ಸೋಮವಾರ, ಮೇ 23, 2022
21 °C
ಹಾರ ತುರಾಯಿ ಸಂಸ್ಕೃತಿಗೆ ಕೊನೆ

ಕನ್ನಡ ಸಾಹಿತ್ಯ ಬೆಳೆಸಲು ಪುಸ್ತಕ ಉಡುಗೊರೆ ನೀಡುವ ಚಿಂತನೆ: ಮಹೇಶ್‌ ಜೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‌ಗದಗ: ‘ಕನ್ನಡ ಸಾಹಿತ್ಯ, ಸಂಸ್ಕೃತಿ, ನಾಡು– ನುಡಿ, ನೆಲ– ಜಲದ ಸೇವೆಗಾಗಿ ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ವಿಜಯ ಸಂಕೇತ ಎನಿಸಿಕೊಂಡಿರುವ ಹಲ್ಮಿಡಿ ಗ್ರಾಮದಿಂದ ಚುನಾವಣಾ ಪ್ರಚಾರ ಆರಂಭಿಸಿದ್ದೇನೆ’ ಎಂದು ಮಹೇಶ್‌ ಜೋಶಿ ಹೇಳಿದರು.

ಗದುಗಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಚುನಾವಣೆಗೆ ನಿಂತಿರುವ ಅಭ್ಯರ್ಥಿ ಎಂಬುದರ ಬದಲಾಗಿ, ಸೇವಾಕಾಂಕ್ಷಿ ಎಂದು ಕರೆದುಕೊಳ್ಳಲು ಬಯಸುತ್ತೇನೆ. ಹಾಗೆಯೇ, ಅಧಿಕಾರ ಮತ್ತು ನಿವೃತ್ತಿಯ ನಂತರದ ಪುನರ್ವಸತಿಯಾಗಿ ಕಸಾಪ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿಲ್ಲ. ಕನ್ನಡ ನಾಡು– ನುಡಿ, ನೆಲ– ಜಲದ ಸೇವೆಗಾಗಿ, ಕನ್ನಡದ ಪರಿಚಾರಕನಾಗಿ ಚುನಾವಣೆಗೆ ನಿಂತಿದ್ದೇನೆ’ ಎಂದು ಅವರು ಹೇಳಿದರು.

‘ಜನರಿಂದ ದೂರ ಉಳಿದಿದ್ದ ದೂರದರ್ಶನವನ್ನು ಸಮೀಪ ದರ್ಶನವಾಗಿಸಿದ ಹೆಮ್ಮೆ ಇದೆ. ಅಂತೆಯೇ, ಕನ್ನಡ ಸಾಹಿತ್ಯ ಪರಿಷತ್‌ ಅನ್ನು ಜನಸಾಮಾನ್ಯರ ಪರಿಷತ್‌ ಆಗಿ ಮಾರ್ಪಡಿಸುವ ಆಶಯ ಹೊಂದಿದ್ದೇನೆ. ಚುನಾವಣೆಯಲ್ಲಿ ಗೆದ್ದರೆ ಕಸಾಪ ಆಜೀವ ಸದಸ್ಯತ್ವದ ಶುಲ್ಕವನ್ನು ₹250ಕ್ಕೆ ಇಳಿಸುತ್ತೇನೆ. ಕಾಲೇಜು ವಿದ್ಯಾರ್ಥಿಗಳು ಕಸಾಪದೊಂದಿಗೆ ನೇರ ಸಂಪರ್ಕ ಸಾಧಿಸಿ ಎಲ್ಲ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುವಂತಾಗಲು ಕ್ರಮವಹಿಸುತ್ತೇನೆ. ಆ್ಯಪ್‌ ಮೂಲಕವೇ ಸದಸ್ಯತ್ವ ಪಡೆಯುವ ಯೋಜನೆ ಅನುಷ್ಠಾನಗೊಳಿಸಲಾಗುವುದು’ ಎಂದು ಹೇಳಿದರು.

‘ಕಸಾಪ ಚುನಾವಣೆಯಲ್ಲಿ ಗೆದ್ದು ಬಂದರೆ ಕಾರ್ಯಕ್ರಮಗಳಲ್ಲಿ ಹಾರ, ತುರಾಯಿ, ಪೇಟ, ಪೀಠ ಎಲ್ಲಕ್ಕೂ ನಿಷೇಧ ಹೇರಿ ಪ್ರತಿಯೊಬ್ಬರ ಗಣ್ಯರಿಗೂ ಕನ್ನಡ ಪುಸ್ತಕಗಳನ್ನೇ ನೀಡಲಾಗುವುದು. ಈ ಮೂಲಕ ಕನ್ನಡ ಸಾಹಿತ್ಯದ ಉಳಿವು ಹಾಗೂ ಬೆಳವಣಿಗೆಗೆ ಶ್ರಮಿಸಲಾಗುವುದು. ಹಳ್ಳಿ ಹಳ್ಳಿಗಳಿಗೆ ಪಾದಯಾತ್ರೆ ಮಾಡಿ, ಕನ್ನಡ ಸಾಹಿತ್ಯ ಪರಿಷತ್‌ ಅನ್ನು ಹಳ್ಳಿಗಳಿಂದಲೇ ಕಟ್ಟುವ ಪ್ರಯತ್ನ ಮಾಡಲಾಗುವುದು’ ಎಂದರು.

‘ಮಾತೃಭಾಷೆಯಾದ ಕನ್ನಡದಲ್ಲೇ ಶಿಕ್ಷಣ ನೀಡುವುದುಕ್ಕೆ ಒತ್ತು ನೀಡುವುದರ ಜತೆಗೆ ಒಂದೇ ಒಂದು ಕನ್ನಡ ಶಾಲೆ ಮುಚ್ಚಲು ಅವಕಾಶ ನೀಡುವುದಿಲ್ಲ. ಅಂತಹ ಪರಿಸ್ಥಿತಿ ಬಂದರೆ ರಾಜ್ಯದಾದ್ಯಂತ ಹೋರಾಟ ರೂಪಿಸಲಾಗುವುದು. ಕಸಾಪ ಕಾರ್ಯಕಾರಿ ಸಮಿತಿಯಲ್ಲಿ ಮಾಧ್ಯಮದ ಮೂರು ಮಂದಿಗೆ ಅವಕಾಶ ಹಾಗೂ ರಾಯಭಾರಿಗಳ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು. ಐದು ವರ್ಷದ ಅವಧಿಯಲ್ಲಿ ಎರಡು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಹಿಳೆಯರಿಗೆ ಅವಕಾಶ ಮಾಡಿಕೊಡಲಾಗುವುದು’ ಎಂದು ಹೇಳಿದರು.

ಅರಳಿ ನಾಗರಾಜ್‌, ನವೀಸಾಬ್‌ ಕುಷ್ಟಗಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

**
ನಾನು ಎಡಪಂಥೀಯನೂ ಅಲ್ಲ; ಬಲಪಂಥೀಯನೂ ಅಲ್ಲ. ರಾಜಕೀಯವಾಗಿ ತಟಸ್ಥನಾಗಿದ್ದು ಮಾನವೀಯ ದೃಷ್ಟಿ ಹೊಂದಿರುವ ಹಾಗೂ ಮಾತೃಭಾಷೆ ಬಗ್ಗೆ ಅಪಾರ ಪ್ರೇಮ ಹೊಂದಿರುವ ಕನ್ನಡಪಂಥದವನು.
-ಡಾ. ಮಹೇಶ್‌ ಜೋಶಿ ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು