ಯಂತ್ರ ಬಳಸಿದರೆ ಪ್ರಕರಣ ದಾಖಲು

ಗಜೇಂದ್ರಗಡ: ‘ಈ ಭಾಗದಲ್ಲಿ ಜನರ ಬದಲು ಯಂತ್ರಗಳಿಂದ ನರೇಗಾ ಕಾಮಗಾರಿ ನಡೆಸಲಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿದ್ದು, ಸಾಕ್ಷಿ ಸಮೇತ ದೂರುಗಳು ಬಂದರೆ ಪಿಡಿಒ ಮತ್ತು ಗ್ರಾಮ ಪಂಚಾಯ್ತಿ ಅಧ್ಯಕ್ಷರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಭರತ್ ಎಸ್. ಎಚ್ಚರಿಕೆ ನೀಡಿದರು.
ಪಟ್ಟಣಕ್ಕೆ ಶುಕ್ರವಾರ ಮೊದಲ ಬಾರಿ ಭೇಟಿ ನೀಡಿ ತಾಲ್ಲೂಕು ಪಂಚಾಯ್ತಿ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
‘ನರೇಗಾದಲ್ಲಿ ಅನುದಾನದ ಮಿತಿಯಿಲ್ಲ. ಜನರಿಗೆ ಕೆಲಸ ನೀಡುವ ಮೂಲಕ ಹಲವು ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದ್ದು, ಗಜೇಂದ್ರಗಡ ತಾಲ್ಲೂಕಿನಲ್ಲಿ ನರೇಗಾದಲ್ಲಿ ಹೆಚ್ಚಿನ ಮಾನವ ದಿನಗಳು ಸೃಜಿಸಲಾಗುತ್ತಿದೆ. ಆದರೆ ಜನರಿಗೆ ಕೆಲಸ ನೀಡುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಹೀಗಾಗಿ ಜನರಿಗೆ ಕೆಲಸ ನೀಡುವುದರ ಜೊತೆಗೆ ಅದರಲ್ಲಿ ಮಹಿಳೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರನ್ನು ಸಕ್ರಿಯಗೊಳಿಸಲು ಮುಂದಾಗಬೇಕು’ ಎಂದು ಸೂಚಿಸಿದರು.
‘ರಾಜ್ಯದಲ್ಲಿ ಪ್ರಥಮ ಬಾರಿಗೆ ಗದಗ ಜಿಲ್ಲೆಯಲ್ಲಿ ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನಗೊಳಿಸುವ ಗುರಿ ಹೊಂದಿದ್ದೇವೆ. ಇದಕ್ಕೆ ಪೂರಕವಾಗಿ ಎಲ್ಲರೂ ಶ್ರಮಿಸಬೇಕು’ ಎಂದರು.
‘15ನೇ ಹಣಕಾಸು ಸಮರ್ಪಕ ಅನುಷ್ಟಾನದಲ್ಲಿ ಗೋಗೇರಿ, ಹಾಲಕೇರಿ ಗ್ರಾಮ ಪಂಚಾಯ್ತಿಗಳು ಮುಂದಿದ್ದರೆ ರಾಜೂರ, ಸೂಡಿ ಗ್ರಾಮ ಪಂಚಾಯ್ತಿಗಳು ಹಿಂದಿವೆ. ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯ್ತಿಗಳಲ್ಲಿ ಕಸ ಸಂಗ್ರಹಿಸಿ ವಿಲೇವಾರಿ ಮಾಡಲು ಘಟಕ ಸ್ಥಾಪಿಸಲು ಮುಂದಾಗಬೇಕು' ಎಂದು ಸಲಹೆ ನೀಡಿದರು.
‘ಗ್ರಾಮದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವುದರಿಂದ ಗ್ರಾಮದಲ್ಲಿ ದುರ್ವಾವಾಸನೆ ಬರುತ್ತದೆ ಎಂದು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಗುಳಗುಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಭೀಮವ್ವ ಉಪ್ಪಾರ ಹೇಳಿದರು.
ತಾಲ್ಲೂಕು ಪಂಚಾಯ್ತಿ ಇಒ ಸಂತೋಷಕುಮಾರ ಪಾಟೀಲ, ಸಹಾಯಕ ನಿರ್ದೇಶಕ (ನರೇಗಾ ವಿಭಾಗ) ಎಸ್.ಎಸ್.ರಿತ್ತಿ, ಐಇಸಿ ಸಂಯೋಜಕ ಸುರೇಶ ಬಾಳಿಕಾಯಿ, ತಾಲ್ಲೂಕು ಪಂಚಾಯ್ತಿ ತಾಂತ್ರಿಕ ಸಂಯೋಜಕಿ ಪ್ರಯಾಂಕ ಅಂಗಡಿ, ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು, ಪಿಡಿಒಗಳು ಹಾಗೂ ನರೇಗಾ, ರೇಷ್ಮೆ, ಅರಣ್ಯ, ಕೃಷಿ ಇಲಾಖೆಗಳ ಸಿಬ್ಬಂದಿ ಇದ್ದರು.
ಪಿಡಿಒಗೆ ತರಾಟೆ ತೆಗೆದುಕೊಂಡ ಸಿಇಒ
ಜಿಲ್ಲಾ ಪಂಚಾಯ್ತಿ ಸಿಇಒ ಭರತ್ ಎಸ್. ಗ್ರಾಮಗಳಲ್ಲಿನ ವಿವಿಧ ಇಲಾಖೆಗಳ ಕಾಮಗಾರಿ ಪರಿಶೀಲಿಸಿದರು.
ಗೋಗೇರಿ ಗ್ರಾಮದ ಪ್ರೌಢಶಾಲೆಯಲ್ಲಿ ನಿರ್ಮಿಸುತ್ತಿರುವ ಪಿಂಕ್ ಟಾಯ್ಲೆಟ್ ಕಾಮಗಾರಿ ಪರಿಶೀಲಿಸಿ, ಕಾಮಗಾರಿ ಪ್ರಗತಿ ಆಗಿಲ್ಲವಲ್ಲ ಕಾಮಗಾರಿಯ ಆದೇಶ ಪ್ರತಿ ತೋರಿಸಿ ಎಂದರು.ಎಂಜಿನಿಯರ್ ಹಾಗೂ ಪಿಡಿಒ ಶರಣಪ್ಪ ನರೇಗಲ್ ತಡಬಡಿಸಿ, ‘ಕಾಮಗಾರಿ ಪ್ರಾರಂಭವಾಗಿ ಒಂದು ವರ್ಷವಾಯಿತು. ಆದಷ್ಟು ಬೇಗ ಮುಗಿಸುವುದಾಗಿ’ ಹೇಳಿದರು.ಒಂದು ವರ್ಷದಿಂದ ಏನು ಮಾಡಿದಿರಿ ಎಂದು ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡರು.ನಂತರ ಸಿಇಒ ಭರತ್ ಎಸ್. ಗ್ರಾಮದ ಪ್ರೌಢಶಾಲೆಯಲ್ಲಿ ಕಾಯಕ ಬಂಧುಗಳ ಜೊತೆ ಸಂವಾದ ನಡೆಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.