂದು ಪ್ರತಿಪಾದಿಸಿದರು.

‘ರಾಹುಲ್‌ ಗಾಂಧಿ ಅವರು ಕರ್ನಾಟಕದಲ್ಲಿ 22 ದಿನಗಳ ಕಾಲ 511 ಕಿ.ಮೀ. ಐತಿಹಾಸಿಕ ಪಾದಯಾತ್ರೆ ಮಾಡಿದ್ದಾರೆ. ರಾಹುಲ್‌ ಗಾಂಧಿ ಅವರಿಗೆ ಪ್ರಧಾನ ಮಂತ್ರಿ ಆಗುವ ಅರ್ಹತೆ ಇದೆ. ಆದರೆ, ಅಧಿಕಾರದ ಆಸೆಯನ್ನು ಬದಿಗೊತ್ತಿ ಸಾಮಾನ್ಯ ಕಾರ್ಯಕರ್ತರಂತೆ ಸಮಾಜ ಜೋಡಿಸುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್‌ ಭಾರತವನ್ನು ಜೋಡಿಸುತ್ತಿದ್ದರೆ; ಬಿಜೆಪಿ ದೇಶವನ್ನು ಒಡೆಯುವ ಕೆಲಸ ಮಾಡುತ್ತಿದೆ’ ಎಂದು ಹರಿಹಾಯ್ದರು.

‘ಎಲ್ಲರೂ ಒಟ್ಟಾಗಿ ಬಾಳಬೇಕು ಎಂಬುದು ಕಾಂಗ್ರೆಸ್‌ ತತ್ವ ಸಿದ್ಧಾಂತ. ದೇಶದ ಐಕ್ಯತೆ, ಶಾಂತಿಗಾಗಿ ರಾಹುಲ್‌ ಭಾರತ್‌ ಜೋಡೊ ಯಾತ್ರೆ ಕೈಗೊಂಡಿದ್ದಾರೆ. ಅವರ ಈ ನಡೆಯನ್ನು ದೇಶದ ಲಕ್ಷಾಂತರ ಮಂದಿ ಸ್ವಾಗತಿಸಿದ್ದಾರೆ. ಯಾವುದೇ ಅಧಿಕಾರದ ಆಸೆ ಇಲ್ಲದೇ ದೇಶದೆಲ್ಲೆಡೆ ಪಾದಯಾತ್ರೆ ಕೈಗೊಂಡು ದೇಶ ಕಟ್ಟುವ ಕೆಲಸ ಮಾಡುತ್ತಿದ್ದಾರೆ’ ಎಂದು ಬಣ್ಣಿಸಿದರು.

‘ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರಗಳ ಆಡಳಿತದಿಂದ ಜನರು ಭ್ರಮನಿರಸಗೊಂಡಿದ್ದಾರೆ. ಬೆಳೆಹಾನಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಮಳೆಯಿಂದ ಮನೆಗಳಿಗೆ ಹಾನಿಯಾಗಿದೆ. ಆದರೂ ಪರಿಹಾರ ನೀಡಿಲ್ಲ. ಶೇ 40ರಷ್ಟು ಕಮಿಷನ್‌ ಸರ್ಕಾರ ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ವರ್ಷಕ್ಕೆ ಕೋಟ್ಯಂತರ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ ನಿರುದ್ಯೋಗ ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗಿದೆ. ಅಪರೇಷನ್‌ ಕಮಲದ ಮೂಲಕ ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿದೆ’ ಎಂದು ಆರೋಪ ಮಾಡಿದರು.

‘ಜನಸಂಕಲ್ಪ ಯಾತ್ರೆ ಬದಲಿಗೆ ಬಿಜೆಪಿಯವರು ಕ್ಷಮೆಯಾತ್ರೆ ಕೈಗೊಂಡರೆ ಜನರು ಕ್ಷಮಿಸಬಹುದು’ ಎಂದರು.

ವೋಟು ಕದಿಯುವ ಹುನ್ನಾರ
2023ರ ಚುನಾವಣೆಯಲ್ಲಿ ಬಿಜೆಪಿಗೆ 65 ಸ್ಥಾನಗಳು ಮಾತ್ರ ಸಿಗಲಿವೆ. ಸೋಲಿನ ಭೀತಿಯಿಂದಾಗಿ ಅವರು ವೋಟು ಕದಿಯುವ ಕಾರ್ಯಕ್ರಮ ಹಾಕಿಕೊಂಡಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಸಲೀಂ ಅಹ್ಮದ್‌ ಆರೋಪಿಸಿದರು.

ಚಿಲುಮೆ ಸಂಸ್ಥೆಯವರು ಬೂತ್‌ಗಳಿಗೆ ತೆರಳಿ ಮತದಾರರ ಪಟ್ಟಿಯಲ್ಲಿ ಪರಿಷ್ಕರಣೆ ಮಾಡಿದ್ದಾರೆ. ಈ ಕೆಲಸ 224 ಕ್ಷೇತ್ರಗಳಲ್ಲೂ ಆಗಿದೆ. ಸೋಲಿನ ಭೀತಿಯಿಂದ ಈ ರೀತಿಯ ದೊಡ್ಡ ಹಗರಣ ಮಾಡಿದ್ದಾರೆ ಎಂದು ದೂರಿದರು.

*

ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ಭ್ರಷ್ಟಾಚಾರ, ಶೇ 40 ಕಮಿಷನ್‌ನಲ್ಲಿ ಮುಳುಗಿದ್ದರೂ ಬಿಜೆಪಿಯವರು ಜನಸಂಕಲ್ಪ ಯಾತ್ರೆ ಮಾಡುತ್ತಿದ್ದು, ಅವರಿಗೆ ನಾಚಿಕೆ ಬರಬೇಕು. ಏನು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದು ಇವರಿಗೆ ಜನರು ಆಶೀರ್ವಾದ ಮಾಡಬೇಕು.
–ಸಲೀಂ ಅಹ್ಮದ್‌, ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT