ಗದಗ: ಕಾರಹುಣ್ಣಿಮೆಯ ದಿನವಾದ ಮಂಗಳವಾರ ಗದಗ-ಬೆಟಗೇರಿ ಅವಳಿ ನಗರದಲ್ಲಿ ಯುವಕರು, ಚಿಣ್ಣರು ಗಾಳಿ ಪಟ ಹಾರಿಸಿ ಸಂಭ್ರಮಿಸಿದರು. ವಿವಿಧ ವಿನ್ಯಾಸ ಹಾಗೂ ಬಣ್ಣದ ಗಾಳಿಪಟಗಳು ಬಾನಂಗಳದಲ್ಲಿ ನಗು ತುಳುಕಿಸಿ, ಸಾರ್ವಜನಿಕರನ್ನು ಆಕರ್ಷಿಸಿದವು.
ನಗರದೊಳಗಿನ ಆಟದ ಮೈದಾನ, ರೈಲ್ವೆ ಹಳಿ ಆಜುಬಾಜು ಹಾಗೂ ಪ್ರತಿ ಓಣಿಯಲ್ಲೂ ಗಾಳಿಪಟಗಳ ಕಲರವ ಕಂಡುಬಂತು. ಓಣಿ ಹುಡುಗರು ವಿವಿಧ ಬಗೆಯ ಪಟಗಳನ್ನು ತಂದು, ಅದಕ್ಕೆ ದಾರ ಜೋಡಿಸಿ ಆಕಾಶಕ್ಕೆ ಹಾರಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಮನೆ ಮಹಡಿಯ ಮೇಲೆ ನಿಂತು ಗಾಳಿಪಟಗಳ ಚಿತ್ತಾರವನ್ನು ಕಂಡ ಮಕ್ಕಳು ನಿಂತಲ್ಲೇ ಕುಪ್ಪಳಿಸಿದರು. ಅಲ್ಲದೇ, ನಗರದ ಕೆಲವು ಶಾಲೆಗಳಲ್ಲೂ ಚಿಣ್ಣರಿಗೆ ಗಾಳಿಪಟ ಹಾರಿಸಲು ಅವಕಾಶ ನೀಡಿದ್ದರಿಂದ ಮಕ್ಕಳು ಗಾಳಿಪಟ ಹಾರಿಸಿ ಖುಷಿ ಪಟ್ಟರು.
ಗಾಳಿಪಟಗಳು ಆಕಾಶದೆತ್ತರಕ್ಕೆ ಹಾರುತ್ತಿದ್ದರೆ ಯುವಕರು ಹಾಗೂ ಮಕ್ಕಳು, ‘ಇನ್ನೂ ಎತ್ತರಕ್ಕೆ ಪಟ ಹಾರಿಸ್ಲೇ... ಚಕ್ ಹಾಕಿ ಗಾಳಿಪಟ ದಾರ ಕಟ್ ಮಾಡ್ಲೇ’ ಎಂದು ಕೂಗುತ್ತಿದ್ದರು. ಮತ್ತೊಂದೆಡೆ ದಾರ ತುಂಡಾಗಿ ಪಟ ಹರಿ ಯುತ್ತಿದ್ದಂತೆ ಬಾಲಂಗೋಚಿ ಸಮೇತ ಗಾಳಿಪಟ ಹಿಡಿಯಲು ಓಡುತ್ತಿದ್ದರು.
ಅವಳಿ ನಗರದ ಕೆಲವೆಡೆ ಯುವಕರು ಡಿಜೆ ಹಚ್ಚಿಕೊಂಡು ಪಟ ಹಾರಿಸುತ್ತ, ಎದುರಾಳಿಗಳ ಪಟಕ್ಕೆ ಚೆಕ್ ಹಾಕಿ ಅದನ್ನು ಹರಿದ ಸಂಭ್ರಮದಲ್ಲಿ ಕೇಕೆ ಹಾಕಿದರು.
ಗಾಳಿಪಟ ಹಾರಿಸಿದ ನಂತರ ಮನೆಯಲ್ಲಿ ಹುಣ್ಣಿಮೆ ಅಂಗವಾಗಿ ಸಿದ್ಧಪಡಿಸಿದ್ದ ಹೋಳಿಗೆ ಊಟ ಸವಿದು ಹಬ್ಬವನ್ನು ಸಂತಸದಿಂದ ಆಚರಿಸಿದರು.
ಬೆಟಗೇರಿಯಲ್ಲಿ ಸಂಭ್ರಮ
ಗದಗ: ಕಾರಹುಣ್ಣಿಮೆ ಅಂಗವಾಗಿ ಕರಿ ಹರಿಯುವ ಕಾರ್ಯಕ್ರಮ ಸಂಭ್ರಮ ದಿಂದ ನಡೆಯಿತು.
ಪ್ರತಿ ವರ್ಷದಂತೆ ಈ ವರ್ಷ ಕೂಡ ಬೆಟಗೇರಿ ರೈತ ಸಂಘದ ವತಿಯಿಂದ ಎತ್ತುಗಳನ್ನು ಓಡಿಸುವ ಮೂಲಕ ಕರಿ ಹರಿಯಲಾಯಿತು. ಬಸವರಾಜ ಮಾಳೆ ಕೊಪ್ಪ ಅವರ ಹೋರಿ ಮೊದಲನೇ ಸ್ಥಾನ ಪಡೆಯಿತು.
ಶಿವರಾಜಗೌಡ ಹಿರೇಮನಿಪಾಟೀಲ, ಮುದುಕಪ್ಪ ಗಿಡಮಲ್ಲ, ಅಂತಪ್ಪ ಮುಳ್ಳಾಳ ಗುಳಪ್ಪ, ರೊಟ್ಟಿ ಪುದ್ದಪ್ಪ ಕರಬಿಷ್ಟಿ, ಈಶಪ್ಪ ಕುಂಬಾರ್, ಸಿದ್ದು ಮಕಾಪುರ್, ಶೇಖಪ್ಪ ಮಾನೆದ, ಗೂಳಪ್ಪ ಮುಳ್ಳಾಳ, ಮಂಜು, ಜ್ಯೋತಿ ಬಸವರಾಜ್ ಮಳೆಕೊಪ್ಪ, ರಾಜು ರೊಟ್ಟಿ, ಮುತ್ತಣ್ಣ ಮಕಾಪುರ್, ಮಲ್ಲೇಶಪ್ಪ, ನಾಗಪ್ಪ ಚಿಕ್ಕಣ್ಣವರ್ ರೊಟ್ಟಿ, ಹೆಳವಿ ಹಾಗೂ ರೈತಸಂಘದ ಮುಖಂಡರು, ಬೆಟಗೇರಿ ಭಾಗದ ಸಾರ್ವಜನಿಕರು ಭಾಗವಹಿಸಿದ್ದರು.
ಕೊಬ್ಬರಿ ಬಟ್ಟಲು ಹರಿದ ರೈತರು
ರೋಣ: ಪಟ್ಟಣದ ಪೋತರಾಜನ ಕಟ್ಟೆಯ ಹತ್ತಿರ 20 ಅಡಿ ಎತ್ತರ ಕಟ್ಟಿದ ಕರಿಯನ್ನು ರೈತರು ಎತ್ತುಗಳನ್ನು ಓಡಿ ಸುತ್ತ ಬಂದು ಹರಿದು ಹರ್ಷ ವ್ಯಕ್ತಪಡಿಸಿದರು.
ಪ್ರಾಚೀನ ಕಾಲದಿಂದಲೂ ಕಾರ ಹುಣ್ಣಿಮೆಯ ದಿನದಂದು ರೈತರು ತಮ್ಮೊಂದಿಗೆ ಶ್ರಮವಹಿಸಿ ದುಡಿಯುವ ಬಸವಣ್ಣನ್ನು ಶೃಂಗರಿಸಿ ಕೊಂಬುಗಳಿಗೆ ಅರಿಷಿಣ ಒಳ್ಳೆಯ ಎಣ್ಣೆ ಸವರಿ ಕೋಡುಬಳಿ ಹಾಕಿ ಮೈತುಂಬಾ ಬಣ್ಣ ಬಳಿದು ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ನಮಸ್ಕಾರ ಮಾಡಿದ ಬಳಿಕ ಓಡಿಸುತ್ತಾ ಕರಿಯನ್ನು ಹರಿಯುವುದು ನೋಡುಗರ ಕಣ್ಮನ ಸೆಳೆಯಿತು.
ಯಾವ ಬಣ್ಣದ ಎತ್ತು ಕರಿ ಹಾರುತ್ತದೆಯೋ ಆ ಬಣ್ಣದ ಬೆಳೆಗಳಿಗೆ ಬಾರೀ ಹುಲುಸು ಎಂಬುವುದು ನಮ್ಮ ರೈತಾಪಿ ವರ್ಗದ ನಂಬಿಕೆಯಾಗಿರುತ್ತದೆ. ಕರಿ ಹರಿದ ಬಳಿಕ ಅದಕ್ಕೆ ಕಟ್ಟಿದ ಕೊಬ್ಬರಿ ಬಟ್ಟಲು ಬೆಲ್ಲ ಎತ್ತುಗಳಿಗೆ ತಿನ್ನಿಸಿ ಬೇವಿನ ತಪ್ಪಲನ್ನು ನೆರದಿದ್ದ ರೈತರೆಲ್ಲರೂ ಹಂಚಿಕೊಂಡು ತಮ್ಮ, ತಮ್ಮ ಜಮೀನಿನಲ್ಲಿ ಹಾಕಿದರೆ ಉತ್ತಮ ಫಸಲು ಬರುತ್ತದೆ ಎನ್ನುವುದು ರೈತರ ನಂಬಿಕೆ.
ಬಸನಗೌಡ ಪಾಟೀಲ, ಬಸವರಾಜ್ ಗದಗಿನ ಅಮರಪ್ಪ ಕಿರೇಸೂರ, ನಿಂಗಪ್ಪ ಕಳಸಣ್ಣವರ, ಶಶಿಧರ ಕಿರೇಸೂರ, ಪಕೀರಗೌಡ ತಿಮ್ಮನಗೌಡ್ರ, ಕುಬೇರಗೌಡ ಲಿಂಗನಗೌಡ್ರ, ಶರಣಪ್ಪ ಗೌಡರ, ಶಾಂತಗೌಡ ರಾಯನಗೌಡ್ರ, ದೊಡ್ಡಬಸಪ್ಪ ನವಲಗುಂದ, ಕಲ್ಲುರಾವ ಕುಲಕರ್ಣಿ, ಬಸವರಾಜ ಜಿಡ್ಡಿಬಾಗೀಲ, ಶರಣಪ್ಪ ಸೋಮಣ್ಣವರ, ಚನ್ನಯ್ಯ ಸೋಮನಕಟ್ಟಿಮಠ, ಮುಕ್ತುಂಸಾಬ ಮುಲ್ಲಾ. ಶಪೀಕ ಮೂಗನೂರ, ಮಲ್ಲಪ್ಪ ಬ್ಯಾಳಿ, ಬಸಪ್ಪ ಪಲ್ಲೇದ, ಅಂದಪ್ಪ ಬೆನಹಾಳ ನೇತೃತ್ವ ವಹಿಸಿದ್ದರು.
ಸಾಹಸ ಪ್ರದರ್ಶನ
ಗಜೇಂದ್ರಗಡ: ಗ್ರಾಮೀಣ ಪ್ರದೇಶದಲ್ಲಿ ರೈತರು ಆಚರಿಸುವ ಹಬ್ಬಗಳಲ್ಲಿ ಒಂದಾದ ಕಾರಹುಣ್ಣಿಮೆಯನ್ನು ಮಂಗಳವಾರ ಸುತ್ತಲಿನ ಗ್ರಾಮಗಳಲ್ಲಿ ರೈತರು ತಮ್ಮ ಹೋರಿಗಳನ್ನು ಓಡಿ ಸುವ ಮೂಲಕ ಕರಿ ಹರಿದು ಕಾರ ಹುಣ್ಣಿಮೆ ಯನ್ನು ಸಂಭ್ರಮದಿಂದ ಆಚರಿಸಿದರು.
ಹಬ್ಬದ ನಿಮಿತ್ತ ಮಕ್ಕಳು, ಯುವಕರು ಗಾಳಿ ಪಟಗಳನ್ನು ಹಾರಿಸಿ ಸಂಭ್ರಮಿಸಿದರೆ, ರೈತರು ತಮ್ಮ ಕೃಷಿಗೆ ಆಧಾರಸ್ಥಂಭವಾಗಿರುವ ಕುಂಟಿ, ನೇಗಿಲು, ಕೂರಿಗೆಯಂತ ಕಟ್ಟಿಗೆಯ ಕೃಷಿ ಉಪಕರಣಗಳನ್ನು ಶುಚಿಗೊಳಿಸಿ ಅವುಗಳಿಗೆ ಸುರುಮ, ಬಣ್ಣ ಬಳಿಯುವುದು, ಚಕ್ಕಡಿಗಳಿಗೆ ಬಣ್ಣ ಬಳಿದು ಚಕ್ರಗಳಿಗೆ ಕೀಲೆಣ್ಣೆ ಹಾಕುತ್ತಿರುವುದು ಕಂಡು ಬಂದವು.
ಅಲ್ಲದೆ ತಮ್ಮ ರಾಸುಗಳ ಮೈ ತೊಳೆದು ಅವುಗಳ ಕೊಂಬುಗಳಿಗೆ ಸುರುಮ ಹಚ್ಚಿ ಪೂಜೆ ಸಲ್ಲಿಸಿ, ಸಂಜೆ ತಮ್ಮ ಹೋರಿಗಳನ್ನು ಊರಿನ ಅಗಸಿಯಲ್ಲಿ ಓಡಿಸುವ ಮೂಲಕ ಕರಿ ಹರಿದರು.
ಗೆದ್ದ ರಾಸುಗಳನ್ನು ಸಕಲ ವಾದ್ಯ ಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಿದರು.
ಗೆದ್ದ ಹೋರಿಗಳು ಬಿಳಿ ಬಣ್ಣದ್ದಾಗಿದ್ದರೆ ಹಿಂಗಾರು ಬೆಳೆಗಳು, ಕಂದು, ಕೆಂಪು ಬಣ್ಣದ್ದಾಗಿದ್ದರೆ ಮುಂಗಾರು ಬೆಳೆಗಳು ಉತ್ತಮ ಇಳುವರಿ ಬರುತ್ತವೆಂಬ ನಂಬಿಕೆ ಗ್ರಾಮೀಣ ಪ್ರದೇಶದಲ್ಲಿದೆ.
ಹಳ್ಳಿಗಳಲ್ಲಿ ಕರಿ ಹರಿದ ನಂತರ ಯುವಕರೆಲ್ಲ ಸೇರಿಕೊಂಡು ಬಾಜಿ ಕಟ್ಟಿ ಸಂಗ್ರಾಣಿ ಕಲ್ಲು, ಗುಂಡುಗಳನ್ನು ಎತ್ತಿ ತಮ್ಮ ಕಸರತ್ತು ಪ್ರದರ್ಶಿಸುತ್ತಾರೆ.
ಹಿಂದಿನ ಹಿರಿಯರ ನಂಬಿಕೆಯಂತೆ ಸಂಪ್ರದಾಯದ ಪ್ರಕಾರ ಕಾರಹುಣ್ಣಿಮೆಯಂದು ಕರಿ ಹರಿಯುವುದು ಸಂಪ್ರದಾಯ. ಒಟ್ಟಿನಲ್ಲಿ ರೈತರು ಎಲ್ಲೆಡೆ ಸೇರಿ ಸಂಭ್ರಮಿಸುವುದೇ ಹಬ್ಬದ ಆಶಯ
ಅಶೋಕ ನವಲಗುಂದ, ರೈತ
ಮಳೆ, ಬೆಳೆ ಸಮೃದ್ಧಿಗೆ ರೈತರು ಕಾರಹುಣ್ಣಿಮೆ ಆಚರಣೆ ಮಾಡುತ್ತಾರೆ. ಈ ಹಬ್ಬದ ಮೂಲಕ ರೈತಾಪಿ ಜನರ ಬವಣೆಗಳು ದೂರವಾಗಲಿ ಎಂದು ಪ್ರಾರ್ಥಿಸಿದೆವು
ಶಿವಪ್ಪ ಚಿಕ್ಕಣ್ಣವರ, ಉಪಾಧ್ಯಕ್ಷ, ಮುಂಡರಗಿ ಪುರಸಭೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.