ಮಂಗಳವಾರ, ಮಾರ್ಚ್ 2, 2021
31 °C
ಸಮುದಾಯ ಸಹಭಾಗಿತ್ವದಲ್ಲಿ ಹಿರೇಕೆರೆ ಹೂಳು ತೆಗೆಯುವ ಕಾಮಗಾರಿ ಆರಂಭ

ಕೆರೆ ಸಂರಕ್ಷಣೆಗೆ ಮುಂದಾದ ಗ್ರಾಮಸ್ಥರು

ಚಂದ್ರು ಎಂ. ರಾಥೋಡ್ Updated:

ಅಕ್ಷರ ಗಾತ್ರ : | |

Deccan Herald

ನರೇಗಲ್: ಕೆರೆ ಪುನಶ್ಚೇತನಕ್ಕೆ ಸರ್ಕಾರದ ನೆರವಿಗೆ ಕಾಯದೇ ಗ್ರಾಮಸ್ಥರೇ ತಮ್ಮ ಸ್ವಂತ ಜೇಬಿನಿಂದ ಹಣ ಖರ್ಚು ಮಾಡಿ ‘ಜಲಮೂಲ ಸಂರಕ್ಷಣೆಗೆ’ಮುಂದಾಗಿರುವ ಮಾದರಿ ಕಾರ್ಯ ನರೇಗಲ್‌ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಹಿರೇಕೆರೆಯ ಹೂಳು ತೆಗೆಯುವ ಮೂಲಕ ಪಾತಾಳ ಕಂಡಿರುವ ಅಂತರ್ಜಲ ವೃದ್ಧಿಗೆ ಸಾರ್ವಜನಿಕರೇ ಮುಂದಾಗಿದ್ದಾರೆ. ಸಮುದಾಯ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ಕೆ ಉತ್ತಮ ಜನಸ್ಪಂದನೆ ಲಭಿಸಿದೆ.

ನರೇಗಲ್ ಪಟ್ಟಣದ ನಿವಾಸಿಗಳ ಪಾಲಿನ ಗಂಗೆಯಾಗಿರುವ ಈ ಕೆರೆಗೆ 900 ವರ್ಷಗಳ ಇತಿಹಾಸವಿದೆ. ಕೆರೆಯ ವಿಸ್ತೀರ್ಣ 132 ಎಕರೆ. ಹಿಂದೆ ಕೆರೆ ತುಂಬಿದಾಗ ಕಾಲುವೆಗಳ ಮೂಲಕ ಸುತ್ತಮುತ್ತಲಿನ ಗ್ರಾಮದ ಜನರು ತಮ್ಮ ಜಮೀನುಗಳಿಗೆ ನೀರು ಹರಿಸಿಕೊಳ್ಳುತ್ತಿದ್ದರು. ಗ್ರಾಮದ 25 ಸಾವಿರ ಜನರಿಗೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಈ ಕೆರೆ ಬತ್ತದ ಜೀವ ಜಲವಾಗಿತ್ತು. ಒತ್ತುವರಿ ಪರಿಣಾಮ ಕೆರೆಯ ವಿಸ್ತೀರ್ಣ 69 ಎಕರೆಗೆ ಕುಗ್ಗಿತು. 1962ರಲ್ಲಿ ವಿದ್ಯುತ್ ಗ್ರಿಡ್‌ಗಾಗಿ ಕೆರೆಯ ಒಂದು ಭಾಗ ಹೋದ ನಂತರ, ಕೆರೆಯ ವಿಸ್ತೀರ್ಣ ಕೇವಲ 30 ಎಕರೆಗೆ ಬಂದು ನಿಂತಿದೆ.

ಹೂಳು ತುಂಬಿ, ಮುಳ್ಳಿನ ಗಿಡಗಳು ಬೆಳೆದು ನಿಂತಿರುವ ಕೆರೆಯನ್ನು ಪುನಶ್ಚೇತನಗೊಳಿಸಿ, ಮತ್ತೆ ಬತ್ತದ ಗಂಗೆಯನ್ನಾಗಿ ಮಾಡಲು ಗ್ರಾಮದ ಹಿರಿಯರು, ವಿದ್ಯಾವಂತರು, ಪರಿಸರ ಪ್ರೇಮಿಗಳು ಪಕ್ಷಾತೀತವಾಗಿ, ಜಾತ್ಯತೀತವಾಗಿ ಕೈಜೋಡಿಸಿದ್ದಾರೆ. ಪರಿಣಾಮ ನೆಲ, ಜಲ ಸಂರಕ್ಷಣ ಸಮಿತಿ ರಚನೆಗೊಂಡಿದೆ. ಸದ್ಯ ಕೋಡಿಕೊಪ್ಪ ಭಾಗದ ಕೆರೆ ಅಭಿವೃದ್ಧಿ ಕಾರ್ಯ ನಡೆದಿದೆ.

10 ಅಡಿ ಆಳದಷ್ಟು ಹೂಳು ತೆಗೆಯಲಾಗುತ್ತಿದೆ. ಬೆಳಿಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆಯವರೆಗೆ 4 ಜೆಸಿಬಿ, ನೂರಕ್ಕೂ ಹೆಚ್ಚು ಟ್ರಾಕ್ಟರ್‌ಗಳು, ನೂರಾರು ಜನರು ಈ ಕಾರ್ಯದಲ್ಲಿ ಬಿಡುವಿಲ್ಲದೆ ತೊಡಗಿದ್ದಾರೆ. ಕೆರೆಯಿಂದ ತೆಗೆಯುವ ಹೂಳಿಗೆ ಒಂದು ಟ್ರಾಕ್ಟರ್‌ಗೆ ರೈತರು ₹ 70 ನೀಡಿ, ಫಲವತ್ತಾದ ಈ ಮಣ್ಣನ್ನು ಹೊಲಕ್ಕೆ ಹಾಕಿಸಿಕೊಳ್ಳುತ್ತಿದ್ದಾರೆ. ಗರಸು ಮಣ್ಣನ್ನು ಹೊಲದ ಬದುವಿಗೆ ಹಾಕಿಸಿಕೊಳ್ಳುತ್ತಿದ್ದಾರೆ. ಪ್ರತಿ ದಿನ ಸರಾಸರಿ 500 ಟ್ರಾಕ್ಟರ್‌ನಷ್ಟು ಹೂಳು ತೆಗೆಯಲಾಗುತ್ತಿದೆ.

‘ಕೆರೆ ಸಂಪೂರ್ಣ ಅಭಿವೃದ್ಧಿ ಪಡಿಸಲು ₹ 30 ಲಕ್ಷ ಖರ್ಚಾಗುವ ಅಂದಾಜು ಇದೆ. ನಾಲ್ಕು ತಿಂಗಳು ಸತತ ಹೂಳು ತೆಗೆಯುವ ಕೆಲಸ ನಡೆಯಲಿದೆ. ದಾನಿಗಳು ಮುಂದೆ ಬಂದರೆ, ಒಂದು ಮತ್ತು ಎರಡನೇ ಕೆರೆಗಳನ್ನೂ ಸಹ ಅಭಿವೃದ್ಧಿ ಪಡಿಸುವ ಯೋಜನೆ ಇದೆ’ ಎಂದು ಸಮಿತಿಯ ಉಮೇಶ ಸಂಗನಾಳಮಠ, ಬಸವರಾಜ ವಂಕಲಕುಂಟಿ, ನಿಂಗನಗೌಡ ಲಕ್ಕನ ಗೌಡ್ರ, ಶಿವನಗೌಡ ಪಾಟೀಲ ಹೇಳಿದರು.

*
ನರೇಗಲ್‌ನಲ್ಲಿ ಜನರು ಸ್ವಯಂ ಪ್ರೇರಣೆಯಿಂದ ಕೆರೆ ಅಭಿವೃದ್ಧಿ ಪಡಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಅನಕೂಲ ಕಲ್ಪಿಸಲಾಗುವುದು.
-ಕಳಕಪ್ಪ ಬಂಡಿ, ಶಾಸಕ

*
ಸಾರ್ವಜನಿಕರೇ ಕೆರೆ ಪುನಶ್ಚೇತನಕ್ಕೆ ಮುಂದಾಗಿರುವ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದೇವೆ. ನೆರವು ಒದಗಿಸುವ ಪ್ರಯತ್ನ ಮಾಡಲಾಗುವುದು.
–ಆರ್.ಎಸ್.ಮದಗುಣಕಿ, ತಹಶೀಲ್ದಾರ್, ಗಜೇಂದ್ರಗಡ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು