ಶನಿವಾರ, ಅಕ್ಟೋಬರ್ 23, 2021
20 °C
ಗಾಂಧಿ ನೆನಪಿನ ತಾಣ

ಗಾಂಧಿ ಜಯಂತಿ: ಗದುಗಿನಲ್ಲೇ ಕಣ್ತುಂಬಿಕೊಳ್ಳಿ ಸಾಬರಮತಿ ಆಶ್ರಮ

ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

Prajavani

ಗದಗ: ಸಾಬರಮತಿ ಆಶ್ರಮ. ಈ ಹೆಸರು ಕೇಳಿದಾಗ ನಮಗೆ ಥಟ್‌ ಅಂತ ನೆನಪಾಗುವುದೇ ಮಹಾತ್ಮ ಗಾಂಧಿ. ಯಾವುದೇ ಚಳವಳಿ, ಉಪವಾಸ ಅಂತ ಬಂದಾಗ ಗಾಂಧೀಜಿ ವಾಸಿಸುತ್ತಿದ್ದಿದ್ದು ಇದೇ ಆಶ್ರಮದಲ್ಲಿ. ಈ ಹಿಂದೆ ನಾವು ಸಾಬರಮತಿ ಆಶ್ರಮ ನೋಡಲು ಗುಜರಾತ್‌ಗೇ ಹೋಗಬೇಕಿತ್ತು. ಆದರೆ, ಈಗ ನಾವು ಸಾಬರಮತಿ ಆಶ್ರಮವನ್ನು ಗದುಗಿನಲ್ಲೇ ಕಣ್ತುಂಬಿಕೊಳ್ಳಬಹುದು.

ಕಪ್ಪತ್ತಗುಡ್ಡದ ಸೆರಗಿನಲ್ಲಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದ ರಮ್ಯ ಪರಿಸರದಲ್ಲಿ ಸಾಬರಮತಿ ಆಶ್ರಮ ನಿರ್ಮಾಣವಾಗಿದ್ದು, ಗಾಂಧೀಜಿ ಗದುಗಿಗೆ ಭೇಟಿ ನೀಡಿ 100 ವರ್ಷಗಳು ತುಂಬಿದ ಐತಿಹಾಸಿಕ ದಿನದಂದು ಅಂದರೆ ನವೆಂಬರ್‌ 11, 2020ರಂದು ಈ ಆಶ್ರಮ ಲೋಕಾರ್ಪಣೆಗೊಂಡಿದೆ. ಸಾಬರಮತಿ ಆಶ್ರಮ ಈಗ ಪ್ರವಾಸಿತಾಣವಾಗಿ ಜನಪ್ರಿಯತೆ ಗಳಿಸುತ್ತಿದ್ದು, ಇಲ್ಲಿ ಗಾಂಧಿ ತತ್ವ ಮತ್ತು ಚಿಂತನೆಗಳ ಮಂತ್ರ ನಿತ್ಯವೂ ಅನುರಣಿಸುತ್ತದೆ.

ಸಾಬರಮತಿ ಆಶ್ರಮದ ಒಳಕ್ಕೆ ಮೊದಲ ಹೆಜ್ಜೆ ಇಟ್ಟ ಕ್ಷಣ ಕಣ್ಣೆದುರಿಗೆ ರಾಷ್ಟ್ರಪಿತನ ಮೂರ್ತಿ ಕಾಣಿಸುತ್ತದೆ. ವರ್ಲಿ ಚಿತ್ತಾರದ ಮಂಟಪದಲ್ಲಿ ಕುಳಿತಿರುವ ಧ್ಯಾನಸ್ಥ ಗಾಂಧಿ ಮೊದಲ ನೋಟಕ್ಕೆ ಎದೆಗಿಳಿಯುತ್ತಾರೆ. ವಿಶಾಲವಾದ ಪ್ರಾಂಗಣದಲ್ಲಿ ಗಾಂಧೀಜಿ ಅವರು ಹೇಳಿದ ಏಳು ಸಾಮಾಜಿಕ ತತ್ವಗಳು, 18 ರಚನಾತ್ಮಕ ಅಂಶಗಳು ಹಾಗೂ ರಾಷ್ಟ್ರಧ್ವಜ ಕಾಣಿಸುತ್ತದೆ.

ಓದಿ: 

ಸಾಬರಮತಿ ಆಶ್ರಮದಲ್ಲಿ ಐದು ಕೊಠಡಿಗಳಿದ್ದು, ಮೊದಲಿಗೆ ಪ್ರಾರ್ಥನಾ ಮಂದಿರ ಸಿಗುತ್ತದೆ. ಮಂದಿರದ ಒಳಕ್ಕೆ ಅಡಿ ಇಟ್ಟರೆ ಅಲ್ಲಿನ ಅಗರಬತ್ತಿಯ ಸುವಾಸನೆಯಂತೆ ಮನಸ್ಸಿನೊಳಗೂ ನೆಮ್ಮದಿಯ ಭಾವ ಅಡರುತ್ತದೆ. ಮಂದಿರದ ಗೋಡೆಗಳ ಮೇಲೆ ಗಾಂಧೀಜಿ ಅವರ ಹೋರಾಟದ ಹಾದಿಯನ್ನು ತೆರೆದಿಡುವ ಅಪರೂಪದ ಫೋಟೊ ಫ್ರೇಮ್‌ಗಳು ಗಮನ ಸೆಳೆಯುತ್ತವೆ. ಕಸ್ತೂರಬಾ ಮಂದಿರದಲ್ಲೂ ಗಾಂಧೀಜಿ ಅವರಿಗೆ ಸಂಬಂಧಿಸಿದ ಚಿತ್ರ ಮಾಹಿತಿಗಳು ಕಾಣಸಿಗುತ್ತವೆ. ಜತೆಗೆ ಇಲ್ಲಿ ಚರಕಗಳನ್ನು ಇರಿಸಲಾಗಿದ್ದು, ಆಶ್ರಮಕ್ಕೆ ಬರುವವರಿಗೆ ಚರಕದಿಂದ ನೂಲು ತೆಗೆಯುವಂತೆ ಪ್ರೋತ್ಸಾಹಿಸಲಾಗುತ್ತದೆ.

ಸಾಬರಮತಿ ಆಶ್ರಮದಲ್ಲಿರುವ ಗ್ರಂಥಾಲಯದಲ್ಲಿ ಗಾಂಧೀಜಿ ಮತ್ತು ಅವರ ವಿಚಾರಧಾರೆಗಳಿಗೆ ಸಂಬಂಧಿಸಿದ 500ಕ್ಕೂ ಹೆಚ್ಚು ಪುಸ್ತಕಗಳಿವೆ. ಗಾಂಧಿ ಪುಸ್ತಕಗಳು ಓದು, ಚರ್ಚೆಗೂ ಇಲ್ಲಿ ಅವಕಾಶವಿದೆ. ಕೊನೆಯದಾಗಿ ನಯೀ ತಾಲೀಮ್‌ ಮಂದಿರ, ಅಡುಗೆ ಮನೆ ವೀಕ್ಷಣೆ ಮಾಡಿ ಅಂಗಳಕ್ಕೆ ಕಾಲಿಟ್ಟರೆ ಪುಟ್ಟ ಗೇಟಿನಾಚೆಗೆ ವಿಸ್ತಾರವಾಗಿ ಕಾಣಿಸುವ ಕಪ್ಪತಗುಡ್ಡದ ವೈಭವ ಮನಸ್ಸಿಗೆ ಆಹ್ಲಾದಕರ ಅನುಭವ ನೀಡುತ್ತದೆ. ಸಂಜೆಯ ಸೂರ್ಯಾಸ್ತದ ಸೊಬಗು ಕೂಡ ಈ ಕಿಂಡಿಯಿಂದ ಮೋಹಕವಾಗಿ ಕಾಣಿಸುತ್ತದೆ. 

ಸಾಬರಮತಿ ಆಶ್ರಮ ಒಂದು ರೀತಿ ಶ್ರೀಸಾಮಾನ್ಯರ ಆಶ್ರಮವಿದ್ದಂತೆ. ಪ್ರವಾಸಿಗರ ಪಾಲಿಗೆ ಗಾಂಧೀಜಿ ನೆನಪುಗಳನ್ನು ಕಟ್ಟಿಕೊಡುವಂತ ತಾಣ ಅಂದರೂ ತಪ್ಪಾಗುವುದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು