ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಕ್ರಮ

ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ
Last Updated 3 ಸೆಪ್ಟೆಂಬರ್ 2021, 4:25 IST
ಅಕ್ಷರ ಗಾತ್ರ

ಗದಗ: ‘ಸಮಾಜದ ಕಡು ಬಡವನಿಗೂ ನಿವೇಶನ, ಮನೆ, ಶೌಚಾಲಯ, ವಿದ್ಯುತ್‌ ಹಾಗೂ ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಿ ಕೊಡಲು ಪ್ರಾಶಸ್ತ್ಯ ನೀಡಬೇಕು. ಇಲಾಖೆಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳು ಕ್ರಿಯಾಶೀಲತೆಯಿಂದ ಕೆಲಸ ಮಾಡುವಂತೆ ಸೂಚಿಸಲಾಗಿದೆ’ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಅವರು ಮಾತನಾಡಿ, ‘ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಕಡ್ಡಾಯವಾಗಿ ಪಾರದರ್ಶಕ ನೀತಿ ಅನುಸರಿಸಬೇಕು. ಯೋಜನೆಗಳಅನುಷ್ಠಾನದ ಸಂದರ್ಭದಲ್ಲಿ ಸಮಸ್ಯೆಗಳು ಎದುರಾದರೆ ಸಮನ್ವಯದಿಂದ ಬಗೆಹರಿಸಿಕೊಳ್ಳಬೇಕು. ಎರಡೂ ಇಲಾಖೆಗಳ ಕಾರ್ಯಚಟುವಟಿಕೆಗಳು ಭ್ರಷ್ಟಾಚಾರ ಮುಕ್ತವಾಗಿರಬೇಕು. ತಪ್ಪುಗಳಿಲ್ಲದಂತೆ ಸೇವೆ ಒದಗಿಸಬೇಕು ಎಂದು ಸೂಚಿಸಲಾಗಿದೆ’ ಎಂದು ಹೇಳಿದರು.

‘ಇಲಾಖೆ ವತಿಯಿಂದ ನಡೆಯುತ್ತಿರುವ ವಸತಿ ಶಾಲೆಗಳ ನಿರ್ವಹಣೆಗೆ ಕಠಿಣ ಕ್ರಮಗಳನ್ನು ಅನುಸರಿಸಬೇಕು. ವಸತಿ ನಿಲುಯದಲ್ಲಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡುವುದರ ಜತೆಗೆ ಮೂಲಸೌಕರ್ಯ ಒದಗಿಸಲು ಕ್ರಮವಹಿಸಬೇಕು. ಇವುಗಳಅನುಷ್ಠಾನದ ವೇಳೆ ಭ್ರಷ್ಟಾಚಾರ ನಡೆದಿರುವುದು ಕಂಡುಬಂದಲ್ಲಿ ತನಿಖೆಗೆ ಒಳಪಡಿಸಬೇಕು. ಕೆಲವು ವಸತಿನಿಲಯಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಅವುಗಳಿಗೆ ಸ್ವಂತ ನಿವೇಶನ ಒದಗಿಸುವುದು ಹಾಗೂ ಪ್ರಗತಿಯಲ್ಲಿರುವ ಹಾಸ್ಟೆಲ್‌ ಕಟ್ಟಡ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸುವಂತೆ ಸೂಚಿಸಲಾಗಿದೆ’ ಎಂದು ಹೇಳಿದರು.

‘ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ, ಕ್ರೈಸ್‌ ಮೂಲಕ ನಡೆಯುತ್ತಿರುವ ಶಾಲೆಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಿರಂತರವಾಗಿ ಶೇ 100 ಫಲಿತಾಂಶ ದಾಖಲಿಸುತ್ತಿರುವುದು ಖುಷಿ ತಂದಿದೆ. ಇಲಾಖೆಯಲ್ಲಿರುವ ಸಿಬ್ಬಂದಿ ಕೊರತೆ ನೀಗಿಸಲು ಕ್ರಮವಹಿಸಲಾಗುವುದು’ ಎಂದು ಹೇಳಿದರು.

‘ಹರಣ ಶಿಕಾರಿ ಕಾಲೊನಿಯಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಕೋಶದಿಂದ ನಿರ್ಮಾಣ ಆಗುತ್ತಿರುವ ವಸತಿ ಯೋಜನೆಯಲ್ಲಿ ಸ್ವಲ್ಪ ಲೋಪದೋಷಗಳಾಗಿವೆ. ಆದರೆ, ಈ ಯೋಜನಾ ವರದಿ ತುಂಬ ಚೆನ್ನಾಗಿದೆ. ಅಧಿಕಾರಿಗಳ ಜತೆಗೆ ವಿಶೇಷ ಸಭೆ ನಡೆಸಿ, ಲೋಪದೋಷ ಸರಿಪಡಿಸಲು ಕ್ರಮವಹಿಸಲಾಗುವುದು. ವಿದ್ಯಾರ್ಥಿವೇತನ ಬಿಡುಗಡೆಗೆ ಕೂಡ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT