ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ನಲ್ಲಿ ಆಂತರಿಕ ಗೊಂದಲ ಸೃಷ್ಟಿ: ಸಂಸದ ಬಸವರಾಜ ಬೊಮ್ಮಾಯಿ

Published : 3 ಸೆಪ್ಟೆಂಬರ್ 2024, 16:25 IST
Last Updated : 3 ಸೆಪ್ಟೆಂಬರ್ 2024, 16:25 IST
ಫಾಲೋ ಮಾಡಿ
Comments

ಗದಗ: ‘ಎಲ್ಲವೂ ಸರಿ ಇದೆ ಅಂತ ಹೇಳುತ್ತಲೇ ಒಳಗಡೆಯಿಂದ ದೋಣಿಗೆ ತೂತು ಕೊರೆಯುವುದು ರಾಜಕಾರಣ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಮಾರ್ಮಿಕವಾಗಿ ಹೇಳಿದರು.

‘ರಾಜ್ಯದ ರಾಜಕೀಯ ಇತಿಹಾಸ ನೋಡಿದಾಗ ಕಾಂಗ್ರೆಸ್‌ನಲ್ಲಿ ವೀರೇಂದ್ರ ಪಾಟೀಲರು ಅತ್ಯಂತ ಬಲಿಷ್ಠ ಮುಖ್ಯಮಂತ್ರಿಯಾಗಿದ್ದರು. ಅವರ ಅವಧಿಯಲ್ಲಿ ರಾತ್ರೋ ರಾತ್ರಿ ಎಲ್ಲ ಶಾಸಕರು ಬದಲಾದರು. ಮುಂದೆ ದೇವರಾಜ ಅರಸು ಅವರನ್ನು ರಾತ್ರೋರಾತ್ರಿ ಬದಲಾವಣೆ ಮಾಡಿ ಆರ್.ಗುಂಡೂರಾವ್ ಮುಖ್ಯಮಂತ್ರಿಗಳಾದರು. ದೇವರಾಜ ಅರಸು ಅವರು ಎರಡನೇ ಬಾರಿ ಸ್ವಂತ ಶಕ್ತಿಯಲ್ಲಿ‌ ಆರಿಸಿ ಸಿಎಂ ಆದವರು. ಎಸ್. ಬಂಗಾರಪ್ಪ ಅವರಿಗೆ 183 ಶಾಸಕರ ಬಲವಿತ್ತು. ಆಗಲೂ ಸಿಎಂ ಬದಲಾದರು. ಈ ರಾಜಕಾರಣ ಹೀಗೆ ನಡಿಯುತ್ತಲೇ ಇರುತ್ತದೆ’ ಎಂದು ಮಂಗಳವಾರ ಮಾಧ್ಯಮದವರಿಗೆ ಪ್ರತ್ರಿಕ್ರಿಯಿಸಿದರು.

‘ಕಾಂಗ್ರೆಸ್‌ನಲ್ಲಿ ಆಂತರಿಕವಾಗಿ ಗೊಂದಲ ಸೃಷ್ಟಿಯಾಗಿದೆ. ಮುಖ್ಯಮಂತ್ರಿಗಳ ಕುರ್ಚಿ ಅಲ್ಲಾಡುತ್ತಿದೆ ಅನ್ನುವ ಭಾವನೆ ರೂಪುಗೊಂಡಿದೆ. ಸಿಎಂ ಕುರ್ಚಿ ಮೇಲೆ ಕೂರಬೇಕೆಂಬ ಎಲ್ಲರ ಆಸೆ ಈಗ ಹೊರ ಹೊಮ್ಮುತ್ತಿದೆ’ ಎಂದು ಹೇಳಿದರು.

‘ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಾರೆಯೇ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಾನು  ಭವಿಷ್ಯ ಹೇಳುವುದಿಲ್ಲ.ಕಾನೂನು ತನ್ನ ಪ್ರಕ್ರಿಯೆ ನಡೆಸುತ್ತದೆ’ ಎಂದು ಹೇಳಿದರು.

‘ಹಿರಿಯರಾದ ಆರ್.ವಿ.ದೇಶಪಾಂಡೆ ಹೇಳಿಕೆ ಬಗ್ಗೆ ವ್ಯಾಖ್ಯಾನಿಸಲ್ಲ. ಅವರ ಹೇಳಿಕೆ ನಂತರ ಕಾಂಗ್ರೆಸ್‌ನಲ್ಲಿ ಹಲವು ಪ್ರತಿಕ್ರಿಯೆಗಳು ಬಂದಿವೆ. ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಅನ್ನುವುದಕ್ಕೆ ಕೈ ನಾಯಕರ ಪ್ರತಿಕ್ರಿಯೆಯೇ ಸಾಕ್ಷಿ’ ಎಂದು ಹೇಳಿದರು.

‘ಮುಡಾದಲ್ಲಿ ಹಗರಣ ಆಗಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಈಗ ಆ ಕಾಲದಲ್ಲಿದ್ದ ಕಮಿಷನರ್ ಅವರನ್ನು ತಾಂತ್ರಿಕ‌ ಸಮಿತಿ ವರದಿ ಆಧಾರದಲ್ಲಿ ಅಮಾನತು ಮಾಡಲಾಗಿದೆ. ತಾಂತ್ರಿಕ ಸಮಿತಿ ತಪ್ಪು ಕಂಡು ಹಿಡಿದಿದೆ. ಸರ್ಕಾರ ಆಯುಕ್ತರನ್ನು ಅಮಾನತು ಮಾಡಿದೆ. ಹೀಗಾಗಿ ಎಲ್ಲವೂ ಕಾನೂನುಬದ್ಧವಾಗಿ ನಡೆದಿಲ್ಲ ಅಂತ ಸರ್ಕಾರವೇ ಒಪ್ಪಿಕೊಂಡಂತಾಗಿದೆ’ ಎಂದು ಹೇಳಿದರು.

‘ರಾಜ್ಯ ಸರ್ಕಾರ ಆರ್ಥಿಕವಾಗಿ ಕುಸಿಯುವ ಕಾಲ ಬಹಳ ದೂರವಿಲ್ಲ ಎಂದು ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ. ಈಗಲೂ ಹೇಳುತ್ತೇನೆ. ಈಗ ಅಂಗನವಾಡಿ ಕಾರ್ಯಕರ್ತೆಯರ ಸಂಬಳ ಮೂರು ನಾಲ್ಕು ತಿಂಗಳಿಗೆ ನೀಡುತ್ತಿದ್ದಾರೆ. ಮುಂದೆ ಸರ್ಕಾರಿ ನೌಕರರ ಸಂಬಳಕ್ಕೂ ಕಷ್ಟವಾಗಲಿದೆ’ ಎಂದು ಹೇಳಿದರು.

ಕೋವಿಡ್ ಅವಧಿಯಲ್ಲಿನ ನಡೆದಿರುವ ಅಕ್ರಮಗಳ ವರದಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಆ ಪ್ರಕರಣವನ್ನು ಯಾರೂ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಈಗ ಮಧ್ಯಂತರ ವರದಿ ಬಂದಿದೆ. ಪೂರ್ಣ ವರದಿ ಬರಲಿ. ಆಮೇಲೆ ಚರ್ಚೆ ಮಾಡೋಣ. ಏನೇ ತರಾತುರಿ ಮಾಡಿದರೂ ಸತ್ಯಕ್ಕೆ ಜಯ ಇದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT