ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಹಾನಗಲ್ಲ ಗುರುಕುಮಾರ ಸ್ವಾಮೀಜಿ ಆಧುನಿಕ ಬಸವಣ್ಣ’

Published : 12 ಸೆಪ್ಟೆಂಬರ್ 2024, 16:05 IST
Last Updated : 12 ಸೆಪ್ಟೆಂಬರ್ 2024, 16:05 IST
ಫಾಲೋ ಮಾಡಿ
Comments

ಮುಂಡರಗಿ: ‘ನಾಡಿನ ವಿವಿಧ ಭಾಗಗಳಲ್ಲಿ ಮಠ, ಮಾನ್ಯಗಳ ಜೊತೆ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಪ್ರೋತ್ಸಾಹ ಹಾಗೂ ಪ್ರೇರಣೆ ನೀಡಿದ ಕೀರ್ತಿ ಹಾನಗಲ್ಲ ಗುರುಕುಮಾರ ಸ್ವಾಮೀಜಿ ಅವರಿಗೆ ಸಲ್ಲುತ್ತದೆ. ಬಸವಣ್ಣನವರಂತೆ ಸಮಾಜ ಸುಧಾರಣೆಯ ದೀಕ್ಷೆ ತೊಟ್ಟಿದ್ದ ಗುರುಕುಮಾರೇಶ್ವರರು ಆಧುನಿಕ ಬಸವಣ್ಣ’ ಎಂದು ಅನ್ನದಾನೀಶ್ವರ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹಾನಗಲ್ಲ ಗುರುಕುಮಾರ ಸ್ವಾಮಿಜೀಯವರ 157ನೇ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಗುರುಕುಮಾರರ ಕಾಲದಲ್ಲಿ ರಾಜ್ಯವು ಸಂಗೀತ ಕ್ಷೇತ್ರದಲ್ಲಿ ತೀರಾ ಹಿಂದುಳಿದಿತ್ತು. ಅದನ್ನು ಅರಿತ ಗುರುಕುಮಾರ ಸ್ವಾಮಿಗಳು ಪಂಚಾಕ್ಷರಿ ಗವಾಯಿ ಅವರ ಸಂಗೀತ ಜ್ಞಾನವನ್ನು ಗುರುತಿಸಿ ಗದುಗಿನಲ್ಲಿ ಸಂಗೀತ ಶಾಲೆ ತೆರೆಯಲು ನೆರವು ನೀಡಿದರು. ರಾಜ್ಯದ ಸಂಗೀತಾಸಕ್ತರಿಗೆ ಉತ್ತರಾದಿ ಹಾಗೂ ದಕ್ಷಿಣಾದಿ ಸಂಗೀತ ಕಲಿಕೆಗೆ ನಾಂದಿ ಹಾಡಿದರು’ ಎಂದು ತಿಳಿಸಿದರು.

‘ಮುಂಡರಗಿಯ ಜಗದ್ಗುರು ಅನ್ನದಾನೀಶ ಮಠಕ್ಕೆ ಹಲವು ಬಾರಿ ಭೇಟಿ ನೀಡಿರುವ ಗುರುಕುಮಾರರು ಮಠದ ವತಿಯಿಂದ ಶಿಕ್ಷಣ ಸಂಸ್ಥೆ ಆರಂಭಿಸುವಂತೆ ಸಲಹೆ ನೀಡಿದ್ದರು. ಅವರ ಸಲಹೆಯಂತೆ ಅಂದು ಆರಂಭವಾಗಿರುವ ಜಗದ್ಗುರು ಅನ್ನದಾನೀಶ ಶಿಕ್ಷಣ ಸಂಸ್ಥೆಯು ಇಂದು ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತಸದ ಸಂಗತಿ’ ಎಂದರು.

ಮಠದ ಉತ್ತರಾಧಿಕಾರಿ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ‘ರಾಜ್ಯದ ಯುವ ಮಠಾಧೀಶರೆಲ್ಲ ಸೇರಿ ಪ್ರತಿ ವರ್ಷ ಒಂದೊಂದು ಜಿಲ್ಲೆಯಲ್ಲಿ ಗುರುಕುಮಾರೇಶ್ವರರ ಜಯಂತಿಯನ್ನು ಆಚರಿಸುತ್ತಿದ್ದೇವೆ. ಮುಂಡರಗಿಯ ಜಗದ್ಗುರು ಅನ್ನದಾನೀಶ್ವರ ಮಠಕ್ಕೂ ಗುರುಕುಮಾರ ಸ್ವಾಮೀಜಿ ಅವರಿಗೂ ಅವಿನಾಭಾವ ಸಂಬಂಧವಿದೆ. ಈ ಕಾರಣದಿಂದ ಪ್ರಸ್ತುತ ವರ್ಷ ಇಲ್ಲಿ ಹಾನಗಲ್ಲ ಗುರುಕುಮಾರೇಶ್ವರರ ಜಯಂತಿಯನ್ನು ಆಚರಿಸಲಾಗುತ್ತದೆ’ ಎಂದು ತಿಳಿಸಿದರು.

ಕುಮಾರೇಶ್ವರರ ಜಯಂತಿಯ ಅಂಗವಾಗಿ ಮಠದಲ್ಲಿ ಸೆ. 14ರಿಂದ ಸೆ. 24ರವರೆಗೆ ಇಳಕಲ್‌ದ ಅನ್ನದಾನೀಶ ಶಾಸ್ತ್ರಿಗಳಿಂದ ಕುಮಾರೇಶ್ವರರ ಜೀವನ ದರ್ಶನ ಪ್ರವಚನ ನಡೆಯಲಿದೆ. ಅನ್ನದಾನೀಶ್ವರ ಸ್ವಾಮೀಜಿ ಅವರು ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿಕೊಳ್ಳಲಿದ್ದಾರೆ. ಸೆ. 24ರಂದು ಸಮಾರೋಪ ಸಮಾರಂಭ ಜರುಗಲಿದ್ದು, ನಾಡಿನ ನೂರಾರು ಮಠಾಧೀಶರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಅನ್ನದಾನೀಶ್ವರ ವಿದ್ಯಾ ಸಮಿತಿಯ ಆಡಳಿತಾಧಿಕಾರಿ ಡಾ.ಬಿ.ಜಿ.ಜವಳಿ ಸ್ವಾಗತಿಸಿದರು. ಹಾನಗಲ್ಲ ಗುರುಕುಮಾರೇಶ್ವರರ 157ನೇ ಜಯಂತ್ಯುತ್ಸವದ ಅಧ್ಯಕ್ಷರಾದ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ನಿರಂಜನ ದೆವರು, ಶಿವಾನಂದ ದೇವರು, ಚನ್ನಬಸವ ದೇವರು, ಪುರಸಭೆಯ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT