ಕೃಷಿಕನಾದ ಮೆಕ್ಯಾನಿಕಲ್‌ ಎಂಜಿನಿಯರ್; ನಳನಳಿಸುತ್ತಿರುವ ಮಾವು, ಚಿಕ್ಕು, ತೆಂಗು

ಭಾನುವಾರ, ಮೇ 26, 2019
31 °C

ಕೃಷಿಕನಾದ ಮೆಕ್ಯಾನಿಕಲ್‌ ಎಂಜಿನಿಯರ್; ನಳನಳಿಸುತ್ತಿರುವ ಮಾವು, ಚಿಕ್ಕು, ತೆಂಗು

Published:
Updated:
Prajavani

ಲಕ್ಷ್ಮೇಶ್ವರ: ಓದಿದ್ದು ಮೆಕ್ಯಾನಿಕಲ್ ಎಂಜಿನಿಯರಿಂಗ್‌. ಆದರೆ, ಉದ್ಯೋಗ ಕಂಡುಕೊಂಡಿದ್ದು ಮಾತ್ರ ಕೃಷಿಯಲ್ಲಿ. ಮಾವು, ಚಿಕ್ಕು ಹಾಗೂ ತೆಂಗಿನ ಮರದೊಂದಿಗೆ ನಿತ್ಯ ಒಡನಾಟ.ಅವುಗಳೊಂದಿಗೆ ಆತ್ಮೀಯ ನಂಟು.ಇದು ತಾಲ್ಲೂಕಿನ ದೊಡ್ಡೂರು ಗ್ರಾಮದ ಯುವ ರೈತ ತೇಜಸ್ ಕುಲಕರ್ಣಿ ಅವರ ಕೃಷಿ ಪ್ರೀತಿ.

ದಾವಣಗೆರೆ ಮೂಲದ ತೇಜಸ್‌, ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಮುಗಿಸಿ ಕೆಲವು ವರ್ಷ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿದರು. ಆದರೆ, ಅಲ್ಲಿನ ಕೆಲಸದೊತ್ತಡ ಹಾಗೂ ಕಿರುಕುಳಕ್ಕೆ ಬೇಸತ್ತು, ರಾಜೀನಾಮೆ ನೀಡಿ ತೋಟಗಾರಿಕೆ ಮಾಡಲು ಮುಂದಾದರು.ದಾವಣಗೆರೆಯಿಂದ ದೊಡ್ಡೂರು ಗ್ರಾಮಕ್ಕೆ ಬಂದು ಗ್ರಾಮದ ಪಕ್ಕದಲ್ಲಿಯೇ 16 ಎಕರೆ ಭೂಮಿ ಖರೀದಿಸಿದರು. ಅಲ್ಲಿ 750 ಮಾವಿನ ಗಿಡ, 700 ಚಿಕ್ಕು ಹಾಗೂ 300 ತೆಂಗಿನ ಸಸಿಗಳನ್ನು ಬೆಳೆಸಿದ್ದಾರೆ. ಇದಕ್ಕಾಗಿ ಅಂದಾಜು ₹4 ಲಕ್ಷ ಖರ್ಚು ಮಾಡಿದ್ದಾರೆ. ಇದೀಗ ಮಾವು ಹಾಗೂ ಚಿಕ್ಕು ಫಲ ಕೊಡುವ ಹಂತಕ್ಕೆ ಬೆಳೆದು ನಿಂತಿವೆ.

ಕಳೆದ ಎರಡು ವರ್ಷಗಳ ಹಿಂದೆ ಚಿಕ್ಕು ತೋಟದಲ್ಲಿ ಅಂತರ್ ಬೆಳೆಯಾಗಿ ನುಗ್ಗೆ ಬೆಳೆದು ಉತ್ತಮ ಅದರಿಂದಲು ಹೆಚ್ಚುವರಿ ವರಮಾನ ಗಳಿಸುತ್ತಿದ್ದಾರೆ. ಬಾಳೆಯ ಮೂಲಕವೂ ₹2 ಲಕ್ಷ ಲಾಭ ಪಡೆದುಕೊಂಡಿದ್ದಾರೆ.

ಈ ಬಾರಿ ಮಾವು ಹಾಗೂ ಚಿಕ್ಕು ಗಿಡಗಳಿಂದ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ. ಈ ವರ್ಷ ಮಾವಿನ ಕಾಯಿಯಿಂದ ಉತ್ತಮ ಇಳುವರಿ ಬರಬೇಕಾಗಿತ್ತು. ಆದರೆ, ಇಬ್ಬನಿಗೆ ಹೂವು ಉದುರಿದ್ದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಕಾಯಿ ಬಿಟ್ಟಿಲ್ಲ. ಹೀಗಾಗಿ ಬೆಳೆದ ಅಲ್ಪಸ್ವಲ್ಪ ಫಸಲನ್ನು ಮಾರಾಟ ಮಾಡುವ ಗೋಜಿಗೆ ಹೋಗಿಲ್ಲ.

ತೇಜಸ್ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ತಿಪ್ಪೆ ಗೊಬ್ಬರವನ್ನೇ ಹೆಚ್ಚಾಗಿ ಬಳಸುತ್ತಾರೆ. ಬೆಳೆಗಳಿಗೆ ಜೀವಾಮೃತವನ್ನೂ ಕೊಡುತ್ತಾರೆ. ರೋಗಬಾಧೆ ಕಂಡು ಬಂದಾಗ ರಾಸಾಯನಿಕ ಔಷಧಗಳ ಬದಲು ಸಾವಯವ ಪದ್ಧತಿಯಂತೆ ತಾವೇ ಔಷಧ ತಯಾರಿಸಿ ಸಿಂಪಡಿಸುತ್ತಾರೆ.

‘ಆರು ವರ್ಷಗಳಿಂದ ತೋಟಗಾರಿಕೆ ಮಾಡುತ್ತಿದ್ದೇನೆ. ಈ ವರ್ಷ ವಿವಿಧ ಕಾರಣಗಳಿಂದಾಗಿ ಮಾವು, ಚಿಕ್ಕು ನಮ್ಮ ನಿರೀಕ್ಷೆಯಂತೆ ಬಂದಿಲ್ಲ. ದಿನ ವರ್ಷದಿಂದ ಇವುಗಳಿಂದ ಹೆಚ್ಚಿನ ಆದಾಯ ಬರುವ ನಿರೀಕ್ಷೆ ಇಟ್ಟುಕೊಂಡಿದ್ದೇನೆ’ ಎಂದರು.

ಗ್ರಾಮದ ಪ್ರಶಾಂತ ಹಡಪದ ಅವರು ತೇಜಸ್‌ ಅವರ ತೋಟದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಅವರು ಪ್ರತಿ ಗಿಡವನ್ನೂ ಮಕ್ಕಳಂತೆ ಜೋಪಾನ ಮಾಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !