ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ ವಂಚಿತ ಶಿರಹಟ್ಟಿ: ಹಿಂದುಳಿದ ತಾಲ್ಲೂಕು ಹಣೆಪಟ್ಟಿ ಕಳಚುವುದು ಎಂದು?

ನಿಂಗಪ್ಪ ಹಮ್ಮಿಗಿ
Published 29 ಏಪ್ರಿಲ್ 2024, 6:20 IST
Last Updated 29 ಏಪ್ರಿಲ್ 2024, 6:20 IST
ಅಕ್ಷರ ಗಾತ್ರ

ಶಿರಹಟ್ಟಿ: ತಾಲ್ಲೂಕು ಕೇಂದ್ರಕ್ಕೆ ಅವಶ್ಯವಿರುವ ಕನಿಷ್ಠ ಮೂಲಸೌಕರ್ಯಗಳು ಇಲ್ಲದಿರುವ ಕಾರಣ ಶಿರಹಟ್ಟಿ ತಾಲ್ಲೂಕು ರಾಜ್ಯದಲ್ಲಿಯೇ ಅತಿ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಅಭಿವೃದ್ಧಿಯಲ್ಲಿ ತೀವ್ರ ಹಿಂದುಳಿದಿರುವ ಕಾರಣ ತಾಲ್ಲೂಕಿನ ಜನರು ಸೌಲಭ್ಯಗಳಿಲ್ಲದೇ ತೀವ್ರ ತೊಂದರೆ ಎದುರಿಸುತ್ತಿದ್ದಾರೆ.

ತಾಲ್ಲೂಕು ಕೇಂದ್ರದಲ್ಲಿ ನಡೆಯಬೇಕಾದ ಬಹುತೇಕ ಕಚೇರಿಗಳನ್ನು ಹೋರಾಟದ ಮೂಲಕವೇ ಪಡೆಯುವ ಅನಿವಾರ್ಯತೆ ಬಂದೊದಗಿದ್ದು, ಸ್ಥಳೀಯ ಜನಪ್ರತಿನಿಧಿಗಳಿಂದ ಹಿಡಿದು ಸರ್ಕಾರದವರೆಗೆ ಈ ಬಗ್ಗೆ ಮಾಹಿತಿ ಇದ್ದರೂ ಇತ್ತ ಕಡೆ ಗಮನ ಹರಿಸಿಲ್ಲ. ಶಿರಹಟ್ಟಿ ತಾಲ್ಲೂಕು ಪ್ರಾರಂಭವಾದಾಗ ಮಂಡಲ ಪಂಚಾಯ್ತಿ ಇತ್ತು. ನಂತರ ಅದು ಪುರಸಭೆ, ಸದ್ಯ ಪಟ್ಟಣ ಪಂಚಾಯ್ತಿ ಇದ್ದು, ಸೌಕರ್ಯಗಳು ಸಿಗದೇ ಹೋದರೆ ಮುಂದೊಂದು ದಿನ ಮತ್ತೇ ಗ್ರಾಮ ಪಂಚಾಯ್ತಿ ಆದರೂ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಸ್ಥಳೀಯರು ಹತಾಶೆಯಿಂದ ನುಡಿಯುತ್ತಾರೆ.

‘ಶಿರಪುರ’ ಎಂದು ಇತಿಹಾಸದಲ್ಲಿ ದಾಖಲಾಗಿರುವ ಶಿರಹಟ್ಟಿ, ವಿಜಾಪುರದ ಆದಿಲ್‌ಶಾಹಿ ಸುಲ್ತಾನರ ಕಾಲದಲ್ಲಿ ಲಕ್ಷ್ಮೇಶ್ವರ ಉಪವಿಭಾಗದ ಒಂದು ಭಾಗವಾಗಿತ್ತು. ಕೆಲ ಕಾಲ ಅಂಕುಶ್ ಖಾನನ ಜಹಗೀರಾಗಿದ್ದ ಶಿರಹಟ್ಟಿಯನ್ನು ಲಕ್ಷ್ಮೇಶ್ವರದ ಜೊತೆಯಾಗಿ ಖಾನಗೌಡ ಎಂಬ ದೇಸಾಯಿ 1607 ರಲ್ಲಿ ದೇಶಗತಿಯಾಗಿ ಪಡೆದನು. ಕಾಲಾಂತರದಲ್ಲಿ ಪೇಶ್ವೆಗಳು ಸಾಂಗ್ಲಿ ಸಂಸ್ಥಾನದ ಒಡೆಯರು ಶಿರಹಟ್ಟಿಯಲ್ಲಿ ಆಳ್ವಿಕೆ ನಡೆಸಿದರು. ಸ್ವಾತಂತ್ರ್ಯಾ ನಂತರ ತಾಲ್ಲೂಕಾಗಿ ರಚನೆಗೊಂಡ ಶಿರಹಟ್ಟಿ ಅಭಿವೃದ್ಧಿಯ ಕೊರತೆಯಿಂದ ಹಿಂಬಡ್ತಿ ಹೊಂದುತ್ತಾ ಇಳಿಕೆ ಕ್ರಮದಲ್ಲಿ ಸಾಗುತ್ತಿದೆ.

ಎಪಿಎಂಸಿ ಮಾರುಕಟ್ಟೆ ಇಲ್ಲ: ಕೃಷಿ ಪ್ರಧಾನ ಕುಟುಂಬಗಳೇ ಹೆಚ್ಚಾಗಿರುವ ಶಿರಹಟ್ಟಿ ತಾಲ್ಲೂಕು ಕೇಂದ್ರದಲ್ಲಿ ಒಕ್ಕಲುತನ ಹುಟ್ಟುವಳಿ ಕೇಂದ್ರ ಇಲ್ಲದೆ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನಲ್ಲಿ ಒಣ ಹಾಗೂ ನೀರಾವರಿ ಬೇಸಾಯದಲ್ಲಿ ಅತಿ ಹೆಚ್ಚು ಫಸಲು ತೆಗೆಯುತ್ತಿದ್ದು, ಅದನ್ನು ಸಮಯಕ್ಕೆ ಸರಿಯಾಗಿ ಮಾರುಕಟ್ಟೆಗೆ ತಲುಪಿಸಲು ಹರಸಾಹಸ ಪಡುತ್ತಿದ್ದಾರೆ. ತಾಲ್ಲೂಕು ಕೇಂದ್ರದಲ್ಲಿ ಎಪಿಎಂಸಿ ಮಾರುಕಟ್ಟೆ ಸ್ಥಾಪಿಸಲು ಹಲವಾರು ಬಾರಿ ಮನವಿ ಮಾಡಿದರೂ ಜಿಲ್ಲಾಡಳಿತ ಇದಕ್ಕೆ ಮುಂದಾಗದಿರುವುದು ಬೇಸರದ ಸಂಗತಿ ಎಂದು ಸ್ಥಳೀಯರು ಅಲವತ್ತುಕೊಂಡರು.

ಸಾಕಷ್ಟು ಭರವಸೆಗಳೊಂದಿಗೆ ರೈತರ ಮತಗಳನ್ನು ಬೇಡಿ ಆಯ್ಕೆಯಾಗುವ ಜನಪ್ರತಿನಿಧಿಗಳಿಗೆ ರೈತರ ಮತ ಬೇಕೆ ಹೊರತು ಅವರ ಅಭಿವೃದ್ಧಿ ಅಲ್ಲ. ಮಾರುಕಟ್ಟೆ ಪ್ರಾರಂಭಿಸಲು ಜಾಗ ಇದ್ದರೂ ಇಚ್ಛಾಶಕ್ತಿ ತೋರದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜಾಣಕುರುಡುತನಕ್ಕೆ ರೈತರು ನಿತ್ಯ ಛೀಮಾರಿ ಹಾಕುತ್ತಿದ್ದಾರೆ.

ಹೆಸ್ಕಾಂ ಉಪವಿಭಾಗ ಕಚೇರಿ ಇಲ್ಲ:

ತಾಲ್ಲೂಕು ಕೇಂದ್ರದಲ್ಲಿ ಹೆಸ್ಕಾಂ ಉಪವಿಭಾಗ ಕಚೇರಿ ಸ್ಥಾಪಿಸುವಂತೆ ಬೇಡಿಕೆ ಇಟ್ಟಾಗಲೆಲ್ಲ ಅಧಿಕಾರಿಗಳ ಒಂದೇ ಉತ್ತರ ಶಿರಹಟ್ಟಿಯಿಂದ ಆದಾಯ ಇಲ್ಲ ಎಂಬುದು. ಶಿರಹಟ್ಟಿ ಹೆಸ್ಕಾಂ ಕಚೇರಿಯ ವ್ಯಾಪ್ತಿಯಲ್ಲಿ 29 ಕಲ್ಲಿನ ಕ್ರಷರ್‌ಗಳು ಹಾಗೂ 8 ನೀರು ಸರಬರಾಜು ಕೇಂದ್ರಗಳು ಬರುತ್ತವೆ. ಒಂದು ತಿಂಗಳಿಗೆ 29 ಕ್ರಷರ್‌ಗಳಿಂದ ಸುಮಾರು ₹10 ಲಕ್ಷ ಹಾಗೂ ನೀರು ಸರಬರಾಜು ಕೇಂದ್ರಗಳಿಂದ ₹23 ಲಕ್ಷ ಆದಾಯ ಬರುತ್ತಿದೆ. ಎಲ್‌ಟಿ 3,5,6 ಲೈನ್‌ನಿಂದ ಲಕ್ಷಾಂತರ ಆದಾಯ, ಎಲ್.ಟಿ 3 ಕಮರ್ಷಿಯಲ್‌ನ 1408 ಮೀಟರ್‌ಗಳಿಂದ ₹3ರಿಂದ ₹4 ಲಕ್ಷ, ಎಲ್.ಟಿ 5 ಲೈನ್‌ನಲ್ಲಿ ಲೇತ್ ಮಷಿನ್, ಗಿರಣಿ ಹಾಗೂ ಸಣ್ಣ ಕೈಗಾರಿಗೆ ಉದ್ದಿಮೆಗಳ 385 ಮೀಟರ್‌ಗಳಿಂದ ₹4 ಲಕ್ಷ , ಎಲ್.ಟಿ-6 ಲೈನ್‌ಗಳ 250 ಮೀಟರ್‌ಗಳಿಂದ ₹10ರಿಂದ ₹15 ಲಕ್ಷ ಆದಾಯ ಬರುತ್ತಿದೆ. ಒಟ್ಟಿನಲ್ಲಿ ಶಿರಹಟ್ಟಿ ತಾಲ್ಲೂಕಿನಿಂದಲೇ ತಿಂಗಳಿಗೆ ಕೋಟಿಗಟ್ಟಲೇ ಆದಾಯ ಪಡೆಯುತ್ತಿರುವ ಹೆಸ್ಕಾಂ ಕಚೇರಿಯು ಶಿರಹಟ್ಟಿ ಕೇಂದ್ರಕ್ಕೆ ಉಪವಿಭಾಗ ಕಚೇರಿಯ ಬೇಡಿಕೆ ಇಟ್ಟಾಗ ಅಧಿಕಾರಿಗಳ ಶಿರಹಟ್ಟಿ ಕಚೇರಿಯಿಂದ ಆದಾಯ ಇಲ್ಲ ಎಂಬ ಹಾರಿಕೆ ಉತ್ತರ ಜನರಲ್ಲಿ ಆಕ್ರೋಶ ಕೆರಳಿಸುವಂತಿದೆ.

ಡಕೋಟಾ ಬಸ್: ಡಿಪೋ ಸ್ಟಾರ್ಟ್‌:

ತಾಲ್ಲೂಕು ಕೇಂದ್ರವಾದಗಿಂದಲೂ ಸಾರಿಗೆ ಬಸ್ ಡಿಪೋ ಇಲ್ಲದೇ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳೀಯ ಹಲವಾರು ಸಂಘಟನೆಗಳ ಹೋರಾಟದ ಫಲವಾಗಿ ಮಂಜುರಾದ ನೂತನ ಸಾರಿಗೆ ಘಟಕ 2022ರ ಮಾರ್ಡ್‌ 13ರಂದು ಉದ್ಘಾಟನೆಯಾಯಿತು. ಹೊಸ ಘಟಕ ಪ್ರಾರಂಭವಾಗಿ ಪ್ರಯಾಣಿಕರ ಸಮಸ್ಯೆ ನೀಗುತ್ತದೆ ಎಂಬ ಭರವಸೆಯಲ್ಲಿದ್ದ ಜನತೆಗೆ ಡಕೊಟಾ ಬಸ್ ನೀಡಿದ್ದರಿಂದ ಮತ್ತಷ್ಟು ತೊಂದರೆಯಾಗುತ್ತಿದೆ. ಎಲೆಂದರಲ್ಲಿ ಬಸ್ ಕೆಟ್ಟುನಿಂತು ಪ್ರಯಾಣಿಕರ ಹಿಡಿಶಾಪಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗುರಿಯಾಗುತ್ತಿದ್ದಾರೆ.

ಸಾರಿಗೆ ಘಟಕಕ್ಕೆ 19 ಶೆಡ್ಯೂಲ್ ನೀಡಲಾಗಿದೆ. ಒಟ್ಟು 21 ಬಸ್‌ಗಳು ಇದ್ದು, ಇದರಲ್ಲಿ ಬಹುತೇಕ ಬಸ್‌ಗಳು ರಿಪೇರಿ ಹಂತದಲ್ಲಿವೆ. ತಾಲ್ಲೂಕಿನ ವ್ಯಾಪ್ತಿಯಲ್ಲಿ 50 ಗ್ರಾಮಗಳು ಬರಲಿದ್ದು, ಪ್ರಸ್ತುತ ಇರುವ 19 ಶೆಡ್ಯೂಲ್‌ಗಳಲ್ಲಿನ ಎಲ್ಲಾ ಗ್ರಾಮೀಣ ಪ್ರದೇಶಗಳಿಗೂ ಸರಿಯಾದ ಸಮಯಕ್ಕೆ ಸಾರಿಗೆ ಸೌಲಭ್ಯ ಸಿಗತ್ತಿಲ್ಲ.

ಇಲ್ಲಗಳ ಮಧ್ಯ ತಾಲ್ಲೂಕು:

ಒಂದು ಕಾಲದಲ್ಲಿ ಸ್ಥಳೀಯ ರೇಷ್ಮೆ ಮಾರುಕಟ್ಟೆಯೂ ಉತ್ತರ ಕರ್ನಾಟಕದ ಮೊದಲ ಹಾಗೂ ರಾಜ್ಯದ ಮುಖ್ಯ ರೇಷ್ಮೆ ಮಾರುಕಟ್ಟೆಯಾಗಿತ್ತು. ಕಾಲಕಳೆದ ಹಾಗೇ ರೀಲರ್ಸ್‌ಗಳ ಕುತಂತ್ರದಿಂದ ನೂಲು ಬಿಚ್ಚಣಿಕೆ ಯಂತ್ರಗಳು ಇಂದು ತುಕ್ಕು ಹಿಡಿಯುತ್ತಿದ್ದು, ಸರಿಯಾದ ವ್ಯಾಪಾರ ವಹಿವಾಟು ಇಲ್ಲ. ಚುನಾವಣೆ ಪೂರ್ವದಲ್ಲಿ ರೈತರಲ್ಲಿ ನೀರಾವರಿ ಭರವಸೆಗಳನ್ನು ತುಂಬುವ ಜನಪ್ರತಿನಿಧಿಗಳಿಂದು ಇದುವರೆಗೂ ನೀರಾವರಿ ಯೋಜನೆಗಳು ಕೈಗೂಡಿಲ್ಲ. ಖಾಸಗಿ ಶಾಲೆಗಳ ಡೋನೆಷನ್ ಹಾವಳಿಯಿಂದ ಬಡವರಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಸರ್ಕಾರಿ ಶಾಲೆಗಳಲ್ಲಿ ಕೊಠಡಿ ಹಾಗೂ ಶಿಕ್ಷಕರ ಕೊರತೆ ಇದೆ. ಇದುವರೆಗೂ ನ್ಯಾಯಾಲಯಕ್ಕೆ ಸ್ವಂತ ಕಟ್ಟಡವಿಲ್ಲ. 100 ಹಾಸಿಗೆ ಸರ್ಕಾರಿ ಆಸ್ಪತ್ರೆ ಇಲ್ಲ. ಗಣಿದಣಿಗಳ ದಾಹಕ್ಕೆ ತಾಲ್ಲೂಕಿನ ರೈತರ ಜಮೀನು ಹಾಗೂ ಬೆಳೆಗಳು ಹಾಳಾಗುತ್ತಿವೆ. ಹೀಗೆ ಸರದಿ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕ ತಾಲ್ಲೂಕು ಕೇಂದ್ರದ ಅಭಿವೃದ್ಧಿಗೆ ಇನ್ನು ಮುಂದೆಯಾದರೂ ಅಧಿಕಾರಿಗಳು ಹಾಗೂ ಜನಪ್ರತನಿಧಿಗಳು ಎಚ್ಚೆತ್ತುಕೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಸೆಯಾಗಿದೆ.

ಜನರು ಏನಂತಾರೆ?

ಬ್ರಿಟಿಷ್‌ ಕಾಲದಿಂದಲೂ ತಾಲ್ಲೂಕು ಹಿಂದುಳಿದ್ದು, ರಾಜಕೀಯ ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕೋಸ್ಕರ ಭರವಸೆಗಳನ್ನು ನೀಡಿ ಆಯ್ಕೆಯಾಗುತ್ತಾರೆ. ನಂತರ ಅಭಿವೃದ್ಧಿಯತ್ತ ಗಮನ ಹರಿಸುವುದಿಲ್ಲ. ಅಧಿಕಾರಿಗಳು ಸಹ ಹಾರಿಕೆ ಉತ್ತರಗಳನ್ನು ನೀಡುತ್ತಾ ಆಡಳಿತ ಮಾಡುತ್ತಾರೆ
ರಫೀಕ್ ಕೇರಿಮನಿ, ಕರವೇ ತಾಲ್ಲೂಕು ಘಟಕದ ಅಧ್ಯಕ್ಷ
ಶಿರಹಟ್ಟಿ ತಾಲ್ಲೂಕಿನ ವ್ಯಾಪಾರಸ್ಥರ ಒಂದು ಸಭೆ ಕರೆದು ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಗುತ್ತಿದೆ. ವ್ಯಾಪಾರಸ್ಥರು ಆಸಕ್ತಿ ವಹಿಸಿದರೆ ಮಾರುಕಟ್ಟೆ ಪ್ರಾರಂಭಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು
ಶಿವಾನಂದ ಜಿ ಮಠದ, ಎಪಿಎಂಸಿ ಕಾರ್ಯದರ್ಶಿ
ತಾಲ್ಲೂಕು ಕೇಂದ್ರದಲ್ಲಿ ಹೆಸ್ಕಾಂ ಉಪವಿಭಾಗ ಕಚೇರಿ ಪ್ರಾರಂಭಿಸಿದರೆ, ರೈತರ ಬೋರ್‌ವೆಲ್‌ಗಳಿಗೆ ಬೇಕಾಗುವ ವಿದ್ಯುತ್‌ ಪರಿವರ್ತಕಗಳು ಸಮಯಕ್ಕನುಗುಣವಾಗಿ ದೊರೆಯುತ್ತವೆ
ಮಹಾದೇವಪ್ಪ ಬಿಡವೆ, ಸ್ಥಳೀಯ ನಿವಾಸಿ
ಶೀಘ್ರದಲ್ಲಿ ಬೇಂದ್ರೆ ಭವನವನ್ನು ದುರಸ್ತಿಗೊಳಿಸಿ ಪ್ರಾರಂಭಿಸಬೇಕು. ಬೇಂದ್ರೆಯವರ ಹುಟ್ಟೂರು ಶಿರಹಟ್ಟಿಯಲ್ಲಿ ಅವರ ವಸ್ತು ಸಂಗ್ರಹಾಲಯ ಸ್ಥಾಪನೆಯಾಗಬೇಕು
ಎಸ್.ಬಿ.ಹೊಸೂರ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ
ನಿರ್ವಹಣೆ ಇಲ್ಲದೆ ಕಸದಿಂದ ಆವೃತಗೊಂಡ ಎಪಿಎಂಸಿ ಆವರಣ
ನಿರ್ವಹಣೆ ಇಲ್ಲದೆ ಕಸದಿಂದ ಆವೃತಗೊಂಡ ಎಪಿಎಂಸಿ ಆವರಣ

ಬೇಂದ್ರೆಯವರನ್ನು ಮರೆತ ಜನ

ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಕವಿ, ಸಾಹಿತಿ ದ.ರಾ.ಬೇಂದ್ರೆ ಹುಟ್ಟಿದ್ದು ಶಿರಹಟ್ಟಿಯಲ್ಲಿ. ಅವರ ಹುಟ್ಟೂರಾದ ಪಟ್ಟಣದಲ್ಲಿ ಅವರ ನೆನಪಿಗಾಗಿ ಒಂದೇ ಒಂದು ವೃತ್ತ(ಸರ್ಕಲ್‌), ಭವನವಿಲ್ಲ. ಪೀಳಿಗೆಯಿಂದ ಪೀಳಿಗೆಗೆ ಅವರ ಸಾಹಿತ್ಯದ ಔಚಿತ್ಯವನ್ನು ಹಂಚುವ ಕೆಲಸ ಮಾಡುವುದನ್ನು ಮರೆತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದ್ದೊಂದು ಭವನದಲ್ಲಿ ಕಸ ಶೇಖರಣೆ ಮಾಡಿ ಪಾಳು ಬೀಳುವಂತೆ ಮಾಡಿದ್ದಾರೆ.

ಸಣ್ಣ ಮನೆಯಂತೆ ಇರುವ ಶಿರಹಟ್ಟಿಯ ನಿರೀಕ್ಷಣಾ ಮಂದಿರ
ಸಣ್ಣ ಮನೆಯಂತೆ ಇರುವ ಶಿರಹಟ್ಟಿಯ ನಿರೀಕ್ಷಣಾ ಮಂದಿರ

ನಿರೀಕ್ಷಣಾ ಮಂದಿರದ ಕೊರತೆ

ತಾಲ್ಲೂಕು ಕೇಂದ್ರವಾಗಿ ಸುಮಾರು ದಶಕಳೇ ಕಳೆದರೂ ಶಿರಹಟ್ಟಿ ತಾಲ್ಲೂಕು ಕೇಂದ್ರಕ್ಕೆ ಸುಸಜ್ಜಿತ ನಿರೀಕ್ಷಣಾ ಮಂದಿರ ಇಲ್ಲ. ನಿತ್ಯ ನೂರಾರು ಕೆಲಸಗಳನ್ನು ಹೊತ್ತು ಬಹುದೂರದ ಊರುಗಳಿಂದ ಬಂದ ಅತಿಥಿಗಳಿಗೆ ವಿಶ್ರಮಿಸಲು ಸರಿಯಾದ ಕೊಠಡಿಗಳಿಲ್ಲ. ಇರುವ ಸಣ್ಣ ಸಣ್ಣ ಎರಡು ಮೂರು ಕೊಠಡಿಗಳು ಸಹ ಸರಿಯಾಗಿ ನಿರ್ವಹಣೆ ಇಲ್ಲ. ಸುಮಾರು ವರ್ಷಗಳಿಂದ ಅದೇ ಕಾಟು, ಕುರ್ಚಿಗಳಿಂದ ನಿರೀಕ್ಷಣಾ ಮಂದಿರದ ಕಳೆಗುಂದಿದೆ. ಶಿರಹಟ್ಟಿ ತಾಲ್ಲೂಕು ಮತಕ್ಷೇತ್ರದ ಹೆಸರಿನಲ್ಲಿ ಅಧಿಕಾರ ಚಲಾಯಿಸುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅದರ ನೂತನ ಕಟ್ಟಡದ ಬಗ್ಗೆ ತಲೆಕಡೆಸಿಕೊಳ್ಳದೆ ಇರುವುದರಲ್ಲಿಯೇ ತೃಪ್ತಿ ಪಡೆಯುತ್ತಿರುವುದು ಅವರ ಅಭಿವೃದ್ಧಿಗೆ ಹಿಡಿದ ಕೈಗನ್ನಡಿ. ಸಂಬಂಧಪಟ್ಟ ಇಲಾಖೆಯಿಂದ ಪ್ರತಿ ವರ್ಷ ಅದರ ರಿಪೇರಿಗೆ ಖರ್ಚು ಹಾಕಿ ಬಿಲ್ ಎತ್ತುವುದು ಸಂಪ್ರದಾಯ ಎಂಬುದು ಸ್ಥಳೀಯರ ಆರೋಪ.

ಅಧಿಕಾರಿಗಳ ನಿರ್ಲಕ್ಷ್ಯದಿಂದ ತುಕ್ಕು ಹಿಡಿಯಿತ್ತಿರುವ ಶಿರಹಟ್ಟಿಯ ರೇಷ್ಮೆ ನೂಲು ಬಿಚ್ಚಣಿಕೆ ಯಂತ್ರ
ಅಧಿಕಾರಿಗಳ ನಿರ್ಲಕ್ಷ್ಯದಿಂದ ತುಕ್ಕು ಹಿಡಿಯಿತ್ತಿರುವ ಶಿರಹಟ್ಟಿಯ ರೇಷ್ಮೆ ನೂಲು ಬಿಚ್ಚಣಿಕೆ ಯಂತ್ರ

‘ಪ್ರವಾಸಿ ತಾಣಗಳ ಕಡೆಗಣನೆ’

ತಾಲ್ಲೂಕಿನಲ್ಲಿ ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣಗಳಿವೆ. ಜ.ಫಕೀರೇಶ್ವರ ಮಠ, ಅವ್ವಲಿಂಗವ್ವನ ದೇವಸ್ಥಾನ, ಶಿವಾಜಿ ಖಡ್ಗಧಾರಣೆ ಮಾಡಿದ ಶ್ರೀಮಂತಗಡದ ಹೊಳಲಮ್ಮದೇವಿ ದೇವಸ್ಥಾನ, ವರವಿ ಮೌನೇಶ್ವರ ಮಠ, ಸಾಸಲವಾಡದ ಗಡ್ಡಿ ಬಸವೇಶ್ವರ ದೇವಸ್ಥಾನ, ಕಪ್ಪತ್ತಗುಡ್ಡ, ಮಾಗಡಿ ಕೆರೆಯ ಪಕ್ಷಿಧಾಮದಂತಹ ಇತಿಹಾಸ ಹಾಗೂ ಪ್ರವಾಸಿ ತಾಣಗಳನ್ನು ಕಡೆಗಣಿಸಲಾಗಿದೆ. ಒಂದೊಂದು ತಾಣವು ತನ್ನದೇಯಾದ ವೈಶಿಷ್ಟ್ಯಗಳನ್ನು ಹೊಂದಿದ್ದು, ಅಭಿವೃದ್ಧಿಯಿಂದ ಮರೀಚಿಕೆಯಾಗಿವೆ. ಅವುಗಳ ಅಭಿವೃದ್ಧಿಗೆ ಅಂದಾಜು ಪ್ರತಿ ಸಿದ್ಧಪಡಿಸಿ ಕಾಮಗಾರಿಗಳನ್ನು ಪ್ರಾರಂಭಿಸಬೇಕಿದೆ. ಪ್ರಾಕೃತಿಕ ಸೌಂದರ್ಯ ಸವಿಯುವ ಕಪತ್ತಗುಡ್ಡ, ಸಾಸಲವಾಡದ ಗಡ್ಡಿ ಬಸವೇಶ್ವರ ಹಾಗೂ ಮಾಗಡಿ ಕೆರೆಯ ಅಭಿವೃದ್ಧಿಯಾಗಬೇಕು. ಆಯಾ ಸ್ಥಳಗಳಲ್ಲಿ ಪ್ರವಾಸಿಗರಿಗೆ ತಂಗುವ ವ್ಯವಸ್ಥೆ ಕಲ್ಪಿಸಬೇಕು. ಅಂದಾಗ ತಾಲ್ಲೂಕಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರ ಆಗಮನ ಹೆಚ್ಚಾಗಿ, ವ್ಯಾಪಾರ ವಹಿವಾಟು ಹೆಚ್ಚುತ್ತದೆ ಪ್ರಜ್ಞಾವಂತರ ಮಾತುಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT